Saturday, December 6, 2025
Saturday, December 6, 2025

Klive Special Article ನಾಟ್ಯಾಭ್ಯಾಸದ ಸಾಕಾರ. ಕು.ಯಶಸ್ವಿನಿ.ಕೆ.ವಿ.ಆಚಾರ್ . ಪ್ರತಿಭಾ’ರಂಗಪ್ರವೇಶ’

Date:

ಪರಿಚಯ ಲೇಖನ:
ಡಾ.ಹೆಚ್.ಬಿ.ಮಂಜುನಾಥ್. ದಾವಣಗೆರೆ.

Klive Special Article ‘ಸಂಗೀತ ಕಲೆಯೊಂದು, ಸಾಹಿತ್ಯ ಕಲೆಯೊಂದು, ಅಂಗಾಂಗಭಾವ ರೂಪಣದ ಕಲೆಯೊಂದು, ಸಂಗೊಳಿಸಲೀ ಕಲೆಗಳನುನಯವು ಚರ್ಯೆಯಲಿ, ಮಂಗಳೋನ್ನತ ಕಲೆಯೊ ಮಂಕುತಿಮ್ಮ’ ಎಂದು ಡಿವಿಜಿಯವರ ಕಗ್ಗದಲ್ಲಿ ಹೇಳಲಾಗಿದೆ. ಇಂತಹ ಅಂಗಾಂಗ ಭಾವ ರೂಪಣದ ಮಂಗಳೋನ್ನತ ಕಲೆಯಾದ ಭಾರತೀಯ ಶಾಸ್ತ್ರೀಯ ಭರತನಾಟ್ಯದ ಸುಧೀರ್ಘ ಶಿಕ್ಷಣ ಹಾಗೂ ತಪಸ್ಸಿನ ಸಾಕಾರವಾಗಿ ಏರ್ಪಾಡಾಗುವ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಕೇವಲ ಪ್ರದರ್ಶನವಾಗಿರದೆ ಒಂದು ರೀತಿಯ ಸತ್ವ ಪರೀಕ್ಷೆ ಯಾಗಿರುತ್ತದೆ.

ಪ್ರದರ್ಶನದಲ್ಲಿ ಪ್ರೇಕ್ಷಕರನ್ನು ಮೆಚ್ಚಿಸಿದರೆ ಸಾಕು ಆದರೆ ರಂಗಪ್ರವೇಶದಲ್ಲಿ ಪಂಡಿತರು ಮತ್ತು ವಿಮರ್ಶಕರು ಸಹಾ “ಸೈ” ಎನ್ನಬೇಕು. ನೃತ್ಯ ಪ್ರದರ್ಶನಕ್ಕಾದರೆ ಕೇವಲ ಅಭ್ಯಾಸ ಸಾಕು ಆದರೆ ರಂಗಪ್ರವೇಶಕ್ಕೆ ಅಭ್ಯಾಸದೊಂದಿಗೆ ಕುಶಲತೆಯೂ ಬೇಕು. ಪ್ರದರ್ಶನ ಎಂದರೆ ಗುರುಗಳು ಹೇಳಿ ಕಲಿಸಿಕೊಟ್ಟದ್ದನ್ನು ವಿನಯ ಪೂರ್ವಕವಾಗಿ ಒಪ್ಪಿಸುವುದು ಆದರೆ ರಂಗಪ್ರವೇಶದ ‘ಕುಶಲತೆ’ ಎಂದರೆ ಗುರುಗಳಿಂದ ಕಲಿತುಕೊಂಡುದುದರ ಆಧಾರದ ಮೇಲೆ ಶಿಷ್ಯರು ತಮ್ಮ ಸ್ವಂತ ವ್ಯಕ್ತಿತ್ವವನ್ನು ಬೀರಿ ಕಲೆಯನ್ನು ಅಭಿವೃದ್ಧಿ ಮಾಡಿಕೊಂಡು ತೋರಿಸುವುದಾಗಿರುತ್ತದೆ, ಇದನ್ನು ಕೌಶಲ್ಯ ಎನ್ನಲಾಗುತ್ತದೆ. ಇದು ಅಲ್ಪ ಕಾಲದಲ್ಲಿ ಸಿದ್ಧಿಸುವುದಲ್ಲ ಕನಿಷ್ಠ ಹತ್ತರಿಂದ ಹದಿನೈದು ವರ್ಷಗಳ ಕಾಲ ನಿರಂತರವಾಗಿ ತಪಸ್ಸಿನಂತೆ ಅಭ್ಯಾಸ ಮಾಡಬೇಕು. ಇದಕ್ಕಾಗಿ ಕಲಿಸುವ ಗುರುಗಳಲ್ಲಿ ತಾಳ್ಮೆ ಬೇಕು, ಕಲಿಯುವ ಶಿಷ್ಯರಲ್ಲಿ ಜಾಣ್ಮೆಯೂ ಬೇಕು.

ನೃತ್ಯ ಕಲೆಯು ಪ್ರಪಂಚದಾದ್ಯಂತ ಎಲ್ಲ ದೇಶಗಳಲ್ಲೂ ಇದೆಯಾದರೂ ಭಾರತೀಯವಾದ ಶಾಸ್ತ್ರೀಯ ನೃತ್ಯ ಕಲೆಗೆ ವಿಶ್ವದಲ್ಲಿಯೇ ಪುರಾತನವಾದ ಇತಿಹಾಸ ಹಾಗೂ ಪಾವಿತ್ರ್ಯತೆಯು ಸಹಾ ಇದೆ. ಭರತನಾಟ್ಯವು ಮನುಷ್ಯ ಸೃಷ್ಟಿಯಾಗಿರದೆ ದೈವ ಸೃಷ್ಟಿಯಾಗಿದೆ. Klive Special Article ದೇವತೆಗಳು ಮತ್ತು ಋಷಿಗಳು ಬ್ರಹ್ಮನ ಬಳಿಗೆ ಹೋಗಿ “ಎಲ್ಲರೂ ಕಲಿತು ನಲಿಯಬಹುದಾದ ಆನಂದ ದಾಯಕ ಕಲೆಯೊಂದನ್ನು ಸೃಷ್ಟಿಸಿ ಕೊಡು” ಎಂದು ಕೇಳಿದಾಗ “ಧರ್ಮ ಮರ್ಥಂ ಯಶಃಕಿಂತ್ಯ ಯೋಪದೇಶಂ ಸಂಗ್ರಹಂ, ಭವಿಷ್ಯತಶ್ಚ ಲೋಕಸ್ಯ ಸರ್ವಕರ್ಮಾನುದರ್ಶಕಂ, ಸರ್ವ ಅರ್ಥಶಾಸ್ತ್ರಾರ್ಥ ಸಂಪನ್ನಂ ಶಿಲ್ಪ ಪ್ರವರ್ತಕಂ, ನಾಟ್ಯಾಕಮ್ ಪಂಚಮಂ ವೇದಂ ಸ್ಯೇತಿಹಾಸಂ ಕರೋಮ್ಯಹಂ” ಅಂದರೆ “ಧರ್ಮ ಅರ್ಥ ಕೀರ್ತಿ ಉಪದೇಶ ಸರ್ವಶಾಸ್ತ್ರಗಳ ಸಂಪನ್ನತೆ ಸರ್ವ ಕಲೆಗಳ ಸೊಬಗು ಹಾಗೂ ಬೋಧನೀಯವೂ ರಂಜನೀಯವೂ ಆದ ನೃತ್ಯ ಗೀತೆಗಳ ಇತಿಹಾಸ ವಾಗುವಂಥದ್ದನ್ನು ವೇದಗಳಿಂದ ಹೊಸೆದು ಸೃಷ್ಟಿಸುವೆ” ಎಂದು ಹೇಳಿ “ಋಗ್ವೇದಾತ್ ಸಾಮೇಭ್ಯೋ ಗೀತಮೇವಚ, ಯಜುರ್ವೇದಾತ್ ಅಭಿನಯಂ, ರಸಾನಾಂ ಅಥರ್ವಣಾದಪಿ” ಅಂದರೆ ಋಗ್ ವೇದ ಮತ್ತು ಸಾಮವೇದಗಳಿಂದ ಗೀತವನ್ನು, ಯಜುರ್ವೇದದಿಂದ ಅಭಿನಯವನ್ನು, ಅಥರ್ವಣ ವೇದದಿಂದ ನವ ರಸಗಳನ್ನು ಪಡೆದು ನಾಟ್ಯ ವೇದವನ್ನು ಸೃಷ್ಟಿಸಿಕೊಟ್ಟ. ಇದಕ್ಕೆ ಶಿವನು ‘ಕರಣ’ಗಳನ್ನು ಸೇರಿಸಿದರೆ, ವಿಷ್ಣುವು ‘ವೃತ್ತಿ’ಗಳನ್ನು ಕೊಟ್ಟ. ಹೀಗಾಗಿ ಭರತನಾಟ್ಯವು ಹರಿ ಹರ ಬ್ರಹ್ಮಾದಿಗಳ ವರಪ್ರಸಾದವೆಂಬ ಪವಿತ್ರ ಭಾವನೆಯೂ ಇದೆ. ಇದನ್ನು ಭರತಮುನಿ ತನ್ನ ಮಕ್ಕಳ ಮೂಲಕ ಭರತನಾಟ್ಯವಾಗಿ ಸುಮಾರು 36,000 ಶ್ಲೋಕಗಳ ರೂಪದಲ್ಲಿ ಭೂಲೋಕಕ್ಕೆ ತಂದುಕೊಟ್ಟ ಎಂದು ಹೇಳಲಾಗುತ್ತದೆ. ಆದರೆ ಅದು ನಂತರ ದ್ವಾದಶ ಸಹಸ್ರಿ ಅಂದರೆ 12,000 ಶ್ಲೋಕಗಳ ಗ್ರಂಥವಾಯಿತು ಎನ್ನಲಾಗುತ್ತಿದ್ದು ನಮಗೀಗ ಲಭ್ಯವಿರುವುದು 6,000 ಶ್ಲೋಕಗಳ ಷಟ್ ಸಹಸ್ರಿ ನಾಟ್ಯಶಾಸ್ತ್ರವಾಗಿ ಮಾತ್ರ. ಇದನ್ನು ಅಭಿನವಗುಪ್ತನು 36 ಅಧ್ಯಾಯಗಳಾಗಿ ವ್ಯಾಖ್ಯಾನಿಸಿದ್ದಾನೆ. ಇದರೊಂದಿಗೆ ನಂದಿಕೇಶ್ವರನ ‘ಅಭಿನಯ ದರ್ಪಣ’, ‘ಭರತಾರ್ಣವ’, ‘ಭರತಾರ್ಥ ಚಂದ್ರಿಕಾ’, ‘ವಿಷ್ಣು ಧರ್ಮೋತ್ತರ’, ಸಾರಂಗ ದೇವನ ‘ಸಂಗೀತ ರತ್ನಾಕರ’, ‘ಹಸ್ತಲಕ್ಷಣ ದೀಪಿಕಾ’, ಅಭಿನವ ಗುಪ್ತನ ‘ಧ್ವನ್ಯಾಲೋಕ’, ಧನಂಜಯನ ‘ದಶರೂಪಕ’ ಮುಂತಾದ ಗ್ರಂಥಗಳು ಪ್ರಸ್ತುತ ಭರತನಾಟ್ಯಕ್ಕೆ ಆಧಾರವಾಗಿವೆ. “ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮುಚ್ಛತೆ” ಎಂಬಂತೆ ಭರತನಾಟ್ಯದಲ್ಲಿ ನೃತ್ಯದೊಂದಿಗೆ ಗಾಯನ ಮತ್ತು ವಾದ್ಯಗಳು ಸಹಾ ಮೇಳಯಿಸುತ್ತದೆ. ಯೋಗವು ‘ಚಿತ್ತವೃತ್ತಿ ನಿರೋಧ’ವಾದರೆ ನೃತ್ಯವು ‘ಚಿತ್ತ ವೃತ್ತಿ ವಿಲಾಸ’ ಎಂಬುದಾಗಿಯೂ ಪ್ರಾಜ್ಞರು ಹೇಳುತ್ತಾರೆ.

ಇಂತಹ ಭರತನಾಟ್ಯದ ಶ್ರೇಷ್ಠ ಗುರುಗಳಲ್ಲಿ ಒಬ್ಬರಾದ ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತರ ಶಿಷ್ಯೆಯಾಗಿ ದಶಕಗಳ ಕಾಲ ಸುಧೀರ್ಘ ತಾಲೀಮನ್ನು ಪಡೆದಿರುವ ದಾವಣಗೆರೆಯ ಕು. ಯಶಸ್ವಿನಿ ಕೆ ವಿ ಆಚಾರ್ ನಗರದ ಬಾಪೂಜಿ ಸಭಾಂಗಣದಲ್ಲಿ ರಂಗಪ್ರವೇಶ ನೆರವೇರಿಸಲಿದ್ದು ಆರಂಭದಲ್ಲಿ ಜೋಗ್ ರಾಗ ರೂಪಕ ತಾಳದಲ್ಲಿ ‘ಪುಷ್ಪಾಂಜಲಿ’ ನೃತ್ಯವನ್ನು ನಂತರ ಅದೇ ರಾಗ ಆದಿತಾಳದಲ್ಲಿ ‘ಗಣೇಶ ಸ್ತುತಿ’ ನೃತ್ಯವನ್ನು ಪ್ರಸ್ತುತಪಡಿಸಿ ಆಮೇಲೆ ಕಷ್ಟ ತರವಾದ ಕಾಲು ಚಲನೆ ಮತ್ತು ತಾಳ ವೈಚಿತ್ರ್ಯಗಳಿಂದ ಕುಣಿಯುತ್ತ ಕೊನೆಗೊಂದು ತೀರ್ಮಾನವನ್ನು ಸ್ವರದ ಮೊದಲ ಮಾತ್ರೆಯೊಂದಿಗೆ ಕೊಡುವ ‘ಜತಿಸ್ವರ’ವನ್ನು ಭಾಗ್ಯಶ್ರೀ ರಾಗ ಹಾಗೂ ಆದಿತಾಳದಲ್ಲಿ ಪ್ರಸ್ತುತಪಡಿಸಲಿದ್ದಾಳೆ. ತದನಂತರ ಹಾಡಿನ ಶಬ್ದಗಳ ವರ್ಣನೆಗಳನ್ನು ಹಲವು ಸಂಚಾರಿ ಭಾವಗಳಿಂದ ಅಭಿನಯಿಸಲು ಅವಕಾಶವಿರುವ ತುಸು ಮಂದಗತಿಯಲ್ಲಿ ಸಾಗುವ ‘ಶಬ್ದಂ’ ನೃತ್ಯವನ್ನು ರಾಗ ಮಾಲಿಕೆ ಮಿಶ್ರಛಾಪು ತಾಳದಲ್ಲಿ ನೀಡಿದ ಮೇಲೆ ಸಂಪ್ರದಾಯದಂತೆ ವಿಷಮ ಅಡವು ಜೋಡಣೆ ಗಳೊಂದಿಗೆ ಭಾವ ರಾಗ ತಾಳಗಳಿಂದ ಕೂಡಿ ಪೂರ್ಣಾನಂದವನ್ನು ಕೊಡುವ ಶೃಂಗಾರಭಾವ ಪ್ರಮುಖವಾದ ‘ಪದವರ್ಣ’ ನೃತ್ಯವನ್ನು ಸಿಂಹೇಂದ್ರ ಮಧ್ಯಮ ರಾಗ ಆದಿತಾಳದಲ್ಲಿ, ‘ಪದಂ’ ನೃತ್ಯವನ್ನು ಗುರ್ಜರಿ ತೋಡಿ ರಾಗ ಮಿಶ್ರಛಾಪು ತಾಳದಲ್ಲಿ ನೀಡಲಿದ್ದು ಮುಂದುವರಿಸುತ್ತಾ ಬಿಲಹರಿ ರಾಗ ಆದಿತಾಳದಲ್ಲಿ ‘ಕೃತಿ’ಯನ್ನೂ, ಕಾಮವರ್ಧನಿ ರಾಗ ಏಕತಾಳದಲ್ಲಿ, ‘ಅಷ್ಟಪದಿ’ಯನ್ನೂ, ರತಿಪತಿ ಪ್ರಿಯ ರಾಗ ತ್ರಿಶ್ರಗತಿ ಏಕತಾಳದಲ್ಲಿ ‘ದೇವರನಾಮ’ ನೃತ್ಯಗಳ ನಂತರ ಭರತನಾಟ್ಯ ಪ್ರಸ್ತುತಿಯ ಕೊನೆಯ ಭಾಗವಾಗಿ ನೃತ್ಯಗಾರರ ತಾಳಜ್ಞಾನ ಹಾಗೂ ಪ್ರಜ್ಞಾಶಕ್ತಿಯ ಸಾಕ್ಷಿಯಾಗಿ ಆಕರ್ಷಕವಾದ ಭಂಗಿಗಳು ತಾಳವೇಗ ಅಡುವುಗಳ ವೈವಿಧ್ಯವುಳ್ಳ ತುಂಬಾ ಪ್ರೇಕ್ಷಣೀಯವಾದ ‘ತಿಲ್ಲಾನ’ವು ದೇಶ ರಾಗ ಆದಿತಾಳದೊಂದಿಗೆ ರಂಗ ಪ್ರವೇಶ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಜತಿಗಳ ರಚನೆಯನ್ನು ವಿದ್ವಾನ್ ವಿಶ್ವಂಭರ ಭಾಗವತರು ಮಾಡಿದ್ದರೆ ನಟುವಾಂಗವನ್ನು ಗುರು ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತ್, ಹಾಡುಗಾರಿಕೆ ಗುರುವಿದ್ವಾನ್ ರಾಜಗೋಪಾಲ ಭಾಗವತ್, ಮೃದಂಗವಾದನ ಮೈಸೂರಿನ ವಿದ್ವಾನ್ ಎಮ್ ಜೆ ಕಿರಣ್ ಕುಮಾರ್, ಕೊಳಲು ವಾದನ ಶ್ರೀರಂಗಪಟ್ಟಣದ ವಿದ್ವಾನ್ ಎಂ ಆರ್ ರಾಜೇಶ್, ಪಿಟೀಲು ವಾದನವನ್ನು ಮೈಸೂರಿನ ವಿದ್ವಾನ್ ಶ್ರೀಕಾಂತ್ ನೀಡಲಿದ್ದು ಕಾರ್ಯಕ್ರಮದ ನಿರೂಪಣೆಯನ್ನು ವಿದ್ವಾನ್ ವಿಶ್ವಂಭರ ಭಾಗವತ್ ಹಾಗೂ ಶ್ರೀಕಾಂತ್ ಭಟ್ ಮಾಡಲಿದ್ದಾರೆ. ರಂಗಪ್ರವೇಶದಲ್ಲಿ ನರ್ತಿಸುವ ಎಲ್ಲಾ ನೃತ್ಯ ಬಂಧಗಳ ಸಾಹಿತ್ಯ ರಚನೆ (ಜಯದೇವ ಕವಿಯ ಅಷ್ಟಪದಿಯನ್ನು ಹೊರತುಪಡಿಸಿ) ಸಂಗೀತ ಸಂಯೋಜನೆಯನ್ನು ವಿದ್ವಾನ್ ಶ್ರೀ ರಾಜಗೋಪಾಲ ಭಾಗವತರು ಮಾಡಿದ್ದಾರೆ. ನೃತ್ಯ ಸಂಯೋಜನೆ ಪರಿಕಲ್ಪನೆಯನ್ನು ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತರು ಮಾಡಿರುತ್ತಾರೆ.

-ನೃತ್ಯ ಗುರುಗಳ ಬಗ್ಗೆ-

ಭರತನಾಟ್ಯವನ್ನು ಹೇಳಿಕೊಡುವುದು ವಿಶೇಷವಲ್ಲ ಆದರೆ ರಂಗಪ್ರವೇಶದ ಮಟ್ಟದವರೆಗೆ ವಿದ್ಯಾರ್ಥಿಗಳನ್ನು ಕೊಂಡೊಯ್ಯುವುದು ಸಾಮಾನ್ಯ ಸಾಧನೆಯಲ್ಲ. ಬೆಂಗಳೂರು ಮೈಸೂರುಗಳಂತಹ ನಗರಗಳಲ್ಲಿ ಮಾತ್ರ ಇಂತಹ ಕೇಂದ್ರಗಳಿವೆ ಎಂದು ಭಾವಿಸುವ ಕಾಲವಿತ್ತು, ಆದರೆ ದಾವಣಗೆರೆಯಲ್ಲಿ ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾ ಶಾಲೆ ಈ ಸಾಧನೆಯನ್ನು ನಿರಂತರ ಮಾಡುತ್ತಿದ್ದು ಈಗಾಗಲೇ ವಿದುಷಿಯರಾದ ಶ್ರೀಮತಿ ನಯನ ಪ್ರಶಾಂತ್, ಶ್ರೀಮತಿ ನಂದನ, ಶ್ರೀಮತಿ ಡಾ. ಸಂಸ್ಕೃತಿ, ಶ್ರೀಮತಿ ಸಹನಾ, ಶ್ರೀಮತಿ ಡಾ. ಸುನಿಧೀ ಘಟೀಕರ್ ಈಗಾಗಲೇ ರಂಗಪ್ರವೇಶ ಮಾಡಿದ್ದು ಈಗ ಡಾ. ಯಶಸ್ವಿನಿ ರಂಗಪ್ರವೇಶ ಮಾಡುತ್ತಿರುವುದು ದಾಖಲೆ ಎನ್ನಬಹುದು. ಉಭಯ ಗಾನವಿದ್ವಾನ್ ಶ್ರೀ ರಾಜಗೋಪಾಲ ಭಾಗವತ್ ಹಾಗೂ ರುಕ್ಮಿಣಿ ದೇವಿ ಅರುಂಡೇಲ್ ಭರತನಾಟ್ಯ ಶೈಲಿಯ ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತ್ ಸಾಧಕ ದಂಪತಿಗಳ ಶಿಷ್ಯತ್ವದಲ್ಲಿ ಈ ದಾಖಲೆಯ ಭರತನಾಟ್ಯ ರಂಗ ಪ್ರವೇಶಗಳು ನಗರಕ್ಕೆ ಸಾಂಸ್ಕೃತಿಕ ಹೆಮ್ಮೆಯಾಗಿದೆ.

-ಕು.ಯಶಸ್ವಿನಿಯ ಬಗ್ಗೆ-

ಕಲೋಪಾಸಕರ ಕುಟುಂಬದಿಂದಲೇ ಬಂದಿರುವ ಯಶಸ್ವಿನಿಯು ಕುಶಲಕರ್ಮಿ ವಿಶ್ವನಾಥಾಚಾರ್ ಹಾಗೂ ಸಂಗೀತಜ್ಞೆ ಪುಷ್ಪಲತಾ ರವರ ಸುಪುತ್ರಿಯಾಗಿದ್ದು ತನ್ನ ಐದನೇ ವಯಸ್ಸಿನಿಂದಲೇ ಭರತನಾಟ್ಯ ಶಿಕ್ಷಣವನ್ನು ಆರಂಭಿಸಿಕೊಂಡು 2018ರಲ್ಲಿ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಪುರಸ್ಕಾರ ಗಳಿಸಿ ಕಳೆದೆರಡು ವರ್ಷಗಳಿಂದ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಭರತನಾಟ್ಯ ಜೂನಿಯರ್,ಸೀನಿಯರ್, ವಿದ್ವತ್ ಪರೀಕ್ಷೆಗಳ ಪರೀಕ್ಷಕರಾಗಿ ಸೇವೆ ಸಲ್ಲಿಸುತ್ತಾ ನಾಡಿನ ವಿವಿಧ ಕಡೆಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡುವುದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಲಾದ ಯುವಸೌರಭ ಕಾರ್ಯಕ್ರಮ, ಮೈಸೂರಿನ ದಸರಾ ಮಹೋತ್ಸವ, ಲಕ್ಷ್ಮೇಶ್ವರದ ನೃತ್ಯ ಕಾರ್ಯಕ್ರಮ, ನವರಾತ್ರಿ ಸಂಭ್ರಮ ಸಮಾರಂಭಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ವಿಶೇಷ ಮೆಚ್ಚುಗೆ ಗಳಿಸಿದ್ದು ಜೊತೆಯಲ್ಲಿ ಶಿಕ್ಷಣದಲ್ಲೂ ಸಹಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿ ಸರ್ಕಾರದ ವೈದ್ಯಕೀಯ ಸೀಟುಗಳಿಸಿಕೊಂಡು ನಗರದ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಪ್ರಸ್ತುತ ಅಧ್ಯಯನ ಮಾಡುತ್ತಿದ್ದಾರೆ. 2024ರ ‘ಮಿಸ್ ಮಂಗಳೂರು’ ಹಾಗೂ ‘ಮಿಸ್ ದಿವಾ’ ಪ್ರಶಸ್ತಿ ಗಳಿಸಿರುವ ಯಶಸ್ವಿನಿ ಸ್ವಯಂ ರೂಪದರ್ಶಿನಿ ಅಂದರೆ ಫ್ಯಾಶನ್ ಮಾಡೆಲ್ ಆಗಿ ಅನೇಕ ಪ್ರಸಿದ್ಧ ಬ್ರಾಂಡ್ ಗಳಿಗೆ ಆಡ್ ಮಾಡುತ್ತಿದ್ದಾರೆ. ಇಂದು ದಿನಾಂಕ 10.08.2025ರ ಭಾನುವಾರ ಸಂಜೆ 4 ಗಂಟೆಗೆ ಬಾಪೂಜಿ ಸಭಾಂಗಣದಲ್ಲಿ ಇವರ ರಂಗ ಪ್ರವೇಶ ಏರ್ಪಾಡಾಗಿದ್ದು ಎಲ್ಲಾ ಕಲಾಸಕ್ತರಿಗೂ ಮುಕ್ತ ಪ್ರವೇಶವಿದೆ.

-ವಿಶೇಷ ಲೇಖನ: ಡಾ. ಎಚ್ ಬಿ ಮಂಜುನಾಥ, ಹಿರಿಯ ಪತ್ರಕರ್ತರು-

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...