ಶಿವಮೊಗ್ಗ ಜಿಲ್ಲೆಯ ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಇತ್ತೀಚೆಗೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಸ್ವೀಪ್ ಕಾರ್ಯಕ್ರಮದ ರಾಜ್ಯ ಮಟ್ಟದ ತರಬೇತುದಾರರಾದ ನವೀದ್ ಅಹಮದ್ ಪರ್ವೇಜ್ ಅವರು ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಸಮಗ್ರ ಮಾಹಿತಿ ನೀಡಿದರು.
ಅರ್ಹರೆಲ್ಲರಿಗೂ ಮತದಾನದ ಹಕ್ಕು ನೀಡುವುದು ಅಭಿಯಾನದ ಉದ್ದೇಶ
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು 2026ರ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿಯೊಬ್ಬ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಹಾಲಿ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ನವೀದ್ ಅಹಮದ್ ಪರ್ವೇಜ್ ತಿಳಿಸಿದರು.
ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಮುಖ ದಿನಾಂಕಗಳು ಹಾಗೂ ವಿವರಗಳು:
ಮನೆ ಮನೆ ಸಮೀಕ್ಷೆ: ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ.
ಕರಡು ಪಟ್ಟಿ ಪ್ರಕಟಣೆ: ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.
ಆಕ್ಷೇಪಣೆ ಸಲ್ಲಿಕೆ: ಕರಡು ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಅವಕಾಶವಿರುತ್ತದೆ.
ಅಂತಿಮ ಪಟ್ಟಿ ಪ್ರಕಟಣೆ: ಅಕ್ಟೋಬರ್ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು.
ವಯೋಮಿತಿ: ಅಕ್ಟೋಬರ್ 1ಕ್ಕೆ 18 ವರ್ಷ ತುಂಬುವ ಎಲ್ಲಾ ಯುವಕ-ಯುವತಿಯರು ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರಿಗೆ ಸೂಚನೆ: “ಬಿಎಲ್‌ಓ ರವರು ಮನೆ ಮನೆಗೆ ಭೇಟಿ ನೀಡಿ ಎನುಮರೆಷನ್ ಫಾರಂಗಳನ್ನು ದ್ವಿಪ್ರತಿಯಲ್ಲಿ ನೀಡಲಿದ್ದು, ಅದನ್ನು ಭರ್ತಿ ಮಾಡಲು ಸಾರ್ವಜನಿಕರಿಗೆ ನೆರವಾಗಲಿದ್ದಾರೆ. ನಾಗರಿಕರು ಭರ್ತಿ ಮಾಡಿದ ಫಾರಂ ನೀಡಿ ಕಡ್ಡಾಯವಾಗಿ ಸ್ವೀಕೃತಿ ಪಡೆಯಬೇಕು. ಈ ಪ್ರಕ್ರಿಯೆ ಕುರಿತು ಯಾವುದೇ ಗೊಂದಲ ಅಥವಾ ಆತಂಕವಿದ್ದರೆ ಸಾರ್ವಜನಿಕರು ನೇರವಾಗಿ ಬಿಎಲ್‌ಓ ಅವರನ್ನು ಸಂಪರ್ಕಿಸಬಹುದು ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು” ಎಂದು ಪರ್ವೇಜ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ ಎಸ್.ಆರ್. ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ‘ಎಸ್ಐ ಆರ್ 26’ ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಹಂತಗಳಲ್ಲಿ ‘ಮತದಾರ ಸಾಕ್ಷರತಾ ಸಂಘ’ಗಳ ಅಡಿಯಲ್ಲಿ ವಿಶೇಷ ಅರಿವು ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಲ್ಲದೆ, ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಕಚೇರಿಗಳಲ್ಲಿ ಕಡ್ಡಾಯವಾಗಿ ವೋಟರ್ ಅವೇರ್ನೆಸ್ ಫೋರಂಗಳನ್ನು ರಚಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ರಾಘವೇಂದ್ರ, ಉಪ ನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕರಾದ ಲಿಂಗರಾಜ್, ವಿಷಯ ಪರಿವೀಕ್ಷಕರುಗಳಾದ ಮಸೂದ್, ಜ್ಯೋತಿ, ಅಸುಂತ ಹಾಗೂ ಇಲಾಖೆಯ ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
