Saturday, December 6, 2025
Saturday, December 6, 2025

Klive Special Article ಶಾಸನ ಪ್ರೀತಿಯ “ರಸಸಿಂಚನ” ಪುಸ್ತಕ ಪರಿಚಯ: ಪ್ರಭಾಕರ ಕಾರಂತ, ಹೊಸಕೊಪ್ಪ

Date:

Klive Special Article ನೆಲೆ_ಬೆಲೆ 2 ಕೃತಿ ರಚಿಸಿದವರು ಡಾ.ಮಂಜುಳಾ ಹುಲ್ಲಹಳ್ಳಿಯವರು.ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವವರು. ಆದರೆ ಈ ಜಿಲ್ಲೆಯ ಕುರಿತು ಅವರ ಪ್ರೀತಿ ಅನ್ಯಾದೃಶ. ಹೀಗೆ ಹೊರಗಿನಿಂದ ಬಂದವರಿರಲಿ ಇಲ್ಲೇ ತಲೆತಲಾಂತರದಿಂದ ಇರುವವರೇ ಜಿಲ್ಲೆಯ ಮಹತ್ವವನ್ನು ಎತ್ತಿ ತೋರುವ ಇಂತಹ ಕಾರ್ಯ ಮಾಡಿದ್ದು ನನಗೆ ಗೊತ್ತಿಲ್ಲ. ಹಾಗೆ ನೋಡಿದರೆ ನಾನೂ ಈ ಜಿಲ್ಲೆಗೆ ಹೊರಗಿನಿಂದ ಬಂದವನೇ. ಈ ದೃಷ್ಟಿಯಿಂದಲೇ ಇರಬೇಕು ಮಂಜುಳಾ ರವರ ಕೆಲಸದ ಮಹತ್ವ ನನಗೆ ಹೆಚ್ಚು ಅರ್ಥಪೂರ್ಣವಾಗಿ ಗೋಚರಿಸುತ್ತದೆ.
ನನಗೆ ಮೊದಲು ಶಾಸನಗಳ ಕುರಿತು ಅರಿವು ಗೌರವ ಇರಲಿಲ್ಲ. ಒರಟು ಕಲ್ಲಿನ ಮೇಲೆ ಕೆತ್ತಿದ ಅಕ್ಷರ. ಓದಲೂ ಬಾರದು.ಓದಿದ್ದು ಅರ್ಥವೂ ಆಗದು.ಈಗೇನು ಇದರ ಪ್ರಸ್ತುತತೆ ಎಂದು ಕೊಂಡವ ನಾನು…ಮೂರ್ಖ.ಆದರೆ ಹಿರಿಯ ಗೆಳೆಯ ನಾಗರಾಜ ರಾವ್ ಪುಸ್ತಕ ನನ್ನ ಕಣ್ಣ್ತೆರೆಸಿತು.(ಈ ಪುಸ್ತಕ ಅವರ ಮುನ್ನುಡಿ ಹೊತ್ತಿದೆ). ಅವರನ್ನು ಓದುತ್ತಾ ಹೋದಂತೆ ನನಗೆ ಶಾಸನ ಪ್ರೇಮದ ಹುಚ್ಚು ಹಿಡಿಯಿತು.
ಮಂಜುಳಾ ರವರಂತೂ ಶಾಸನವನ್ನು ಇನ್ನಿಲ್ಲದೇ ಪ್ರೀತಿಸುವವರು. ಅವರ ಪುಸ್ತಕದುದ್ದಕ್ಕೂ ಈ ಪ್ರೀತಿಯ ರಸಸಿಂಚನ ಕಾಣಬಹುದು. ಶಾಸನದಲ್ಲಿ ಭಾಷಾ ಸೊಗಸಿದೆ. ಕಾವ್ಯವಿದೆ. ಎಲ್ಲಕ್ಕೂ ಹೆಚ್ಚಾಗಿ ಅಡಗಿದ ಇತಿಹಾಸ ಸತ್ಯ ಇದೆ.ನೆಲೆ ಬೆಲೆಯಲ್ಲಿ ಇವುಗಳ ಅನಾವರಣ ಆಗಿದೆ.
ಪುಸ್ತಕ ನಾಲ್ಕು ಭಾಗದಲ್ಲಿ ವಿಸ್ತರಿಸಿದೆ. ಮೊದಲ ಭಾಗ “ಪರಂಪರೆ ಸಂಸ್ಕೃತಿಯ ಕಲೆ”.ಇಲ್ಲಿ ಆರು ಲೇಖನಗಳಿವೆ. ಚಿಕ್ಕಮಗಳೂರು,ಸೊಸೆಊರಿನ ಹೊಯ್ಸಳರು, ಸಿಂದಿಗೆರೆಯ ಪರಂಪರೆ, ವೀರಗಲ್ಲಿನ ಸಾಮಾಜಿಕ ಮೌಲ್ಯಗಳು,ಕೆಳಗೂರಿನ ವೀರಗಲ್ಲುಗಳು….,ಸ್ವಾತಂತ್ರ್ಯ ಹೋರಾಟದಲ್ಲಿ ಚಿಕ್ಕಮಗಳೂರು ಹೀಗೆ ಆರು ಲೇಖನಗಳು. ಮಂಜುಳಾ ಈ ನೆಲವನ್ನು ಇದರ ಇತಿಹಾಸವನ್ನು ಇದರ ವೈಭವವನ್ನು ಅದೆಷ್ಟು ಅರ್ಥೈಸಿಕೊಂಡಿದ್ದಾರೆ ಮತ್ತು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಲೇಖನಗಳು ಸಾಕ್ಷಿ.ಹೀಗೆಂದೇ ಈ ಲೇಖನಗಳು ಬರಡು ಪುರಾಣವಾಗದೇ ಜೀವಂತಿಕೆಯಿಂದ ಪುಟಿಯುತ್ತವೆ.
ನಾನು ಸುತ್ತಮುತ್ತ ಅನೇಕ ವೀರಗಲ್ಲು,ಮಾಸ್ತಿ ಕಲ್ಲುಗಳನ್ನು ಕುತೂಹಲದಿಂದ ನೋಡಿರುವೆ. ಅವುಗಳಲ್ಲಿ ಇಷ್ಟೊಂದು ಶಾಸನವಿದೆ ರೋಚಕ ಕಥೆಯಿದೆ ಎಂಬ ಅರಿವಿರಲಿಲ್ಲ.ಒಂದೊಂದು ಕಲ್ಲಿನ ಹಿಂದೆಯೂ ಇರುವ ಕಥೆಯನ್ನು ಸುಂದರ ಭಾವದಿಂದ ಲೇಖಕಿ ಚಿತ್ರಿಸಿದ್ದಾರೆ.ಐತಿಹಾಸಿಕ ವ್ಯಕ್ತಿಗಳ ಸಾಧನೆಯ ಕುರಿತು ಒಂದು ಹೆಮ್ಮೆ ಮೂಡಿಸುವಲ್ಲಿ ಗೌರವ ವರ್ಧಿಸುವಲ್ಲಿ ಈ ಲೇಖನಗಳು ಯಶಸ್ವಿ ಆಗಿವೆ.
ಭಾಗ 2 ರಲ್ಲಿ ನಾಲ್ಕು ಲೇಖನಗಳಿವೆ. ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರ ಪರಂಪರೆ ಮೊದಲ ಲೇಖನ.ಈ ಪುಸ್ತಕ ಕೈಸೇರಿದ ತಕ್ಷಣ ನಾನು ಮೊದಲು ಓದಿದ ಲೇಖನ.ಶೃಂಗೇರಿಯ ಕುರಿತು, ಶಂಕರಾಚಾರ್ಯರ ಕುರಿತು ನಾನು ಬೇಕಾದಷ್ಟು ಕೃತಿ ಓದಿರುವೆ. ಇವರೇನು ಹೊಸತು ಬರೆದಿರಬಹುದು ಎಂಬ ಕುತೂಹಲ. ಎಂಟು ಪುಟಗಳ ಈ ಪುಟ್ಟ ಲೇಖನ ಓದಿ ನನಗೆ ಆನಂದಾಶ್ಚರ್ಯ ಆಯಿತು. ಇಷ್ಟು ಕಡಿಮೆ ಜಾಗದಲ್ಲಿ ಇಷ್ಟು ಸೊಗಸಾಗಿ ಚಿತ್ರ ಕಟ್ಟುವುದು ಸುಲಭವಲ್ಲ. ಈ ಪುಟ್ಟ ಲೇಖನಕ್ಕೆ ಅವರು ಮಾಸ್ತಿಯವರ ಭಾವ ,ಕುವೆಂಪುರವರ ನೆನಪಿನದೋಣಿ,ಮೈಸೂರಿನ ಮಹಾರಾಜರ ಶಾಸನ ಹೀಗೆ ಎಷ್ಟೆಲ್ಲಾ ಅಧ್ಯಯನ ಮಾಡಿದ್ದಾರೆ. ಎಲ್ಲಿ ಏನನ್ನು ಪೋಣಿಸಬೇಕೋ ಅಲ್ಲದನ್ನು ಇಟ್ಟು ಒಟ್ಟೂ ಲೇಖನಮಾಲೆಯ ಸೌಂದರ್ಯ ಹೆಚ್ಚಿಸಿರುವ ಇಂತಹ ಓದು ತೃಪ್ತಿ ಕೊಡುತ್ತದೆ.
ಹಂತೂರಿನ ಅರ್ಹಂತರು ಲೇಖನವೂ ಶಾಸನೋಕ್ತವೇ ಆಗಿದೆ.ಸುಂದರವಾಗಿದೆ.
Klive Special Article ತರೀಕೆರೆ ಶರಣಮಾತೆ ಅಕ್ಕನಾಗಮ್ಮನ ಅಂತಿಮ ನೆಲೆ ಸಹ ಅಕ್ಕನ ಮಹತ್ವವನ್ನು ಪ್ರತಿ ಸಾಲಿನಲ್ಲೂ ಸಾರುತ್ತದೆ. “ಬಸವಣ್ಣನವರ ಜೀವನವನ್ನು ರೂಪಿಸಿ ಬೆಳೆಸಿದ ಸಾತ್ವಿಕ ಶಕ್ತಿಚೇತನವೇ ಅಕ್ಕನಾಗಮ್ಮ” ಎಂಬ ಮಾತಿಗೆ ಸಾಕಷ್ಟು ಸಮರ್ಥನೆಯನ್ನು ಇಲ್ಲಿ ಲೇಖಕಿ ತೋರಿಸಿಕೊಡುತ್ತಾರೆ. ನುಲಿಯ ಚಂದಯ್ಯನ ಸದ್ಭಾವದ ತಾಣ ನಂದಿಗ್ರಾಮ ಎಂಬ ಲೇಖನದಲ್ಲೂ ವ್ಯಕ್ತಿ ಪರಿಚಯ ಆತ್ಮಕಯವಾಗಿದೆ. ಕಡೆಗೆ ಚಂದಯ್ಯನ ಸ್ಮರಣೆ ಉಳಿಸುವ ಕಾರ್ಯ ನಿರ್ವಹಿಸುತ್ತಿರುವವರಿಗೆ ಪ್ರೋತ್ಸಾಹದ ಮಾತೂ ಇದೆ.
ಮೂರನೇ ಭಾಗ ವ್ಯಕ್ತಿತ್ವಗಳ ಅಲೆ.
ದೇವನೂರಿನ ರುದ್ರಭಟ್ಟ,ಸ್ವಾತಂತ್ರ್ಯ ಹೋರಾಟದ ಸಾಹಸಿಗರು ಸರ್ಜಾ ರಂಗಪ್ಪ ನಾಯಕ ಮತ್ತು ಸರ್ಜಾ ಹನುಮಪ್ಪ ನಾಯಕ,ಅಂಬಳೆ ಕೃಷ್ಣಶಾಸ್ತ್ರಿಗಳು, ಮಾಸ್ತಿಯವರ ಭಾವಲಹರಿ ಲೇಖಕಿ ಮಲ್ಲಿಕಾ ಕಡಿದಾಳು, ಡಾ.ರಾಜಕುಮಾರ್, ರಾಜೇಶ್ವರಿ ತೇಜಸ್ವಿ,ಕಣ್ಣನ್ ಶವಾದ್, ಹೀಗೆ ಹನ್ನೊಂದು ವ್ಯಕ್ತಿಗಳ ಪರಿಚಯ ಇದೆ. ರಾಜೇಶ್ವರಿ ತೇಜಸ್ವಿಯವರ ಕುರಿತು ಓದುವಾಗ ನನಗೆ ಕಣ್ಣು ತೇವವಾಯಿತು. ಕೆಲವರೆಲ್ಲಾ ಅಮರರಾಗಿ ಈ ಭೂಮಿಯಲ್ಲಿ ಸರ್ವಕಾಲಕ್ಕೂ ಇರಬೇಕಾದವರು. ಅಂತಹವರಲ್ಲಿ ಈ ತೇಜಸ್ವಿ ದಂಪತಿಗಳೂ ಸೇರಿದವರು. ಲೋಕಕ್ಕೆ ನಿಜ ಅರ್ಥದಲ್ಲಿ ಇವರ ಅಗಲುವಿಕೆ ತುಂಬಲಾರದ ನಷ್ಟ. ಮಾಸ್ತಿಯವರ ಕುರಿತು ಓದಿದಾಗಲೂ ಹಾಗೇ ಅನಿಸಿತು. ಭಾವಲಹರಿ ನಾನಿನ್ನೂ ಓದಿಲ್ಲ. ಓದಲೇ ಬೇಕು ಎಂಬ ಸಂಕಲ್ಪ ಉಂಟಾಯಿತು.
ನಾಲ್ಕನೇ ಭಾಗ ಸ್ಥಳೀಯ ಔನ್ನತ್ಯದ ನೆಲೆ.
ಇಲ್ಲೂ ಸ್ಥಳ ಪರಿಚಯಕ್ಕೇ ಪ್ರಾಧಾನ್ಯ. ಶಾಸನಗಳ ಸಾಕ್ಷಿ. ಊರನ್ನು ಹೇಗೆ ಪ್ರೀತಿಸಿ ಇತಿಹಾಸ ಕಾಪಿಟ್ಟು ಮುಂದಿನ ತಲೆಮಾರಿಗೆ ಉಳಿಸಬೇಕು ಎಂಬ ಪ್ರೇರಣಾದಾಯಕ ಲೇಖನಗಳು. ಕಡೆಯ ಎಂಟನೇ ಲೇಖನ ಆಶಾಕಿರಣ ಕುರಿತಾದದ್ದು.ಡಾ.ಕೃಷ್ಣೇಗೌಡರ ಸೇವಾ ಸಾಹಸ ಅನಾವರಣ ಗೊಳಿಸುವ ಲೇಖನ.
ಈ ಕೃತಿಯ ಎಲ್ಲಾ ಲೇಖನಗಳೂ ಭಾವಸ್ಪರ್ಶದಿಂದ ಮೌಲ್ಯಯುತವಾಗಿವೆ.ಹೃದಯಸ್ಪರ್ಶಿಯಾಗಿದೆ. ಕಾವ್ಯಾತ್ಮಕವಾಗಿವೆ.ಅರಿವು ವರ್ಧಿಸುತ್ತಿವೆ. ಅನೇಕ ಶಾಸನಗಳನ್ನು ಉಲ್ಲೇಖಿಸುವಾಗ ಈಗವು ಲಭ್ಯವಿಲ್ಲ ಎಂದು ಲೇಖಕಿ ಹೇಳಿದ್ದಾರೆ. ಇದು ನಮ್ಮ ಜನರ ಕಣ್ತೆರಸಬೇಕು. ಈ ಕೃತಿ ಓದಿ ತಮ್ಮ ನೆಲದ ಮಹತ್ವ ಮನದಟ್ಟು ಮಾಡಿಕೊಂಡು ಅದನ್ನು ಸಂರಕ್ಷಿಸುವ ಕಾರ್ಯ ಕೈಗೆತ್ತಿಕೊಳ್ಳುವಂತಾದರೆ ಇದರ ಶ್ರಮ ಸಾರ್ಥಕ ಅನಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...