Rotary Club ರೋಟರಿ ಸೇವೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮನುಕುಲದ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕೋಣಂದೂರಿನ ವಿನಾಯಕ ಮಾಂಗಲ್ಯ ಮಂದಿರದಲ್ಲಿ ರೋಟರಿ ಕ್ಲಬ್ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೋಣಂದೂರು ರೋಟರಿ ಸಂಸ್ಥೆ ಮಹತ್ತರ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಇಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳು ಇರುವುದರಿಂದ ಶೈಕ್ಷಣಿಕವಾಗಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಾಗೂ ಹಲವಾರು ಸೇವಾ ಯೋಜನೆಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ರೋಟರಿ ಕೋಣಂದೂರು ಸಂಸ್ಥೆಯಲ್ಲಿ ವಿಶೇಷವಾದ ಯುವ ಪಡೆ ಇದ್ದು, ನಮ್ಮ ಕೋಣಂದೂರು ಸಂಸ್ಥೆ ಮಾಡುವ ಪ್ರತಿಯೊಂದು ಸೇವಾ ಕಾರ್ಯಗಳ ಜೊತೆಗೆ ನಮ್ಮ ಸಹಕಾರ ನಿರಂತರವಾಗಿ ಇರುತ್ತದೆ. ಅವರ ಸಹಕಾರವೂ ಕೂಡ ನಮಗೆ ತುಂಬಾ ಅಗತ್ಯವಾಗಿದೆ ಎಂದು ತಿಳಿಸಿದರು.
Rotary Club ರೋಟರಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ಮಾತನಾಡಿ, ನವೀನ ಅವಕಾಶಗಳ ಮೂಲಕ ಸಮಾಜ ಸೇವೆ ಮಾಡಬೇಕು. ಸಮಾಜದ ಒಳಿತಿಗೆ ಕೆಲಸ ಮಾಡಲು ಎಲ್ಲರೂ ಕೈಜೋಡಿಸಬೇಕು. ಬೆಳ್ಳಿ ಹಬ್ಬದಲ್ಲಿರುವ ಈ ರೋಟರಿ ಕ್ಲಬ್‌ನಿಂದ ಶಾಶ್ವತವಾದ ಬಹುಕಾಲ ನೆನಪಿನಲ್ಲಿ ಉಳಿಯುವ ಕೆಲಸ ಮಾಡಬೇಕು. ಆ ಮೂಲಕ ಜಿಲ್ಲೆಗೆ ಮಾದರಿಯಾಗುವಂತಹ ಕಾರ್ಯ ಆಗಬೇಕು ಎಂದು ಶುಭಹಾರೈಸಿದರು. ಅಧಿಕಾರ ವಹಿಸಿಕೊಂಡ ನೂತನ ಅಧ್ಯಕ್ಷ ಕೆ.ಆರ್.ಸದಾಶಿವ ಹಾಗೂ ತಂಡದವರಿಗೆ ಸನ್ಮಾನಿಸಿ ಗೌರವಿಸಿದರು. ರೋಟರಿ ಕ್ಲಬ್ ಕೋಣಂದೂರು ನೂತನ ಅಧ್ಯಕ್ಷ ಕೆ.ಆರ್.ಸದಾಶಿವ ಮಾತನಾಡಿ, ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನಮ್ಮ ಕ್ಲಬ್‌ನ ಈ ವರ್ಷದ ಕಾರ್ಯ ಚಟುವಟಿಕೆಗಳನ್ನು ಸ್ಮರಣೀಯವಾಗಿಸಬೇಕು ಎಂದು ಹೇಳಿದರು.
ಡಿ.ಆರ್.ಗಿರೀಶ್, ರೋಟರಿ ಸಹಾಯಕ ಗವರ್ನರ್ ಎಂ.ಬಿ.ಲಕ್ಷ್ಮಣ ಗೌಡ, ಜೋನಲ್ ಲೆಫ್ಟಿನೆಂಟ್ ಭರತ್ ಕುಮಾರ್ ಕೋಡ್ಲು, ಕಾರ್ಯದರ್ಶಿಗಳಾದ ಎಂ.ಟಿ.ಪುಟ್ಟಪ್ಪ, ಬಿ.ಟಿ.ಈಶ್ವರಪ್ಪ, ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ.. ಗುಡದಪ್ಪ ಕಸಬಿ ಉಪಸ್ಥಿತರಿದ್ದರು.
