ನೆನಪುಗಳ ಸಂಕಲನ
Klive Special Article ಕೇವಲ ವೇತನಕ್ಕಾಗಿ ಯಾರು ಕೆಲಸ ಮಾಡುವರೋ ಅವರು ಶಿಕ್ಷಕರು. ಯಾರು ವೇತನದ ಜೊತೆ ಜೊತೆ ಸಮಾಜದ ಬಗ್ಗೆ ಕಳಕಳಿ ಹೊಂದಿರುತ್ತಾರೋ ಅವರು ಗುರುಗಳು. ಶಿಕ್ಷಕರು ನಾಲ್ಕಕ್ಷರ ಕಲಿಸಬಹುದಷ್ಟೇ…. ಗುರು ಅಕ್ಷರದ ಜೊತೆ ಬದುಕು ಕಲಿಸುವನು.
ಒಳ್ಳೆಯತನ ಸೋಲಬಹುದು – ಆದರೆ ಸಾಯುವುದಿಲ್ಲ. ಕೆಟ್ಟತನ ಗೆಲ್ಲಬಹುದು – ಆದರೆ ಉಳಿಯುವುದಿಲ್ಲ. ಅಕ್ಷರ ಕಲಿತವನು ಭ್ರಷ್ಟನಾಗಬಹುದು- ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ಭ್ರಷ್ಟನಾಗಲಾರ.
ಸಿ.ವಿ. ತಿರುಮಲ ರಾವ್ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಕರಾಗಿ, ಉನ್ನತ ಅಧಿಕಾರಿಯಾಗಿ ದುಡಿದ ಅನುಭವಿ. ರಾಜ್ಯದೆಲ್ಲೆಡೆ ದುಡಿದು ಶಿಕ್ಷಣ ಕ್ಷೇತ್ರದ ಒಳಿತು- ಕೆಡುಕು, ಒಳ- ಹೊರಗುಗಳ ಬಲ್ಲವರು. ಶಿಕ್ಷಕರ ನಾಡಿಮಿಡಿತ ಅರಿತವರು. ಸಾಮಾಜಿಕ ಕಳಕಳಿ ಮೈಗೂಡಿಸಿಕೊಂಡ ಶಿಕ್ಷಣ ತಜ್ಞರು. ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ ಇವರು ದೇಶ ಕಂಡ ಆಮೂಲಾಗ್ರ ಬದಲಾವಣೆಗಳಿಗೆ ಒಗ್ಗಿಕೊಂಡವರು. ಹಳೆಬೇರು ಹೊಸ ಚಿಗುರು ಕಂಡವರು. ಕುಟುಂಬದ ಸಂಸ್ಕಾರಗಳೇ ಇವರ ಬದುಕಿನ ಸಂಪತ್ತಾಯಿತು. ವೃತ್ತಿಯಾದ್ಯಂತ ನಡೆನುಡಿಯಲ್ಲಿ ಪ್ರಕಟವಾಯಿತು. ನಿವೃತ್ತಿಯ ನಂತರವೂ ಬಳಲದೆ- ಗುಣುಗುಟ್ಟದೆ ಸುಮಾರು 20 ವರ್ಷಗಳ ಕಾಲ ಬೆಂಗಳೂರಿನ ಅಂತರಾಷ್ಟ್ರೀಯ ಇಸ್ಕಾನ್ ಸೇವಾ ಸಂಸ್ಥೆಯ ಅಕ್ಷಯಪಾತ್ರೆ ವಿಭಾಗದ ಶೈಕ್ಷಣಿಕ ಸಲಹೆಗಾರರಾಗಿ ಕಾಯ೯ನಿವ೯ಹಣೆ.
ಬಡವರ ಮಕ್ಕಳಿಗೆ ಗೌರವದ ಬಾಳು ಬಾಳಲು ಮಾರ್ಗದರ್ಶನವಿತ್ತರು. ಹಸಿವು ನೀಗಿಸಲು ನೆರವಾದರು. ಸರಕಾರಿ ಸೌಲಭ್ಯಗಳ ಒದಗಿಸುವಲ್ಲಿ ಶ್ರಮಿಸಿದರು. ಸರಕಾರದ ಅನ್ನದ ಋಣವನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಹಿಂತುರುಗಿಸಿದ ಸೇವಾ ಧುರಂಧರ. ವಯಸ್ಸು ಎಪ್ಪತ್ತೊಂಬತ್ತು ಆದರೂ ಉಲ್ಲಸಿತರಾಗಿದ್ದಾರೆ.ಇವರು ಸಮಾಜದೊಂದಿಗೆ ಬೆರೆತು ಹೋದುದಕ್ಕೆ ಸಿಕ್ಕಿರುವ ಪ್ರತಿಫಲ ಎನ್ನುತ್ತಾರೆ. ಅಮ್ಮನ ಮಡಿಲು- ಅಪ್ಪನ ಹೆಗಲು- ಗೆಳೆಯರ ತೋಳು -ಗುರುಗಳ ಕಾರುಣ್ಯ ಬದುಕೆಲ್ಲ ಆಸರೆಯಾಯಿತು ಎಂದು ನೆನೆಯುವರು.
ಇವರ ತಂದೆ ಸಿ.ಎಸ್. ವೆಂಕಟರಾವ್. ತಾಯಿ ತಾರಾಬಾಯಿ. ತಂದೆ ಊರ ಶಾನುಭೋಗರು – ಬಡವ ಬಲ್ಲಿದರಿಗೆ ಉಪಕಾರಿಯಾಗಿ ನಿಂತವರು. ಗೌರವದ ಮನೆತನ. ಊರಿಗೆ ಊರೇ ಅವರ ಬೆನ್ನ ಹಿಂದೆ ಇತ್ತು.ತಾಯಿ ಗೃಹಿಣಿ. ಸಂಸ್ಕಾರವೇ ಮನೆದೇವರು ಎಂಬಂತಿದ್ದರು. ಎಂಟು ಮಕ್ಕಳ ಸಾಕಿ ಸಲಹಿದ ಮಹಾ ಮಾತೆ. ಅವರು ಜನಿಸಿದ ಚನ್ನಗಿರಿ, ದಾವಣಗೆರೆಯ ಸಮೀಪದ ಒಂದೂರು. ಕೆಳದಿಯ ರಾಣಿ ಚೆನ್ನಮ್ಮ,ಇತಿಹಾಸದ ಪುಟದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ವೀರ ವನಿತೆ. ಶತ್ರುಗಳ ದಮನಸಿ ಕೀರ್ತಿ ಮೆರೆದ ನಾಡು ಅದು. ಯುದ್ಧ ಗೆದ್ದು ನಾರಿಯರಿಗೆಲ್ಲ ಸ್ಪೂರ್ತಿ ಧಾತೆಯಾದರು. ಗೆದ್ದ ನಾಡಿಗೆ ಕಲಶವಿಟ್ಟಂತೆ ಕೋಟೆ ಕೊತ್ತಲಗಳ ಕಟ್ಟಿ ಸಾಕ್ಷಿಯಾದರು. ಅಂತಹ ನಾಡಿನ ಕರುಳ ಕುಡಿ ತಿರುಮಲ ರಾವ್. ಎಚ್.ಎಸ್. ವೆಂಕಟೇಶಮೂರ್ತಿ ಅವರಂತಹ ಶ್ರೇಷ್ಠ ಸಾಹಿತಿಗಳ ಶಿಷ್ಯತ್ವ ಗಳಿಸಿದರು. ಸಾಹಿತ್ಯ -ಸಂಸ್ಕಾರ -ಕೆಚ್ಚು – ಮಾನವೀಯತೆ -ಸೇವಾ ಭಾವ ಎಲ್ಲವೂ ಮಂದೈಸಿದ ಅಜಾತಶತ್ರು.
ದೊಡ್ಡ ಸಂಸಾರದಲ್ಲಿ ಹುಟ್ಟಿದ ಇವರು ಚನ್ನಗಿರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ಒಂದಷ್ಟು ಉತ್ತಮ ಶಿಕ್ಷಣ ಕೊಡೋಣವೆಂದು ಕಂದಾಯ ಇಲಾಖೆಯಲ್ಲಿ ದುಡಿಯುತ್ತಿದ್ದ ತಾತಯ್ಯ ಬೆಂಗಳೂರು ನಗರಕ್ಕೆ ಕರೆಸಿಕೊಂಡರು. ನ್ಯಾಷನಲ್ ಹೈಸ್ಕೂಲ್ – ನ್ಯಾಷನಲ್ ಕಾಲೇಜು ಹೀಗೆ ಬಿಎಸ್ಸಿ- ಬಿ ಎಡ್ ಪದವಿಗಿಟ್ಟಿಸಿ ಸ್ನಾತಕೋತ್ತರ ಪದವಿ ಪೂರೈಸಿದರು.
Klive Special Article ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ನ್ಯಾಷನಲ್ ಕಾಲೇಜು ಶೈಕ್ಷಣಿಕ -ಸಾಂಸ್ಕೃತಿಕ -ಸಾಹಿತ್ಯಿಕ ಕ್ಷೇತ್ರಗಳಲ್ಲಿ ಬಹಳ ವರ್ಷಗಳಿಂದ ದೊಡ್ಡ ಹೆಸರು. ಇಂತಹ ಹಿರಿಯ ವಿದ್ಯಾಸಂಸ್ಥೆಯಲ್ಲಿ ಪ್ರಕಾಂಡ ಪಾಂಡಿತ್ಯವಿದ್ದ ಪ್ರಾಧ್ಯಾಪಕರ ತಂಡವೇ ಇದ್ದಿತು. ಅವರ ಭಾಷಾ ಸಂಪತ್ತು, ಭಾಷೆಯನ್ನು ಬಳಸಿಕೊಂಡ ಚಾತುರ್ಯ ಅದ್ಭುತ. ಹೆಸರಾಂತ ಸಾಹಿತ್ಯ ಕೃಷಿಕ ಪ್ರಾಧ್ಯಾಪಕ ತಂಡ ಕಾಲೇಜಿನ ಕೀರ್ತಿ ಗೌರವಗಳನ್ನು ಬಾನಿಗೇರಿಸಿತ್ತು. ವಿದ್ಯಾರ್ಥಿಗಳೂ ಅಷ್ಟೇ, ವಿವಿಧ ಕ್ಷೇತ್ರಗಳಲ್ಲಿ ಕೀರ್ತಿ ಶಿಖರವೇರಿದವರಿದ್ದರು. ಇವೆಲ್ಲ ತಿರುಮಲರಾಯರಿಗೆ ಸ್ಪೂರ್ತಿಯಾಯಿತು. ವಿದ್ಯಾಲಯದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಬರುತ್ತಿದ್ದ ಸಾಹಿತಿಗಳು- ಪಂಡಿತರು – ಸಾಮಾಜಿಕ ಕಾರ್ಯಕರ್ತರು – ಮಂತ್ರಿ ಮಾಗದರಿಂದ ಸಂಸ್ಥೆಯು ಒಳ್ಳೆಯ ಹೆಸರು ಪಡೆಯಿತು. ಸಂಗೀತ- ಸಾಂಸ್ಕೃತಿಕ ವೈಭವಗಳಿಗೂ ಅದು ಕೇಂದ್ರ ಬಿಂದುವಾಗಿದೆ. ಹಬ್ಬ ಹರಿದಿನಗಳ ಸಮಯದಲ್ಲಿ ಅನೇಕ ವಿದ್ವತ್ಪೂರ್ಣ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ . ಇಂತಹ ವಿಶಿಷ್ಟ ಕ್ಷೇತ್ರ ಇವರ ಬದುಕನ್ನು ಸಮೃದ್ಧಗೊಳಿಸಿತು. ಸಾಹಿತ್ಯದ ಗೀಳು ಅಂಟಿತು. ಅಂದು ಸಿನಿಮಾರಂಗದಲ್ಲಿ ಬಣ್ಣ ಹಚ್ಚುವ ಕಲೆಗಾರಿಕೆಯ ಶ್ರೇಷ್ಠ ಹೆಸರು ಮೇಕಪ್ ನಾಣಿ. ಅಂತಹವರಿಂದ ಬಣ್ಣ ಹಚ್ಚಿಸಿಕೊಂಡು ಶಾಲಾ ಕಾಲೇಜು ನಾಟಕಗಳ ಕಿರು ಪಾತ್ರಗಳಲ್ಲಿ ಅಭಿನಯಿಸಿ ಸುಂದರ ವ್ಯಕ್ತಿತ್ವ ರೂಪಿಸಿಕೊಂಡರು.
ಶಾಲಾ ಓದು ಮುಗಿದಂತೆ ಶಿವಮೊಗ್ಗದಲ್ಲಿ ಸಾಂಖ್ಯಿಕ ಇಲಾಖೆಯಲ್ಲಿ ಉದ್ಯೋಗ ಪಡೆದರು. ಒಂದಷ್ಟು ಕಾಲ ಅಲ್ಲಿ ದುಡಿದು ವಿಧಾನಸೌಧದಲ್ಲಿದ್ದ ನೀರಾವರಿ ಇಲಾಖೆಯಲ್ಲಿ ದುಡಿದರು. ಅದು ಸಮಾಜ ಕಲ್ಯಾಣ ಕಾರ್ಯಗಳಿಗೆ ಪೂರಕ ಅಂಕಿ ಸಂಖ್ಯೆ ಒದಗಿಸುವ ಇಲಾಖೆಗಳು. ಭೂ ಸಂಪನ್ಮೂಲ, ಜಲಸಂಪನ್ಮೂಲಗಳ ಲಭ್ಯತೆ – ಬಳಕೆ -ವಿತರಣೆಗಳಿಗೆ ಸರಕಾರಿ ಇಲಾಖೆಗಳಿಗೆ ಅವಶ್ಯಕ ಮಾಹಿತಿ ಒದಗಿಸಬೇಕಾಗಿತ್ತು . ಇದರಿಂದ ಲೋಕಾನುಭವ ಪ್ರಾಪ್ತಿಯಾಯ್ತು.
ಓದುವ ಹವ್ಯಾಸ ಬಿಡದ ಇವರು, ಪ್ರೌಢಶಾಲಾ ಮುಖ್ಯ ಶಿಕ್ಷಕ ಹುದ್ದೆಗೆ ಪರೀಕ್ಷೆಗೆ ಬರೆದು ಪ್ರೌಢಶಾಲಾ ಪ್ರೊಬೆಷನರಿ ಮುಖ್ಯ ಶಿಕ್ಷಕರಾಗಿ ಸಕಲೇಶಪುರದಲ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಭದ್ರಾವತಿಯಲ್ಲಿ ಮುಖ್ಯ ಶಿಕ್ಷಕರು – ದಾವಣಗೆರೆಯಲ್ಲಿ ಸಹಾಯಕ ಶಿಕ್ಷಣಾಧಿಕಾರಿ – ಮಂಡ್ಯದಲ್ಲಿ ವಯಸ್ಕರ ಶಿಕ್ಷಣಾಧಿಕಾರಿ – ಮಂಗಳೂರು ಮತ್ತು ಚಿಕ್ಕಮಂಗಳೂರುಗಳಲ್ಲಿ ವಿದ್ಯಾಂಗ ಉಪನಿರ್ದೇಶಕರಾಗಿ ದುಡಿದರು. 2005ರಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಹ ನಿರ್ದೇಶಕರಾಗಿ ನಿವೃತ್ತರಾದರು.
ಶೈಕ್ಷಣಿಕ ಕ್ಷೇತ್ರ ವಿಶಾಲ ಆಕಾಶವಿದ್ದಂತೆ. ಅಲ್ಲಿ ಸಾಧಿಸಬೇಕೆಂಬವರಿಗೆ- ದುಡಿಯಬೇಕೆಂಬವರಿಗೆ ಮುಗಿಯದಷ್ಟು ಅವಕಾಶಗಳಿವೆ. ಆಕಾಶವೇ ಮಿತಿಯಲ್ಲ. ಎಷ್ಟು ದುಡಿದರು ಇನ್ನೂ ದುಡಿಯಬಹುದೆಂಬಷ್ಟು ಕನಸುಗಳು ಹಾಗೇ ಉಳಿದಿರುತ್ತವೆ. ತಾಲೂಕಿನ ಒಬ್ಬೊಬ್ಬ ಶಿಕ್ಷಣಾಧಿಕಾರಿ ಇರಲಿ, ಜಿಲ್ಲೆಯ ಒಬ್ಬೊಬ್ಬ ವಿದ್ಯಾಂಗ ಉಪನಿರ್ದೇಶಕರು ಇರಲಿ, ಅವರ ಹೆಗಲೇರುವ ನಿತ್ಯ ಸಮಸ್ಯೆಗಳು ಅಗಾಧ. ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳಿರುವವು. ಅಲ್ಲಿ ತರಗತಿಗೊಬ್ಬ ಶಿಕ್ಷಕರಿದ್ದರು ಕಡಿಮೆ ಅನ್ನಿಸುವಷ್ಟು ಕಾರ್ಯಭಾರಗಳಿರುವವು. ತಾಲೂಕಿನ ಒಳಗಿರುವ ಶಿಕ್ಷಕರ ಸಂಖ್ಯೆ ಸಾವಿರ – ಎರಡು ಸಾವಿರ ಇದ್ದರೂ ಇರಬಹುದು.
ಒಂದೆಡೆ ಶಿಕ್ಷಕರ ವರ್ಗಾವಣೆ, ಇನ್ನೊಂದೆಡೆ ಶಿಕ್ಷಕರ ಕೊರತೆ, ನೇಮಕಾತಿಯ ವಿಳಂಬ, ಶಿಕ್ಷಕರ ವೈಯಕ್ತಿಕ ಸಮಸ್ಯೆಗಳು, ಶಾಲಾಡಳಿತ ಹೀಗೆ ಹತ್ತು ಹಲವು ಕಾಡುವ ನಿತ್ಯ ಸಮಸ್ಯೆಗಳು. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳು, ಶಾಲಾ ಕಟ್ಟಡಗಳು, ಶೌಚಾಲಯ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳು ಇತ್ಯಾದಿ ಬೇಡಿಕೆಗಳು ಬೆಟ್ಟದಷ್ಟು. ಸರಕಾರ ಸಂಗ್ರಹಿಸುವ ಕಂದಾಯದ ಬಹುಪಾಲು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿದ್ದರು, ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬಷ್ಟು ಮಾತ್ರ. ಸ್ವಾತಂತ್ರ್ಯದೊರೆತ ನಂತರ ಶಾಲಾ ಶಿಕ್ಷಣ ಕ್ಷೇತ್ರದ ಪ್ರಗತಿಗೂ ಸಮಾಜದ ದಾನಿಗಳ ಕೊಡುಗೆ ಅಪಾರ. ಆಸ್ತಿಪಾಸ್ತಿ ಕೊಟ್ಟವರಿದ್ದಾರೆ – ಪೀಠೋಪಕರಣ ಒದಗಿಸಿದವರಿದ್ದಾರೆ.ಉಚಿತ ಪಾಠ ಸೇವೆ ಸಲ್ಲಿಸಿದವರಿರುವರು. ಸಾಂಸ್ಕೃತಿಕ ಚಟುವಟಿಕೆಗಳು – ಬಡವರ ಮಕ್ಕಳಿಗೆ ಪುಸ್ತಕ ಕೊಡುಗೆ -ಆಟದ ಮೈದಾನ ವಿಸ್ತರಣೆ – ಬಟ್ಟೆ ಬರೆಯ ವಿತರಣೆ ಹೀಗೆ ಬಹು ವಿಧದಲ್ಲಿ ಸಹಕಾರವಿತ್ತು ಊರ ಜನ ಬಲ ತುಂಬಿದವರಿದ್ದಾರೆ.
ಶಿಕ್ಷಣ ಇಲಾಖೆ ಸರಕಾರಕ್ಕೆ ಒಂದಿಷ್ಟೂ ಆದಾಯ ತರಬಲ್ಲ ಕ್ಷೇತ್ರವಲ್ಲ. ಶಾಲೆಗಳ ನಿತ್ಯ ಕೆಲಸ ಕಾರ್ಯಗಳಿಗೆ ಆಳುಕಾಳುಗಳಿಲ್ಲ. ನಿರ್ವಹಣೆಗೆ ಒದಗುವ ಹಣಕಾಸು ಅಷ್ಟಕ್ಕಷ್ಟೇ. ಇವನ್ನೆಲ್ಲ ಕಂಡು ಕಾಣದಂತಿರಲು ಶಿಕ್ಷಕರಿಗೆ ಅದೆಲ್ಲಿ ಸಾಧ್ಯ? ತಮ್ಮ ಮಕ್ಕಳಿಲ್ಲದೇ ಹೋದರು ನೂರಾರು ಮಕ್ಕಳ ಕಂಡಾಗ ಸಮಸ್ಯೆಗಳಿಗೆ ಸ್ಪಂದಿಸುವ – ಸ್ಪಂದಿಸಿದ ಶಿಕ್ಷಕರ ಸೇವೆ ಹೇಳತೀರದು. ಬಡ ಮಕ್ಕಳು ಬಳಪ -ಪುಸ್ತಕಗಳಿಲ್ಲವೆಂದು ಪರದಾಡುವುದನ್ನು ಕಂಡು ಕಣ್ಣು ಮುಚ್ಚಿ ಕುಳಿತಿರಲು ಹೇಗೆ ಸಾಧ್ಯ? ಸ್ವಚ್ಛತೆಯ ಕಾಳಜಿ ಇಲ್ಲದ ಮಕ್ಕಳಿಗೆ ಶಿಕ್ಷಕರೇ ತಂದೆ ತಾಯಿಯಂತಿರ ಬೇಕಾಗುವುದು. ಹೀಗೆ ತನ್ನತನ ಕಳಚಿಟ್ಟು ಅನೇಕ ರೀತಿಯ ಸೇವೆ ಮಾಡಿದ ಲಕ್ಷಾಂತರ ಶಿಕ್ಷಕರು ಇರುವರು. ಇಂತಹವರಿಗೆ ತಿರುಮಲರಾಯರು ಸ್ಪೂರ್ತಿಯಾದರು. ಬೆನ್ನು ತಟ್ಟಿ ಕೆಲಸ ಮಾಡಿಸಿದರು. ಅನೇಕ ವಿದ್ಯಾ ಸಂಸ್ಥೆಗಳು ಉನ್ನತಿಗೇರಿದವು. ಇಂತಹ ಹೃದಯವಂತಿಕೆ ಉಳ್ಳ ಅಧಿಕಾರಿಗಳು ಇದ್ದಾಗ ಶಿಕ್ಷಕರಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಲು ಸಾಧ್ಯ.
ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ಇದ್ದಾಗ ಊರ ಜನರ- ಉದ್ಯಮಿಗಳ ಕಾಡಿಬೇಡಿ ಸಹಾಯಧನ ಪಡೆಯ ಬೇಕಾಗುವುದು. ಶಾಲಾ ಅಭಿವೃದ್ಧಿ ಸಮಿತಿಗಳ ಒಲವು ಗಳಿಸಿ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಬೇಕಾಗುತ್ತದೆ. ಬದುಕು ಮುಡಿಪಾಗಿಡಬೇಕು. ಪಠ್ಯೇತರ ಚಟುವಟಿಕೆ ಹುಟ್ಟು ಹಾಕಿ, ಕಲಿಯ ಬೇಕೆಂದಿದ್ದರೆ ಮಕ್ಕಳ ಜೊತೆ ಮಕ್ಕಳಂತೆ ಇರಬೇಕು. ಶಿಕ್ಷಕ ಸಕಲಕಲಾವಲ್ಲಭನಾಗಿದ್ದರೆ ಮಾತ್ರ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಈ ತೆರನಾದ ವ್ಯಕ್ತಿತ್ವ ರೂಪಿಸಿಕೊಂಡವರು ಪ್ರತಿಭಾವಂತ ಶಿಕ್ಷಕ ಹಾಗೂ ಶಿಕ್ಷಣಾಧಿಕಾರಿ ತಿರುಮಲ ರಾಯರು. ಶಿಕ್ಷಣ ಕ್ಷೇತ್ರದಲ್ಲಿ ಒಂದು ಮಾತಿದೆ. ಮುಖ್ಯಸ್ಥ ಹೇಗಿರುವನೋ ಹಾಗೇ ವಿದ್ಯಾಸಂಸ್ಥೆಗಳು ಇರುತ್ತವೆ ಎಂದು. ತಾನು ಬೆಳೆದರು ವಿದ್ಯಾಸಂಸ್ಥೆಗಳನ್ನು ಬೆಳೆಸಿದರು.
ಅವರು ವೃತ್ತಿ ಬದುಕಲ್ಲಿ ಶಿಕ್ಷಕರಾಗಿಯೂ ದುಡಿದರು . ಶಿಕ್ಷಣಾಧಿಕಾರಿಯಾಗಿಯೂ ದುಡಿದರು. ಶಿಕ್ಷಕನಾಗಿ ದುಡಿದು ಪಾಠ ಹೇಳಬಲ್ಲ ಕಷ್ಟಗಳ ಅರಿವು ಇದ್ದಾಗ ಅಧಿಕಾರಿಯಾಗಿ ಶಿಕ್ಷಕರ ಕಷ್ಟ ಸುಖ ತಿಳಿಯಬಲ್ಲನು. ಕಮಲಾ ಹಂಪನಾ ಅವರಂತಹ ಖ್ಯಾತನಾಮರು ಕಲಿತ ಭದ್ರಾವತಿ ಬಾಲಕಿಯರ ಶಾಲೆಯನ್ನು ಮುನ್ನಡೆಸಿದ ಅನುಭವಿ. ಸಹಸ್ರಾರು ಶಿಕ್ಷಕರ ನೋವು ಕಷ್ಟಗಳಿಗೆ ಹಿರಿಯಣ್ಣನಂತೆ ಸ್ಪಂದಿಸಿದವರು.
ಕೆಲವರು ತಮ್ಮ ತಪ್ಪಿನಿಂದ ಕಲಿತರೆ- ಇನ್ನು ಕೆಲವರು ಇತರರ ತಪ್ಪಿನಿಂದ ಹಾಗೂ ಎಚ್ಚರದ ನುಡಿಗಳಿಂದ ಕಲಿಯುವರು. ಸಹಾಯಕ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಹಿಡಿದಾಗ ಉತ್ಸಾಹ ಪುಟಿದೇಳುತ್ತಿದ್ದ ಯುವಕ ಈತ. ಅಂದಿನ ಕಾಲದಲ್ಲಿ ಎಲ್ಲರಂತೆ ಉದ್ದ ಕೂದಲು, ಬೆಲ್ ಬಾಟಮ್ ಪ್ಯಾಂಟು ಹಾಕುತ್ತಿದ್ದರಂತೆ. ಸಕಲೇಶಪುರದಲ್ಲಿ ಸ್ಕೌಟ್ಸ್ ವತಿಯಿಂದ ರಾಜ್ಯಮಟ್ಟದ ಜಾಂಬೂರಿ ನಡೆಯಲಿತ್ತು . ಇವರೇ ಅಲ್ಲಿಯ ಸ್ಥಳೀಯ ಕಾಯ೯ದಶಿ೯ಯಾಗಿ ಹೊಣೆ ಹೊತ್ತವರು.ಅದರ ಪೆರೇಡಿಗೆ ಕೊಡಗಿನ ಹುಲಿ ಮಾತ್ರವಲ್ಲ, ದೇಶದ ನಿವೃತ್ತ ಸೇನಾ ದಂಡನಾಯಕ ಜನರಲ್ ಕಾರ್ಯಪ್ಪ ಬರುವವರಿದ್ದರು . ಸಾಯಂಕಾಲ ಅವರ ಸ್ವಾಗತಕ್ಕೆ ನಡೆದರು.ಇವರನ್ನು ಕಂಡ ಕಾರ್ಯಪ್ಪರಿಗೆ ಈ ಯುವಕ ಯಾರಿರಬಹುದೆಂದು ತಬ್ಬಿಬ್ಬಾದರು. ಯಾರು ನೀವು ಅಂದರಂತೆ.ಸರ್ -ನಾನು ಕ್ಷೇತ್ರ ಶಿಕ್ಷಣಾಧಿಕಾರಿ ಅನ್ನುತ್ತಿದ್ದಂತೆ, ನಾಳೆ ಬೆಳಿಗ್ಗೆ ಬರುವಾಗ ನನ್ನಂತೆ ನುಣುಪಾಗಿ ಕೂದಲು ಕತ್ತರಿಸಿ ಬರಬೇಕೆಂದು ಕಟ್ಟಪ್ಪಣೆ ಮಾಡಿದರಂತೆ. ತನ್ನ ತಪ್ಪಿನ ಅರಿವು ಮೂಡಿಸಿದ ದಂಡನಾಯಕರ ಆಜ್ಞೆಯನ್ನು ಶಿರಸಾವಹಿಸಿ ಮಾರನೆಯ ದಿನ ಹೋದಾಗ ಹತ್ತಿರ ಕರೆದು ಬೆನ್ನು ತಟ್ಟಿದರಂತೆ. ಶಿಕ್ಷಣಾಧಿಕಾರಿ ಹೀಗಿರಬೇಕು ಅಂದರಂತೆ. ಅದು ನನ್ನ ಬದುಕು ಬದಲಾಯಿಸಿತು ಅನ್ನುವರು.
ಶಿವಮೊಗ್ಗದಲ್ಲಿ ಬಿ ಎಡ್ ಮಾಡುತ್ತಿದ್ದಾಗ ರಾಮೋತ್ಸವದ ದಿನದಂದು ದ.ರಾ.ಬೇಂದ್ರೆ ಅತಿಥಿಯಾಗಿ ಬಂದಿದ್ದರಂತೆ. ಸಮಯಕ್ಕೆ ಮೊದಲೇ ಬಂದವರು ಇವರ ವಾಸ್ತವ್ಯದ ಕೊಠಡಿಯಲ್ಲಿ ಅರ್ಧ ಗಂಟೆ ವಿರಮಿಸಬೇಕಾಗಿತ್ತು. ಬೇಂದ್ರೆಯಂತಹ ವರಕವಿಯ ಕಂಡು ಪುಳಕಿತರಾದರು. ನೀನೇನು ಆಗಬೇಕೆಂದು ಕನಸು ಕಾಣುತ್ತಿರುವೆ ಎಂದು ಕೇಳಿದರಂತೆ. ಕವಿಯಾಗುವ ಆಸೆ ನನ್ನದು ಎಂದು ನುಡಿದರು. ನೋಡು ಚೆನ್ನಾಗಿ ಕೃಷಿ ಮಾಡಿದರೆ ಮಾತ್ರ ಆಸೆ ಈಡೇರಲು ಸಾಧ್ಯವೆಂದು ಹರಿಸಿದ್ದು ನನ್ನ ಬದುಕಿನ ಅವಿಸ್ಮರಣೀಯ ಘಟನೆ ಎನ್ನುವರು. ಹೀಗೆ ಪು.ತಿ. ನರಸಿಂಹಾಚಾರ್ – ರಾಶಿ – ಶಿವರಾಮ ಕಾರಂತ ಮುಂತಾದ ಸಾಹಿತ್ಯ ದಿಗ್ಗಜರ ಒಡನಾಟ ನನ್ನಲ್ಲಿ ಸಾಹಿತ್ಯದ ಗೀಳು ಹಚ್ಚಿತು ಎನ್ನುವರು.
ಎಪ್ಪತ್ತೊಂಬತ್ತರ ಹರೆಯದಲ್ಲೂ ಉತ್ಸಾಹ ಬತ್ತಿ ಹೋಗಲಿಲ್ಲ. ಇಂದಿಗೂ ಸಾಮಾಜಿಕ ಕಾರ್ಯಕರ್ತರಾಗಿ – ಭಾರತ್ ಸ್ಕೌಟ್ಸ್ ಗೈಡ್ಸ್ ಮುಖವಾಣಿ ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿರುವರು. ಬೆಂಗಳೂರು ಪರಿಸರ ಸಂಘ- ನಿವೃತ್ತ ಶಿಕ್ಷಣಾಧಿಕಾರಿಗಳ ಸಂಘ – ಅಕ್ಷಯ ಪಾತ್ರೆ ಫಲಾನುಭವಿಗಳ ತರಬೇತುದಾರ ಹೀಗೆ ನಿತ್ಯ ಚಟುವಟಿಕಾ ನಿರತರು.
ಇವರ ಪತ್ನಿ ಸುಧಾಮಣಿ. ಚಿನ್ನದ ನಾಡು ಕೋಲಾರದ ಕುವರಿ. ತಂದೆ ಬಿ ಎಸ್ ಕೇಶವಮೂರ್ತಿ. ತಾಯಿ ಸಾವಿತ್ರಮ್ಮ. ಇವರು ಸಾಮಾಜಿಕ ಕಾರ್ಯಕರ್ತೆ ಹಾಗೂ ದಾಸ ಸಾಹಿತ್ಯದ ಅಧ್ಯಯನಗಾತಿ. ಇವರಿಗೆ ಮಕ್ಕಳಿಬ್ಬರು. ಹಿರಿಯ ಮಗ ಸುಮಂತ್. ಎರಡನೇ ಮಗ ಸುಜಯ. ಅವರ ಪತ್ನಿ ಸುಪ್ರಿಯ. ಮೊಮ್ಮಗಳು ತಾರಾ.
ಉಡುಪಿಯಲ್ಲಿ ಉಪಾಧ್ಯಾಯ ಸಮ್ಮಾನ್, ಭಾರತ್ ಸೇವಾದಳ, ಸ್ಕೌಟ್ ಗೈಡ್ಸ್ ಸಂಸ್ಥೆ ಇನ್ನೂ ಅನೇಕ ಸಂಘ ಸಂಸ್ಥೆಗಳಿಂದ ಮಾನ -ಸನ್ಮಾನ ಪಡೆದ ಶ್ರೇಷ್ಠ ಶಿಕ್ಷಣ ತಜ್ಞ ಇವರು. ಆದರ್ಶ ದಂಪತಿ ಸ್ಪರ್ಧೆಯಲ್ಲೂ ಗೆದ್ದ ಚತುರ. ಸಂಘಜೀವಿ.ನಮ್ಮಿಬ್ಬರದು ಅನೇಕ ವರ್ಷಗಳ ಶೈಕ್ಷಣಿಕ ನಂಟು.
ಟಿ ನಾರಾಯಣ ಭಟ್ ರಾಮಕುಂಜ
ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ಲೇಖಕರು.
