Sahyadri Narayana Multi Specialty Hospital ಅಪರೂಪದ ಆಟೋ ಇಮ್ಯೂನ್ (ನರ ಮತ್ತು ಸ್ನಾಯು ಸಂಬಂಧಿ) ಕಾಯಿಲೆಗೆ ಚಿಕಿತ್ಸೆ ನೀಡಲು ಆರಂಭವಾದ ಸಂಕೀರ್ಣ ಶಸ್ತ್ರಚಿಕಿತ್ಸೆಯೊಂದು, ನೋಡನೋಡುತ್ತಿದ್ದಂತೆ ಜೀವನ ಮತ್ತು ಮರಣದ ನಡುವಿನ ಹೋರಾಟವಾಗಿ ಬದಲಾಯಿತು. ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರ ತಂಡ, 48 ವರ್ಷದ ರೋಗಿಯನ್ನು ಉಸಿರಾಟ ವೈಫಲ್ಯದ ಅಂಚಿನಿಂದ ಪಾರುಮಾಡುವಲ್ಲಿ ಯಶಸ್ವಿಯಾಗಿದ್ದು, ಸಂಕೀರ್ಣ ವೈದ್ಯಕೀಯ ಸವಾಲನ್ನು ಗೆದ್ದು ರೋಗಿಗೆ ಮರುಜೀವ ನೀಡಿದೆ.
ಕನ್ಸಲ್ಟೆಂಟ್ ನ್ಯೂರಾಲಜಿಸ್ಟ್ ಡಾ. ಹಂಸ ಕೆ.ಎಂ. ಅವರ ನೇತೃತ್ವದಲ್ಲಿ ನಡೆದ ಈ ಚಿಕಿತ್ಸೆಯು, ‘ಮೈಯಾಸ್ಥೆನಿಕ್ ಕ್ರೈಸಿಸ್’ (ಉಸಿರಾಟವನ್ನು ನಿಯಂತ್ರಿಸುವ ಸ್ನಾಯುಗಳು ಹಠಾತ್ತನೆ ವಿಫಲವಾಗುವ ತುರ್ತು ಸ್ಥಿತಿ) ನಂತಹ ಸಂದರ್ಭಗಳಲ್ಲಿ ತ್ವರಿತ ರೋಗನಿರ್ಣಯ ಮತ್ತು ವಿವಿಧ ವಿಭಾಗಗಳ ವೈದ್ಯರ ಸಮನ್ವಯದ ಚಿಕಿತ್ಸೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದೆ.
ಏನಿದು ಪ್ರಕರಣ?
ಸ್ನಾಯುಗಳ ದೌರ್ಬಲ್ಯ ಮತ್ತು ವಿಪರೀತ ಆಯಾಸದ ಸಮಸ್ಯೆಯೊಂದಿಗೆ ರೋಗಿ ಮೊದಲು ನ್ಯೂರಾಲಜಿ ಹೊರರೋಗಿ ವಿಭಾಗಕ್ಕೆ (OPD) ಬಂದಿದ್ದರು ಎಂದು ಡಾ. ಹಂಸ ತಿಳಿಸಿದರು. ತಪಾಸಣೆ ನಡೆಸಿದಾಗ ಅವರಿಗೆ ‘ಮೈಯಾಸ್ಥೇನಿಯಾ ಗ್ರಾವಿಸ್’ (ದೀರ್ಘಕಾಲದ ನರ ಮತ್ತು ಸ್ನಾಯು ಸಂಬಂಧಿತ ಕಾಯಿಲೆ) ಇರುವುದು ದೃಢಪಟ್ಟಿತು. ಹೆಚ್ಚಿನ ಸ್ಕ್ಯಾನಿಂಗ್ ನಡೆಸಿದಾಗ ಅವರ ಎದೆಯ ಭಾಗದಲ್ಲಿ 12 ಸೆಂ.ಮೀ.ಗೂ ದೊಡ್ಡದಾದ ಗಡ್ಡೆ (ಮೀಡಿಯಾಸ್ಟಿನಲ್ ಮಾಸ್) ಇರುವುದು ಕಂಡುಬಂತು.
ಆರಂಭಿಕ ಬಯಾಪ್ಸಿ ವರದಿಯು ಇದು ಲಿಂಫೋಮಾ ಇರಬಹುದು ಎಂದು ಸೂಚಿಸಿತ್ತಾದರೂ, ವೈದ್ಯಕೀಯ ತಂಡವು ಆಳವಾದ ತಪಾಸಣೆಗೆ ಮುಂದಾಯಿತು. ಇಮ್ಯುನೊಹಿಸ್ಟೊಕೆಮಿಸ್ಟ್ರಿ (IHC) ಪರೀಕ್ಷೆಯ ಮೂಲಕ ಇದು ‘ಥೈಮೋಮಾ’ (ಥೈಮಸ್ ಗ್ರಂಥಿಯ ಗೆಡ್ಡೆ) ಎಂದು ಖಚಿತಪಡಿಸಿಕೊಳ್ಳಲಾಯಿತು. ಇದು ಸಾಮಾನ್ಯವಾಗಿ ಮೈಯಾಸ್ಥೇನಿಯಾ ಗ್ರಾವಿಸ್‌ಗೆ ಸಂಬಂಧಿಸಿರುತ್ತದೆ.ಮೊದಲಿಗೆ ಔಷಧಗಳ ಮೂಲಕ ರೋಗಿಯನ್ನು ಸ್ಥಿರಗೊಳಿಸಿದ ನಂತರ, ಯಶಸ್ವಿಯಾಗಿ ‘ಥೈಮೆಕ್ಟಮಿ’ ಮಾಡಲಾಯಿತು. ಎದೆಯ ಎಲುಬಿನ ಹಿಂಭಾಗದಲ್ಲಿರುವ ಥೈಮಸ್ ಗ್ರಂಥಿಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವುದೇ ಈ ಪ್ರಕ್ರಿಯೆ. ಸಿಟಿವಿಎಸ್ (CTVS) ಶಸ್ತ್ರಚಿಕಿತ್ಸಕರಾದ ಡಾ. ಬಾಲಸುಬ್ರಮಣಿ ಆರ್ ಅವರು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದರು.
ಶಸ್ತ್ರಚಿಕಿತ್ಸೆಯ ನಂತರದ ಸವಾಲು
ಆದರೆ, ಹೋರಾಟ ಇಲ್ಲಿಗೆ ಮುಗಿದಿರಲಿಲ್ಲ. ಶಸ್ತ್ರಚಿಕಿತ್ಸೆಯ ಒತ್ತಡದಿಂದಾಗಿ ರೋಗಿಯು ‘ಮೈಯಾಸ್ಥೆನಿಕ್ ಕ್ರೈಸಿಸ್’ಗೆ ತುತ್ತಾದರು. ಅವರ ಉಸಿರಾಟದ ಸ್ನಾಯುಗಳು ತೀವ್ರವಾಗಿ ದುರ್ಬಲಗೊಂಡವು. ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ಪ್ರಾಣಕ್ಕೇ ಕುತ್ತು ತರುವಂತಹ ಉಸಿರಾಟ ವೈಫಲ್ಯದ ಸ್ಥಿತಿ ಎದುರಾಯಿತು.”ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರ ತಂಡ ತಕ್ಷಣ ಕಾರ್ಯಪ್ರವೃತ್ತವಾಯಿತು. ಶಸ್ತ್ರಚಿಕಿತ್ಸೆಯ ಒತ್ತಡವು ಇಂತಹ ವಿಷಮ ಸ್ಥಿತಿಯನ್ನು ಪ್ರಚೋದಿಸುವುದು ತಿಳಿದಿರುವ ವಿಷಯವೇ, ಹೀಗಾಗಿ ಇಲ್ಲಿ ವೇಗವೇ ಮದ್ದು,” ಎಂದು ಡಾ. ಹಂಸ ಹೇಳಿದರು. ರೋಗಿಯನ್ನು ತಕ್ಷಣವೇ ಐಸಿಯುಗೆ (ICU) ದಾಖಲಿಸಿ, ಕೃತಕ ಉಸಿರಾಟದ ವ್ಯವಸ್ಥೆಯನ್ನು (ಇಂಟ್ಯೂಬೇಷನ್) ಅಳವಡಿಸಲಾಯಿತು.
ಸಮನ್ವಯ ಚಿಕಿತ್ಸೆಯಿಂದ ಚೇತರಿಕೆ
ನಂತರದ ಚೇತರಿಕೆ ಪ್ರಕ್ರಿಯೆಯು ‘ಸಮನ್ವಯ ವೈದ್ಯಕೀಯ ಚಿಕಿತ್ಸೆ’ಗೆ ಅತ್ಯುತ್ತಮ ಉದಾಹರಣೆಯಂತಿದೆ. ನೆಫ್ರಾಲಜಿಸ್ಟ್ ಡಾ. ರವಿ ಅವರು ಅದೇ ದಿನ ಪ್ಲಾಸ್ಮಾಫೆರೆಸಿಸ್ (ರಕ್ತದಲ್ಲಿನ ಪ್ರತಿಕಾಯಗಳನ್ನು ಶುದ್ಧೀಕರಿಸುವ ಪ್ರಕ್ರಿಯೆ) ಆರಂಭಿಸಿದರು. ಕ್ರಿಟಿಕಲ್ ಕೇರ್ ಅರಿವಳಿಕೆ ತಜ್ಞ ಡಾ. ದೀಪಕ್ ಶೆಟ್ಟಿ ಅವರು ವೆಂಟಿಲೇಟರ್ ನಿರ್ವಹಣೆ ಮಾಡಿದರೆ, ಶ್ವಾಸಕೋಶ ತಜ್ಞ ಡಾ. ಅಜಯ್ ಅವರು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕೃತಕ ಉಸಿರಾಟದ ಕೊಳವೆ ತೆಗೆಯಲು (extubation) ಮಾರ್ಗದರ್ಶನ ನೀಡಿದರು.ಕೇವಲ ಯಂತ್ರಗಳಲ್ಲದೆ, ದೈಹಿಕ ಚಿಕಿತ್ಸೆಗೂ ಒತ್ತು ನೀಡಲಾಯಿತು. ನ್ಯೂರೋ ಫಿಸಿಯೋಥೆರಪಿಸ್ಟ್ ನವನೀದನ್ ಕೃಷ್ಣನ್ ಅವರು ಎದೆ ಮತ್ತು ಕೈಕಾಲುಗಳಿಗೆ ಅಗತ್ಯವಾದ ಫಿಸಿಯೋಥೆರಪಿ ನೀಡಿದರೆ, ಸ್ಪೀಚ್ ಥೆರಪಿಸ್ಟ್ ಜೀವನ್ ಅವರು ರೋಗಿಯು ಸುರಕ್ಷಿತವಾಗಿ ಆಹಾರ ನುಂಗುವ ಸಾಮರ್ಥ್ಯ ಮರಳಿ ಪಡೆಯಲು ಶ್ರಮಿಸಿದರು.
ಈ ಸಂಘಟಿತ ಪ್ರಯತ್ನಕ್ಕೆ ಫಲ ಸಿಕ್ಕಿತು. ಮೂರು ಸುತ್ತಿನ ಪ್ಲಾಸ್ಮಾಫೆರೆಸಿಸ್ ಮತ್ತು ತೀವ್ರ ನಿಗಾ ಘಟಕದ ಆರೈಕೆಯ ನಂತರ ರೋಗಿಯ ಉಸಿರಾಟದ ಶಕ್ತಿ ಮರಳಿತು. 4ನೇ ದಿನದಂದು ಅವರನ್ನು ವೆಂಟಿಲೇಟರ್‌ನಿಂದ ಹೊರತೆಗೆಯಲಾಯಿತು, 5ನೇ ದಿನದಂದು ವಾರ್ಡ್‌ಗೆ ಸ್ಥಳಾಂತರಿಸಿ, ನಂತರ ಸುಸ್ಥಿತಿಯಲ್ಲಿ ಡಿಸ್ಚಾರ್ಜ್ ಮಾಡಲಾಯಿತು.
Sahyadri Narayana Multi Specialty Hospital ಈ ಬಗ್ಗೆ ಮಾತನಾಡಿದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗೀಸ್ ಪಿ. ಜಾನ್, “ಅತ್ಯಂತ ಸಂಕೀರ್ಣ ವೈದ್ಯಕೀಯ ಸವಾಲುಗಳನ್ನು ನಿಖರತೆ ಮತ್ತು ಕಾಳಜಿಯಿಂದ ನಿಭಾಯಿಸಲು ನಾವು ಬದ್ಧರಾಗಿದ್ದೇವೆ. ತಕ್ಷಣದ ಮತ್ತು ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿರುವ ಮೈಯಾಸ್ಥೇನಿಯಾ ಗ್ರಾವಿಸ್ ಪ್ರಕರಣಗಳನ್ನು ನಿರ್ವಹಿಸುವ ನಮ್ಮ ಸಾಮರ್ಥ್ಯಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಭಾಗದಲ್ಲಿ ಸುಧಾರಿತ ನರರೋಗ ಚಿಕಿತ್ಸೆಗೆ ನಮ್ಮ ಆಸ್ಪತ್ರೆ ಪ್ರಮುಖ ತಾಣವಾಗಿದೆ ಎಂಬುದನ್ನು ಇದು ಸಾಬೀತುಪಡಿಸಿದೆ,” ಎಂದು ಹರ್ಷ ವ್ಯಕ್ತಪಡಿಸಿದರು, ಹಾಗೂ ಈ ಕ್ಲೀಷ್ಠಕರ ಶಸ್ತ್ರ ಚಿಕಿತ್ಸೆಯಲ್ಲಿ ಬಾಗವಹಿಸಿದ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿದರು.
Sahyadri Narayana Multi Specialty Hospital ಅಪರೂಪದ ಕಾಯಿಲೆ, “ಮೈಯಾಸ್ಥೆನಿಕ್ ಕ್ರೈಸಿಸ್” ಪೀಡಿತ ರೋಗಿಗೆ ಚಿಕಿತ್ಸೆ: ಶಿವಮೊಗ್ಗ ಸಹ್ಯಾದ್ರಿ ಎನ್.ಎಚ್.ಆಸ್ಪತ್ರೆ ವೈದ್ಯರ ಸಾಧನೆ
Date:
