ಕಾಲಡಿ ಗ್ರಾಮದಿ ಜನಿಸಿದ ಶಿವಗುರು
ಆರ್ಯಾಂಬೆಯ ಸುತ ಶಂಕರರು
ಬಾಲ್ಯದಿ ವೇದವ ಕರಗತ ಮಾಡಿದ
ಪ್ರತಿಭಾನ್ವಿತ ಹಿತಚಿಂತಕರು
ಜ್ಞಾನದ ಹಸಿವೆಯ ತಣಿಸಲು ಸನ್ಯಾ-
ಸತ್ವದ ದೀಕ್ಷೆಯ ಪಡೆದಿಹರು
ಮಾತೆಯ ಕಷ್ಟಕೆ ಮರುಗುತ ನದಿಯನೆ
ಮನೆಯ ಸಮೀಪಕೆ ಹರಿಸಿಹರು
ದೇಶಾಟನೆಯಲಿ ಶ್ರೇಷ್ಠ ಸನಾತನ
ಧರ್ಮದ ಹಿರಿಮೆಯ ಸಾರಿದರು
ಅದ್ವೈತವ ಪ್ರತಿಪಾದಿಸಿ ಮೌಢ್ಯವ
ನೀಗಿಸಿ ದೀಪ್ತಿಯ ಹರಡಿದರು
ಬಕುತಿಯು ತುಂಬಿದ ಚಿತ್ತವ ಬೆಳಗುವ
ಕೃತಿಗಳ ರಚಿಸಿದ ಆಚಾರ್ಯ
ಮಠಗಳ ಸ್ಥಾಪಿಸಿ ತತ್ತ್ವವ ಸಾರಿದ
ಶಿವನವತಾರವೆ ಗುರುವರ್ಯ!!
ಪ್ರೇಮಾ ಶ್ರೀಕೃಷ್ಣ
