U.T. Khader ಬೀದರ್ನ ಝೀರಾ ಕನ್ವೆನ್ಸನ್ ಹಾಲ್ನಲ್ಲಿ ಕಳೆದ ಎರಡು ದಿನಗಳಿಂದ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ 40ನೇ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರ ಜವಾಬ್ದಾರಿ ಹಾಗೂ ಮಾಧ್ಯಮಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತ ಗಂಭೀರ ಚರ್ಚೆಗಳಿಗೆ ಈ ಸಮ್ಮೇಳನ ಸಾಕ್ಷಿಯಾಯಿತು.
ಸಮ್ಮೇಳನದ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಎರಡನೇ ದಿನ ವಿವಿಧ ವಿಷಯಾಧಾರಿತ ಗೋಷ್ಠಿಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ದೇಶ ಮತ್ತು ಸಮಾಜವನ್ನು ಕಟ್ಟುವಲ್ಲಿ ಪತ್ರಕರ್ತರ ಪಾತ್ರ ಅನನ್ಯ. ಲೇಖನಿ ಎಂಬುದು ಕೇವಲ ಶಬ್ದಗಳನ್ನಲ್ಲ, ಸತ್ಯವನ್ನು ಬರೆಯುವ ಶಕ್ತಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಪ್ರತಿಪಕ್ಷದಂತೆ ಕೆಲಸ ಮಾಡಬೇಕು. ಪತ್ರಕರ್ತರು ಭಯವಿಲ್ಲದೆ ವೃತ್ತಿ ನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮದ ಘನತೆ ಹೆಚ್ಚುತ್ತದೆ. ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು ಎಂದರೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತೆ ಎಂದು ಅಭಿಪ್ರಾಯಪಟ್ಟರು.
U.T. Khader ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, 371ಜೆ ಸಾಂವಿಧಾನಿಕ ತಿದ್ದುಪಡಿಯಿಂದ ಕಲ್ಯಾಣ ಕರ್ನಾಟಕ ಭಾಗ ಇಂದು ಪ್ರಗತಿಯತ್ತ ಸಾಗುತ್ತಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಮಾಧ್ಯಮಗಳು ಪೂರಕ ಸಲಹೆಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಅವರು ಇಂದಿನ ಸವಾಲಿನ ದಿನಗಳಲ್ಲಿ ಸರ್ಕಾರ ಪತ್ರಕರ್ತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಸಮ್ಮೇಳನದ ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ೪೦ ಪತ್ರಕರ್ತರಿಗೆ ದತ್ತಿನಿಽ, ವಾರ್ಷಿಕ ಹಾಗೂ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ರಾಜ್ಯ ಸಮ್ಮೇಳನದಲ್ಲಿ ಶಿವಮೊಗ್ಗೆಯ ಪತ್ರಕರ್ತರಾದ ಮಹೇಶ್ ಹೆಗ್ಡೆ, ಶರತ್ಕುಮಾರ್ ಹಾಗೂ ಅರುಣ್ ಕುಮಾರ್ರವರನ್ನು ವಿವಿಧ ದತ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಜಿಲ್ಲಾ ಶಾಖೆಯ ಅಧ್ಯಕ್ಷರಾದ ಹೆಚ್. ಯು. ವೈದ್ಯನಾಥ್, ಉಪಾಧ್ಯಕ್ಷರಾದ ದೇಶಾದ್ರಿ ಹೊಸ್ಮನಿ, ನೂತನ ರಾಜ್ಯಸಮಿತಿ ಸದಸ್ಯ ಎನ್. ರವಿಕುಮಾರ್, ಖಜಾಂಚಿ ಎಸ್. ಆರ್. ರೋಹಿತ್, ನಗರ ಕಾರ್ಯದರ್ಶಿ ಕೆ. ಆರ್. ಸೋಮನಾಥ್, ನಿರ್ದೇಶಕರಾದ ಎಸ್. ಆರ್. ರಂಜಿತ್, ಆರುಂಡಿ ಶ್ರೀನಿವಾಸ ಮೂರ್ತಿ ಹಾಗೂ ಪತ್ರಕರ್ತ ನಾಗೇಶ್ ನಾಯ್ಕ ಉಪಸ್ಥಿತರಿದ್ದರು.
