Thursday, September 10, 2026
Thursday, September 10, 2026

ಜಿಲ್ಲೆಯಲ್ಲಿ “ಭಾರತ್ ಜೋಡೋ ” ಯುವಕ ಸಂಘಗಳ ಸ್ಥಾಪನೆಗೆ ಕ್ರಮ- ಪ್ರಭುಲಿಂಗ ಕವಳಿಕಟ್ಟಿ

Date:

ರಾಜ್ಯ ಸರ್ಕಾರವು ಯುವಜನರಲ್ಲಿ ಕ್ರೀಡೆ, ವೈಜ್ಞಾನಿಕ ಮನೋಭಾವ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ, ಸಂವಿಧಾನದ ಮೌಲ್ಯಗಳು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಸದುದ್ದೇಶದಿಂದ ರಾಜ್ಯಾದ್ಯಂತ ಹತ್ತು ಸಾವಿರ “ಭಾರತ್ ಜೋಡೋ ಯುವಕ ಸಂಘ” ಗಳನ್ನು ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಿದ್ದು, ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಘಗಳನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ “ಭಾರತ್ ಜೋಡೋ ಯುವಕ ಸಂಘ” ಗಳ ರಚನೆಗೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಪೂರ್ವಸಿದ್ಧತಾ ಸಭೆಯ ಅ‍ಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಂಘದ ಸದಸ್ಯರಾಗಲು ಕನಿಷ್ಠ 16 ರಿಂದ ಗರಿಷ್ಠ 35 ವರ್ಷದೊಳಗಿನ ಯುವಕ-ಯುವತಿಯರಿಗೆ ಅವಕಾಶವಿದ್ದು, ಪ್ರತಿ ಸಂಘದಲ್ಲಿ ಕನಿಷ್ಠ 100 ರಿಂದ 250 ಯುವ ಸದಸ್ಯರು ಇರಲಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ಹಾಗೂ ನಗರ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ (4,000 ದಿಂದ 10,000 ಜನರಿಗೆ ಒಂದು) ಸಂಘಗಳನ್ನು ರಚಿಸಬಹುದಾಗಿದೆ ಎಂದ ಅವರು, ಪ್ರತಿ ಸಂಘಕ್ಕೆ ಸರ್ಕಾರವು ವಾರ್ಷಿಕವಾಗಿ ₹10 ಲಕ್ಷ ಅನುದಾನವನ್ನು ಮೂರು ಕಂತುಗಳಲ್ಲಿ ಸಂಘದ ಬ್ಯಾಂಕ್ ಅಕೌಂಟ್‌ಗೆ ಜಮೆ ಮಾಡಲಿದೆ ಎಂದರು.
ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಲಿದೆ. ಭಾರತ್‌ ಜೋಡೋ ಯುವ ಸಂಘಗಳ ಮೂಲಕ ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ, ಅವರನ್ನು ಸಬಲೀಕರಣಗೊಳಿಸಿ, ನಾಡಿನ ಸತ್ಪ್ರಜೆಗಳಾಗಿ ರೂಪಿಸುವುದು ನಮ್ಮ ಉದ್ದೇಶ ಎಂದು ಉಪ ಮುಖ್ಯಮಂತ್ರಿಗಳು ಹೇಳಿದ್ದಾರೆ.
ಅನುದಾನದ ಹಣವನ್ನು ಸ್ಪೋರ್ಟ್ಸ್ ಮೆಟೀರಿಯಲ್ಸ್, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳು, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ, ಗ್ರಂಥಾಲಯ ಅಥವಾ ಸಂಘದ ಆಫೀಸ್‌ಗೆ ಬೇಕಾದ ಬೇಸಿಕ್ ಇನ್ಫ್ರಾಸ್ಟ್ರಕ್ಚರ್ ಮಾಡಲು ಮಾತ್ರ ಬಳಸಬಹುದು. ತರಬೇತುದಾರರಿಗೆ ಗೌರವಧನವಿದೆ. ಪ್ರತಿ ಸಂಘದಲ್ಲಿ ಯುವಕರಿಗೆ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ ಎಂದರು.
ಸಂಘದಲ್ಲಿ 15 ಜನ ಸದಸ್ಯರ ಆಂತರಿಕ ಕಾರ್ಯಕಾರಿ ಸಮಿತಿ ರಚನೆಯಾಗಿರಲಿದೆ. ಈ ಸಮಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಖಜಾಂಚಿ ಹಾಗೂ 12 ಜನರ ಕಾರ್ಯಕಾರಿ ಸದಸ್ಯರು ಇರಲಿದ್ದಾರೆ. ಮಹಿಳಾ ಪ್ರಾತಿನಿಧ್ಯ, ಮೀಸಲಾತಿ ಕಡ್ಡಾಯ. ನಿಯಮಾನುಸಾರ ರಚನೆಗೊಂಡ ಸಮಿತಿಗೆ 2ವರ್ಷಗಳ ಅಧಿಕಾರಾವಧಿ ನಿಗಧಿಪಡಿಸಿದೆ. ಈ ಸದಸ್ಯರು ಮುಂದಿನ ಅವಧಿಗೆ ಮುಂದುವರೆಯುವಂತಿಲ್ಲ.
ಸಂಘವು ಅಳವಡಿಸಿಕೊಂಡಿರುವ ಪ್ರಮುಖ ಚಟುವಟಿಕೆಗಳನ್ನು ಮಾಡಬೇಕು. ವಿಶೇಷವಾಗಿ ಕ್ರೀಡೆ ಮತ್ತು ಫಿಟ್‌ನೆಸ್‌ಗೆ ಸಂಬಂಧಿಸಿದ ಕ್ರೀಡಾಕೂಟಗಳು, ಯೋಗ ಶಿಬಿರಗಳು, ಸಾಂಪ್ರದಾಯಿಕ ಆಟಗಳ ಆಯೋಜನೆ. ಸಮುದಾಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆರೆ, ಕಲ್ಯಾಣಿಗಳ ಸ್ವಚ್ಛತೆ, ಸ್ವಚ್ಛತಾ ಅಭಿಯಾನಗಳನ್ನು ನಡೆಸಬೇಕು. ಪರಿಸರ ಸಂರಕ್ಷಣೆ ವಿಚಾರದಲ್ಲಿ ಸಸಿ ನೆಡುವುದು, ಹವಾಮಾನ ಬದಲಾವಣೆ ಜಾಗೃತಿ ನಡೆಸಬೇಕು. ರಕ್ತದಾನ ಶಿಬಿರಗಳು, ಮಾನಸಿಕ ಆರೋಗ್ಯ ಜಾಗೃತಿ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾವೈಕ್ಯತೆ ಮೂಡಿಸುವ ಚಟುವಟಿಕೆಗಳನ್ನು ನಡೆಸಬೇಕು. ಇದರ ಜೊತೆ ಸ್ಕಿಲ್‌ ಡೆವಲಪ್‌ಮೆಂಟ್‌ಗೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷರತೆ, ಉದ್ಯಮಶೀಲತೆ ಮತ್ತು ಜೀವನ ಕೌಶಲ್ಯ ತರಬೇತಿಯನ್ನು ನೀಡಬೇಕು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮತ್ತು ಮಹಾತ್ಮರ ಜಯಂತಿಗಳ ಆಚರಣೆ ಹಾಗೂ ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಸೈಬರ್ ಸುರಕ್ಷತೆ ಜಾಗೃತಿ, ಸಂಚಾರ ನಿಯಮಗಳ ಜಾಗೃತಿ, ಕೃಷಿ ನಾವೀನ್ಯತೆ ಹಾಗೂ ಮಾದಕ ವಸ್ತುಗಳ ವಿರೋಧಿ ಅಭಿಯಾನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುವುದು ಎಂದವರು ತಿಳಿಸಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌, ಕುವೆಂಪು ವಿವಿ. ಎನ್.ಎಸ್.ಎಸ್. ಸಂಯೋಜಕಿ ಶ್ರೀಮತಿ ಶುಭಾ ಮರವಂತೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ ಹಾಲಾಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...