Thursday, March 12, 2026
Thursday, March 12, 2026

Klive Special Article ಮಾರ್ಚ್ 12 ವಿಶ್ವ ಕಿಡ್ನಿ ದಿನ

Date:

Klive Special Article ಇವತ್ತು ಮಾರ್ಚ್ ಹನ್ನೆರಡು,ವಿಶ್ವ ಮೂತ್ರಪಿಂಡಗಳ ದಿನ, ಹುಟ್ಟು ಹಬ್ಬ ಅಲ್ಲ, ಸಡಗರದ ಆಚರಣೆಯೂ ಅಲ್ಲ. ಸೃಷ್ಟಿ ಕರ್ತನ ಅದ್ಭುತ ಕೊಡುಗೆಯಾದ ಜೋಡಿ ಮೂತ್ರ ಪಿಂಡಗಳ ಆರೋಗ್ಯ,ಕ್ಷೇಮ,ಕಾಳಜಿಯ ಮಹತ್ವದ ಅರಿವನ್ನು ನೆನಪಿಸುವ ದಿನ. ಜಾಗತಿಕ ತಾಪಮಾನದ ಏರುವಿಕೆ, ಪರಿಸರ ಮಾಲಿನ್ಯ, ಕುಡಿಯುವ ನೀರಿನಲ್ಲಿ ಸೇರಿ ಮೂತ್ರ ಪಿಂಡಗಳ ಹಾನಿಗೆ ಕಾರಣವಾಗುವ ಕೈಗಾರಿಕಾ ತ್ಯಾಜ್ಯ ವಿಷಗಳೂ ಮೂತ್ರಪಿಂಡಗಳ ವೈಫಲ್ಯಕ್ಕೆ ಸೇರ್ಪಡೆ ಆಗಿರುವ ಹೊಸ ಮಾಹಿತಿಗಳು ಮತ್ತು ನಮ್ಮ ಆಧುನಿಕ ಐಷಾರಾಮಿ ಬದುಕಿನಲ್ಲಿ ಇರುವ “ಜಾಣ ಕುರುಡಿ”ನ ಒಂದು ಮುಖ ಅಷ್ಟೇ.

ನಮ್ಮ ಮೂತ್ರಪಿಂಡಗಳು:ಕೇವಲ ಮೂತ್ರ ಉತ್ಪತ್ತಿ ಮಾಡಲಿಕ್ಕೆ ಇರುವುದಲ್ಲ.ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ನೀರಿನ ಪ್ರಮಾಣವನ್ನು ತೆಗೆದುಹಾಕಿ ರಾಸಾಯನಿಕ ಅಥವಾ ಲವಣಾಂಶ ಮತ್ತು ದ್ರವಗಳ ಸಮತೋಲನವನ್ನು ನಿಯಂತ್ರಿಸುವುದು ಅದ್ಭುತ.
ರಕ್ತದೊತ್ತಡದ ನಿಯಂತ್ರಣಕ್ಕೆ ಕಿಡ್ನಿ ಕಾರ್ಯಕ್ಷಮತೆ ಅನಿವಾರ್ಯ. ಮೂಳೆಗಳ ಆರೋಗ್ಯ, ವಿಟಮಿನ್ ಡಿ, ಕ್ಯಾಲ್ಸಿಯಮ್ ಮಟ್ಟದ ಸಮತೋಲನಕ್ಕೆ ಕಿಡ್ನಿ ಬೇಕೇ ಬೇಕು.ಕೆಂಪು ರಕ್ತ ಕಣಗಳನ್ನು ತಯಾರಿಸಲು ಬೇಕಾದ “ಎರಿಥ್ರೋ ಪೋಯೆಟಿನ್” ಅನ್ನುವ ಹಾರ್ಮೋನ್ ಉತ್ಪಾದನೆ ಮೂತ್ರ ಪಿಂಡಗಳಿಂದಲೇ ಆಗಬೇಕು…!

CKD, (Chronic kidney disease)ಅಂದರೆ ದೀರ್ಘ ಕಾಲದ ಮೂತ್ರಪಿಂಡಗಳ ಕಾಯಿಲೆ ಒಂದು ಮೌನ ಹಂತಕ, ಸೈಲೆಂಟ್ ಕಿಲ್ಲರ್. ಅಂದರೆ ಯಾವುದೇ ನಿರ್ದಿಷ್ಟ ಲಕ್ಷಣಗಳು ಇರಬೇಕಂತಿಲ್ಲ.ಮೂತ್ರಪಿಂಡಗಳಲ್ಲಿ “ನೆಫ್ರಾನ್‌”ಗಳು ಎಂದು ಕರೆಯಲ್ಪಡುವ ಒಂದು ಮಿಲಿಯನ್ ಸಣ್ಣ ಸಣ್ಣ ಘಟಕಗಳಿವೆ.ನೆಫ್ರಾನ್‌ಗಳು ಹಾನಿಗೊಳಗಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಮೂತ್ರಪಿಂಡದ ಕಾರ್ಯವನ್ನು ಕಾಪಾಡಿಕೊಳ್ಳಲು ಉಳಿದ ಆರೋಗ್ಯಕರ ನೆಫ್ರಾನ್‌ಗಳ ಮೇಲೆ ಹೆಚ್ಚುವರಿ ಒತ್ತಡವನ್ನುಂಟುಮಾಡುತ್ತವೆ. ಇನ್ನೂ ಹಾನಿ ಮುಂದುವರಿದರೆ, ಉಳಿದ ಆರೋಗ್ಯಕರ ನೆಫ್ರಾನ್‌ಗಳು ಮೂತ್ರಪಿಂಡದ ಕಾರ್ಯವನ್ನು ನಿರ್ವಹಿಸುವಲ್ಲಿ ಸೋಲುತ್ತವೆ. ವಯಸ್ಕರರಲ್ಲಿ ಹತ್ತು ಮಂದಿಯಲ್ಲಿ ಒಬ್ಬರಿಗೆ ಇಂತಹ ದೀರ್ಘ ಕಾಲದ ಮೂತ್ರಪಿಂಡ ಕಾಯಿಲೆ ಇರುವುದು ಆತಂಕಕಾರಿ ಅಂಕಿ ಅಂಶ.

ರೋಗದ ಕೊನೆಯ ಹಂತದವರೆಗೆ ಯಾವುದೇ ಲಕ್ಷಣಗಳು ಅಥವಾ ಲಕ್ಷಣಗಳು ಕಂಡುಬಾರದೇ ಇರುವುದು ದುರಾದೃಷ್ಟ.ಕಾಯಿಲೆಯನ್ನು ನಿಲ್ಲಿಸಲು ಅಥವಾ ನಿಧಾನಗೊಳಿಸಲು ಪ್ರಾಥಮಿಕ ಚಿಕಿತ್ಸೆ ಖಚಿತವಾಗಿ ಇಲ್ಲದೇ ಹೋದರೆ CKD ಮುಂದುವರೆದು ಸಂಪೂರ್ಣ ಮೂತ್ರ ಪಿಂಡಗಳ ವೈಫಲ್ಯ ಅನಿವಾರ್ಯ ಪರಿಸ್ಥಿತಿ. ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಆಗುವ ಸಾವಿನ ಹತ್ತು ಪ್ರಮುಖ ಕಾರಣಗಳಲ್ಲಿ ಜಾಗತಿಕ ಮಟ್ಟದಲ್ಲೂ ಸಿಕೆಡಿ 7 ನೇ ಸ್ಥಾನದಲ್ಲಿದೆ….! ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಕಾಯಿಲೆ ಇರುವವರು ತುಂಬಾ ಹೆಚ್ಚಾಗಿರುವುದರಿಂದ ಪ್ರಪಂಚಾದಾದ್ಯಂತ CKD ಹೆಚ್ಚಾಗಿ ಕಂಡುಬರುತ್ತಲಿದೆ.

ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗಳಿಗೆ ಸಾಮಾನ್ಯ ಕಾರಣಗಳು:
ಟೈಪ್ 1 ಅಥವಾ ಟೈಪ್ 2 ಮಧುಮೇಹ.
ತೀವ್ರ ರಕ್ತದೊತ್ತಡ.
ಸ್ವಯಂ ನಿರೋಧಕ ಕಾಯಿಲೆಗಳು.( auto immune )
ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆ ಮತ್ತಿತರಆನುವಂಶಿಕ ಮೂತ್ರಪಿಂಡ ಕಾಯಿಲೆಗಳು.
ಪ್ರಾಸ್ಟೇಟ್ ಗ್ರಂಥಿ, ಮೂತ್ರಪಿಂಡದ ಕಲ್ಲುಗಳು,ಗೆಡ್ಡೆಗಳಂತಹ ಪರಿಸ್ಥಿತಿಗಳಿಂದ ಮೂತ್ರ ಹರಿವಿಕೆಗೆ ದೀರ್ಘಕಾಲದ ಅಡಚಣೆಗಳು.
ನೋವು ನಿವಾರಕ ಔಷಧಿಗಳ ದುರ್ಬಳಕೆ, ವೈಜ್ಞಾನಿಕ ಪುರಾವೆಗಳಿಲ್ಲದೆ ಉಪಯೋಗಿಸುವ ಆಹಾರ ಮತ್ತು ಔಷಧಿಗಳು ಅನ್ನುವ ರಾಸಾಯನಿಕಗಳು.
ಹೊಟ್ಟೆಯಲ್ಲಿ ಏನೇ ತೊಂದರೆ ಕಂಡರೂ, ಗ್ಯಾಸ್ಟ್ರಿಕ್ ಅಂತ ತಾವೇ ನಿರ್ಧರಿಸಿ ಔಷಧಿ ತೆಗೆದುಕೊಂಡು, ಅದನ್ನು ದಿನಾ ತಿಂದರೆ ಮಾತ್ರಾ ಗ್ಯಾಸ್ಟ್ರಿಕ್ ಕಮ್ಮಿ ಆಗುತ್ತದೆ ಅಂತ ಪ್ರತಿ ದಿನ ತಿನ್ನುವುದು. ಈ ವಿಷಯ ಎಷ್ಟೋ ಮಂದಿ ಜನಸಾಮಾನ್ಯರಿಗೆ ತಿಳಿದಿಲ್ಲ. ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಪ್ರತಿ ದಿನ ದೊಡ್ಡ ವ್ಯಾಪಾರ ಈ ಗ್ಯಾಸ್ಟ್ರಿಕ್ ಮಾತ್ರೆ ಮತ್ತು ನೋವು ನಿವಾರಕ ಮಾತ್ರೆಗಳು…!

Klive Special Article ನಿನ್ನೆ ಒಬ್ಬರು ರೋಗಿ ಮಧುಮೇಹ ಮತ್ತು ರಕ್ತದೊತ್ತಡ ಚಿಕಿತ್ಸೆಗಾಗಿ ಬಂದಾಗ ಕಂಡುಬಂದ ಅನುಭವ ಬರೆಯಬೇಕು ಅಂದಾಗಲೇ ನನಗೆ ಅರಿವಾಗಿದ್ದು ಇವತ್ತು “WORLD KIDNEY DAY “.
ಆ ಪುಣ್ಯಾತ್ಮರು ಕಳೆದ ಒಂದು ವರ್ಷದಿಂದ ತಪಾಸಣೆಗೆ ಬರುತ್ತಿದ್ದರು. ಬಿಪಿ, ಶುಗರ್ ಜೊತೆ ಧೂಮಪಾನ, ದೈಹಿಕ ಬೊಜ್ಜು, ಕಡಿವಾಣ ಇಲ್ಲದ ಆಹಾರ ಪದ್ಧತಿ. ಕರೆದುಕೊಂಡು ಬಂದ ಮಗಳದ್ದು ಒಂದೇ ವರಾತ, ಸರ್ ಎಲ್ಲಾ ಸರಿ ಮಾಡಿ ಕೊಡಿ ಅಂತ. ಸಕ್ಕರೆ ಕಾಯಿಲೆಗೆ ಇನ್ಸುಲಿನ್ ಮತ್ತೆ ಉಳಿದ ಸಮಸ್ಯೆಗಳಿಗೆ ಮಾತ್ರೆಗಳನ್ನು ಹಾಕಿ ಮೂರು ತಿಂಗಳಲ್ಲಿ ಸಾಧಾರಣ ಹತೋಟಿ ಬಂದಾಗ ಇನ್ಸುಲಿನ್ ನಿಲ್ಲಿಸಿ ಮಾತ್ರೆಗಳನ್ನು ಬಳಸಲು ಸಲಹೆ ಕೊಟ್ಟೆ. ಮೂರು ತಿಂಗಳಿಗೆ ಒಮ್ಮೆ ಬರಲು ಸೂಚಿಸಿ ಪತ್ಯಕ್ರಮ, ವ್ಯಾಯಾಮ, ಕ್ರಮವತ್ತಾದ ಚಿಕಿತ್ಸೆಯ ಅಗತ್ಯತೆ ಜೊತೆ ಧೂಮಪಾನ ಬಿಡಿಸಿದೆ.

ನಿನ್ನೆ ಬಂದಾಗ ಒಂದು ಆತಂಕಕಾರೀ ಪ್ರಯೋಗ ಶಾಲೆ ಫಲಿತಾಂಶ ಕಂಡಿತು. “ಕ್ರಿಯಾಟಿನಿನ್”ಅನ್ನುವ ಮೂತ್ರಪಿಂಡಗಳ ಕಾರ್ಯಕ್ಷಮತೆಯ ಸೂಚ್ಯ0ಕ ಏರಿತ್ತು, ಮೂತ್ರದಲ್ಲಿ ಪ್ರೊಟೀನ್ ಲೀಕ್ ಆಗುವುದು ಸಹಾ ಇತ್ತು. ಹಳೆಯ ರೆಕಾರ್ಡ್ ನೋಡಿದರೆ, ಎಲ್ಲವೂ ಸಹಜವಾಗಿತ್ತು. ಮೂತ್ರಪಿಂಡಗಳ ಸ್ಪೆಷಲಿಸ್ಟ್ ಅವರನ್ನು ಕಂಡು ಮತ್ತೆ ನನ್ನ ಔಷಧಿ ನಿರ್ಧಾರ ಅಂತ ಹೇಳಿ ಕಳುಹಿದೆ. ಎಲ್ಲಾ ಪರೀಕ್ಷೆ ಮುಗಿದು ಮೂತ್ರಪಿಂಡ ಸ್ಪೆಷಲಿಸ್ಟ್ ಅವರ ಸಲಹೆ ಪಡೆದು ಬಂದರು. ಮತ್ತೆ ಇನ್ಸುಲಿನ್ ಶುರುಮಾಡುವ ಯೋಚನೆ ಇಂದ ಒಂದು ಪ್ರಶ್ನೆ ಕೇಳಿದೆ…”ಇನ್ಯಾವುದಾದರೂ ಔಷಧಿ, ನೋವು ನಿವಾರಕ ಮಾತ್ರೆ ಬಳಕೆ ಮಾಡುತ್ತಿದ್ದೀರಾ” ಅಂತ…!
ಪುಣ್ಯಾತ್ಮರು “ಕಹಿ ಔಷಧಿ”ಅನ್ನುವ ನೆಪಕ್ಕೆ ಉತ್ತರ ಕನ್ನಡ ಜಿಲ್ಲೆಯ ಯಾವುದೊ ಮೂಲೆಯಿಂದ ಕುಲ,ಗೋತ್ರ,ಹೆಸರು,ಲೇಬಲ್ ಏನೂ ಇಲ್ಲದೇ ಇರುವ “ಹಸಿರು ಉಂಡೆ ” ಅಂತ ಪಾರ್ಸೆಲ್ ತರಿಸಿ ಕಳೆದ ಮೂರು ತಿಂಗಳುಗಳಿಂದ ತಿನ್ನುತ್ತಿದ್ದಾರೆ…!ಇದು ಆಯುರ್ವೇದವೂ ಅಲ್ಲ, ಅಲ್ಲೊಪತಿ, ಹೊಮಿಯೋಪತಿಯೂ ಅಲ್ಲ…! ಇದು ಸಾಂಪ್ರದಾಯಿಕ ನಾಟಿ ಔಷಧಿ ಇರಬಹುದು… ಅದರಲ್ಲಿ ಇರುವ ರಾಸಾಯನಿಕಗಳು, ಔಷಧಿ ಪ್ರಮಾಣ ಮತ್ತು ವಿವರ ದೇವರಿಗೆ ಗೊತ್ತು. ಆ ಪುಣ್ಯಾತ್ಮರಿಗೆ ವಿಷಯ, ಮಾಹಿತಿ ತಿಳಿಸಿ, ಹಸಿರು ಉಂಡೆ ಔಷಧಿ ನಿಲ್ಲಿಸಲು ಹೇಳಿ ಮತ್ತೆ ಎರಡು ತಿಂಗಳ ನಂತರ ಬರಲು ಹೇಳಿದ್ದೇನೆ…!ಹಾಗೆಯೇ ಹಸಿರು ಉಂಡೆ ಔಷಧಿ ವಿವರಕ್ಕೆ ತರಲು ಹೇಳಿದಾಗ ಅವರು ಹೇಳಿದ್ದು ಅದಕ್ಕೇನು ಪ್ಯಾಕಿಂಗ್, ಲೇಬಲ್ ಇಲ್ಲ, ಹಾಗೇ ಕಟ್ಟಿ ಕೊಡುತ್ತಾರೆ ಅಂತ…!ಅದನ್ನು ರಾಸಾಯನಿಕ ಪರೀಕ್ಷೆಗೆ ಕಳುಹಿಸಿ ಅದರಲ್ಲಿ ಏನಿದೆ ಅಂತ ಕಂಡು ಹಿಡಿಯಬಹುದು. ನನಗೆ ಅದರಲ್ಲಿ ಆಸಕ್ತಿ ಇದ್ದರು, ಅದನ್ನೆಲ್ಲ ಮಾಡಿ ಮತ್ತೆ ತೊಂದರೆ ಅನುಭವಿಸಲು ಸಿದ್ದನಿಲ್ಲ. ಹಿಂದೆ ಒಮ್ಮೆ ನನ್ನ ವೈದ್ಯ ಸ್ನೇಹಿತರೊಬ್ಬರು ರೋಗಿ ತೋರಿಸಿದ ಔಷಧಿಯೇ ಕಿಡ್ನಿ, ಲಿವರ್ ತೊಂದರೆಗೆ ಕಾರಣ ಅಂದ ಮಾರನೇ ದಿನ ಗೂಂಡಾಗಳು ಅವರ ಕೊಠಡಿಗೆ ಬಂದು ನಮ್ಮ ಔಷಧಿಯ ಮೇಲೆ ಇಂತಹ ಅಪಪ್ರಚಾರ ಸಲ್ಲದು,ಆ ಔಷಧಿಯ ಮೇಲೆ ನಿಮ್ಮ ಮಾತನ್ನು ಹಿಂದೆ ತೆಗೆದುಕೊಳ್ಳಿ ಅಂತ…!

ಕೊನೆಯಲ್ಲಿ “ವಿಶ್ವ ಕಿಡ್ನಿ ದಿನ”ದಂದು ಮೂತ್ರ ಪಿಂಡಗಳ ರಕ್ಷಣೆಗೆ ನಾನು ಕೊಡಬಲ್ಲ ಸಲಹೆಗಳು ಸುಲಭ.ಯಾವುದೇ ಕಾಯಿಲೆ ಇರಲಿ ಔಷಧ ಬಳಕೆ ಕ್ರಮವತ್ತಾಗಿರಲಿ. ಸ್ವಯಂ ವೈದ್ಯಕೀಯ ತಪ್ಪಿಸಿ. ಲೇಬಲ್, ಔಷಧಿ ಪ್ರಮಾಣ, ವಿವರಗಳಿಲ್ಲದೆ ಹೋದರೆ ಅದು ಧನ್ವ0ತರಿ ಪ್ರಸಾದ ಆದರೂ ಹೊಟ್ಟೆಗೆ ಹಾಕಬೇಡಿ. ಅಲ್ಲೊಪತಿ, ಆಯುರ್ವೇದ, ಹೊಮಿಯೋಪತಿ, ಉನಾನಿ, ಸಿದ್ಧ ಪದ್ಧತಿ ಯಾವುದೇ ಇರಲಿ “ನಕಲಿ ವೈದ್ಯ “ನಕಲಿ ವೈದ್ಯ ಪದ್ಧತಿ ಬಗ್ಗೆ ಎಚ್ಚರ ಇರಲಿ. ನೀವು ಏನೇ ಔಷಧಿ ಬಳಕೆ ಮಾಡಿದರೂ ಒಂದು ಡೈರಿಯಲ್ಲಿ ನಮೂದಿಸಿ. ವೈದ್ಯರ ಔಷಧಿಯ ಜೊತೆ ಜೊತೆಗೆ ಏನೇ ಪರ್ಯಾಯ ಪದ್ಧತಿ ಬಳಸಿದರೂ ಪ್ರಾಮಾಣಿಕವಾಗಿ ತಿಳಿಸಿ. ವೈದ್ಯರು ಬೈಯುತ್ತಾರೆ ಅಂತ ವಿಷಯ ಮುಚ್ಚಿಡುವುದು ತುಂಬಾ ಸಾಮಾನ್ಯ. ವಿವರಗಳನ್ನು ಮುಚ್ಚಿಡುವುದು ಆತ್ಮ ವಂಚನೆಗೆ ಸಮಾನ ಮತ್ತು ತುಂಬಾ ಅಪಾಯಕಾರಿ ಅಂತ ನನ್ನ ಅನಿಸಿಕೆ.

ಸಾರ್ವಜನಿಕರ ಒಂದು ತಪ್ಪು ಕಲ್ಪನೆ ಅಂದರೆ ಸಕ್ಕರೆ ಕಾಯಿಲೆ ಮತ್ತು ಬಿಪಿ ಕಾಯಿಲೆಗೆ ಉಪಯೋಗಿಸುವ ಅಲ್ಲೊಪತಿ ಔಷಧಿ ಇಂದ ಕಿಡ್ನಿ ಡ್ಯಾಮೇಜ್ ಆಗುತ್ತೆ ಅಂತ. ಸಕ್ಕರೆ ಕಾಯಿಲೆ ಮತ್ತು ಬಿಪಿ ಕಾಯಿಲೆ ಹತೋಟಿಯಲ್ಲಿ ಇಲ್ಲದೇ ಇದ್ದರೆ ಕಿಡ್ನಿ, ಹೃದಯ, ಕಣ್ಣು, ನರಗಳು ಡ್ಯಾಮೇಜ್ ಆಗುತ್ತೆ ಅನ್ನುವುದು ಗೊತ್ತಿದ್ದರೂ ಅನುಮಾನ ಪಡುವುದು ನಾವು ಸಲಹೆ ಕೊಟ್ಟ ಔಷಧಿಗಳಿಂದ ಅನ್ನುವುದು…!ಹೀಗೆ ಬರೆಯುತ್ತ ಹೋದರೆ ಮುಂದಿನ ವರ್ಷದ “ವಿಶ್ವ ಮೂತ್ರ ಪಿಂಡಗಳ ದಿನಾಚರಣೆ”ಯೂ ಬಂದೆ ಬಿಡುತ್ತದೆ…! ನಿಮ್ಮಕಿಡ್ನಿ ಆರೋಗ್ಯ ವೈದ್ಯರ ಕೈಯಲ್ಲಿ ಇಲ್ಲ, ಆರೋಗ್ಯದ ಬಗ್ಗೆ ನಿಮ್ಮ ಸರಿಯಾದ ಮಾಹಿತಿಗಳಲ್ಲಿಯೂ ಇದೆ….!

ಡಾ. ರತ್ನಾಕರ್
ಸಲಹಾ ವೈದ್ಯರು.
ನಂಜಪ್ಪ ಲೈಫ್ ಕೇರ್ ಆಸ್ಪತ್ರೆ
ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Law University ಸೌತ್ – ವೆಸ್ಟ್ ಇಂಟರ್ ಯೂನಿವರ್ಸಿಟಿ ಮಹಿಳಾ ಕರಾಟೆ ಪಂದ್ಯಾವಳಿಗೆ ಆಯ್ಕೆಯಾದ ದೀಕ್ಷಾ

Law University ಮಾರ್ಚ್ 10 ರಂದು ಧಾರವಾಡ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಇಂಟರ್...

ಪಶುಸಂಗೋಪನೆ ಕ್ಷೇತ್ರದ ಸಮಸ್ಯೆಗಳ ಕುರಿತು ಸದನದಲ್ಲಿ ಡಿ.ಎಸ್. ಅರುಣ್ ಕಿಡಿ

ವಿಧಾನಪರಿಷತ್ ಅಧಿವೇಶನದಲ್ಲಿ ಪಶುಸಂಗೋಪನೆ ಇಲಾಖೆಯ ಸ್ಥಿತಿಗತಿ ಕುರಿತು ಮಾತನಾಡಿದ ಶಾಸಕರಾದ ಡಿ.ಎಸ್....

ನಾಪತ್ತೆಯಾಗಿದ್ದ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ...

CM Siddaramaiah ಶಾಸಕ ಎಸ್.ಎನ್. ಚನ್ನಬಸಪ್ಪನವರಿಂದ ಸಿಎಂ ಭೇಟಿ, ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಮನವಿ

CM Siddaramaiah ಶಿವಮೊಗ್ಗದ ಶಾಸಕರಾದ ಎಸ್.ಎನ್. ಚೆನ್ನಬಸಪ್ಪನವರ ಕಚೇರಿಗೆ ಕ್ಯಾನ್ಸರ್‌ನಂತಹ ಮಾರಣಾಂತಿಕ...