ಲೇ:ಡಾ.ಮೈತ್ರೇಯಿ ಆದಿತ್ಯ ಪ್ರಸಾದ್
ವಿದ್ಯಾ ವಿನಯ ಸಂಪನ್ನಃ ಕರ್ತವ್ಯ ನಿಷ್ಠಃ ಸಮಃ ಸದಾ| ಲೋಕೇ ಹಿತಂ ಯಃ ಕುರುತೇ ಸ ವೈ ಸತ್ತ್ವಧರಃ ನರಃ ll
Klive Special Article ವಿದ್ಯೆಯುಳ್ಳವನು, ವಿನಯವಂತನು ತನ್ನ ಕರ್ತವ್ಯಕ್ಕೆ ನಿಷ್ಠೆ ಹೊಂದಿರುವವನು ಹಾಗೂ ಸದಾ ಸಮಚಿತ್ತನಾಗಿರುವವನು ಅಲ್ಲದೇ ಯಾವಾಗಲೂ ಇತರರ ಹಿತಕ್ಕಾಗಿ ದುಡಿಯುವವನೇ ನಿಜವಾದ ಸಜ್ಜನ ಹಾಗೂ ಶ್ರೇಷ್ಠ ವ್ಯಕ್ತಿ ಎಂಬರ್ಥದ ಈ ಸುಭಾಷಿತ ಓದಿದಾಗ ನನ್ನ ಸ್ಮರಣೆಗೆ ಬಂದದ್ದು ಸರಳ ಸಜ್ಜನಿಕೆಯ ವ್ಯಕ್ತಿ ಆದಿತ್ಯ ಪ್ರಸಾದ್. ಅವರು ಜನಿಸಿದ್ದು ರಮ್ಯಮನೋಹರವಾದ ಕಡಲೂರಾದ ಕುಂದಾಪುರದ ಸಮೀಪದ ನಾಗೂರಿನಲ್ಲಿ. ತಂದೆ ಮಂಜುನಾಥ್ ಗಜಾನನ ಬಸ್ ನಲ್ಲಿ ನಿರ್ವಾಹಕ ಹಾಗೂ ನಂತರ ಶಾಲಾ ವಾಹನ ಒಂದರ ಚಾಲಕರಾಗಿ ಶಿಸ್ತಿನ ಜೀವನ ನಡೆಸಿ, ತನ್ನೂರಿನಲ್ಲಿ, ತಾನಿದ್ದೆಡೆಯಲ್ಲಿ ನಗು ಹಾಗೂ ತನ್ನ ಕರ್ತವ್ಯ ನಿಷ್ಠೆಯಿಂದಲೇ ಹೆಸರು ಮಾಡಿದ್ದರೆ, ತಾಯಿ ಶಶಿಕಲಾ ಆಚಾರ್ಯ ಇವರು ನೂರಾರು ಜನರಿಗೆ ಉಚಿತ ಹೆರಿಗೆ ಮಾಡಿಸಿ ಅಲ್ಲದೆ ಅನೇಕರ ಆರೋಗ್ಯದ ಸಮಸ್ಯೆಗಳಿಗೆ ತಮ್ಮ ಪರಂಪರೆಯಿಂದ ಬಂದ ನಾಟಿ ಔಷಧಿ ನೀಡುವ ಮೂಲಕ ಪರಿಹಾರ ಒದಗಿಸಿದ ಮಹಾತಾಯಿ. ತನ್ನ ಒಡನಾಟದಲ್ಲಿ ಜೊತೆಯಾದವರು ಅವರಣ್ಣ ಗುರುಪ್ರಸಾದ್ ಅವರು ಸಹ ಸಜ್ಜನಿಕೆಯ ವ್ಯಕ್ತಿ. ಈ ರೀತಿಯ ಕುಟುಂಬದ ಹಿನ್ನೆಲೆಯ ಜೊತೆಗೆ ನಳಿನ, ಸುಧೀರ್ ಹಾಗೂ ಬ್ರಿಜೇಶ್ ಎಂಬ ಸಹೃದಯ ಸ್ನೇಹಿತರ ಬಳಗ ಆದಿತ್ಯರಿಗೆ ಒಳ್ಳೆಯ ಸಂಸ್ಕಾರ ತಂದು ಕೊಟ್ಟಿತ್ತು. ತನ್ನ ಹುಟ್ಟೂರಿನಲ್ಲಂತೂ ಪರೋಪಕಾರದ ಕೆಲಸಗಳಿಂದಲೇ ಹೆಸರುವಾಸಿಯಾಗಿದ್ದವರು. ಯಾರದೋ ಮನೆಯ ಹಿರಿಯರ ಆರೈಕೆ, ಗರ್ಭಿಣಿಯ ಪ್ರಸವಕ್ಕೆ ಆಸ್ಪತ್ರೆಗೆ ಕೊಂಡೊಯ್ಯಲು, ಮನೆ ಕಾವಲಿಗೆ ಹೀಗೆ ಹತ್ತು ಹಲವಾರು ಸಹಾಯದ ಕೆಲಸ ಮಾಡುತ್ತಲೇ ಊರ ತುಂಬಾ ಪ್ರಸಿದ್ಧಿಯಾದವರು.
90ರ ದಶಕದಲ್ಲಿ ಎಲ್ಲವೂ ದುಬಾರಿಯಾಗಿದ್ದ ಕಾಲವದು ಅಂದರೆ ಕಂಪ್ಯೂಟರ್ ಕ್ಯಾಮೆರಾ ಇತ್ಯಾದಿಗಳು. ಅದನ್ನು ತಾನು ದುಬಾರಿಯಾದರೂ ತಂದು ತಾನೇ ಕಲಿತು ಒಳ್ಳೆಯ ಛಾಯಾಗ್ರಾಹಕ ಹಾಗೂ ಡಿಸೈನರ್ರಾಗಿ ರೂಪಗೊಂಡರು. ಛಾಯಾಗ್ರಹಣದಲ್ಲಂತೂ ಏಕಲವ್ಯನ ಹಾಗೆ ಗುರುವಿಲ್ಲದೆ ಕಲಿತವರು. ಗುರು ದ್ರೋಣರ ಹಾಗೆ ಮಂಗಳೂರಿನ ಶ್ರೀ ಯಜ್ಞ ಆಚಾರ್ಯ ಅವರ ಚಿತ್ರಗಳನ್ನು ಮಾದರಿಯಾಗಿಟ್ಟು ಕೊಂಡವರು. ತಾನು ಓದಿದ್ದು ಡಿಪ್ಲೋಮಾ ಐಟಿಐ ಆದರೂ ಆಯ್ಕೆ ಮಾಡಿಕೊಂಡ ಕ್ಷೇತ್ರ ಛಾಯಾಗ್ರಹಣ. ಭಾವನೆಗಳನ್ನು ಸೆರೆ ಹಿಡಿಯುವ ಭಾವಾಭಿವ್ಯಂಜಕ ಚಿತ್ರ ತೆಗೆಯುವಲ್ಲಿ ಪಳಗಿದ ಅವರು ನಂತರದಲ್ಲಿ ವಿವಾಹವಾಗಿ ತನ್ನ ಹೆಂಡತಿಯ ಕರಿಯರ್ರಿಗಾಗಿ ಅಂದೇ ತನ್ನೂರನ್ನು ತ್ಯಜಿಸಿ ಬಂದು ಬದುಕು ಕಟ್ಟಿಕೊಂಡಿದ್ದು ಶಿವಮೊಗ್ಗದಲ್ಲಿ. ಆರಂಭದ ದಿನಗಳಲ್ಲಿ ಅನುಭವಿಸದ ತೊಂದರೆಗಳಿಲ್ಲ, ಪಡದ ಕಷ್ಟಗಳಿಲ್ಲ. ದಿನಗಳದಂತೆ ಊರು ಜನರು ಪರಿಚಿತರಾಗಿ ತನ್ನ ಶ್ರದ್ಧೆಯ ಕಾಯಕದಿಂದಲೇ ನಾವಿಕ ಪತ್ರಿಕೆಯ ( ಆಗ ಚಂದ್ರಕಾಂತ ಅವರ ಸಾರಥ್ಯದಲ್ಲಿ ) ಜಾಹೀರಾತು ವಿಭಾಗದ ಡಿಸೈನರ್ ಕೆಲಸ ಗಿಟ್ಟಿಸಿಕೊಂಡರು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ ಪದೋನ್ನತಿ ಹೊಂದಿ ಹೊಸದಿಗಂತ, ವಿಜಯವಾಣಿ ಅಜೇಯ ಪತ್ರಿಕೆಗಳಲ್ಲಿ ಲೇಔಟ್ ಡಿಸೈನರ್ ಆಗಿ ಕಾರ್ಯನಿರ್ವಹಿಸಿ ನಂತರ ಬಂದು ಕುಳಿತದ್ದು ರಾಯಲ್ ಕಾಫಿ ಅಂಗಡಿಯಲ್ಲಿ. ಇವುಗಳನ್ನು ಹೇಳಲು ಕಾರಣವೇನೆಂದರೆ ಆ ಮನುಷ್ಯ ಯಾವ ವಯಸ್ಸಿನಲ್ಲಿ ಆಗಲೀ ಕಲಿಯುವುದರಲ್ಲಿ ಸದಾ ಮುಂದು. ಹೊಸತೇನಿದ್ದರೂ ಕಲಿಯುವ ಛಾತಿ ಇದ್ದಿದ್ದರಿಂದಲೇ ಸಂಸ್ಕೃತ ಡಿಟಿಪಿ ಕಲಿತು (ಪತ್ನಿಯ ಸಲುವಾಗಿ) ಒಳ್ಳೆಯ ಪುಸ್ತಕ ರಚನೆಕಾರರೂ ಆದರು.

ಡಾ. ಮೈತ್ರೇಯಿ ಆದಿತ್ಯಪ್ರಸಾದ್, ಸಂಸ್ಕೃತ ಉಪನ್ಯಾಸಕರು ಪೇಸ್ ಕಾಲೇಜ್ ಶಿವಮೊಗ್ಗ.
ಅವರ ಕಾಯಕ ನಿಷ್ಠೆ ಹೇಗೆಂದರೆ ಯಾರಾದರೂ ಯಾವುದಾದರೂ ಕೆಲಸ ಹೇಳಿದರೆ ಶ್ರದ್ಧೆಯಿಂದ ಮಾಡುವವರು. ಮೆಲುದನಿ, ಮೃದು ಮಾತು, ಭಾವನೆಗಳನ್ನು ಸೆರೆಹಿಡಿಯುವ ಕ್ಯಾಂಡಿಡ್ ಫೋಟೋ ತೆಗೆಯುವುದರಲ್ಲೇ ಮಾಸ್ಟರ್ ಅವರು. ಒಂದು ಕಾಲದಲ್ಲಿ ಇವರು ಫೋಟೋ ತೆಗೆದ ಕನ್ಯೆ ಅಥವಾ ವರನಿಗೆ ಬೇಗ ಮದುವೆ ಗೊತ್ತಾಗುತ್ತಿತ್ತಂತೆ! ಇತ್ತೀಚಿನ ದಿನಗಳಲ್ಲಂತೂ ಅವರು ತೆಗೆದ ಫೋಟೋ ಅನೇಕರ ವಾಟ್ಸಾಪ್ ಡಿಪಿಗಳಲ್ಲಿ ರಾರಾಜಿಸುತ್ತಿದೆ. ಯಾರೇ ಆಗಲಿ ಎಷ್ಟು ಹೊತ್ತಿಗೆ ಆಗಿರಲಿ ಸಹಾಯ ಕೇಳಿದರೆ ಇಲ್ಲವೆನ್ನದ ವ್ಯಕ್ತಿ. ಪ್ರತಿಯೊಬ್ಬರಿಗಾಗಿಯೂ ಮರುಗುವ ಜೀವ. ಅನೇಕ ಅದ್ಭುತ ಸನ್ನಿವೇಶಗಳನ್ನು ಸೆರೆಹಿಡಿದ ಅವರು, ಬಹುಪಾಲು ಹಣ ತೆಗೆದುಕೊಳ್ಳದೇ ಫೋಟೋಗಳನ್ನು ಉಚಿತವಾಗಿ ನೀಡಿದ ಮಹಾನುಭಾವ.
ಬದುಕಿನ ಸುಂದರ ಕ್ಷಣಗಳನ್ನು ತಮ್ಮ ಕ್ಯಾಮೆರಾದ ಮೂಲಕ ಸೆರೆಹಿಡಿದು ಅದನ್ನು ಶಾಶ್ವತವಾಗಿ ಉಳಿಸುವಂತೆ ಮಾಡುವಲ್ಲಿ ಆದಿತ್ಯ ಪ್ರಸಾದ್ ಅವರದು ಬಹುಪಾಲು ಕೊಡುಗೆ ಇರುತ್ತದೆ. ತಮ್ಮ ಬಳಿ ಕ್ಯಾಮರಾ ಇಲ್ಲದ ಸಮಯದಲ್ಲಿ ಎಲ್ಲರೂ ಡಿಜಿಟಲ್ ಕ್ಯಾಮೆರಾ ಬಳಸುತ್ತಿರುವಾಗ ಇವರು ಎಲ್ಲಿಂದಲೋ ಒಂದು ರೋಲ್ ಕ್ಯಾಮೆರಾ ತಂದು ಪತ್ನಿಯ ಎಂಎ ಪದವಿಯಲ್ಲಿ ರಾಂಕ್ ಪಡೆದ ಕ್ಷಣಗಳನ್ನು ಸೆರೆಹಿಡಿದದ್ದು ಎಂದು ಮರೆಯಲಾಗದ ಘಟನೆ. ಏಕೆಂದರೆ ಎಲ್ಲರೂ ಡಿಜಿಟಲ್ ಕ್ಯಾಮೆರಾ ಕೈಯಲ್ಲಿ ಹಿಡಿದಿದ್ದಾಗ ತಾವು ತೆಗೆಯುವ ಕ್ಷಣವೇ ಟಾಸ್ಕ್ ಆದಂತಿರುವ ಆ ಸಮಯದಲ್ಲಿ ಅಂದರೆ ಚಿತ್ರ ಹೇಗೆ ಬಂದಿದೆ ಎಂದು ತಕ್ಷಣ ನೋಡಲು ಸಾಧ್ಯವಾಗದ್ದು ರೋಲ್ ಕ್ಯಾಮೆರಾ, ಅದು ವಾಶ್ ಆಗಿ ಬಂದಾಗಲೇ ಹೇಗಿದೆ ಎಂದು ತಿಳಿಯುವ ಹೊತ್ತಿನಲ್ಲೂ ಒಂದೇ ಕ್ಲಿಕ್ನಲ್ಲಿ ಅದ್ಭುತ ಛಾಯಾಚಿತ್ರ ಸೆರೆ ಹಿಡಿದ ಹೆಗ್ಗಳಿಕೆ ಅವರದು. ಈ ಘಟನೆ ಅವರ ಛಾಯಾಗ್ರಹಣದಲ್ಲಿ ಪರ್ಫೆಕ್ಟ್ ನೆಸ್ ತೋರಿಸುತ್ತದೆ. ನನ್ನ ಗೆಳತಿ ಚೇತನಾ ಮಾಲತೇಶ್ ಹೇಳುವಂತೆ ಆದಿತ್ಯ ಅವರು ತೆಗೆದ ಫೋಟೋಗಳು ಆ ಕ್ಷಣಗಳನ್ನು ಹಸಿರಾಗಿಸುತ್ತವೆ, ಅದೊಂಥರಾ ಹೇಗೆಂದರೆ ತೆಗೆದ ಫೋಟೋ ಕೇವಲ ದೃಶ್ಯಗಳಾಗಿರದೆ ಹೃದಯದ ಕಥೆಗಳನ್ನು ಹೇಳುವಂತಿರುತ್ತದೆ. ಇಂತಹ ವ್ಯಕ್ತಿ ನಮ್ಮ ನಡುವೆ ಇರುವ ಸಜ್ಜನ.
Klive Special Article ಚಾರಣಪ್ರಿಯ, ಕವಿ, ಸಹೃದಯಿ, ಲೇಖಕ, ಪ್ರವಾಸಗಳೆಂದರೆ ಸದಾ ಮುಂದಿರುವ ಆದಿತ್ಯ ತನ್ನ ಬದುಕು ಕಟ್ಟಿಕೊಳ್ಳಬೇಕಾದರೆ ಎಲ್ಲ ಹೊತ್ತಿನಲ್ಲೂ ಎಲ್ಲದಕ್ಕೂ ತೆರೆದ ಮನಸ್ಸು ಮತ್ತು ಹೃದಯ. ಪತ್ನಿಗಾಗಿ ಸಂಸ್ಕೃತ ಕಲಿತರು, ಓದು…ಬರವಣಿಗೆಯನ್ನು ಕಲಿಸಿತು. ಹೀಗೆ ಯಾವುದೇ ಹೊಸತುಗಳಿಗೆ ಸದಾ ತನ್ನನ್ನು ತಾನು ಹರ್ಷದಿಂದಲೇ ತೆರೆದುಕೊಳ್ಳುವ ಸಜ್ಜನ. ಯಾರನ್ನು ದ್ವೇಷಿಸದ, ಯಾರಲ್ಲಿಯೂ ದ್ವೇಷ ಕಟ್ಟಿಕೊಳ್ಳದ ಅಜಾತಶತ್ರು. ಎಲ್ಲರನ್ನೂ ಸೆಳೆಯುವ ಆಕರ್ಷಕ ವ್ಯಕ್ತಿತ್ವ. ತನ್ನ ಸಜ್ಜನಿಕೆಯಿಂದಲೇ ಎಲ್ಲರಿಗೂ ಪರಿಚಿತನಾದ ವ್ಯಕ್ತಿ. ಒಳ್ಳೆಯ ಡಿಸೈನರ್, ಉತ್ತಮ ಬರಹಗಾರ. ಉಡುಗೊರೆಯ ಸಲುವಾಗಿ ವಿಶಿಷ್ಟ ಮಾದರಿಯ ಕವನಗಳನ್ನು ಬರೆದು ಎಲ್ಲರ ಗಮನ ಸೆಳೆದವ. ತಮ್ಮ ಚಾರಣದ ಅನುಭವಗಳನ್ನು ಬಹು ಸುಂದರವಾಗಿ ಕಥನಗಳಿಂದ ಚಿತ್ರಗಳಿಂದ ಕೂಡಿದ ಪುಸ್ತಕ ಮಾಡಿದವ. ( ಬಿಡುಗಡೆಗೆ ಇನ್ನೂ ಅವಕಾಶ ದೊರೆತಿಲ್ಲ ) ನೋವಿಗೆ ಸ್ಪಂದಿಸುವ, ನಲಿವಿಗೆ ಜೊತೆ ಇರುವವ, ಕಷ್ಟದಲ್ಲಿ ಕೈ ಬಿಡದವ, ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದು ಬೆರೆತು ಹೋದವ ಬೇರಾರು ಅಲ್ಲ ನನ್ನ ಪತಿದೇವ. ನನ್ನ ಬದುಕಿನಲ್ಲಿ ಹೇಗೆ ತಂದೆಯ ಪಾತ್ರ ಬಹು ಹಿರಿದೋ ಹಾಗೆಯೇ ಮನೆಯವರದ್ದು ಸಹ. ನನ್ನ ಬದುಕಿನ ಯಶಸ್ಸಿನ ಹಿಂದೆ ಗಟ್ಟಿಯಾಗಿ ನೆಲೆ ನಿಂತವ, ನನ್ನೆಲ್ಲಾ ಲೇಖನಗಳ ಮೊದಲ ಓದುಗ. ಯಾರ ಬಳಿಯೂ ಯಾವ ಮಾತನ್ನು ಹೇಳಿಸಿಕೊಳ್ಳದ ವ್ಯಕ್ತಿ. ಅವರಿರುವ ರೀತಿಯೇ ಉಳಿದವರ ಬದುಕಿಗೊಂದು ಪ್ರೇರಣೆಯಾಗಬಹುದೇನೋ ಅನ್ನುವ ಕಾರಣದಿಂದಲೇ ಈ ಲೇಖನ ಬರೆದದ್ದು. ಅವರ ಎಲ್ಲ ಕನಸುಗಳು ನನಸಾಗಲಿ ಇನ್ನಷ್ಟು ಜನರಿಗೆ ಸಂತಸವನ್ನು ಅವರ ಛಾಯಾಗ್ರಹಣದ ಮೂಲಕ ಹಂಚಿ ಎಂದು ಹೇಳುತ್ತಾ ಛಾಯಾಗ್ರಹಣದ ದಿನದ ಈ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತಾ ಈ ಲೇಖನವನ್ನು ಅವರಿಗೆ ಅರ್ಪಿಸುತ್ತಿದ್ದೇನೆ.
