IMA KARNATAKA ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಕನ್ನಡ ಪುಸ್ತಕಗಳನ್ನು ರದ್ದಿಗೆ ಕೊಡದಂತೆ ಆಗದಿರಲಿ. ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕವಯಿತ್ರಿ, ಸಾಹಿತಿ ಸವಿತಾ ನಾಗಭೂಷಣ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಕವಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯರಾದವರು ಕವನ ರಚನೆಯಲ್ಲಿ ಇಷ್ಟು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.
ಪದ್ಯ, ಕವಿತೆ ರಚನೆಗೆ ಇಂತಹ ವೃತ್ತಿ ಎಂಬುದಿಲ್ಲ. ಸೂಕ್ಷ್ಮ ಮನಸ್ಸಿನವರು ಇರುವವರೆಗೂ ಕಾವ್ಯಗಳು ಹುಟ್ಟುತ್ತದೆ. ಕಾವ್ಯಗಳು ರಚನೆಯಾಗುವವರೆಗೂ ಬದುಕಿನಲ್ಲಿ ಮತ್ತು ವಿಶ್ವದಲ್ಲಿ ಶಾಂತಿ ನೆಲೆಸಿರುತ್ತದೆ. ಕವಿತೆಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವವನು ಓದುಗ. ಓದುಗನ ಹೃದಯಕ್ಕೆ ಕವಿತೆ ಸ್ಪಂದಿಸಿತೆಂದರೆ ಅದಕ್ಕೆ ಜೀವ ಬಂದಂತೆ ಎಂದರು.
ಕವಯಿತ್ರಿ, ಸಾಹಿತಿ ಸವಿತಾ ನಾಗಭೂಷಣ ಅವರು ಕಾವ್ಯರಚನೆಯ ಬಗ್ಗೆ, ಕನ್ನಡ ಭಾಷೆಯ ಉಳಿವಿನ ಬಗ್ಗೆ ಮಾತನಾಡಿದರು. ಡಾ. ಚಿತ್ರ ಶ್ರೀನಿವಾಸ್ ಪ್ರಾರ್ಥನೆ ನಡೆಸಿದರು. ಡಾ. ವಿನಯ ಶ್ರೀನಿವಾಸ ಅವರು ಕಾರ್ಯಕ್ರಮ ನಿರ್ವಹಿಸಿದರು.
IMA KARNATAKA ಡಾ. ಗುರುದತ್ತ.ಕೆ.ಎನ್., ಡಾ. ವೈ.ಜೆ.ಅನುಪಮ, ಡಾ. ಡೋ.ನ.ವೆಂಕಟೇಶ್, ಡಾ. ವಿಜಯಲಕ್ಷ್ಮೀ ರವೀಶ್, ಡಾ. ಕೌಸ್ತುಭ ಅರುಣ್, ಡಾ. ಭಾರತಿ.ಎಚ್.ಜಿ., ಡಾ. ಅರವಿಂದನ್, ಡಾ. ಶಾಂತಲಾ ಮತ್ತು ಡಾ. ಚಂದ್ರಕಾಂತ್.ಎಸ್.ಎಸ್ ಸ್ವರಚಿತ ಕವಿತೆಗಳನ್ನು ಓದಿದರು.
ಐಎಂಎ ಶಿವಮೊಗ್ಗದ ಅಧ್ಯಕ್ಷ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಕೌಸ್ತುಭಾ ಅರುಣ್ ಮತ್ತು ಇತರ ವೈದ್ಯರು ಉಪಸ್ಥಿತರಿದ್ದರು.
