ಭಾಗ- 3
ಲೇ: ದಿಲೀಪ್ ನಾಡಿಗ್
Klive Special Article ಸಂತೆಬೆನ್ನೂರಿನ ಕೆಂಗ ಹನುಮಂತನೂ, ತರೀಕೆರೆ ಪಾಳೆಯಗಾರರು ದಂಗೆ ಎದ್ದು ಸ್ವತಂತ್ರರಾದರು, ಆಗ ಬೆಳಗುತ್ತಿ ಅರಸ ದಾಸಪ್ಪನು ಇವರ ಹುಟ್ಟಡಗಿಸಲು ಬಂಕಾಪುರದ ರಂಗರಾಯನ ಸಹಾಯ ಕೇಳಿದ್ಸು ರಂಗರಾಯನು ದಾಸಪ್ಪನಿಂದ ಐದುಸಾವಿರ ರೂಪಾಯಿ ಪಡೆದು ತಟಸ್ಥ ನಾದನು. ನಂತರದಲ್ಲಿ ದಾಸಪ್ಪನು ಬೀಜಾಪುರದ ಸುಲ್ತಾನನ ಸಹಾಯ ಕೇಳಲು ಸುಲ್ತಾನನು ಬಿಲಾವರ್ ಖಾನನೆಂಬ ಸೇನಾಪತಿಯನ್ನು ಕಳುಹಿಸಿದನು. ಆದರೆ ಬಿಲಾವರ್ ಖಾನನು ಬೆಳಗುತ್ತಿ ಯನ್ನು ವಶಪಡಿಸಿಕೊಂಡು ಬೀಜಾಪುರದ ಆಡಳಿತಕ್ಕೆ ಸೇರಿಸಿದನು. ಬಿಲಾವರ್ ಖಾನ್ ಸುಲ್ತಾನನ ಆದೇಶದಂತೆ ದಾಸಪ್ಪನಿಗೆ ಹಾಗೂ ಅವನ ವಂಶಜರಿಗೆ ಜೀವನೋಪಾಯಕ್ಕಾಗಿ ಉಡುಗಣಿ, ಮಹಾದೇವ ಪುರ, ಹಾರನಹಳ್ಳಿ, ಚಂದ್ರಗುತ್ತಿ 7 ತಾಲ್ಲೂಕ್ ಗಳನ್ನು 86 ಗ್ರಾಮಗಳನ್ನು ನೀಡಿದನೆಂದು ಬೆಳಗುತ್ತಿ ಯ ಕೈಫಿಯತ್ತಿನಲ್ಲಿ ಉಲ್ಲೇಖವಾಗಿದೆ. ದಾಸಪ್ಪನ ಮಗನಾದ ಇಮ್ಮಡಿ ವೆಂಕಟಾದ್ರಿ ಯು ಬಿಲಾವರ್ ಖಾನನನ್ನು ಬೆಳಗುತ್ತಿಯಿಂದ (ಕ್ರಿ.ಶ. 1571 ರಿಂದ ಕ್ರಿ.ಶ. 1616) ಒದ್ದು ಓಡಿಸಿ ಒಂಬತ್ತು ಲಕ್ಷ ರೂಪಾಯಿ ವರಹಗಳ ನಾಡನ್ನು ವಶಪಡಿಸಿಕೊಂಡು ತನ್ನ ಎರಡನೆ ಪತ್ನಿಯ ಮಗನಾದ ಚೌಡಗೌಡನನ್ನು ಆಡಳಿತ ನಡೆಸಲು ನೇಮಿಸಿದನು. ಇವನಮಗನಾದ ಸದಾಶಿವ ನನ್ನು ಸರ್ವಾಧಿಕಾರಿ ಯನ್ನಾಗಿ ಮಾಡಿ “ರಾಮಬಾಣ” ವೆಂಬ ಪಟ್ಟದಾನೆಯನ್ನು ನೀಡಿದನು. ಇದು ಸೊಂಡಿಲಿನಿಂದ ಮಣ್ಣನ್ನು ತೆಗೆದು ತೂರುತ್ತಿದ್ದದ್ದನ್ನು ಕಂಡ ಅರಮನೆಯ ಗುರುಗಳು ಇದು ಬೆಳಗುತ್ತಿಯ ಅವನತಿಯ ಸಂಕೇತ ವೆಂದು ಹೇಳಿದ್ದು ಸುಳ್ಳಾಗದೆ ಬೀಜಾಪುರದಿಂದ ಮತ್ತೆ ಬಂದ ಬಿಲಾವರ್ ಖಾನನು ಪುನಃ ಬೆಳಗುತ್ತಿ ಯನ್ನು ವಶಪಡಿಸಿಕೊಂಡು ಮತ್ತೆ 86 ಗ್ರಾಮಗಳನ್ನು ನೀಡಿದನು.
Klive Special Article ಬೆಳಗುತ್ತಿ ಯನ್ನು ಕ್ರಿ.ಶ. 1611 ರಿಂದ ಕ್ರಿ.ಶ. 1622 ರವರೆಗೆ ಎರಡನೆ ವೆಂಕಟಾದ್ರಿ ಯ ಮಗನಾದ ತಿಮ್ಮಪ್ಪನು ಕ್ರಿ.ಶ. 1623 ರಿಂದ ಕ್ರಿ.ಶ. 1642 ರವರೆಗೆ ದೊಡ್ಡಪ್ಪನಾಯಕನು ಕ್ರಿ.ಶ. 1642 ರಿಂದ ಕ್ರಿ.ಶ. 1643 ರವರೆಗೆ ನರಸಪ್ಪ ಮತ್ತು ಕ್ರಿ.ಶ. 1644 ರಿಂದ ಕ್ರಿ.ಶ. 1666 ರವರೆಗೆ ರಾಘವಪ್ಪನು ಆಳಿದರು. ಈ ನಡುವೆ ಸಿಸ್ತಿನ ಶಿವಪ್ಪನಾಯಕನು ಕ್ರಿ.ಶ. 1645 ರಲ್ಲಿ ಬೆಳಗುತ್ತಿ ಯನ್ನು ವಶಪಡಿಸಿಕೊಂಡು ಕೆಳದಿ ರಾಜ್ಯಕ್ಕೆ ಸೇರಿಸಿಕೊಂಡನು. ಮುಂದೆ ಕ್ರಿ.ಶ. 1668 ರಿಂದ ಕ್ರಿ.ಶ. 1707 ರವರೆಗೆ ವೆಂಕಟಪ್ಪನೂ ಕ್ರಿ.ಶ. 1708ರಿಂದ ಕ್ರಿ.ಶ. 1762 ರವರೆಗೆ ರಾಜರ್ಶಿ 2ನೇ ತಿಮ್ಮಪ್ಪನೂ ಕೆಳದಿಯ ಅಧೀನದಲ್ಲಿ ಆಳಿದರು. 3ನೇ ತಿಮ್ಮಪ್ಪನು ಇವರ ಅಧೀನದಲ್ಲಿ ಕ್ರಿ.ಶ. 1763 ರವರೆಗೆ ಸಣ್ಣ ಸೈನ್ಯವನ್ನು ಇಟ್ಟುಕೊಂಡಿದ್ದನು.
ಮುಂದುವರೆಯುತ್ತದೆ.
ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ (ರಿ), ಶಿವಮೊಗ್ಗ.
6361124316.
