S.N. Channabasappa ಅರ್ಹ ಬಡವರ ಬಿಪಿಎಲ್ ಕಾರ್ಡ್ ರದ್ದತಿಯಿಂದ ಜನಸಾಮಾನ್ಯರ ಬದುಕು ದುಸ್ತರ; ತಕ್ಷಣವೇ ಮರುಪರಿಶೀಲಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಕಡಕ್ ಸೂಚನೆ.
ಶಿವಮೊಗ್ಗ: “ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಅರ್ಹ ಬಡ ಕುಟುಂಬಗಳ ಹಲವಾರು ಬಿಪಿಎಲ್ (BPL) ಪಡಿತರ ಚೀಟಿಗಳು ಏಕಾಏಕಿ ರದ್ದಾಗುತ್ತಿರುವುದರಿಂದ ಜನಸಾಮಾನ್ಯರ ಜೀವನ ನಿರ್ವಹಣೆ ಅತ್ಯಂತ ಕಷ್ಟಕರವಾಗಿದೆ. ಬಡವರ ಹಿತ ಕಾಯಬೇಕಾದ ವ್ಯವಸ್ಥೆಯು ಅವರಿಗೆ ತೊಂದರೆ ಕೊಡುವುದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೇಷನ್ ಕಾರ್ಡ್ ರದ್ದತಿಯಿಂದ ತೊಂದರೆಗೊಳಗಾದ ನೂರಾರು ನಾಗರೀಕರು ಸಾಲಾಗಿ ಶಾಸಕರ ಕಚೇರಿಗೆ ಭೇಟಿ ನೀಡಿ ಅಹವಾಲು ಸಲ್ಲಿಸಿದ ಹಿನ್ನೆಲೆಯಲ್ಲಿ, ಇಂದು ಶಾಸಕರು ತಮ್ಮ ಅಧಿಕೃತ ಕಾರ್ಯಾಲಯದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತುರ್ತು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಿದರು.
S.N. Channabasappa ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಯಾವುದೇ ತಪ್ಪುಗಳಿಲ್ಲದಿದ್ದರೂ ಅರ್ಹ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಿರುವುದು ಅತ್ಯಂತ ಬೇಜವಾಬ್ದಾರಿತನದ ಪರಮಾವಧಿಯಾಗಿದೆ. ನಿಯಮಾವಳಿಗಳ ಹೆಸರಿನಲ್ಲಿ ನೈಜ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಇಲಾಖೆಯು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಟ್ಟುನಿಟ್ಟಾಗಿ ತಿಳಿಸಿದರು. ನಗರದಲ್ಲಿ ರದ್ದಾಗಿರುವ ಬಿಪಿಎಲ್ ಕಾರ್ಡ್‌ನ ದೂರುಗಳ ಕುರಿತು ತಳಮಟ್ಟದಲ್ಲಿ ಸಮಗ್ರ ಮರುಪರಿಶೀಲನೆ ನಡೆಸಿ, ಅರ್ಹ ಕುಟುಂಬಗಳಿಗೆ ತಕ್ಷಣವೇ ಪಡಿತರ ಚೀಟಿಗಳನ್ನು ಮರುಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಮತ್ತು ಈ ಇಡೀ ಪ್ರಕ್ರಿಯೆಯ ಕುರಿತು ಕೈಗೊಂಡ ಕ್ರಮಗಳ ಸವಿಸ್ತಾರ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ನಿರ್ದೇಶನ ನೀಡಿದ್ದಾರೆ.
