Klive Special Article ಶಿವಮೊಗ್ಗೆಯಲ್ಲಿ ಅರಳಿದ ಮೊಗ್ಗುಗಳು – 4
ಕಲಾರಾಧನೆಲ್ಲಿ ವಿನಯ ಸಂಪನ್ನರಾದ ವಿನಯ್ ಶಿವಮೊಗ್ಗ
ಸಾಹಿತ್ಯ ಸಂಗೀತ ಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛ ವಿಷಾಣ ಹೀನಃ l ಎನ್ನುವ ಸಂಸ್ಕೃತದ ಸುಭಾಷಿತ ಮನುಷ್ಯನಿಗಿರಬೇಕಾದ ಕಲಾಸಕ್ತಿಯ ಕುಳಿತು ಕುರಿತು ತಿಳಿಸುತ್ತದೆ. ಇದನ್ನು ನೋಡಿದಾಗ ನನಗೆ ನೆನಪಾಗುವ ವ್ಯಕ್ತಿ ಕಲಾಕ್ಷೇತ್ರದಲ್ಲಿ ಅತಿ ಹೆಚ್ಚು ಆಸಕ್ತಿಯಿಂದಿದ್ದು ತಮ್ಮದೇ ಆದ ಕೊಡುಗೆ ನೀಡುತ್ತಲೇ ಶಿವಮೊಗ್ಗಕ್ಕೆ ಆಸ್ತಿಯಂತಾದ ಹೆಮ್ಮೆಯ ಪ್ರತಿಭೆ. ಅದೇನೋ ಒಮ್ಮೊಮ್ಮೆ ಕಲಾ ಸರಸ್ವತಿ ತನ್ನೆಲ್ಲ ಪ್ರಾಕಾರಗಳನ್ನು ಒಬ್ಬರಿಗೆ ಧಾರೆ ಎರೆದು ಬಿಡುತ್ತಾಳೆನೋ? ಏಕೆ ಈ ಮಾತೆಂದರೆ ನಾನು ಅನೇಕರನ್ನು ನೋಡಿದ್ದೇನೆ ಕೆಲವರಿಗೆ ನೃತ್ಯ ಇಷ್ಟವಾದರೆ ಇನ್ನು ಕೆಲವರಿಗೆ ಸಂಗೀತ. ಮತ್ತೆ ಕೆಲವರಿಗೆ ಸಾಹಿತ್ಯ. ಒಂದಷ್ಟು ಜನಕ್ಕೆ ನಾಟಕ, ಯಕ್ಷಗಾನ, ಸಿನಿಮಾ. ಒಂದು ಕಡೆ ಕೇವಲ ಇಷ್ಟವಷ್ಟೇ ಅಲ್ಲ ಅದರ ಒಂದೊಂದು ವಿಭಾಗದಲ್ಲೂ ಜ್ಞಾನವನ್ನು ಪಡೆದಿರುವ ವ್ಯಕ್ತಿಗಳಿರುತ್ತಾರೆ. ಆದರೆ ಅಂಥವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಎಲ್ಲವೂ ಇಷ್ಟ, ಎಲ್ಲದರಲ್ಲೂ ಆಳವಾದ ಜ್ಞಾನ ಅಂತಹ ಕೆಲವೇ ಕೆಲವು ವ್ಯಕ್ತಿಗಳಲ್ಲಿ ನಾನು ನೋಡಿದ ಒಬ್ಬ ವ್ಯಕ್ತಿ ವಿನಯ್ ಶಿವಮೊಗ್ಗ. ತನ್ನ ಹೆಸರಿಗೆ ಊರು ಸೇರಿಸಿ ಊರನ್ನು ಪ್ರಸಿದ್ಧಿಯಾಗಿಸಿದ ಹೆಮ್ಮೆ ಇವರದು.
ವಿನಯ್ ಶಿವಮೊಗ್ಗ ಅವರ ಜನನ ಅಪ್ಪಟ ಮಲೆನಾಡಿನ ಭಾಗದಲ್ಲಾದರೆ ಓದಿದ್ದು ಶಿವಮೊಗ್ಗದಲ್ಲಿ.
ತಂದೆ ಶಿವಮೊಗ್ಗದ ಪ್ರಖ್ಯಾತ ರಮ್ಯಾ ಮೆಡಿಕಲ್ಸ್ ನ ಮಾಲೀಕರೂ ಹಾಗೂ 100ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ಶ್ರೀ ಯಜ್ಞನಾರಾಯಣ. ತಾಯಿ ವಿಜಯ ಆಕಾಶವಾಣಿಯಲ್ಲಿ ಅನೇಕ ಸುಗಮಸಂಗೀತಗಳನ್ನು ಹಾಡಿದ ಕಲಾವಿದೆಯಾಗಿದ್ದಾರೆ. ವಿನಯ್ ಅವರು ಉನ್ನತ ಅಧ್ಯಯನದ ಕಾರಣದಿಂದ ಉದ್ಯೋಗ ಅರಸಿ ಹೋದದ್ದು ಬೆಂಗಳೂರಿಗೆ. ಅಲ್ಲದೇ ಹಲವಾರು ದೇಶ-ವಿದೇಶಗಳನ್ನು ಸುತ್ತಿದ ಅನುಭವ ಇವರಿಗಿದೆ. ಅಲ್ಲೇ ಹಲವಾರು ವರ್ಷಗಳು ಇದ್ದು ನಂತರ ತಂದೆಯ ಅನಾರೋಗ್ಯ ಎಂದು ತನ್ನ ಕೆಲಸವನ್ನು ತೊರೆದು ತಂದೆ ತಾಯಿಯ ಆರೈಕೆಗಾಗಿ ಶಿವಮೊಗ್ಗಕ್ಕೆ ಬಂದರು. ಹೆತ್ತವರ ಮೇಲೆ ಅದೆಂತ ಪ್ರೀತಿ ಎಂದರೆ, ಇಳಿ ವಯಸ್ಸಿನಲ್ಲಿ ಅವರನ್ನು ನೋಡುತ್ತಾ ನೋಡುತ್ತಾ ತಮಗೂ ಜೀವನದ ವೈರಾಗ್ಯ ಬರಲು ಸಾರ್ಥಕ ಎನ್ನುವ ಭಾವದಿಂದ ಆರೈಕೆ ಮಾಡಿದರು. ಅವರದು ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ ಮನೆತನ. ಸುಗಮ ಸಂಗೀತ ಕ್ಷೇತ್ರದ ಗಾರುಡಿಗ ಶಿವಮೊಗ್ಗ ಸುಬ್ಬಣ್ಣ ಇವರ ದೊಡ್ಡಪ್ಪನಾದರೆ, ತಾಯಿ ಸೋಜುಗಾದ ಸೂಜು ಮಲ್ಲಿಗೆ ಎಂಬ ಹಾಡನ್ನು ಬಹು ವರ್ಷಗಳ ಹಿಂದೆಯೇ ಪ್ರಥಮ ಬಾರಿಗೆ ಹಾಡಿದ ಹೆಗ್ಗಳಿಕೆ ಉಳ್ಳವರು. ಹಾಗಾಗಿ ಈ ಎಲ್ಲದರಲ್ಲೂ ಆಸಕ್ತಿ ರಕ್ತದಲ್ಲಿಯೇ ಇತ್ತೇನೋ. ತಂದೆಯ ಮೆಡಿಕಲ್ ಶಾಪ್ ಶಿವಮೊಗ್ಗಕ್ಕೆ ಪ್ರಸಿದ್ಧಿ ಆಗಿತ್ತು. ಹಾಗಾಗಿ ಇವರ ಉದ್ಯೋಗ ಅದೇ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದೆಯಾದರೂ ಇವರ ಒಲವು ಹೆಚ್ಚಿದ್ದಿದ್ದು ಕಲಾರಾಧನೆಯಲ್ಲಿ.
Klive Special Article ಸಾಹಿತ್ಯ, ಹಾಡು, ನಾಟಕ, ಯಕ್ಷಗಾನ, ನೃತ್ಯ, ನಟನೆ ಹೀಗೆ ಎಲ್ಲ ಕಲಾ ಪ್ರಾಕಾರಗಳಲ್ಲೂ ಆಳವಾದ ಪಾಂಡಿತ್ಯ ಹಾಗೇ ಅವಿರತವಾಗಿ ದುಡಿದ ಪ್ರತಿಭೆ. ನನಗೆ ವಿನಯಣ್ಣ ಪರಿಚಿತರಾದದ್ದು ಚಕ್ರವರ್ತಿ ಅವರು ಗೀತೆಯ ಪುಸ್ತಕವನ್ನು ತಮ್ಮ ಯುವಾ ಬ್ರಿಗೇಡ್ ವತಿಯಿಂದ ಬಿಡುಗಡೆ ಮಾಡಿ ಅದನ್ನು ಎಲ್ಲರಿಗೂ ತಲುಪಿಸಬೇಕೆಂಬ ಉದ್ದೇಶದಲ್ಲಿದ್ದಾಗ ನನ್ನ ಮಗನ ಚೌಲದ ಕಾರ್ಯಕ್ರಮಕ್ಕೆ ಉಡುಗೊರೆಯಾಗಿ ಅದನ್ನೇ ನೀಡೋಣ ಎಂದು ವಿಚಾರಿಸಿದಾಗ ದೊರೆತ ಸಂಖ್ಯೆಯೇ ವಿನಯಣ್ಣನದು. ಅಂದು ಮಾತನಾಡಿಸಿದಾಗ ಸಾಮಾನ್ಯರಂತೆ ಅನಿಸಿದ್ದು ಸುಳ್ಳಲ್ಲ. ನಂತರವೇ ತಿಳಿದದ್ದು ಇದು ಅಸಾಮಾನ್ಯ ಪ್ರತಿಭೆ ಎಂದು.
ಇವರು ಕವಿಗಳ, ಸಾಹಿತಿಗಳ ಕುರಿತು ಪರಿಚಯಿಸುವಾಗ ಅವರೆಲ್ಲರೂ ನಮ್ಮೆದುರಿಗೆ ಇದ್ದಾರೆಯೇನೋ ಎಂದು ಅನಿಸಿಬಿಡುವುದಂತೂ ಸುಳ್ಳಲ್ಲ. ತುಂಗಾರತಿಗಾಗಿ ಸಾಹಿತ್ಯ ರಚಿಸಿ ಹಾಡಿದ ಹಾಡಂತೂ ಅತ್ಯದ್ಭುತ. ಕನ್ನಡಕ್ಕಾಗಿ ಇವರು ವಿಕಸನದಲ್ಲಿ ಹಾಡಿದ ಹಾಡು, ಭಾಷೆಯ ಸೊಗಡು ಬಹು ಚೆನ್ನಾಗಿ ತಿಳಿಯುವಂತಿದೆ. ಮೋದಿ 2.0ನಲ್ಲಿ ಅವರಿಗಾಗಿ ರಚಿಸಿದ ಸಾಹಿತ್ಯ, ಅದರ ಸ್ವರ ಸಂಯೋಜನೆ ಮಾಡಿದ್ದಂತು ನಿಜಕ್ಕೂ ಮೋಡಿ ಮಾಡುತ್ತದೆ. ಪ್ರತಿ ಬಾರಿಯೂ ಹೊಸದರ ಆಲೋಚನೆ ಅಷ್ಟೇ ಅಲ್ಲ ಅದನ್ನು ಸಾಕಾರಗೊಳಿಸುವುದು ಇವರ ವಿಶೇಷ.
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯ ಸಮಯಕ್ಕೆ ರಾಮಾಯಣದ ಘಟನೆ ಆಧಾರಿತವಾಗಿ ಬರೆದ ಲೇಖನಗಳಂತೂ ಅದೆಷ್ಟೋ ಜನರನ್ನು ಸೆಳೆಯಿತು. ಆ ಸಮಯದಲ್ಲಿ ನಮ್ಮ ಮನೆಯಲ್ಲಿ ನಿತ್ಯ ಸಂಜೆ ರಾಮ ಭಜನೆ ಮಾಡುತ್ತಿದ್ದೆವು ಆಗ ಈ ಲೇಖನದ ತುಣುಕನ್ನು ಓದಿದಾಗ ಎಲ್ಲರೂ ತಲೆದೂಗಿದವರೇ. ಇನ್ನು ಮನೆಯಲ್ಲಿಯೇ ಸ್ವಾತಂತ್ರ್ಯ ದಿನವನ್ನು ಹಬ್ಬವಾಗಿ ಆಚರಿಸುವ ಚಂದ್ರಶೇಖರ್ ಬಾಯರ್ ಅವರ ಮನೆಗೆ ಹೊಸತನದ ಕಾರ್ಯಕ್ರಮಕ್ಕಾಗಿ ವಿನಯಣ್ಣನ ಸಂಪರ್ಕಿಸಿದರೆ, ಅವರು ನೀಡಿದ ತಾಯಿ ಭಾರತೀಯ ಗಾನಸುಧೆ ಎಲ್ಲರ ಮನಕಾವರಿಸಿತು.
ವಿನಯ್ ಅವರ ಗರಡಿಯಲ್ಲಿ ಅದೆಷ್ಟು ಶಿವಮೊಗ್ಗದ ದೈತ್ಯ ಪ್ರತಿಭೆಗಳು ಬೆಳೆದಿದ್ದಾರೋ? ಎಲ್ಲರ ಬೆಳವಣಿಗೆಗೆ ಬೆಂಬಲ ಇವರದು. ನಗರದ ವಿವಿಧ ಕಾರ್ಯಕ್ರಮಗಳಲ್ಲಿ ತಾಯಂದಿರಿಗಾಗಿ ಹಾಡಿಸಿದ ಸಾವರ್ಕರ್ ಹಾಡಿದ ಜಯೋಸ್ತುತೆ… ತುಂಬಾ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಕವಿ ಹೆಚ್ಚೆಸ್ವಿ ಅಗಲಿದಾಗ ಅವರ ನುಡಿ ನಮನವಂತು ಮನಮುಟ್ಟುವಂತಿತ್ತು. ಹಾಗೆ ನಗರದ ಅನೇಕ ಮಹನೀಯರ ಕುರಿತು ಬರೆದ ಲೇಖನಗಳು ಅವರ ಸಾಹಿತ್ಯದ ಆಳ ಹಾಗೂ ಭಾಷಾ ಪ್ರಯೋಗಗಳ ಪ್ರೌಢಿಮೆಗೆ ಹಿಡಿದ ಕೈಗನ್ನಡಿ.
ಸಾಂಸ್ಕೃತಿಕ ಪ್ರಪಂಚದ ದಿಗ್ಗಜರ ಒಡನಾಟ ಇವರಿಗೆ ತುಸು ಹೆಚ್ಚೇ. ಉಪನ್ಯಾಸಕಿ ವೀಣಾ ಬನ್ನಂಜೆ, ಶತಾವಧಾನಿ ರಾ. ಗಣೇಶ್, ಚಕ್ರವರ್ತಿ ಸೂಲಿಬೆಲೆ, ನಿರುಪಮಾ ರಾಜೇಂದ್ರ ಹೀಗೆ ಹಲವಾರು ಮಹನೀಯರು ಇವರಿಗೆ ಚಿರಪರಿತರು. ಯಾವುದೇ ಕಾರ್ಯಕ್ರಮಕ್ಕೆ ಒಳ್ಳೆಯ ಅತಿಥಿ ಬೇಕೆಂದರೆ ನಾನಿವರನ್ನೇ ಕೇಳುವುದು. ಏಕೆಂದರೆ ಅವರ ಸಂಪರ್ಕ ಇದ್ದೇ ಇರುತ್ತದೆ ಎಂದು.
ಇವರು ನಗರದ ಅನೇಕ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಕಲಾತ್ಮ ಎಂಬ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ. ಕಲಾ ಹಾಗೂ ಸಾಹಿತ್ಯ ಪ್ರಾಕಾರಗಳಿಗೆ ಇವರು ತೋರಿದ ಒಲವು ಹಾಗೂ ಜ್ಞಾನದ ಕಾರಣದಿಂದಾಗಿ ಕರ್ನಾಟಕ ಸಂಘದ ಸದಸ್ಯರಾಗಿ, ನಿರ್ದೇಶಕರಾಗಿ ಈಗ ಕಾರ್ಯದರ್ಶಿಯಾಗಿ ತಮ್ಮ ಸೇವೆ ಸಲ್ಲಿಸುವಂತಾಗಿದೆ. ಹಾಗಾಗಿ ವಿನೂತನವಾದ ಕಾರ್ಯಕ್ರಮಗಳು ಆಯೋಜನೆಯಾಗಿ ಜನರನ್ನು ಕರ್ನಾಟಕ ಸಂಘ ಸೆಳೆಯುತ್ತಿರುವುದು ಕಂಡಿದ್ದೇವೆ. ಅಲ್ಲದೇ ನಗರದ ಶ್ರೀಗಂಧ, ಅಭಿರುಚಿ ಹಾಗೂ ಅಜೇಯ ಸಂಸ್ಕೃತಿ ಬಳಗ ಮತ್ತು ಜಿ. ಎಸ್. ಎಸ್. ಪ್ರತಿಷ್ಠಾನಗಳಲ್ಲಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 30 ಕ್ಕೂ ಹೆಚ್ಚು ಕಿರುಚಿತ್ರಗಳಲ್ಲಿ ಅಭಿನಯಿಸಿದ ಇವರಿಗೆ ‘ಬೆಳ್ಳಿಮಂಡಲ’ದವರು ನೀಡುವ “ಅಂಬೆಗಾಲು” ಕಿರುಚಿತ್ರಕ್ಕೆ ನೀಡುವ ಪುರಸ್ಕಾರದಲ್ಲಿ ಉತ್ತಮ ಮೋಷಕ ನಟ ಎನ್ನುವ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇನ್ನಷ್ಟು ಸಾಹಿತ್ಯ ಸೇವೆ ಇವರನ್ನು ಅರಸಿ ಬರಲಿ. ಪ್ರಶಸ್ತಿಗೆ ಭಾಜನರಾಗಿ ಕನ್ನಡದ ಹಿರಿಮೆ ಹೆಚ್ಚಿಸಲಿ ಎನ್ನುವ ಆಶಯ ನನ್ನದು.
ಡಾ. ಮೈತ್ರೇಯಿ ಆದಿತ್ಯ
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್, ಶಿವಮೊಗ್ಗ
