Klive Special Article ಕೆಳದಿ ಸಾಮ್ರಾಜ್ಯ ಎಂದರೆ ಮಲೆನಾಡಿನ ಆತ್ಮ, ಕೆಳದಿಯೆಂದರೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಸಮ್ಮಿಳತವಾದ ರಸಾಯನ, ಈ ಸಾಮ್ರಾಜ್ಯದ ಲ್ಲಿ ಏನಿತ್ತು ಎಂದು ಕೇಳುವುದರ ಬದಲು ಏನಿರಲಿಲ್ಲ ಎಂದು ಯೋಚಿಸುವ ಹಾಗೆ ಮಾಡುತ್ತದೆ. ಕಲೆಗಾರರು, ಕವಿಗಳು, ಸಾಹಿತ್ಯಗಳ ಸುಗ್ಗಿಯ ತವರೂರು, ಯುದ್ಧ ಎಷ್ಟೋ ನಡೆದವು, ಆದರೆ ಅಶಾಂತಿ ತಲೆದೋರಿದ ಪ್ರಸಂಗಗಳೇ ಇಲ್ಲ. ಕೆಳದಿ ಸಾಮ್ರಾಜ್ಯದ ಮಲೆನಾಡಿನ ಜನ ಸಮೃದ್ಧರಾಗಿದ್ದರು, ತಾವೂ ಸಮೃದ್ದರಾಗಿ ಇತರರಿಗೂ ಸಂತೋಷದಿಂದ ಅತಿಥಿ ದೇವೋಭವ ಎಂದು ಹಂಚಿದವರು. ಇದು ಮಲೆನಾಡಿನ ಶತ,ಶತಮಾನದಿಂದಲೂ ನಡೆದು ಬಂದ ಸಂಸ್ಕಾರ, ಸಂಸ್ಕೃತಿಗಳ ಪ್ರಭಾವ. ಕೆಳದಿಯ ಮಲ್ಲರು, ಮಲೆನಾಡಿಗರ ಮಾತು, ವಿನೋದಗಳು, ನೃತ್ಯ, ಸಂಗೀತ, ನಾಟಕ, ಯಕ್ಷಗಾನ, ನಂದಿಕೋಲು, ಗೊಂಬೆಯಾಟ, ದೊಂಬರಾಟ, ಮಾಯಾ ಜಾಲ, ಕಣ್ಕಟ್ಟು ವಿದ್ಯೆಗಳು, ಧರ್ಮರಾಯನ ಕರಗ ಉತ್ಸವಗಳು, ಜಾತ್ರೆಗಳು, ಎಲ್ಲವೂ ಕೆಳದಿ ಸಾಮ್ರಾಜ್ಯದ, ಅಪ್ಪಟ ಮಲೆನಾಡಿನ ಸೊಗಡು.
ಕೆಳದಿಯ ಹಿರಿಯ ವೆಂಕಟಪ್ಪ ನಾಯಕರು (ಕ್ರಿ.ಶ. 1563-1629) ಇಕ್ಕೇರಿ ಯ ಅರಮನೆಯಲ್ಲಿ ನಾಟಕ ಶಾಲೆಯೊಂದನ್ನು ಕಟ್ಟಿಸಿದ್ದರೆಂದು ಕೆಳದಿ ನೃಪವಿಜಯದಲ್ಲಿದೆ.
“ಮುಗುಳ್ದಿಕ್ಕೇರಿಯರಮನೆಯೊಳ್ ವಿಚಿತ್ರತರರಚನಾಕೌಶಲ್ಯದಿಂ ನಾಟಕಶಾಲೆಯಂ ನಿರ್ಮಾಣಂಗೈಸಿ” ಎಂದು ಹೇಳಲಾಗಿದೆ.
ಚೊಕ್ಕನಾಥನೆಂಬ ಕವಿಯು ಕೆಳದಿಯ ಕಿರಿಯ ಅರಸ ಬಸವಪ್ಪನಾಯಕನ ಆಸ್ಥಾನ ಕವಿಯಾಗಿದ್ದ. ಇವನು ಸಂಸ್ಕೃತ ದಲ್ಲಿ ಬರೆದ”ಸೇವಂತಿಕಾಪರಿಣಯ” ನಾಟಕದಲ್ಲಿ ಕೇರಳದ ರಾಜ ಮಿತ್ರವರ್ಮನ ಪುತ್ರಿ ಸೇವಂತಿಗೂ ಕಿರಿಯ ಬಸಪ್ಪನಾಯಕನಿಗೂ ವಿವಾಹ ನಡೆದಂತೆ ಚಿತ್ರಿಸಿದ್ದಾನೆ.
ಇನ್ನು ನರ್ತಕಿಯರು ಬಹುಶಃ ವೇಶ್ಯೆ ಯರೆ ಅಧಿಕವಾಗಿರುತ್ತಿದ್ದರು. ಆಸ್ಥಾನ ನರ್ತಕಿಯರು, ಆಸ್ಥಾನ ವಿದ್ವಾಂಸ ರು, ಆಸ್ಥಾನ ಜ್ಯೋತಿಷ್ಯರು, ರಾಜವೈದ್ಯರು, ಕರಣಿಕರು, ಶಾನುಭೋಗರು, ರಾಜ ಪುರೋಹಿತರು, ಅರ್ಚಕರು, ಆಗಮಿಕರು, ಸುಂಕದವರು, ಮನೆವಾರ್ತೆಯವರು, ಓಲೆಕಾರರು, ಹರಿಗೋಲಿನವರು, ಇವರೆಲ್ಲರೂ ಇರುತ್ತಿದ್ದರು, ಜೊತೆಗೆ ಬೇಹುಗಾರಿಕಾ ಕೆಲಸವನ್ನೂ ಮಾಡುತ್ತಿದ್ದರು. ನರ್ತಕಿಯರಿಗೆ “ಗಣಿಕೆಯರು” ಎಂದೂ ಕರೆಯಲಾಗುತ್ತಿತ್ತು. ಆಸ್ಥಾನ ನರ್ತಕಿಯರಿಗೆ ರಾಜ ನರ್ತಕಿ ಎಂದು ಕರೆಯುತ್ತಿದ್ದರು.
Klive Special Article ಕೆಳದಿ ಆಸ್ಥಾನ ನರ್ತಕಿಯಾಗಿದ್ದ ಹಿರೇಜೇನಿಯ ಜಂಬುಖಂಡಿ ಚೆನ್ನಿ ಎಂಬ ಪ್ರಸಿದ್ಧ ವೇಶ್ಯೆಯು ಇಲ್ಲಿ ಮಹತ್ತಿನ ಮಠವನ್ನು ಕಟ್ಟಿಸಿದ್ದಳೆಂದು ಹೇಳುತ್ತಾರೆ. ಕಾರಣಗಿರಿ(ಕಾರ್ಗಡಿ) ಅಕ್ಕಮ ಎಂಬುವವಳು ಪ್ರಸಿದ್ದ ನೃತ್ಯಗಾರ್ತಿಯಾಗಿದ್ದು ಇವಳಹೆಸರಿನಲ್ಲಿ “ಅಕ್ಕಮಚೌಕಿ” ಎಂಬ ಕೆರೆಯು ಇದ್ದು ಇದರ ದಡದಲ್ಲಿ ಅವಳು ವಾಸ ಮಾಡುತ್ತಿದ್ದ ಮನೆಯ ಅವಶೇಷಗಳು ಈಗಲೂ ಇದೆ.
