World Mental Health Day ದೈಹಿಕ ಆರೋಗ್ಯಕ್ಕೆ ನೀಡುವ ಕಾಳಜಿಯನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಾಗಿರುವುದು ಅವಶ್ಯಕ ಎಂದು ಭಾರತೀಯ ವೈದ್ಯಕೀಯ ಸಂಘದ ಶಿವಮೊಗ್ಗ ಶಾಖೆ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಹೇಳಿದರು.
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ಮತ್ತು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ದಿನನಿತ್ಯ ವ್ಯಾಯಾಮದ ಜತೆಯಲ್ಲಿ ಮಾನಸಿಕ ಆರೋಗ್ಯದ ಕಾಳಜಿ ವಹಿಸಲು ಪೂರಕ ಚಟುವಟಿಕೆಗಳನ್ನು ನಡೆಸಬೇಕು. ಮಾನಸಿಕ ಆರೋಗ್ಯ ಅತ್ಯಂತ ಮುಖ್ಯ. ಇಂತಹ ಜಾಗೃತಿ ಕಾರ್ಯಕ್ರಮಗಳು ಮಾನಸಿಕ ಆರೋಗ್ಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಹೆಚ್ಚು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಹರೀಶದೇಲಂತ ಬೆಟ್ಟು ಮಾತನಾಡಿ, ವಿಶ್ವ ಮಾನಸಿಕ ಆರೋಗ್ಯ ದಿನದ ಥೀಮ್ “ವಿಪತ್ತು ಮತ್ತು ದುರಂತದ ತುರ್ತು ಪರಿಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಗಮನ” ಆಗಿದ್ದು, ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯವಿದೆ. ಪ್ರಾರಂಭಿಕ ಹಂತದಲ್ಲಿಯೇ ಮಾನಸಿಕ ಕಾಯಿಲೆಗಳ ಲಕ್ಷಣಗಳನ್ನು ಮತ್ತು ಒತ್ತಡವನ್ನು ಗುರುತಿಸಿ ಸರಿಯಾದ ಆಪ್ತಸಮಾಲೋಚನೆ ಮತ್ತು ಚಿಕಿತ್ಸೆ ಪಡೆಯಬೇಕು. ಇದನ್ನು ಸಾಧ್ಯವಾಗಿಸಲು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
World Mental Health Day ಕಾಲೇಜಿನ ಡೀನ್ ಡಾ. ವಿನಾಯಕ ಭಟ್ ಮತ್ತು ಪ್ರಾಂಶುಪಾಲ ಡಾ. ಸಿದ್ದಲಿಂಗಪ್ಪ ಸಿಎಂ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಮನೋವೈದ್ಯೆ ಡಾ. ಕೆ.ಎಸ್.ಶುಭ್ರತಾ, ಡಾ. ಸಾಯಿ ಕೋಮಲ್, ಡಾ. ರಾಗಶ್ರೀ ಮತ್ತು ಆಪ್ತ ಸಮಾಲೋಚಕರಾದ ವಿದ್ಯಾ ಹಾಗೂ ಅಶ್ವಿನಿ ಭಾಗವಹಿಸಿದ್ದರು.
