ರಾಜ್ಯದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಮತ್ತು ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಕಂಡು ಕಂಗೆಟ್ಟಿರುವ ಬಿಜೆಪಿ ಶಾಸಕರು ಹತಾಶೆಯಿಂದ ಸುಳ್ಳು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ.
ನಮ್ಮ ಸರ್ಕಾರವು ‘ಗೃಹಲಕ್ಷ್ಮಿ’ ಯೋಜನೆಯಡಿ ರಾಜ್ಯದ 1.1 ಕೋಟಿಗೂ ಅಧಿಕ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ 2,000 ರೂ. ತಲುಪಿಸುತ್ತಿದ್ದು, ಮಹಿಳಾ ಸಬಲೀಕರಣದ ಈ ಕ್ರಾಂತಿಯನ್ನು ‘ವಂಚನೆ’ ಎನ್ನುವ ಬಿಜೆಪಿ ನಾಯಕರು ನಾಡಿನ ತಾಯಂದಿರಿಗೆ ಅಪಮಾನ ಮಾಡುತ್ತಿದ್ದಾರೆ.
ಎಸ್ಸಿ/ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರವು ಎಸ್ಸಿಪಿ/ಟಿಎಸ್ಪಿ ಅಡಿಯಲ್ಲಿ ದಾಖಲೆಯ 39,121 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದರೆ, ಬಿಜೆಪಿಯವರು ಕೇವಲ ಸುಳ್ಳು ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ.
ಬರಗಾಲದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಿದ್ದ 18,171 ಕೋಟಿ ರೂ. ಬರ ಪರಿಹಾರವನ್ನು ನೀಡದೆ ದ್ರೋಹ ಬಗೆದಿದ್ದರೂ, ನಮ್ಮ ಸರ್ಕಾರವು ತನ್ನ ಸ್ವಂತ ಬೊಕ್ಕಸದಿಂದ 33 ಲಕ್ಷಕ್ಕೂ ಅಧಿಕ ರೈತರಿಗೆ ತಲಾ 2000 ರೂ.ಗಳಂತೆ ಮೊದಲ ಹಂತದ ಪರಿಹಾರವನ್ನು ವಿತರಿಸಿ ರೈತಪರ ಕಾಳಜಿ ಮೆರೆದಿದೆ. ಕಮಿಷನ್ ಆರೋಪ ಮಾಡುವ ಬಿಜೆಪಿ ನಾಯಕರು ಮೊದಲು ಕೇಂದ್ರ ಸರ್ಕಾರದ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ (Skill Development) ಯೋಜನೆಗಳಲ್ಲಿ ನಡೆದಿರುವ ಸುಮಾರು 10,000 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಬೃಹತ್ ಹಗರಣಗಳಿಗೆ ಉತ್ತರಿಸಲಿ; ಯುವಕರಿಗೆ ಉದ್ಯೋಗ ನೀಡುವ ಹೆಸರಿನಲ್ಲಿ ಸಾವಿರಾರು ಕೋಟಿ ಸಾರ್ವಜನಿಕ ಹಣವನ್ನು ಲೂಟಿ ಹೊಡೆದಿರುವ ಬಿಜೆಪಿಗೆ ಪಾರದರ್ಶಕ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ಜವಳಿ ಮತ್ತು ಕೈಮಗ್ಗ (ವಿದ್ಯುತ್) ನಿಗಮ ಹಾಗೂ ಅಧ್ಯಕ್ಷರು , ಯುವ ಕಾಂಗ್ರೆಸ್ ಮುಖಂಡರಾದ ಚೇತನ್ ಕೆ. ಗೌಡ ಅವರು ತಿಳಿಸಿದ್ದಾರೆ.
