ಭಾಗ – 08
Klive Special Article ಕಥೆಯನ್ನು ಹೇಳುವ ಕಲ್ಲುಗಳು.
ಕರ್ನಾಟಕದ ಇತಿಹಾಸದಲ್ಲಿ ಬಲಿದಾನಗಳ ಕಥೆಗಳೇ ಸಾವಿರಾರು ಇವೆ. ಎಲ್ಲ ಕಥೆಗಳಿಗೂ ಒಂದು ಕಾರಣ, ಸಂಕಲ್ಪ, ಹರಕೆಗಳು ಇವೆ. ಅಪರೂಪದ ಸಂಗತಿಗಳಾಗಿ ಬಲಿದಾನದ ಕಥೆಗಳು ಶಾಸನದ ರೂಪದಲ್ಲಿ ನಮಗೆ ಸಿಗುತ್ತವೆ. ಕರ್ನಾಕಟದಲ್ಲಿ ಕೇವಲ ಬೆರಳೆಣಿಕೆಯಷ್ಟು ಸಿಗುವ ಅಮೂಲ್ಯವಾದ, ಬೆಲೆಕಟ್ಟಲಾಗದ ಆತ್ಮಬಲಿದಾನದ ಕಲ್ಲುಗಳು ವಿರಳ.
ಅದರಲ್ಲೂ ನಮ್ಮಶಿವಮೊಗ್ಗ ಭಾಗದಲ್ಲೇ ಈ ರೀತಿಯ ಅಪರೂಪದಲ್ಲೇ ಅಪರೂದ ಬಲಿದಾನದ ಶಾಸನಗಳು ಮೂರು ಇವೆ.ಇಡೀ ಕರ್ನಾಟಕದಲ್ಲಿ ಕೇವಲ ಐದೋ, ಆರೋ ಸಂಖ್ಯೆಯ ಆತ್ಮಬಲಿದಾನದ ಶಾಸನಗಳನ್ನು ಕಾಣಬಹುದು. ಅದರಲ್ಲಿ ಜನವರಿಯಲ್ಲಿ ನಾವು ಕಂಡ ಅಪರೂಪದ ಬಲಿದಾನದ ಶಾಸನವನ್ನು ನಮ್ಮ ಗುರುಗಳಾದ ಡಾ.ಸಾಮಕ್ ರವರ ಮಾರ್ಗದರ್ಶನದಲ್ಲಿ ವೀಕ್ಷಿಸಿ ಮೊನ್ನೆ ಅದನ್ನ ಸ್ವಚ್ಚ ಮಾಡಲಾಯಿತು.
ಮೊದಲ ಸಾಲಿನ ಲಿಪಿಯು ಸ್ಪಷ್ಟವಾಗಿ ಗೋಚರಿಸದಿದ್ದರೂ ಉಳಿದ ಸಾಲುಗಳನ್ನು ಸ್ವಲ್ಪ ಕಷ್ಟಪಟ್ಟು ಓದಬೇಕಿದೆ. ಇದನ್ನ ನಾನು ಇಲ್ಲಿಯಾಕೆ ಇಂದೇ ಉಲ್ಲೇಖ ಮಾಡುತ್ತಿದ್ದೇನೆ ಎಂದರೆ ಇಂದು ಮಹಾಲಯ ಅಮಾವಾಸ್ಯೆ, ಸರ್ವಪಿತೃಗಳನ್ನೂ ಆಹ್ವಾನಿಸಿ ಗೌರವಿಸುವ ದಿನ ಜೊತೆಗೆ ಕರ್ನಾಟಕದಲ್ಲಿ ಗೋಚರವಾಗದ ಸೂರ್ಯಗ್ರಹಣದ ದಿನವಿಂದು. ಇಲ್ಲಿರುವ ಶಾಸನವೂ ಸಹ ರಾಹುಗ್ರಸ್ತ ಸೂರ್ಯಗ್ರಹಣದ ದಿನ ಆತ್ಮಬಲಿದಾನ ಮಾಡಿಕೊಂಡ ವೀರನೊಬ್ಬನ ಕಥೆಯಿದೆ.ಆ ಕಥೆಯನ್ನು ಬರೆಯಬೇಕಿದೆ.
ಶಾಸನದ ಮೇಲು ಭಾಗದಲ್ಲಿ ಸೂರ್ಯನನ್ನು ನುಂಗುತ್ತಿರುವ ಉರಗದ (ರಾಹು) ವಿನ ಕೆತ್ತನೆಯಿದೆ. ಅದರ ಕೆಳಭಾಗದಲ್ಲಿ ಅಪ್ಸರೆಯರು(ಗಣಿಕೆಯರು) ಆ ವೀರನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುವ ಕೆತ್ತನೆ ಇದ್ದು ಮಧ್ಯಭಾಗದಲ್ಲಿ ಸೂರ್ಯ ಗ್ರಹಣದ ದಿನ ಆತ್ಮಬಲಿದಾನ ಮಾಡಿಕೊಂಡ ವೀರನೊಬ್ಬನ ಬಗ್ಗೆ ಮಾಹಿತಿ ಇದೆ. ಪೂರ್ಣ ಕೆಳಭಾಗದಲ್ಲಿ ಆತ್ಮಬಲಿದಾನ ಮಾಡಿಕೊಂಡ ವ್ಯಕ್ತಿಯ ಭಲಭಾಗದಲ್ಲಿ ಕನ್ನಡಿಯಂತಹ ವಸ್ತುವಿದೆ, ಎಡಭಾಗದಲ್ಲಿ ಕುಂಭದ ಕೆತ್ತನೆಯಿದೆ.
ಸೂರ್ಯಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಲಾಗದೆ ಕನ್ನಡಿಯ ಮೂಲಕ ಗ್ರಹಣ ಸಮಯದಲ್ಲಿ ಆತ್ಮಬಲಿದಾನ ಮಾಡಿಕೊಂಡನೆಂದು ತಿಳಿಯಬಹುದು.
ಪ್ರಶ್ನೆ ಇಷ್ಟೇ.
Klive Special Article ರಾಹುಗ್ರಸ್ತ ಸೂರ್ಯಗ್ರಹಣದ ದಿನ ದಂದು ಯಾರ ಸಲುವಾಗಿ ಆತ್ಮಬಲಿದಾನ ಮಾಡಿಕೊಂಡನೆಂದು. ಹರಕೆಯೋ, ಮತ್ತೇನೋ, ಕಥೆಯನ್ನು ಹುಡುಕಬೇಕಿದೆ. ಏನೇ ಆಗಲಿ ಪ್ರಾಚೀನ ಭಾರತದಲ್ಲಿ ಈ ರೀತಿಯ ಅಪರೂಪದ ಸಂಗತಿ ಹೊಸತೇನಲ್ಲ. ಆದರೂ ಒಬ್ಬ ವ್ಯಕ್ತಿ ಗ್ರಹಣದ ದಿನದಂದೇ ಯಾಕೆ ಆತ್ಮಬಲಿದಾನ ಮಾಡಿ ಕೊಳ್ಳಲು ಆಯ್ಕೆ ಮಾಡಿಕೊಂಡ ಎಂಬ ಜಿಜ್ಞಾಸೆಗೆ ಉತ್ತರ… ಸೂರ್ಯಗ್ರಹಣವಿರಬಹುದು, ಚಂದ್ರ ಗ್ರಹಣವಿರಬಹುದು ಆದಿನವು ಭೂದಾನಕ್ಕೆ, ಗೋದಾನಕ್ಕೆ, ಆತದಮಬಲಿದಾನಕ್ಕೆ ಅತ್ಯಂತ ಪ್ರಶಸ್ತ ಕಾಲವೆಂದು ಧರ್ಮಸಿಂದು ಶಾಸ್ತ್ರ ನಿರ್ಣಯವಿದೆ.

ನೂರಾರು ಭೂದಾನ ಶಾಸನವೂ ಸಹ ಗ್ರಹಣದ ದಿನದಂದೇ ನೆಡಲಾಗಿದೆ.ಧಾರ್ಮಿಕ ಕಾರಣವೆಂದರೆ ಪಿತೃಗಳಿಗೆ ಮೋಕ್ಷ ಸಿಗಲೆಂದು.
ತುರುಗೋಳ್ ಶಾಸನ, ಗೋಸಾಸ ಶಾಸನ,
ವೀರಗಲ್ಲು,
ಮಹಾಸತಿ ಕಲ್ಲು,
ಒಕ್ಕೈ ಸತಿ ಕಲ್ಲು,
ನಿಷಧಿ ಕಲ್ಲುಗಳು ಒಂದೊಂದು ಒಂದೊಂದು ಬಗೆಯ ಕಥೆಯನ್ನು ಹೇಳುತ್ತದೆ.
ಕಲ್ಲು,ಕಲ್ಲಿನಲಿ ಕಥೆ ಇದೆ, ವ್ಯಥೆ ಇದೆ, ವೀರನೊಬ್ಬನ ಇತಿಹಾಸವಡಗಿದೆ, ಮಹಾಸತಿಯೊಬ್ಬಳ ವ್ಯಥೆ ಇದೆ, ದುಃಖವಿದೆ, ದುಮ್ಮಾನವಿದೆ, ಹರಕೆ ಇದೆ, ಹರಿವೂ ಇದೆ, ತ್ಯಾಗ, ಬಲಿದಾನದಿಂದ ತಮ್ಮ ಕಥೆಯನ್ನು ಕಲ್ಲಿನಲ್ಲರಳಿಸಿ
ಅಮರ ವೀರರಾದರು, ಸ್ವರ್ಗಕ್ಕೋ, ಕೈಲಾಸಕ್ಕೋ ಪಯಣ ಬೆಳೆಸಿದರು.
ಹರನಿಗೂ, ಹರಿಗೂ ಅರಿಕೆ ಮಾಡಿಕೊಂಡರು, ಭವ್ಯ ಭಾರತದ, ಕುಂತಲವೆಂಬ ಕರ್ನಾಟಕದ ಇತಿಹಾಸದಲ್ಲಿ ತಮ್ಮ ವಂಶದ ಹೆಸರು ಸೂರ್ಯ, ಚಂದ್ರರಿರುವ ವರೆಗೂ ಚಿರಸ್ಥಾಯಿಯಾಗಿ ಉಳಿಯಲೆಂದು, ಗೋ ರಕ್ಷಣೆಗೆ, ಸ್ತ್ರೀ, ಜನಿಸಿದ ಭೂಮಿತಾಯಿ ರಕ್ಷಣೆಗೆ ಕಾದಾಡಿ ಮಹಾತ್ಮರಾದರು. ಅವರು ಕಥೆಯಾದರು, ಅಮರರಾದರು, ಆ ವೀರರ ಕಥೆಯನ್ನು ಹೇಳುವವರಿದ್ದರೂ, ಕೇಳುವರಿಲ್ಲ ಇಂದು. ಇದು ಇತಿಹಾಸ, ಇದು ವಿಪರ್ಯಾಸ.
ಕಲ್ಲಿನಲ್ಲಿ ಹುದುಗಿರುವ ಅಪರೂಪದ ಕಥೆಯನ್ನು ಹುಡುಕಿ ಹೇಳುವ ಆಸೆ ನನ್ನದು, ಆ ಆಸೆಗೆ ಬೆನ್ನುಲುಬಾಗಿ ನಿಂತವರು ಹಲವರು.
ವಿಶೇಷ ಧನ್ಯವಾದಗಳು,
ನನ್ನ ಗುರುಗಳು, ಮಾರ್ಗದರ್ಶಕರು,
ಡಾ. ಎಸ್.ಜಿ.ಸಾಮಕ್,
ಬೆನ್ನೆಲುಬಾಗಿ ನಿಂತವರು,
ಶ್ರೀರಾಮ್ ಗೋಪಾಲ್,
ಶ್ರೀ ಆದಿತ್ಯ ಪ್ರಸಾದ್,
ರಾಯಲ್ ಕಾಫಿ ವರ್ಕ್ಸ್, ಶಿವಮೊಗ್ಗ.
ಚಿತ್ರಕೃಪೆ:
ಶ್ರೀ ಆದಿತ್ಯ ಪ್ರಸಾದ್.
