CM Siddharamaiah ಪತ್ರಕರ್ತರು ಸದಾಕಾಲ ಜನಪರವಾಗಿ, ಸಮಾಜದ ಪರವಾಗಿರಬೇಕು. ಅಶಕ್ತರಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
ಬೀದರ ಜಿಲ್ಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೀದರ ಜಿಲ್ಲಾ ಘಟಕದಿಂದ ಏಪ್ರಿಲ್ 11ರಂದು ಆರಂಭವಾದ 40ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಜನವಾಡ ರಸ್ತೆಯಲ್ಲಿನ ಝೀರಾ ಕನ್ವೆನ್ಶನ್ ಹಾಲನಲ್ಲಿ ಆಯೋಜನೆಯಾಗಿದ್ದ ಸಮಾರಂಭದಲ್ಲಿ, ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ಸಂತಷದಿಂದ ಉದ್ಘಾಟಿಸಿದ್ದೇನೆ ಎಂದು ತಿಳಿಸಿದ ಮುಖ್ಯಮಂತ್ರಿಗಳು, 35 ನಿಮಿಷಗಳಿಗು ಹೆಚ್ಚು ಕಾಲ ಮಾತನಾಡಿ ಪತ್ರಕರ್ತರಿಗೆ ಹಲವು ಕಿವಿಮಾತುಗಳನ್ನು ಹೇಳಿದರು.
ಪತ್ರಕರ್ತರು ಸಮಾಜ ತಿದ್ದುವ, ಜನತೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕು. ಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕು ಎಂದು ಒತ್ತಿ ಹೇಳಿದರು.
ನಮ್ಮ ಸಮಾಜದಲ್ಲಿ ಅನೇಕ ಜಾತಿಗಳು, ಧರ್ಮಗಳು, ಭಾಷೆಗಳಿವೆ. ಹಲವು ಸಂಸ್ಕೃತಿ ಇದೆ. ಇಂತಹ ಸಮಾಜದಲ್ಲಿ ನಾವು ಬದುಕಿದ್ದೇವೆ ಎಂಬುದನ್ನು ಅರಿತು ಎಲ್ಲರೂ ಒಪ್ಪುವ ಸಂವಿಧಾನವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದರು ಎಂದು ತಿಳಿಸಿದ ಮುಖ್ಯಮಂತ್ರಿಗಳು, ನಮ್ಮ ಸಂವಿಧಾನದ ಆಶಯಗಳು ಸಮಾಜದಲ್ಲಿ ಜಾರಿಯಾಗುತ್ತಿದೆಯಾ ಎಂದು ನೋಡುವ, ತಿಳಿಯುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದರು.
ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ ಅವರು ಸಹ ಪತ್ರಕರ್ತರಾಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಪಡೆಯುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ಅದಕ್ಕಾಗಿ ಗಾಂಧೀಜಿ, ಅಂಬೇಡ್ಕರ ಅವರು ಪತ್ರಿಕೆಯನ್ನು ಹೊರಡಿಸಿ ನೊಂದವರ ಧ್ವನಿಯಾಗಿ ಕೆಲಸ ಮಾಡಿದರು. ಇಂದಿನ ಪತ್ರಕರ್ತರು ಗಾಂಧೀಜಿಯವರ, ಅಂಬೇಡ್ಕರ ಅವರ ಆಶಯಗಳನ್ನು ಅರಿತು ಅವರಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ನಾವು ಚರಿತ್ರೆಯುದ್ದಕ್ಕೂ ಅನೇಕ ಸಾಧು-ಸಂತರ ಮಾತುಗಳನ್ನು ಕೇಳುತ್ತ ಬಂದಿದ್ದೇವೆ. ಅವರ ಮಾತಿನಂತೆ ನಾವು ನಡೆಯಬೇಕು. ನಮ್ಮ ಸಮಾಜದಲ್ಲಿ ಅನೇಕ ನೂನ್ಯತೆಗಳಿದ್ದು, ಅವುಗಳನ್ನು ಹೋಗಲಾಡಿಸಿ ಸಮಸಮಾಜ ಕಟ್ಟುವ ಕಾರ್ಯ ಮಾಡಬೇಕಿದೆ ಎಂದು ಸಲಹೆ ಮಾಡಿದರು.
ನಮ್ಮಲ್ಲಿ ಜಾತಿ ವ್ಯವಸ್ಥೆ ಈಗಲೂ ಇದೆ. ಸಮಸಮಾಜ ನಿರ್ಮಾಣಕ್ಕೆ ನಮ್ಮ ಅನೇಕ ಶರಣರು ಶ್ರಮಿಸಿದರು. ಸಮಸಮಾಜ ನಿರ್ಮಾಣ ಆಗಲೇಬೇಕು. ಇಲ್ಲದಿದ್ದರೆ ಅಸಮಾನತೆಯು ಹಾಗೆಯೇ ಉಳಿಯುತ್ತದೆ. ಆದರೆ, ಸಮಾಜದಲ್ಲಿ ಈ ಅಸಮಾನತೆಯು ನಿರಂತರ ಇರಲಿ ಎಂದು ಪಟ್ಟಭದ್ರರು ಬಯಸುತ್ತಾರೆ. ಮನುವಾದಿಗಳು ಹುಟ್ಟು ಹಾಕಿದ ಜಾತಿಯತೆಯು ಹೀಗೆಯೇ ಇರಬೇಕು ಎಂದು ಪಟ್ಟಭದ್ರರು ಬಯಸುತ್ತಾರೆ. ಅಸಮಾನತೆ ಇದ್ದರೆ ಶೋಷಣೆ ಮಾಡಲು ಅನುಕೂಲವಾಗುತ್ತದೆ ಎಂಬುದು ಪಟ್ಟಭದ್ರರ ಬುದ್ಧಿವಂತಿಕೆ. ಇಂತಹ ಸೂಕ್ಷ್ಮ ವಿಷಯಗಳನ್ನು ಪತ್ರಕರ್ತರು ಅರಿಯಬೇಕು ಎಂದರು.
ನಮ್ಮ ಮಕ್ಕಳಿಗೆ ವೈಚಾರಿಕತೆ, ವೈಜ್ಞಾನಿಕತೆ ಇಲ್ಲದ ಶಿಕ್ಷಣ ಸಿಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಬಸವಣ್ಣನವರು ಕರ್ಮ ಸಿದ್ದಾಂತವನ್ನು ತಳ್ಳಿ ಹಾಕಿದರು. ಬಸವಣ್ಣನವರು ತಿಳಿಸಿದ ಸಮಾಜಮುಖಿ ವಿಚಾರಗಳು ಪಸರಿಸಬೇಕು. ನಾವೆಲ್ಲರೂ ಮಾನವರಾಗಿ ಬದುಕಬೇಕು. ಮಾನವೀಯತೆ ಇರಬೇಕು. ಮಾನವೀಯತೆ ಇದ್ದರೆ ಶೋಷಣೆಗೆ ಅವಕಾಶವಿರಲ್ಲ ಎಂದು ತಿಳಿದು ಸಮಾಜ ಒಡೆಯುವ ಪಟ್ಟಭದ್ರರನ್ನು ಹತ್ತಿಕ್ಕುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದರು.
‘ನೀನು ಬಡವನಾಗು’ ಎಂದು ಯಾವ ದೇವರೂ ಹೇಳುವುದಿಲ್ಲ. ದೇವರು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾನೆ. ಆದರೆ ದೇವರ ಹೆಸರಿನಲ್ಲಿ ಶೋಷಣೆ ನಡೆಯುತ್ತಿದೆ. ಮನುವಾದಿಗಳು, ಪಟ್ಟಭದ್ರರು ಇರುವ ಕಾರಣಕ್ಕೆ ನಮಗೆ
ವೈಚಾರಿಕ, ವೈಜ್ಞಾನಿಕ ಶಿಕ್ಷಣ ಸಿಗುವುದು ಕಷ್ಟವಾಗಿ ಪರಿಣಮಿಸಿದೆ. ಇಂತಹ ವಿಷಯಗಳನ್ನು ಪತ್ರಿಕೆಗಳು ತಿಳಿಸಿದರಷ್ಟೇ ಸಾಲದು; ಸಾಮಾಜ ಸುಧಾರಣೆ ಕಾರ್ಯಕ್ಕೆ ನಿರಂತರ ಹೋರಾಡಬೇಕು ಎಂದರು.
ನಮ್ಮಲ್ಲಿ ಸಂವಿಧಾನ ಜಾರಿ ಬಂದಿದೆ. ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲು ಮನುವಾದಿಗಳು, ಪಟ್ಟಭದ್ರರು ಬಿಡುತ್ತಿಲ್ಲ. ನಮಗೆ ರಾಜಕೀಯ ಸ್ವಾತಂತ್ರ್ಯ ಸ್ವಲ್ಪ ಪ್ರಮಾಣದಲ್ಲಿ ದಕ್ಕಿದೆ. ಆರ್ಥಿಕ ಸ್ವಾತಂತ್ರ್ಯ ಸಿಗುತ್ತಿಲ್ಲ ಎಂದರು.
ಸಮಾಜದಲ್ಲಿ ಆರ್ಥಿಕತೆ, ಸಾಮಾಜಿಕತೆಗೆ ಚಲನಶೀಲತೆ ಸಿಕ್ಕಾಗಲೇ ಜಡತ್ವ ತೊಲಗುತ್ತದೆ. ಆರ್ಥಿಕ, ಸಾಮಾಜಿಕ ಚಲನಶೀಲತೆ ತರುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು ಎಂದರು.
CM Siddharamaiah ಬಹುತೇಕ ಪತ್ರಕರ್ತರು ಕಾರ್ಪೋರೇಟ ವಲಯದ ಹಿಡಿತದಲ್ಲಿದ್ದು, ಮುಕ್ತವಾಗಿ ಬರೆಯಲು ಅವಕಾಶವಿಲ್ಲದಂತಹ ಒತ್ತಡ ಎದುರಿಸುವ ಪರಿಸ್ಥಿತಿಯೂ ಇದೆ. ಪತ್ರಕರ್ತರಿಗೆ ಬರೆಯಲು ಮುಕ್ತ ಅವಕಾಶವಿರಬೇಕು.
ವಸ್ತುನಿಷ್ಠವಾದ ವಿಷಯ, ಸತ್ಯವನ್ನು ಜನರ ಮುಂದೆ ಇಡುವ ಕಾರ್ಯವನ್ನು ಪತ್ರಕರ್ತರು ಮಾಡಬೇಕು. ಯಾವುದೇ ವಿಷಯ ಇರಲಿ ಶೋಧಿಸಿ, ದಾಖಲೆ ಕೇಳಿ ಬರೆಯಬೇಕು. ಊಹಾ ಮಾಧ್ಯಮ ಅಪಾಯಕಾರಿ. ಕ್ಷುಲ್ಲಕ ವಿಚಾರಗಳನ್ನು ಮುನ್ನೆಲೆಗೆ ತರಬಾರದು ಎಂದು ಅವರು ಸಲಹೆ ಮಾಡಿದರು.
ಒಂದು ಸಿರಿವಂತರ ಪರ, ಮತ್ತೊದು ಬಡವರ ಪರ ಎನ್ನುವಂತಹ ಎರಡು ರೀತಿಯ ಆರ್ಥಿಕ ನೀತಿಗಳು ಜಾರಿಯಲ್ಲಿರಬೇಕು ಎಂದು ಪಟ್ಟಭದ್ರರು ಬಯಸುತ್ತಾರೆ.
ಬಡವರಿಗು ಸಹ ಕೊಂಡುಕೊಳ್ಳುವ ಆರ್ಥಿಕ ಶಕ್ತಿ ಬರಬೇಕು ಎಂದು ಪತ್ರಕರ್ತರು ಯೋಚಿಸುವಂತಾಗಬೇಕು. ಸಮಾಜದಲ್ಲಿ ಆರ್ಥಿಕ ಸಮಾನತೆ ತರುವ ಪ್ರಯತ್ನವನ್ನು ಪತ್ರಕರ್ತರು ಮಾಡಬೇಕು ಎಂದರು.
12ನೇ ಶತಮಾನದಿಂದಲೇ ಸಮಾಜ ಬದಲಾವಣೆ ಕಾರ್ಯ ಆಗುತ್ತಿದೆ. ಆದರೆ, ಸಮಾಜ ಇದುವರೆಗೆ ಏಕೆ ಬದಲಾಗುತ್ತಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು,
ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡದೆ ಇದ್ದರೆ ಮತ್ತೆ ನಾವು ಹಳೆಯ ವ್ಯವಸ್ಥೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಚಿವರಾದ ಈಶ್ವರ ಖಂಡ್ರೆ, ರಹೀಂ ಖಾನ್ ಅವರು ಮಾತನಾಡಿದರು.
ಸಂಘದ ಜಿಲ್ಲಾಧ್ಯಕ್ಷರಾದ ಆನಂದ ದೇವಪ್ಪ ಅವರು ಸ್ವಾಗತಿಸಿದರು.
ಸಮಾರಂಭದಲ್ಲಿ ಹಾರಕೂಡ
ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿಯ
ಬಸವಲಿಂಗ ಪಟ್ಟದ್ದೇವರು, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ, ಸಂಸದರಾದ ಸಾಗರ ಖಂಡ್ರೆ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ ವಿ ಪ್ರಭಾಕರ, ಶಾಸಕರಾದ ಶರಣು ಸಲಗರ, ಡಾ.ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಶಿವಕುಮಾರ, ಮುಖಂಡರಾದ
ರಾಜಶೇಖರ ಪಾಟೀಲ,
ಶಾಹೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಖದೀರ್, ಗಣ್ಯರಾದ ಸರ್ದಾರ ಬಲಬೀರ್ ಸಿಂಗ್, ಗುರುನಾಥ ಕೊಳ್ಳೂರ, ಹಿರಿಯ ಸಂಪಾದಕರಾದ ವಿಶ್ವೇಶ್ವರ ಭಟ್, ಸಂಘದ
ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ, ರಾಜ್ಯ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಮುಖಂಡರಾದ
ಸೋಮಣ್ಣ ಬೇವಿನಮರದ,
ಬಸವರಾಜ ಜಾಬಶೆಟ್ಟಿ, ಮೇಯರ್ ಗೌಸುದ್ದೀನ್, ಮಲ್ಲಿಕಾರ್ಜುನ ಬಿರಾದಾರ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಸಿಇಓ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದರು.
ನೆನಪಿನ ಕೈಪಿಡಿ ಬಿಡುಗಡೆ: ಸಮ್ಮೇಳನದ ನಿಮತ್ತ ಪ್ರಕಟಿಸಿದ ಸ್ಮರಣ ಸಂಚಿಕೆಯನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ಪತ್ರಕರ್ತರಾದ
ಶಶಿಕಾಂತ ಶೆಂಬೆಳ್ಳಿ ಹಾಗೂ
ಶ್ರೀಕಾಂತ ಬಿರಾದಾರ ಸಂಪಾದಿಸಿದ ‘ಶರಣ ಸೂಫಿ ಸಿರಿ’ ವಿಶೇಷ ಸಂಚಿಕೆಯನ್ನು ಸಹ ಇದೆ ವೇಳೆ ಬಿಡುಗಡೆ ಮಾಡಲಾಯಿತು.
CM Siddharamaiah ಇಂದಿನ ಪತ್ರಕರ್ತರು ಗಾಂಧೀಜಿ ಮತ್ತು ಅಂಬೇಡ್ಕರ್ ಆವರ ಆಶಯಗಳನ್ನರಿತು ಅವರಂತೆ ಕಾರ್ಯ ನಿರ್ವಹಿಸಬೇಕು- ಮುಖ್ಯಮಂತ್ರಿ ಸಿದ್ಧರಾಮಯ್ಯ
Date:
