ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.
Klive Special Article ನಮ್ಮ ಶಿವಮೊಗ್ಗ ಅದೆಷ್ಟು ಮಹಾನ್ ವ್ಯಕ್ತಿಗಳಿಗೆ ಜನ್ಮಭೂಮಿ ಕರ್ಮಭೂಮಿಯಾಗಿ ನೆಲೆಸಿದೆಯೋ. ಇತ್ತೀಚೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವ ಅನೇಕ ಮಹನೀಯರುಗಳು ಅವರ ವ್ಯಕ್ತಿತ್ವಗಳನ್ನು ನೋಡಿದಾಗ ನಾನಿರುವ ಊರಿನ ಬಗ್ಗೆ ವಿಶೇಷವಾದ ಹೆಮ್ಮೆಯ ಭಾವ ಮೂಡುತ್ತದೆ. ತಮ್ಮ 85ರ ವಸಂತದಲ್ಲೂ ಸದಾ ಕ್ರಿಯಾಶೀಲರಾಗಿರುವ ಡಾ. ಪಿ ನಾರಾಯಣ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವ ಈ ಘಳಿಗೆಯಲ್ಲಿ ಮಹನೀಯರ ಕುರಿತಾಗಿ ನಾನು ಬರೆಯಬೇಕೆನಿಸಿ ಬರೆಯಲಾರಂಭಿಸಿದದೆ.
ವಿದ್ಯಾ ವಿನಯ ಸಂಯುಕ್ತಃ ಶಾಂತಃ ಸತ್ಯಪರಾಯಣಃ l
ದಯಾಳುಃ ಸರ್ವಭೂತೇಷು ಭಿಷಕ್ ಸತ್ಪುರುಷೋ ಮಹಾನ್ ll
ಈ ಮೇಲಿನ ಶ್ಲೋಕವು ವೈದ್ಯನಿಗೆ ಅಗತ್ಯವಿರುವ ನಾಲ್ಕು ಮುಖ್ಯ ಗುಣಗಳನ್ನು ಪ್ರಸ್ತುತಪಡಿಸುತ್ತದೆ. ಅದೇನೆಂದರೆ ವಿದ್ಯೆ ಮತ್ತು ವಿನಯ ಅಂದರೆ ಅಹಂಕಾರವಿಲ್ಲದ ಜ್ಞಾನ, ಶಾಂತ ಸ್ವಭಾವ ಅಂದರೆ ಗಂಭೀರತೆ ಮತ್ತು ಸಮತೋಲತೆ, ಸತ್ಯ ಪಾರಾಯಣತೆ ಅಂದರೆ ನೈತಿಕ ನಿಷ್ಠೆ ಮತ್ತು ನಿಜವಚನ ನಾಲ್ಕನೇದಾಗಿ ದಯಾ ಭಾವನೆ ಅಂದರೆ ಪ್ರತಿಯೊಬ್ಬ ಜೀವಿಯ ನೋವಿನ ಬಗೆಗಿನ ಕರುಣೆ ಹೊಂದಿರುವುದು ಎಂಬುದಾಗಿ. ಇಂತಹ ವೈದ್ಯನು ಕೇವಲ ರೋಗ ಶಮನ ಮಾಡುವವನು ಮಾತ್ರ ಆಗಿರದೇ ಸತ್ಪಗುಣದ ಸಾಕಾರ ಮೂರ್ತಿ. ಹಾಗಾಗಿ ಅವನು ವೈದ್ಯೊ ನಾರಾಯಣೋ ಹರಿಃ. ಅದರಂತೆ ಇಲ್ಲಿ ಹೇಳ ಹೊರಟಿರುವ ವೈದ್ಯರಾದ ಡಾಕ್ಟರ್ ಪಿ ನಾರಾಯಣ್ ರವರು ಸಹ ಹಾಗೆ ಅನುರೂಪರಾಗಿದ್ದಾರೆ. ಇಂಥವರು ಸರಳತೆಗೆ ಆದರ್ಶ, ಸಜ್ಜನತೆಗೆ ಮೂರ್ತಿ ರೂಪ, ಅವರ ಬದುಕೇ ಸಮಾಜಕ್ಕೆ ದಾರಿದೀಪವಾಗಿದೆ.
ನಿಜವಾಗಿಯೂ ನಾರಾಯಣ ಡಾಕ್ಟರ್ ಬಗ್ಗೆ ಹೇಳಲು ಪದಗಳೇ ಸಾಲದು. ಸರಳ ವ್ಯಕ್ತಿತ್ವ ಸಾಮಾನ್ಯರೊಡನೆ ಸಾಮಾನ್ಯರಂತೆ ಬೆರೆತು ಮಾತನಾಡುವ ಹೃದಯ ಶುದ್ಧಿ ಸ್ಮಿತಪೂರ್ವಾಭಿಭಾಷಿಯಾದ ಶ್ರೀ ರಾಮನ ಗುಣ ಇವರದ್ದು. ತಮ್ಮ ಶಾಂತನಡವಳಿಕೆ ಜನರಲ್ಲಿ ಭರವಸೆ ಹುಟ್ಟಿಸುವ ವೈದ್ಯರಾಗಿ ಇವರು ಉನ್ನತ ಹುದ್ದೆಗಿಂತಲೂ ಹೆಚ್ಚಿನದಾಗಿ ಜನರ ಹೃದಯದಲ್ಲಿ ಸ್ಥಾನ ಪಡೆದ ವೈದ್ಯರಾಗಿದ್ದಾರೆ.
ನನ್ನ ಅಜ್ಜನಿಗೆ ಅನಾರೋಗ್ಯವಾದಾಗ ಅವರನ್ನು ಇವರ ಆಸ್ಪತ್ರೆಯಾದ ಶರಾವತಿ ನರ್ಸಿಂಗ್ ಹೋಂಗೆ ಕರೆತಂದರಂತೆ, ಆಗ ಈ ವೈದ್ಯರೇ ನೋಡಿದ್ದರಂತೆ ಎನ್ನುವ ಮಾತು ಶಿವಮೊಗ್ಗದಲ್ಲಿ ಪದವಿ ಓದುತ್ತಿರುವಾಗ ನನಗೂ ಒಮ್ಮೆ ಕುತ್ತಿಗೆ ನೋವಾಗಿ ಇವರ ಬಳಿ ಹೋದಾಗ ನಮ್ಮ ಅಮ್ಮ ಹೇಳಿದ್ದು, ಹಳೆಯ ನೆನಪಾದರೂ ಇತ್ತೀಚೆಗೆ ಮತ್ತೊಮ್ಮೆ ಅವರಿಗೆ ನಾನು ಪರಿಚಿತಳಾದದ್ದು ಶಂಕರ ಮಠದಲ್ಲಿ ನವರಾತ್ರಿಯ ಕಾರ್ಯಕ್ರಮ ಮಾಡಿ ಸೈ ಅನಿಸಿಕೊಂಡು ಹಿತವೆನಿಸಿ ಮತ್ತೆ ನನಗೆ ಶಂಕರ ಜಯಂತಿಯ ಸಂದರ್ಭದಲ್ಲಿ ಆಚಾರ್ಯ ಶಂಕರರ ಕೃತಿಗಳಿಗೆ ಅದರ ಅರ್ಥ ಯಥಾಮತಿ ನಾನು ತಿಳಿದಂತೆ ಹೇಳುವ ಅವಕಾಶ ನೀಡಿದ್ದರು. ಆ ಹೊತ್ತಿನಲ್ಲಿ ಅವರ ಸಮಯ ಪ್ರಜ್ಞೆ ನೋಡಿ ನನಗೆ ಅವರ ಬಗೆಗಿನ ಗೌರವ ಇಮ್ಮಡಿಯಾಯಿತು. ಅವರ ಶಿಸ್ತನ್ನು ಸಹ ಇಲ್ಲಿ ಮರೆಯುವಂತಿಲ್ಲ. ನಂತರ ಹಲವಾರು ಕಾರಣಗಳಿಗೆ ಅವರೊಂದಿಗೆ ಮಾತನಾಡಿದ್ದೇನೆ. ಆಗ ಅವರ ಮೇರು ವ್ಯಕ್ತಿತ್ವ ಕಂಡು ಬೆರಗಾಗಿದ್ದೇನೆ ಇಂತಹ ಸಜ್ಜನರು ಇರುವ ರೀತಿಯ ನಮಗೆಲ್ಲರಿಗೂ ಅನುಕರಣೆ ಯೋಗ್ಯ.
Klive Special Article ಇಂತಹ ಮಹಾನ್ ವ್ಯಕ್ತಿತ್ವದವರು ಇರುವ ಕಾಲಘಟ್ಟದಲ್ಲಿ ನಾವೆಲ್ಲ ಇದ್ದೇವಲ್ಲ ಅನ್ನುವುದೇ ನಮಗೆ ಹೆಮ್ಮೆಪಡುವಂತದ್ದು. ಅವರ ಸಾರ್ಥಕ ಬದುಕು ಮಕ್ಕಳಿಗೆ ಆದರ್ಶ, ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಎಲ್ಲರಿಗೂ ಮಾನವೀಯತೆಯ ಪಾಠ. 85 ವರ್ಷಗಳ ಈ ದೀರ್ಘಯಾನ ಕೇವಲ ಕಾಲದ ಅಳತೆಗಷ್ಟೇ ಸೀಮಿತವಲ್ಲ ಅದು ಒಬ್ಬ ವ್ಯಕ್ತಿಯ ಆತ್ಮವಿಶ್ವಾಸ, ತಾಳ್ಮೆ ಪ್ರೀತಿಯ, ಸೇವೆಯ ಹಾಗೂ ಮೌಲ್ಯಗಳ ಆಳವಾದ ಪ್ರತಿಬಿಂಬವಾಗಿದೆ. ವಯಸ್ಸು ಬೆಳೆಯುತ್ತಲೇ ಹೋಗುತ್ತದೆ ಆದರೆ ಅದರೊಂದಿಗೆ ನಾವು ಬೆಳೆಸಿಕೊಳ್ಳುವ ಮೌಲ್ಯಗಳು ಸಂಬಂಧಗಳ ಮತ್ತು ಸ್ಮೃತಿಗಳೇ, ಜೀವನವನ್ನು ಸಾರ್ಥಕವಾಗಿಸುತ್ತವೆ ಎನ್ನುವ ಮಾತಿನಂತೆ ಈ ಸಾರ್ಥಕಯಾನಕ್ಕೆ ಶತಶತ ನಮನಗಳನ್ನು ಸಲ್ಲಿಸುತ್ತಾ, ಅವರಿಗಾಗಿ ಆಯೋಜಿತವಾದ ಅಭಿನಂದನೆಯ ಎಲ್ಲ ಕಾರ್ಯಕ್ರಮಗಳು ಸಹ ಅರ್ಥಪೂರ್ಣವೇ ಆಗಿವೆ. ಹಾಗಾಗಿ ಈ ಕಾರ್ಯಕ್ರಮದ ಆಯೋಜಕರಿಗೂ ಸಹ ಅಭಿಮಾನದ ಧನ್ಯವಾದಗಳು ಈ ಮೂಲಕ ಸಲ್ಲಿಸುತ್ತಿದ್ದೇನೆ. ಕಾರಣ ನಿನ್ನೆ ಅವರಿಗಾಗಿ ಸಲ್ಲಿಸಿದ ನಾದ ನಮನದಲ್ಲಿ ಗುರುವಾಯೂರಿನ ಕುಮಾರಿ ಗಂಗಾ ಸಸಿಧರನ್ ತನ್ನ ವಯೋಲಿನ್ ವಾದನದಿಂದ ನಮ್ಮೆಲ್ಲರನ್ನು ನಾದ ಲೋಕಕ್ಕೆ ಕೊಂಡೊಯ್ದು ದಿಗ್ಬ್ರಾಂತರಾಗುವಂತೆ ಮಾಡಿದ್ದಾಳೆ. ಆಕೆಯ ವಿಸ್ಮಯವೆನಿಸುವ ವಯೋಲಿನ್ ನಾದಕ್ಕೆ ನಾವೆಲ್ಲ ಮಾರುಹೋದೆವು. ಹಾಗಾಗಿಯೇ ಹೇಳುತ್ತಿರುವುದು ಎಲ್ಲ ಕಾರ್ಯಕ್ರಮಗಳು ಸಹ ಅರ್ಥಪೂರ್ಣ ಎಂದು ಮತ್ತೊಮ್ಮೆ ಡಾ. ಪಿ ನಾರಾಯಣ್ ರವರಿಗೆ ಶತಶತ ನಮನಗಳನ್ನು ಸಲ್ಲಿಸುತ್ತಾ ಈ ಲೇಖನದ ಮೂಲಕ ಅಭಿನಂದನೆಗಳು ಹಾಗೂ ಅಭಿವಂದನೆಗಳು.
ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜ್
ಶಿವಮೊಗ್ಗ
