Chamber Of Commerce Shivamogga ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯವಾಗಿದ್ದು, ರಕ್ತದಾನದಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ವತಿಯಿಂದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕ್ಯಾಸ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ರಕ್ತದ ಬೇಡಿಕೆ ಹೆಚ್ಚಿದ್ದು, ಯುವಕರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಆಗುವುದಿಲ್ಲ. ದಾನಿಗಳ ದೇಹದಿಂದ ಸಂಗ್ರಹಿಸಿ ಅದನ್ನು ಪರೀಕ್ಷಿಸಿ ಇನ್ನೊಬ್ಬರಿಗೆ ದಾನ ಮಾಡುವ ಪ್ರಕ್ರಿಯೆ ಆಗಿದೆ. ಯುವಜನರು ಮೂಢನಂಬಿಕೆಯಿಂದ ಹೊರಬಂದು ರಕ್ತದಾನ ಮಾಡುವುದರ ಜೊತೆಗೆ ಮತ್ತೊಬ್ಬರನ್ನು ಸಹ ಪ್ರೇರೇಪಿಸಿ ರಕ್ತದಾನಿಗಳನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ, ರಕ್ತದಾನಿ ಜಿ.ವಿಜಯ್ ಕುಮಾರ್ ಮಾತನಾಡಿ, ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯ ವರ್ಷದಲ್ಲಿ ಮೂರು ಬಾರಿ ರಕ್ತದಾನ ಮಾಡಬೇಕು. ಸಮಾಜದಲ್ಲಿ ನಿಜವಾದ ಹೀರೋಗಳು ಎಂದರೆ ರಕ್ತದಾನಿಗಳು ಎಂದರು.
ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ, 80 ಬಾರಿ ರಕ್ತದಾನ ಮಾಡಿದ ಎ.ಎಂ. ಸುರೇಶ್ ರಕ್ತದಾನದ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಸಿಎಂ ದೇವರಾಜ್ ಮಾತನಾಡಿ, ನಮ್ಮ ಸಂಸ್ಥೆ ಈಗಾಗಲೇ ತಮ್ಮ ವೃತ್ತಿಯ ಜೊತೆಗೆ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುವುದರ ಮುಖಾಂತರ ಇಂತಹ ಪವಿತ್ರ ಕಾರ್ಯಗಳನ್ನು ಸಹ ಮಾಡುತ್ತಿದೆ. ಸದಸ್ಯರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರವಾದ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
Chamber Of Commerce Shivamogga ವೇದಿಕೆಯಲ್ಲಿ ವಿತರಕರ ಸಂಘದ ಉಪಾಧ್ಯಕ್ಷ ಬದ್ರಿನಾಥ್, ಕಾರ್ಯದರ್ಶಿ ಗಿರೀಶ್, ಪ್ರಶಾಂತ್, ಶಿವರಾಜ್ ಉಡುಗಣಿ, ಖಜಾಂಚಿ ಚಂದ್ರು, ಸಂಘದ ಎಲ್ಲಾ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು.
