ವಿದ್ಯಾರ್ಥಿಗಳು ಯುವ ಜನರಲ್ಲಿ ಸೈಕಲ್ ಬಳಕೆ ಹೆಚ್ಚಾಗಬೇಕು ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ್ ಹೇಳಿದರು.
ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಬೈಸಿಕಲ್ ಕ್ಲಬ್, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಸೈಕಲ್ ದಿನಾಚರಣೆ’ ಅಂಗವಾಗಿ ಏರ್ಪಾಡಾಗಿದ್ದ ‘ಸೈಕಲ್ ಜಾತಾ’ ಗೆ ಚಾಲನೆ ನೀಡಿ ಮಾತನಾಡುತ್ತ ತಾವು ಸಹಾ ವಿದ್ಯಾರ್ಥಿ ದೆಸೆಯಲ್ಲಿ ಸೈಕಲನ್ನೇ ಬಳಸುತ್ತಿದ್ದು ನಿತ್ಯ ಸುಮಾರು 11 ಕಿಲೋಮೀಟರ್ ನಷ್ಟು ದೂರ ಹೋಗಿ ಬರುತ್ತಿದ್ದುದಾಗಿ ಹೇಳಿದರು.
ವಿಶೇಷ ಆಹ್ವಾನಿತರಾಗಿ ಸೈಕಲ್ ಜಾತಾದಲ್ಲಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ, ಪರಿಸರವಾದಿ ಡಾ. ಎಚ್ ಬಿ ಮಂಜುನಾಥರವರು ಸಹ ಸವಾರರೊಂದಿಗೆ ಮಾತನಾಡುತ್ತಾ ಸೈಕಲ್ ಬಳಸುವುದರಿಂದ ದೈಹಿಕ ಆರೋಗ್ಯ, ಇಂಧನ ಉಳಿತಾಯದಿಂದ ರಾಷ್ಟ್ರದ ಹಿತ ಹಾಗೂ ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಣದಿಂದ ಪರಿಸರ ಸಂರಕ್ಷಣೆ ಸಾಧ್ಯವಿದ್ದು ನಮ್ಮ ದೇಶದಲ್ಲಿ ವಾರ್ಷಿಕ 245 ಮಿಲಿಯನ್ ಮೆಟ್ರಿಕ್ ಟನ್ನಿನಷ್ಟು ಪೆಟ್ರೋಲಿಯಂ ಬಳಕೆಯಾಗುತ್ತಿದ್ದು ಪ್ರತಿನಿತ್ಯ ದೇಶದಲ್ಲಿ 6 ಕೋಟಿ ಬ್ಯಾರಲ್ ಗಳಷ್ಟು ಪೆಟ್ರೋಲಿಯಂ ಖರ್ಚಾಗುತ್ತಿದೆ, ಇದರಲ್ಲಿ ಶೇಕಡಾ 62ರಷ್ಟು ಪೆಟ್ರೋಲ್ ಬಳಕೆಯು ದ್ವಿಚಕ್ರ ವಾಹನಗಳಿಂದ ಆಗುತ್ತಿದ್ದು ವಾರದಲ್ಲಿ ಒಂದು ದಿನವಾದರೂ ಸ್ಕೂಟರು ಬೈಕ್ ಗಳ ಬದಲು ಸೈಕಲ್ ಬಳಸುವುದರಿಂದ ವಾರ್ಷಿಕ 320 ಕೋಟಿ ಬ್ಯಾರಲ್ ಗಳಷ್ಟು ಪೆಟ್ರೋಲ್ ಉಳಿಸಬಹುದು, ಸೈಕಲ್ ಬಳಕೆಯಿಂದ ಸಮಯ ವ್ಯರ್ಥವಾಗುತ್ತದೆ ಎಂಬ ಭಾವನೆ ತಪ್ಪು, ಸಮಯದ ಸದ್ಬಳಕೆಯ ಅರಿವು ಉಂಟಾಗುತ್ತದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾ, ಗ್ರಾಹಕರ ಕೋರ್ಟಿನ ನ್ಯಾಯಾಧೀಶರಾಗಿದ್ದ ಶಿವಕುಮಾರ್, ದಾವಣಗೆರೆ ಬೈಸಿಕಲ್ ಕ್ಲಬ್ ಕಾರ್ಯದರ್ಶಿ ಮಹೇಶ್,ಸದಸ್ಯ ಕಿರಣ್ ಬಾಳೆಹೊಲದ,ಪ್ರಸಾದ್,ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಕಾರ್ಯದರ್ಶಿ ಎನ್ ಕೆ ಕೊಟ್ರೇಶ್, ಸದಸ್ಯರುಗಳಾದ ಚಂದ್ರಮೌಳಿ, ಮಧುಸೂದನ್, ಚನ್ನಬಸವ ಶೀಲವಂತ್ ಮುಂತಾದವರು ಭಾಗವಹಿಸಿದ್ದರು.
