ಶಿವಮೊಗ್ಗ ನಗರದ ಸಿನಿಮೊಗೆ – ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ (ಶಾರ್ಟ್ ಫಿಲಂ) ಸ್ಪರ್ಧೆಯ ವಿಜೇತರಿಗೆ ಜೂ. 21ರ ಶನಿವಾರದಂದು ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಕಾರ್ಯಧ್ಯಕ್ಷರು ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ ಸಂಚಾಲಕರಾದ ಡಿ. ಎಸ್. ಅರುಣ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಐದು ವರ್ಷಗಳಲ್ಲಿ ನಡೆದ ಅಂಬೆಗಾಲು ಕಿರುಚಿತ್ರ ಸ್ಪರ್ಧೆಗಳಲ್ಲಿ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಕ್ರಿಯಾಶೀಲ ನಿರ್ದೇಶಕರು, ತಂತ್ರಜ್ಞರು ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಹೆಮ್ಮೆಯ ಸಂಗತಿ. ಯುವಜನತೆಯಲ್ಲಿ ಚಲನಚಿತ್ರ ಕುರಿತಾಗಿ ಅರಿವು ಮೂಡಿಸುವ ಹಾಗೂ ಅವರಲ್ಲಿನ ಸೃಜನಶೀಲತೆಯನ್ನು ಪ್ರೊತ್ಸಾಹಿಸುವ ದೃಷ್ಟಿಯಿಂದ ಈ ಕಿರುಚಿತ್ರ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು, ಕನ್ನಡ ಚಿತ್ರರಂಗದ ಹೆಸರಾಂತ ತಂತ್ರಜ್ಞರು ಪಾಲ್ಗೊಂಡು ಈ ಚಿತ್ರಗಳನ್ನು ವೀಕ್ಷಿಸಿ ವಿಜೇತರನ್ನು ಆಯ್ಕೆ ಮಾಡಿದ್ದಾರೆ ಎಂದಿದ್ದಾರೆ.
ವಿಜೇತರಿಗೆ ಮೊದಲ ಬಹುಮಾನವಾಗಿ 50,000, ದ್ವಿತೀಯ ಬಹುಮಾನವಾಗಿ 25,000 ನಗದು ಪುರಸ್ಕಾರದ ಜೊತೆಗೆ ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು ಎಂದಿರುವ ಅವರು, ಅಂಬೆಗಾಲು ಸರಣಿಯಲ್ಲಿ ಇದು ಕೊನೆಯ ಸ್ಪರ್ಧೆಯಾಗಿದ್ದು, ಮುಂದಿನ ದಿನಗಳಲ್ಲಿ ಚಿತ್ರೋತ್ಸವಗಳ ಮೂಲಕ ಶ್ರೇಷ್ಟ ಚಿತ್ರಗಳನ್ನು ಆಯ್ಕೆ ಮಾಡಲಾಗುವುದು ಎಂದಿದ್ದಾರೆ.
ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಚಾಲಕ ವೈದ್ಯನಾಥ್ ಕೋರಿದ್ದಾರೆ.
ಜೂ. 21ರಂದು ನಗರದ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 10:30 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಆಯ್ಕೆಯಾದ 10 ಕಿರು ಚಿತ್ರಗಳ ಪ್ರದರ್ಶನ ಹಾಗೂ ನಂತರ ಬಹುಮಾನ ವಿತರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗೆಯ ಕಲಾವಿದ, ಅಮರಪ್ರೇಮಿ ಅರುಣ್ ಖ್ಯಾತಿಯ ನಾಯಕ ನಟ ಹರಿ ಶರ್ವಾ, ಶಾಸಕರಾದ ಎಸ್. ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಖ್ಯಾತ ವೈದ್ಯರಾದ ಡಾ. ರಜನಿ ಪೈ, ಡಾ. ಕೆ. ಆರ್. ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಬಾರಿ ವಿಶೇಷವಾಗಿ, ರಾಮಾ ರಾಮಾ ರೇ ಖ್ಯಾತಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಡಿ. ಸತ್ಯಪ್ರಕಾಶ್‌ರವರ ಹೊಸ ಪ್ರಯೋಗ ಎಕ್ಸ್ ಅಂಡ್ ವೈ ಚಿತ್ರದ ಟೀಸರ್ ಹಾಗೂ ಹಾಡುಗಳ ಅನಾವರಣಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಈ ಚಿತ್ರ ತಂಡದ ನಿರ್ದೇಶಕ ಡಿ. ಸತ್ಯಪ್ರಕಾಶ್, ತಾರೆಯರಾದ ಬೃಂದಾ ಆಚಾರ್ಯ, ಆಯನಾ, ಅಥರ್ವ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Date: