ಭಾಗ 3. ಕೆಳದಿ ಮಲೆನಾಡಿನ ಪುಟ್ಟ ಸಂಸ್ಥಾನವೊಂದು ಸಾಮ್ರಾಜ್ಯವಾಗಿ ದೂರದ ದೆಹಲಿ ಸುಲ್ತಾನನಿಗೂ ತೊಡೆನಡುಗುವಂತೆ ಮಾಡಿದ ಕೀರ್ತಿ ಕೆಳದಿ ಅರಸರದ್ದು. ವಿಜಯನಗರ ಪತನಾನಂತರ ಸ್ವತಂತ್ರ ಆಳ್ವಿಕೆಯೊಂದಿಗೆ ಪ್ರವರ್ಧಮಾನಕ್ಕೆ ಬಂದ ಸಂಸ್ಥಾನವೆಂದರೆ ಕೆಳದಿ. ಇನ್ನೂರ ಅರವತ್ತು ವರ್ಷಗಳ ಕಾಲ ಅಸ್ತಿತ್ವ ದಲ್ಲಿದ್ದ ಸಾಮ್ರಾಜ್ಯ ಸಾಹಿತ್ಯ, ಕಲೆ, ಧರ್ಮ, ವಾಣಿಜ್ಯದ ಬೆಳವಣಿಗೆಗೆ ಅಭೂತಪೂರ್ವ ಕೊಡುಗೆ ನೀಡಿತ್ತು. ಕೆಳದಿ ವಂಶದ ಅರಸರಲ್ಲಿ ಅತಿ ಹೆಚ್ಚು ಪ್ರಸಿದ್ದನಾದವನೇ ದೊಡ್ಡಸಂಕಣ್ಣನಾಯಕ. ಸದಾಶಿವನಾಯಕನ (ಸದಾಶಿವ ಸಾಗರ, ಇಂದಿನ ಸಾಗರ ಪಟ್ಟಣದ ನಿರ್ಮಾತೃ) ಮೊದಲನೇ ಪುತ್ರರಾಗಿ ದೊಡ್ಡಸಂಕಣ್ಣನಾಯಕರು ಕ್ರಿ.ಶ. 1546 ರ ಮೇ 5 ರಂದು ಇಕ್ಕೇರಿ ಅರಮನೆಯಲ್ಲಿ ಪಟ್ಟಾಭಿಷಿಕ್ತರಾಗಿ ಅಧಿಕಾರಕ್ಕೆ ಬಂದಂತಹ ಸಂಕಣ್ಣನಾಯಕರು ಮಹಾ ಯೋಧರೂ, ಪರಾಕ್ರಮಿಯೂ, ಆಗಿದ್ದು ಭೋಗ, ತ್ಯಾಗ, ಯೋಗಗಳನ್ನು ಕಂಡವನಾಗಿದ್ದು ಇದರೊಂದಿಗೆ ದಂಡಯಾತ್ರೆ ಕೈಗೊಂಡು ಜಂಬೂರಿನ ಪಾಳೆಯಗಾರ ವಿರೂಪಣ್ಣ ಒಡೆಯರ್ ನನ್ನು ಸೋಲಿಸಿ ಜಂಬೂರನ್ನು, ಉಡುಗಣಿ ಕೋಟೆಯನ್ನು ವಶಪಡಿಸಿಕೊಂಡನು, ಆದರೆ ವಿಜಯನಗರದ ಮಹಾಪರಾಕ್ರಮಿ, ಸಾಮ್ರಾಟ ಅಳಿಯ ರಾಮರಾಯನ ಆದೇಶದಂತೆ ಜಂಬೂರನ್ನು, ಉಡುಗಣಿ ಕೋಟೆಯನ್ನು ವಿರೂಪಣ್ಣ ಒಡೆಯರಿಗೆ ಮತ್ತೆ ಬಿಟ್ಟುಕೊಡಬೇಕಾಯಿತು. Klive Special Article ವಿಜಯನಗರದ ಸಾಮ್ರಾಜ್ಯದ ರಕ್ಷಣೆಗಾಗಿ ದೊಡ್ಡ ಸಂಕಣ್ಣನಾಯಕರು ನೀಡಿದ ನೆರವನ್ನು ಗುಣವನ್ನು ಮೆಚ್ಚಿ ಸಂಕಣ್ಣನಾಯಕರ ಮಕ್ಕಳಾದ ರಾಮರಾಜ ಮತ್ತು ಕಿರಿಯ ವೆಂಕಟಪ್ಪನಾಯಕರ ಯೋಗಕ್ಷೇಮಕ್ಕಾಗಿ, ಅಳಿಯ ರಾಮರಾಯನು ಹೊಳೆಹೊನ್ನೂರು, ಮಾಸೂರು, ಮಲ್ಲೂರೂ, ಪ್ರದೇಶಗಳನ್ನು ಉಂಬಳಿಯಾಗಿ ನೀಡಿದನು.

ಇದೇ ಸಂಧರ್ಭದಲ್ಲಿ ಅಳಿಯ ರಾಮರಾಯನು ಗೋವೆಯ ಪೋರ್ಚುಗೀಸರೊಂದಿಗೆ ಯುದ್ದ ಘೋಷಿಸಿದಾಗ ಸಂಕಣ್ಣನಾಯಕರು ರಾಮರಾಯನ ಸಹೋದರ ವಿಠಲರಾಯನೊಂದಿಗೆ ಸೇರಿ ಪೋರ್ಚುಗೀಸ್ ರನ್ನು ಸೋಲಿಸಿ ಗೋವೆಯನ್ನು ವಶಪಡಿಸಿಕೊಂಡನು.ಇದರಿಂದ ಸಂತೋಷ ಗೊಂಡ ರಾಮರಾಯನು ಸಂಕಣ್ಣನಾಯಕರಿಗೆ ಮಾಳೇನಹಳ್ಳಿ ಹೋಬಳಿಯನ್ನು ಉಂಬಳಿಯನ್ನಾಗಿ ನೀಡಿದ್ದಲ್ಲದೆ ಬೆಲೆ ಬಾಳುವ ರತ್ನಾಭರಣಗಳನ್ನು “ಭುಜಕೀರ್ತಿ” ಎಂಬ ಬಿರುದನ್ನೂ ನೀಡಿ ಸನ್ಮಾನಿಸಿ ಇಕ್ಕೇರಿಗೆ ಬೀಳ್ಕೊಟ್ಟನು. ಇದುವರೆಗೂ ದಂಡಯಾತ್ರೆ ಕೈಗೊಂಡ ದೊಡ್ಡ ಸಂಕಣ್ಣನಾಯಕರಿಗೆ ವೈರಾಗ್ಯ ಬಂದು ತೀರ್ಥ ಯಾತ್ರೆ ಯ ಕಡೆಗೆ ಮನಸ್ಸು ತಿರುಗಿತು.ಐಹಿಕ ಭೋಗವಿಲಾಸಗಳಲ್ಲಿ ವಿರಕ್ತಿ ಉಂಟಾಯಿತು. ತೀರ್ಥಯಾತ್ರೆ ಯನ್ನು ಕೈಗೊಂಡ ಸಂಕಣ್ಣನಾಯಕ ದಕ್ಷಿಣ ಭಾರತ, ಉತ್ತರ ಭಾರತದಲ್ಲಿನ ಪುಣ್ಯಕ್ಷೇತ್ರ ಗಳಿಗೆ ಹೊರಟು ನಿಂತು ರಾಜ್ಯಭಾರವನ್ನೆಲ್ಲಾ ತನ್ನ ಸಹೋದರ ಚಿಕ್ಕಸಂಕಣ್ಣನಾಯಕರಿಗೆ ವಹಿಸಿ ಭಸ್ಮ, ರುದ್ರಾಕ್ಷಿಗಳನ್ನು ಧರಿಸಿ ಕಾವಿಯನ್ನುಟ್ಟು ನಾಗಮುರಿ ಖಡ್ಗವನ್ನು ತೆಗೆದುಕೊಂಡು ನಾಲ್ಕುಜನ ಸಹಾಯಕರೊಂದಿಗೆ ನೆಚ್ಚಿನ ಕುದುರೆ ಏರಿ ಯಾತ್ರೆ ಹೊರಟನು. (ನಾಗಮುರಿ ಖಡ್ಗವನ್ನು ಕರ್ನಾಟಕದ ಇತಿಹಾಸದಲ್ಲಿ ರಣಧೀರ ಕಂಠೀರವ, ದೊಡ್ಡಸಂಕಣ್ಣನಾಯಕ, ಶ್ರೀಕೃಷ್ಣದೇವರಾಯ, ಇಮ್ಮಡಿ ಪುಲಿಕೇಶಿ, ಹೀಗೆ ಕಲವೇ ಮಂದಿ ಬಳಸಿದ ಅಪರೂಪದ ಆಯುಧ. ಇದು ಇಂದಿನ ಬೆಲ್ಟ್ ರೀತಿ ಇದ್ದು ಅದನ್ನು ಸೊಂಟಕ್ಕೆ ಕಟ್ಟಿಕೊಳ್ಳಬಹುದಾಗಿದ್ದು ಎರಡೂ ಭಾಗ ಅಲಗು ಬಹು ಸೂಕ್ಷ್ಮವಾಗಿ ರುತ್ತದೆ. ಈ ಆಯುಧ ಬಳಸುವ ಯೋಧರು ಬಹಳ ತೀಕ್ಷ್ಣ ಮತಿ ಯಾಗಿರಬೇಕಾಗುತ್ತದೆ.) ಮುಂದುವರೆಯುವುದು. ದಿಲೀಪ್ ನಾಡಿಗ್ 6361124316
