Wednesday, December 17, 2025
Wednesday, December 17, 2025

ಮಾಹಿತಿ ಹಕ್ಕು ಕೋರಿ ಬರುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡಿ- ಆಯುಕ್ತ ರುದ್ರಣ್ಣ ಹರ್ತಿಕೋಟೆ

Date:

ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ನಿಗಧಿತ ಅವಧಿಯೊಳಗೆ ಮಾಹಿತಿ ನೀಡುವಂತೆ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಾಸನ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲ ಸಾರ್ವಜನಿಕ ಮಾಹಿತಿ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅಧಿನಿಯಮ ಕುರಿತು ಜಾಗೃತಿ, ಸಂವಾದ, ಸಾರ್ವಜನಿಕರೊಂದಿಗೆ ಕಾಯ್ದೆಯ ಸದ್ಬಳಕೆ ಕುರಿತು ಚರ್ಚಿಸುವ ಸಂಬಂಧ ಆಯೋಜಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಕಳೆದ ಅಕ್ಟೋಬರ್ 12 ಕ್ಕೆ 20 ವರ್ಷಗಳು ಪೂರ್ಣಗೊಂಡಿದ್ದು, ಅನೇಕ ಬದಲಾವಣೆಗಳು ಕೂಡ ಆಗಿದೆ. ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಸಾರ್ವಜನಿಕರಿಗೆ ಮಾಹಿತಿ ಕಲ್ಪಿಸುವುದರ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಗಾರದ ಮೂಲ ಉದ್ದೇಶ ಬದಲಾವಣೆ, ಆಯೋಗ ಮತ್ತು ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗಿರುವುದನ್ನು ಪುನರ್ ಮನನ ಮಾಡುವ ದೃಷ್ಟಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ತರಬೇತಿ ಕಾರ್ಯಾಗಾರ ನಡೆಸುವ ಮೂಲಕ ಅಧಿಕಾರಿಗಳಿಗೆ ಉತ್ತೇಜನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಈಗಾಗಲೇ 15 ಜಿಲ್ಲೆಗಳಲ್ಲಿ ತರಬೇತಿ ನಡೆಸಲಾಗಿದೆ ಎಂದರು.
ಕಾಯ್ದೆ ದುರ್ಬಳಕೆ ಆಗದಂತೆ ಕಾಪಾಡುವ ಹೊಣೆಗಾರಿಕೆ ನಾಗರೀಕರ ಮೇಲಿದೆ. ಈ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಯಮಗಳ ಬಗ್ಗೆ ಅರಿವು ಪಡೆದುಕೊಳ್ಳುವುದು ಅತ್ಯಗತ್ಯ ಎಂದರಲ್ಲದೆ, ನಮೂನೆ 6(1) ಓದಿದರೆ ಮಾಹಿತಿ ನೀಡಲು ಹಾಗೂ ಅರ್ಜಿಗಳ ವಿಲೇವಾರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.

ಮಾಹಿತಿ ಹಕ್ಕು ಅಧಿನಿಯಮದಡಿ ಸ್ವೀಕಾರವಾದ ಅರ್ಜಿಗಳ ವಿಲೇವಾರಿಗೆ ಉದಾಸಿನ ಮಾಡದೆ 30 ದಿನದೊಳಗೆ ಮಾಹಿತಿ ನೀಡುವಂತೆ ತಿಳಿಸಿದರಲ್ಲದೆ, ವಿಳಂಬ ಮತ್ತು ನಿರ್ಲಕ್ಷೃಕ್ಕೆ ಅವಕಾಶ ನೀಡದೆ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಲು ತಿಳಿಸಿದರು.

ಆಯೋಗದ ಮತ್ತು ನ್ಯಾಯಾಲಯದ ತೀರ್ಪುಗಳನ್ನು ಅಧ್ಯಯನ ಮಾಡಿದರೆ ಅಧಿಕಾರಿಗಳು ಮಾಹಿತಿ ನೀಡಲು ನೆರವಾಗುತ್ತದೆ. ಅರ್ಜಿದಾರರಿಗೆ ಮಾಹಿತಿ ನೀಡಲು ಎಷ್ಟು ಪುಟಗಳಿವೆ, ಎಷ್ಟು ಹಣ ಪಾವತಿ ಮಾಡಬೇಕು ಎಂದು ನಿಗದಿತ ಅವಧಿಯಲ್ಲಿ ತಿಳಿಸಿ, ಮಾಹಿತಿ ಲಭ್ಯವಿಲ್ಲದಿದ್ದಲ್ಲಿ ಸೂಕ್ತ ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕಚೇರಿಗೆ ಬರುವ ನಾಗರೀಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಮಾಹಿತಿ ಹಕ್ಕು ಅಧಿನಿಯಮ ಪರಿಣಾಮವಾಗಿ ಅನುಷ್ಟಾನ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಇದರಿಂದ ಅರ್ಜಿದಾರರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಅರ್ಜಿದಾರರು ಬಿಪಿಎಲ್ ಕಾರ್ಡ್‌ದಾರರಾಗಿದ್ದಲ್ಲಿ ಉಚಿತ ಮಾಹಿತಿ ಪಡೆಯಲು ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಮತ್ತು ಆದಾಯ ಪ್ರಮಾಣ ಪತ್ರ ಲಗತ್ತಿಸಿದ್ದಲ್ಲಿ ನೂರು ಪುಟಗಳು ಉಚಿತ ಮಾಹಿತಿ ನೀಡಬಹುದು. ಎರಡು ದಾಖಲೆಗಳನ್ನು ಲಗತ್ತಿಸಿದ್ದಾರಯೇ ಎಂದು ಪರಿಶೀಲನೆ ಮಾಡುವಂತೆ ತಿಳಿಸಿದರು. ಆದಾಯ ಪ್ರಮಾಣ ಪತ್ರದ ಮೂಲ ಪ್ರತಿ ಲಗತ್ತಿಸಿರಬೇಕು ಎಂದು ತಿಳಿಸಿದರು.

ಎಲ್ಲಾ ಕಚೇರಿಗಳಲ್ಲಿ 4(1)(ಎ) (ಬಿ) ಅನ್ನು ಕಚೇರಿ ಫಲಕಗಳಲ್ಲಿ ಪ್ರಕಟಣೆ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಥಮ ಮೇಲ್ಮನವಿ ಪ್ರಾಧಿಕಾರದಲ್ಲಿ ವಿಚಾರಣೆ ನಡೆಸಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಆದ್ಯತೆ ನೀಡಿ ಎಂದು ತಿಳಿಸಿದರು. ಜಿಲ್ಲೆಯಲ್ಲಿ ನಡೆಯುವ ಕೆಡಿಪಿ ಮತ್ತು ತ್ರೈಮಾಸಿಕ ಸಭೆಗಳಲ್ಲಿ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ಕುರಿತು ಪರಿಶೀಲನೆ ಮಾಡುವಂತೆ ತಿಳಿಸಿದರು.

7191 ಅರ್ಜಿ ವಿಲೇ
ಜಿಲ್ಲೆಯಲ್ಲಿ ಜ.1ರಿಂದ ಅ.10ರವರೆಗೆ 7335 ಅರ್ಜಿಗಳು ಸಲ್ಲಿಕೆಯಾಗಿದ್ದು, 7191 ಅರ್ಜಿಗಳು ವಿಲೇವಾರಿ ಆಗಿದ್ದು, 144 ಬಾಕಿಯಿವೆ. 1059 ಅರ್ಜಿಗಳು ಪ್ರಥಮ ಮೇಲ್ಮನವಿಗೆ ಹೋಗಿದ್ದು, ಅದರಲ್ಲಿ 984 ವಿಲೇವಾರಿ ಆಗಿದ್ದು 75 ಬಾಕಿ ಇದೆ ಎಂದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ತೃಪ್ತಿದಾಯಕವಾಗಿದೆ ಎಂದು ತಿಳಿಸಿದರು.

ದ್ವಿತೀಯ ಮೇಲ್ಮನವಿಗೆ ಹಾಸನ ಜಿಲ್ಲೆಯ 307 ಪ್ರಕರಣ ಆಯೋಗದಲ್ಲಿವೆ ಎಂದು ರುದ್ರಣ್ಣ ಹರ್ತಿಕೋಟೆ ತಿಳಿಸಿದರು.

10 ಕೋಟಿ ರೂ.ದಂಡ
ನಿಗದಿತ ಸಮಯದಲ್ಲಿ ಮಾಹಿತಿ ನೀಡದೆ ಇದ್ದಲ್ಲಿ ದಂಡ ವಿಧಿಸಲು ಹಾಗೂ ಇಲಾಖಾ ತನಿಖೆಗೆ ಆದೇಶಿಸಲು ಅವಕಾಶವಿದೆ ಎಂದು ರುದ್ರಣ್ಣ ಹರ್ತಿಕೋಟೆ ಹೇಳಿದರು. ಆಯೋಗದಿಂದ 10719 ಪ್ರಕರಣಗಳಿಗೆ 10.13 ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿದೆ. 3084 ನೌಕರರು 2.70 ಕೋಟಿ ರೂಪಾಯಿ ದಂಡ ಪಾವತಿಸಿದ್ದಾರೆ.

ಇದರಲ್ಲಿ ಜಿಲ್ಲೆಯ 217 ಅಧಿಕಾರಿಗಳಿಗೆ 18.09 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದರಲ್ಲಿ 45 ಪ್ರಕರಣಗಳಲ್ಲಿ 4.44 ಲಕ್ಷ ದಂಡ ಪಾವತಿಯಾಗಿದೆ ಎಂದು ತಿಳಿಸಿದರು.
ತಾವು ಅಧಿಕಾರ ಸ್ವೀಕರಿಸಿದ ಸಂದರ್ಭ ಆಯೋಗದಲ್ಲಿ 55,498 ಅರ್ಜಿಗಳು ಬಾಕಿಯಿತ್ತು, ನಿಗದಿತವಾಗಿ ವಿಚಾರಣೆ ನಡೆಸುವ ಮೂಲಕ 35,344 ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರಲ್ಲದೆ, ಆದಷ್ಟು ಬೇಗ ಅರ್ಜಿಗಳ ವಿಲೇವಾರಿಗಾಗಿ ಜಿಲ್ಲೆಗಳಿಗೂ ಹೋಗಿ ಅರ್ಜಿ ವಿಲೇವಾರಿ ಮಾಡಲು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಮಾಹಿತಿ ಪಡೆಯುವುದು ಮೂಲ ಹಕ್ಕು
ಮತ್ತೋರ್ವ ಆಯುಕ್ತರಾದ ಎಸ್.ರಾಜಶೇಖರ್ ಮಾತನಾಡಿ, ಮಾಹಿತಿ ಪಡೆಯುವುದು ಮೂಲ ಹಕ್ಕು. ಯಾರು ಮಾಹಿತಿ ನೀಡಲು ನಿರಾಕರಿಸುವಂತಿಲ್ಲ, ನಿಗಧಿತ ಅವಧಿಯಲ್ಲಿ ಮಾಹಿತಿ ನೀಡಿದರೆ ಅರ್ಜಿದಾರರಿಗೆ ಉಪಯೋಗವಾಗುತ್ತದೆ ಎಂದರು.
ಮಾಹಿತಿ ಹಕ್ಕು ಕಾಯ್ದೆಯಲ್ಲಿ 25 ಸೆಕ್ಷನ್‌ಗಳಿವೆ ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಿ, ಅರ್ಜಿ ತಿರಸ್ಕಾರ ಮಾಡಬಹುದಾದ ಸಂದರ್ಭದಲ್ಲಿ ಸ್ಪಷ್ಟವಾದ ಸಕಾರಣ ನೀಡಬೇಕು ಎಂದರು.

ಅಧಿಕಾರಿಗಳು ನಿರ್ದಿಷ್ಟ ಸಮಯದಲ್ಲಿ ಮಾಹಿತಿ ನೀಡಿ ಬ್ಲಾಕ್ ಮೇಲ್ ಮಾಡಲು ಅವಕಾಶ ಕಲ್ಪಿಸಬೇಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಕೆಲವರು ತೊಂದರೆ ಕೊಡಲು ಮಾಹಿತಿ ಕೇಳುತ್ತಾರೆ. ನೀವು ಎಚ್ಚರವಹಿಸಿ ಮಾಹಿತಿ ನೀಡಿ ಎಂದರು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಎರಡು ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಅಪರ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು. ಕಾರ್ಯಗಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...

Karnataka Information Commission ಡಿಸೆಂಬರ್ 20. ರಾಜ್ಯ ಮಾಹಿತಿ ಆಯುಕ್ತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಹಿತಿ

Karnataka Information Commission ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ...

B.Y. Raghavendra ವೈಯಕ್ತಿಕವಾಗಿ ಕುಟುಂಬದ ಹಿರಿಯರನ್ನ ಕಳೆದುಕೊಂಡಂತಾಗಿದೆ, ಶಾಮನೂರು ನಿಧನಕ್ಕೆ ಬಿ.ವೈ.ರಾಘವೇಂದ್ರ ಕಂಬನಿ

B.Y. Raghavendra ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಹಿರಿಯ...