JCI Shivamogga ಪ್ರತಿಯೊಂದು ವ್ಯವಹಾರ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಯಲು ಕೌಶಲ್ಯದ ಜತೆಗೆ ಪರಿಣಾಮಕಾರಿ ತರಬೇತಿ ತುಂಬಾ ಸಹಕಾರಿಯಾಗುತ್ತದೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಜಿ.ಗಣೇಶ್ ಹೇಳಿದರು.
ಸಹ್ಯಾದ್ರಿ ಚಿಟ್ಸ್ ಸಂಸ್ಥೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ವಿವಿಧ ಸಂಸ್ಥೆಯ ಉದ್ಯೋಗಿಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವ್ಯಾಪಾರದ ಕೌಶಲ್ಯ, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು ಅತ್ಯಂತ ಮುಖ್ಯ ಎಂದು ತಿಳಿಸಿದರು.
ಜೆಸಿಐ ಸಂಸ್ಥೆಯು ಪ್ರತಿಯೊಂದು ಕ್ಷೇತ್ರದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ನೀಡುವುದರ ಜತೆಗೆ ಸಂಸ್ಥೆಯ ಕಾರ್ಯಕ್ಷಮತೆ ಹೆಚ್ಚಿಸಲು ಸಹಕರಿಸುತ್ತದೆ. ಆಸ್ಪತ್ರೆ, ಕಾರ್ಖಾನೆ, ಕೈಗಾರಿಕಾ ಹಾಗೂ ಐಟಿ ಕ್ಷೇತ್ರದ ಸಂಸ್ಥೆಗಳಲ್ಲಿ ಜೆಸಿಐ ಸಂಸ್ಥೆಯು ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತದೆ ಎಂದು ಹೇಳಿದರು.
ಜೆಸಿಐ ಸಂಸ್ಥೆ ಧಾರವಾಡ ವಲಯ ತರಬೇತುದಾರ ಪ್ರವೀಣ್ ದೇಶಪಾಂಡೆ ಮಾತನಾಡಿ, ಸಂಸ್ಥೆಯು ಯಶಸ್ವಿಯಾಗಿ ಮುನ್ನಡೆಯಲು ಪ್ರಾಮಾಣಿಕ ಕೆಲಸ, ಸಮಯ ಪರಿಪಾಲನೆ ಹಾಗೂ ಗ್ರಾಹಕರಿಗೆ ಸೌಜನ್ಯದ ಸೇವೆಯು ಮುಖ್ಯವಾಗುತ್ತದೆ. ಸಂವಹನ ಕೌಶಲ್ಯವೂ ಉತ್ತಮ ಸೇವೆ ಒದಗಿಸಲು ಸಹಕಾರಿಯಾಗುತ್ತದೆ. ಈ ರೀತಿ ತರಬೇತಿ ಪಡೆದ ಸಂಸ್ಥೆಗಳು ಯಶಸ್ಸಿನತ್ತ ಸಾಗುತ್ತವೆ ಎಂದು ತಿಳಿಸಿದರು.
JCI Shivamogga ಸಹ್ಯಾದ್ರಿ ಚಿಟ್ಸ್ ಮಾರುಕಟ್ಟೆ ವಿಭಾಗದ ಯು.ಎಂ.ಶಿವರಾಜ್ ಮಾತನಾಡಿ, ಗ್ರಾಹಕರು ಮತ್ತು ಸಂಸ್ಥೆಯ ಪ್ರಾಮಾಣಿಕ ಸೇವೆಯು ಉದ್ಯಮದ ಯಶಸ್ಸಿಗೆ ಕಾರಣವಾಗುತ್ತವೆ ಎಂದು ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಸಹ್ಯಾದ್ರಿ ಚಿಟ್ಸ್ ನೌಕರರು, ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಇತರ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.