Friday, December 5, 2025
Friday, December 5, 2025

Klive Special Article ಕೆ ಲೈವ್ ವಿಶೇಷ ಸೇಕ್ರೆಡ್ ಹಾರ್ಟ್: ಭಕ್ತಿ-ಪ್ರೀತಿ-ಕರುಣೆಯ ಸಂಕೇತ… ಲೇಖನ: ರಾಕೇಶ್ ಡಿಸೋಜ

Date:

Klive Special Article ಯೇಸುವಿನ ಪವಿತ್ರ ಹೃದಯದ ಹಬ್ಬವು ವಿಶ್ವದಾದ್ಯಂತ ಕ್ರೈಸ್ತರು ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಯಾಗಿದೆ. ಇದು ಯೇಸು ಕ್ರಿಸ್ತನ ಅಮಿತ ಪ್ರೇಮ, ಬಲಿದಾನ ಹಾಗೂ ಮಾನವತೆಯ ಆಳವಾದ ಸ್ಪರ್ಶದ ಸಂಕೇತವಾಗಿದೆ.
ಪವಿತ್ರ ಹೃದಯ ಎಂಬುದು ಕೇವಲ ಶರೀರದ ಅಂಗವಲ್ಲ; ಅದು ಆತ್ಮದ ಪರಿಪೂರ್ಣತೆ, ಪ್ರೀತಿಯ ತೀವ್ರತೆ ಮತ್ತು ಪಾಪಿಗಳಿಗಾಗಿ ತೋರಿದ ಸಹಾನುಭೂತಿಯ ದೃಷ್ಟಾಂತವಾಗಿದೆ.
ಸೇಕ್ರೆಡ್‌ಹಾರ್ಟ್ ಭಕ್ತಿಯ ಪ್ರಾರಂಭ ೧೭ನೇ ಶತಮಾನದಲ್ಲಿ ಸಂಭವಿಸಿದೆ. ಈ ಭಕ್ತಿ ಪ್ರಚಾರಕ್ಕೆ ಪ್ರಮುಖ ಕಾರಣರಾದವರು ಸೇಂಟ್ ಮರ್ಗರೆಟ್ ಮೇರಿ ಅಲಾಕೋಕ್ ಎಂಬ ಫ್ರಾನ್ಸ್‌ನ ಧರ್ಮಸಂಸ್ಥೆಯ ಮಹಿಳೆ. ೧೬೭೩ ರಿಂದ ೧೬೭೫ರವರೆಗೆ, ಅವಳು ಯೇಸು ಕ್ರಿಸ್ತನ ಪವಿತ್ರ ಹೃದಯದ ನೈಜ ದರ್ಶನವನ್ನು ಹೊಂದಿದರು ಎಂದು ನಂಬಲಾಗುತ್ತದೆ. ಈ ದರ್ಶನಗಳಲ್ಲಿ ಯೇಸು ತಾನು ಸಹಿಸಿದ ಕಷ್ಟಗಳನ್ನು ವಿವರಿಸುತ್ತಾ, ತನ್ನ ಹೃದಯವನ್ನು ಮಾನವನಿಗೆ ಅರ್ಪಿಸಿದಂತೆ ಭಕ್ತಿಯಿಂದ ಆರಾಧಿಸುವಂತೆ ಹೇಳಿದರು.
ಅಧಿಕೃತವಾಗಿ ಉತ್ಸವ ಆರಂಭ: ೧೮೫೬ರಲ್ಲಿ, ಪೋಪ್ ಪಿಯಸ್ IX (Pope Pius IX) ಅವರು ಸೇಕ್ರೆಡ್ ಹಾರ್ಟ್ ಉತ್ಸವವನ್ನು ಸರ್ವಸಾಮಾನ್ಯ ಕ್ರಿಸ್ತೀಯ ಚರ್ಚ್ (Universal Church)ಗೆ ಅಧಿಕೃತವಾಗಿ ಅಂಗೀಕರಿಸಿದರು. ಇದಕ್ಕಿಂತ ಮುಂಚೆಯೇ ಕೆಲ ದೇಶಗಳಲ್ಲಿ ಅಥವಾ ಧರ್ಮಸಂಸ್ಥೆಗಳಲ್ಲಿ ಉತ್ಸವ ಆಚರಣೆ ನಡೆಯುತ್ತಿದ್ದರೂ, ಪೋಪ್‌ರ ಅಧಿಕೃತ ಆದೇಶದ ನಂತರ ಈ ದಿನಚರಣೆಯು ವಿಶ್ವಮಟ್ಟದಲ್ಲಿ ಆಚರಿಸಲ್ಪಡಲಾಯಿತು.
ಈ ಉತ್ಸವವನ್ನು ಪ್ರತಿ ವರ್ಷ ಕ್ರಿಸ್ತನ ದೇಹ ಮತ್ತು ರಕ್ತ Corpus Christi) ದಿನದ ನಂತರದ ಮೂರನೇ ಶುಕ್ರವಾರಕ್ಕೆ ಆಚರಿಸಲಾಗುತ್ತದೆ. ಅದು ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಬರುವಂತಾಗುತ್ತದೆ.
ಕ್ತಿಸ್ತ ಯೇಸು ಅವರು ಮರ್ಗರಿಟ್ ಅವರಿಗೆ ದರ್ಶನ ನೀಡಿ ತಮ್ಮ ಹೃದಯವನ್ನು ತೋರಿಸಿzಗಿ ಅವರು ವಿವರಿಸುತ್ತಾರೆ. ಪವಿತ್ರವಾದ ಆ ಹೃದಯ ಬೆಂಕಿಯಿಂದ ಉರಿಯುತ್ತಿದೆ, ಹರಿತವಾದ ಮುಳ್ಳಿನಿಂದ ಆವರಿಸಲಾ ಗಿದೆ ಮತ್ತು ಅದು ಪಾಪಿಗಳಿಗಾಗಿ ನೋವು ಅನುಭವಿಸುತ್ತಿದೆ ಎಂಬ ಸಂದೇಶ ಸಾರಲಾಗಿದೆ.
Klive Special Article ಯೇಸುವಿನ ಪವಿತ್ರ ಹೃದಯದ ಹಬ್ಬವು ಸಾಮಾನ್ಯವಾಗಿ ಯೇಸು ಕ್ರಿಸ್ತನ ದಯಾಮಯ ಹೃದಯದ ಪೂಜೆಯಿಂದ ಆರಂಭವಾಗುತ್ತದೆ. ಭಕ್ತರು ಜಪಸರ ಪ್ರಾರ್ಥನೆ, ಪಶ್ಚಾತ್ತಾಪದ ಆಚರಣೆ, ಪಾಪ ನಿವೇದನೆ, ದಿವ್ಯಬಲಿ ಪೂಜೆ ಹಾಗೂ ಪವಿತ್ರ ಪರಮ ಪ್ರಸಾದದ ಆರಾಧನೆಯ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಾರೆ. ಅಂತೆಯೇ ಜೂನ್ ತಿಂಗಳು ಸಂಪೂರ್ಣವಾಗಿ ಈ ಪವಿತ್ರ ಹೃದಯದ ಆರಾಧನೆಗೆ ಮೀಸಲಾಗಿದೆ. ಮನೆಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಯೇಸುವಿನ ಪವಿತ್ರ ಹೃದಯದ ಭಾವಚಿತ್ರವನ್ನು ವಿವಿಧ ಹೂಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ.
ಪವಿತ್ರ ಹೃದಯದ ಸಂದೇಶ: ಪ್ರೀತಿ ಮತ್ತು ಕರುಣೆ ಈ ಹಬ್ಬದ ಕೇಂದ್ರ ಬಿಂದುವಾಗಿದೆ. ಕ್ರಿಸ್ತ ಯೇಸು ತನ್ನ ಪವಿತ್ರ ಹೃದಯದ ಮೂಲಕ ಪ್ರತಿಯೊಬ್ಬರಿಗೂ ತೋರಿಸಿದ ಉದಾರ ಪ್ರೀತಿ ಮರೆಯಲಾಗದು. ಅಂತೆಯೇ ನಾವು ನಮ್ಮ ಹೃದಯಗಳನ್ನೂ ದಯಾಮಯ ಮತ್ತು ಪ್ರೀತಿಪೂರ್ಣವಾಗಿಟ್ಟು ಕೊಳ್ಳಬೇಕೆಂಬ ಸಂದೇಶ ಇದಾಗಿದೆ.
ಮಾನವ ಸಂಬಂಧಗಳು ಮಾರುಕಟ್ಟೆಯ ನಿಲುವಿನಲ್ಲಿ ಮೋಸ ಹಾಗೂ ಆತ್ಮಹೀನತೆಯಿಂದ ಕಂಗಾಲಾಗುತ್ತಿರುವ ಈ ಕಾಲದಲ್ಲಿ, ಯೇಸುವಿನ ಪವಿತ್ರ ಹೃದಯವು ನಮಗೆ ಒಂದು ಪರಿಶುದ್ಧ ಹೃದಯದ ಮಾರ್ಗವನ್ನು ತೋರಿಸುತ್ತದೆ. ಇದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ ಮಾನವೀಯತೆಯ ಪರಿಪೂರ್ಣತೆಯ ಕಡೆಗೆ ಮುನ್ನಡೆಯಲು ಮಾರ್ಗದರ್ಶಿಯಾಗಿದ.
ಈ ಹಬ್ಬವು ಧಾರ್ಮಿಕ ಪ್ರಾರ್ಥನೆಗೆ ಪೂರಕವಾಗಿರುವುದರ ಜೊತೆಗೆ, ಸಾಂಸ್ಕೃತಿಕ ಪ್ರಭಾವವನ್ನೂ ಹೊಂದಿದೆ. ಕುಟುಂಬಗಳಲ್ಲಿ ಪವಿತ್ರ ಹೃದಯದ ಪೂಜೆ, ಮನ ಪ್ರಾರ್ಥನೆ, ಸಹೃದಯತೆಯ ಚಟುವಟಿಕೆಗಳಾದ ಜೈಲು, ವೃದ್ಧಾಶ್ರಮ, ಅನಾಥ ಆಶ್ರಮಗಳಿಗೆ ಭೇಟಿ ನೀಡಿ ಅವರೊಂದಿಗೆ ಪ್ರೀತಿ ಹಂಚಿಕೊಳ್ಳುವುದು ಈ ಹಬ್ಬದ ಮೌಲ್ಯವನ್ನು ಹೆಚ್ಚಿಸುತ್ತವೆ.
ಯೇಸುವಿನ ಪವಿತ್ರ ಹೃದಯದ ಹಬ್ಬವು ಭಕ್ತರಿಗೆ ದೈವಿಕ ಪ್ರೀತಿಯ ಅನುಭವವನ್ನು ನೀಡುವುದು ಮಾತ್ರವಲ್ಲ, ಅವರ ಜೀವನದಲ್ಲಿ ಸಹಾನುಭೂತಿ, ದಯೆ ಮತ್ತು ಕ್ಷಮೆಯ ಬಿತ್ತನೆ ಮಾಡುತ್ತದೆ. ಇದು ಕೇವಲ ಆಚರಣೆ ಅಲ್ಲ, ಬದುಕಿನ ಒಂದು ನವಚಿಂತನೆಯ ಮಾರ್ಗವಾಗಿದೆ.
ಹಬ್ಬದ ದಿನ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯುತ್ತವೆ. ಈ ದಿನ ಪಾದ್ರಿಗಳು ಯೇಸುವಿನ ಪವಿತ್ರ ಹೃದಯದ ಮಹತ್ವದ ಕುರಿತು ಧಾರ್ಮಿಕ ಉಪದೇಶ ನೀಡುತ್ತಾರೆ.
ಪವಿತ್ರ ಹೃದಯದ ರಥೋತ್ಸವ: ವಿಶ್ವದೆಲ್ಲೆಡೆ ಚರ್ಚುಗಳಲ್ಲಿ ಪವಿತ್ರ ಹೃದಯದ ಬೃಹತ್ ಭಾವಚಿತ್ರ ಅಥವಾ ಮೂರ್ತಿಯನ್ನು ಭಕ್ತರು ದೀಪ, ಧೂಪ, ಹೂಮಾಲೆಗಳೊಂದಿಗೆ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ಭಕ್ತಿಗೀತೆ, ಪ್ರಾರ್ಥನೆ ಮತ್ತು ರಾಜಬೀದಿ ಉತ್ಸವದ ಮೂಲಕ ಪವಿತ್ರ ಹೃದಯದ ಸಂದೇಶವನ್ನು ಸಾರುತ್ತಾರೆ.
ಪವಿತ್ರ ಹೃದಯದ ಪ್ರೀತಿಯ ಧರ್ಮವನ್ನು ಕೇವಲ ಧಾರ್ಮಿಕ ಆಚರಣೆಯಲ್ಲಿ ಮಾತ್ರವಲ್ಲದೆ, ಜೀವನದ ಸೇವೆಯಲ್ಲಿ ಅಭಿವ್ಯಕ್ತಿಗೊಳಿಸಲಾಗುತ್ತದೆ. ಈ ಮೂಲಕ ದೇವಪುತ್ರ ಯೇಸುಕ್ರಿಸ್ತರು ನೀಡಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಲು ಇದೊಂದು ಸುವರ್ಣಾವಕಾಶವಾಗಿದೆ.
ವಿಶೇಷವಾಗಿ ಶಿವಮೊಗ್ಗ- ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡ ಶಿವಮೊಗ್ಗ ಧರ್ಮ ಕ್ಷೇತ್ರವು ಯೋಸುವಿನ ಪವಿತ್ರ ಹೃದಯಕ್ಕೆ ಸಮರ್ಪಿಸಲಾಗಿದ್ದು, ಅಂತೆಯೇ ಈ ಧರ್ಮಕ್ಷೇತ್ರದ ಪ್ರಧಾನ ದೇವಾಲಯವಾಗಿರುವ ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ ಸೇರಿದಂತೆ ಧರ್ಮಕ್ಷೇತ್ರದ ವಿವಿಧ ಚರ್ಚುಗಳಲ್ಲಿ ಈ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಹಬ್ಬದ ಸಂಭ್ರಮ: ಶಿವಮೊಗ್ಗ ನಗರದ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಪವಿತ್ರ ಹೃದಯದ ಹಬ್ಬದ ನಿಮಿತ್ತ ಧ್ವಜರೋಹಣದೊಂದಿಗೆ ೩ ದಿನಗಳ ವಿಶೇಷ ಪ್ರಾರ್ಥನೆ ಮೂಲಕ ಹಬ್ಬಕ್ಕೆ ಆಧ್ಯಾತ್ಮಿಕ ಸಿದ್ದತೆ ಮಾಡಿಕೊಳ್ಳಲಾಗಿದೆ ಹಾಗೂ ಜೂನ್ ೨೭ರ ಸಂಜೆ ೫.೩೦ರಿಂದ ಚರ್ಚ್ ಆವರಣದಲ್ಲಿ ಪವಿತ್ರ ಹೃದಯದ ಮೆರವಣಿಗೆ ನಂತರ ಹಬ್ಬದ ಸಂಭ್ರಮದ ಬಲಿಪೂಜೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೋ ಅವರ ದಿವ್ಯ ಸಾನಿಧ್ಯದಲ್ಲಿ ಶ್ರೇಷ್ಠಗುರು ರೆ|ಫಾ| ಸ್ಟ್ಯಾನಿ ಡಿಸೋಜ ಮತ್ತು ಇನ್ನಿತರ ಗುರುಗಳೊಂದಿಗೆ ನೆರವೇರಿಸಲಿದ್ದು, ಸಮಸ್ತ ಕ್ರೈಸ್ತ ಭಕ್ತರು ಈ ಎಲ್ಲಾ ಪೂಜಾ ವಿಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಯೇಸುವಿನ ಪವಿತ್ರ ಹೃದಯದ ಕೃಪೆಗೆ ಪಾತ್ರರಾಗುವಂತೆ ಪಾಲನಾ ಸಮಿತಿ ಕೋರಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...