Dr. Nagalakshmi ಮಹಿಳೆ ಕೆಲಸದ ಸ್ಥಳದಲ್ಲಿ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಎಲ್ಲಾ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013’ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ತಿಳಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013’ ರ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಚೇರಿಯಲ್ಲಿ 10 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ಮಹಿಳಾ ನೌಕರರು ಹಾಗೂ ಅಸಂಘಟಿತ ಮಹಿಳಾ ಕಾರ್ಮಿಕರು ಜಿಲ್ಲಾಡಳಿತ ಕಚೇರಿಯಲ್ಲಿರುವ ಸ್ಥಳೀಯ ದೂರು ಸಮಿತಿಯ ಅಡಿ ಬರಲಿದ್ದು ಅಲ್ಲಿ ಅವರು ದೂರು ನೀಡಬಹುದಾಗಿದ್ದು ಸ್ಥಳೀಯ ಸಮಿತಿ ಅಧ್ಯಕ್ಷರು ಜಿಲ್ಲಾದ್ಯಂತ ಈ ಸಮಿತಿ ಬಗ್ಗೆ ಅರಿವು ಮೂಡಿಸಬೇಕು.
ಅರಿವು ಬದುಕು, ಅಜ್ಞಾನ ಸಾವು. ಮಹಿಳೆಯರು ಅರಿವನ್ನು ಪಡೆಯಬೇಕು. ಶಿಕ್ಷಣಕ್ಕೆ ದೊಡ್ಡ ಶಕ್ತಿ ಇದ್ದು, ಉತ್ತಮ ಶಿಕ್ಷಣ ಪಡೆದು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕು. ಹೆಣ್ಣು ಈ ಸಮಾಜದಲ್ಲಿ ಧೈರ್ಯದಿಂದ ಹಾಗೂ ಗೌರವಯುತವಾಗಿ ಬದುಕುತ್ತಿದ್ದಾಳೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ.
ಹೆಣ್ಣುಮಕ್ಕಳು ಆರೋಗ್ಯವಾಗಿರಬೇಕು, ನೆಮ್ಮದಿಯಿಂದ ಕಾರ್ಯವೆಸಗಬೇಕೆಂದು ಆಂತರಿಕ ದೂರು ಸಮಿತಿಯನ್ನು ರಚಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಹಿನ್ನೆಲೆ ಸಮಿತಿಗಳನ್ನು ರಚಿಸಲಾಗಿದೆ. ಕಚೇರಿಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಆಂತರಿಕ ದೂರು ಸಮಿತಿಗೆ ದೂರು ನೀಡಬೇಕು.
Dr. Nagalakshmi ಹೆಣ್ಣುಮಕ್ಕಳ ಯಾವುದೇ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಲು ಮಹಿಳಾ ಸಹಾಯವಾಣಿ ಸಂಖ್ಯೆ 181 ಇದ್ದು ಇದನ್ನು ಬಳಕೆ ಮಾಡಿಕೊಳ್ಳಬೇಕು. ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ‘ಸಖಿ’ ಕೇಂದ್ರದಲ್ಲಿ ಎಲ್ಲ ರೀತಿಯ ಸಹಾಯ ಲಭ್ಯವಿದೆ.
ಮಹಿಳೆಯರು ಸರ್ಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಬಳಸಿಕೊಳ್ಳಬೇಕು. ಎಲ್ಲಾ ಮಹಿಳಾ ನೌಕರರಿಗೆ ಸರ್ಕಾರ ತಿಂಗಳಲ್ಲಿ ಒಂದು ದಿನ ಋತುಚಕ್ರ ರಜೆ ಘೋಷಿಸಿದೆ. ಮೇಲಾಧಿಕಾರಿಗಳು ಈ ರಜೆಯನ್ನು ನೀಡುವಲ್ಲಿ ಯಾವುದೇ ರೀತಿಯ ತೊಂದರೆ ನೀಡುವ ಹಾಗಿಲ್ಲ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಸುಂದರ ರಾಜನ್ ಆಂತರಿಕ ದೂರು ಸಮಿತಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್ ಸಂತೋಷ್, ಜಿ.ಪಂ ಉಪ ಕಾರ್ಯದರ್ಶಿಗಳಾದ ಸುಜಾತ, ಅನ್ನಪೂರ್ಣಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಸ್ಥಳೀಯ ದೂರು ಸಮಿತಿ ಅಧ್ಯಕ್ಷೆ ರೇಖಾ, ಇತರೆ ಅಧಿಕಾರಿ, ನೌಕರರು ಹಾಜರಿದ್ದರು.
Dr. Nagalakshmi ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ ಕಾಯಿದೆ ಜಾರಿ ಮಾಡಿ- ಡಾ.ನಾಗಲಕ್ಷ್ಮಿ ಚೌಧರಿ.
Date:
