Prayas Day 2025 ಮಹಿಳೆಯರು ಆರೋಗ್ಯ ಹಾಗೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಇದರಿಂದ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಡಾ. ಕೌಸ್ತುಭಾ ಅರುಣ್ ಅಭಿಪ್ರಾಯಪಟ್ಟರು.
ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ವತಿಯಿಂದ ಆಯೋಜಿಸಿದ್ದ ಪ್ರಯಾಸ್ ದಿನಾಚರಣೆ ಅಂಗವಾಗಿ ಯುವತಿಯರಿಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪಿರಿಯಡ್ಸ್ ಎನ್ನುವುದು ಖಾಸಗಿ ವಿಷಯವಷ್ಟೇ. ಋತುಸ್ರಾವ ಯಾಕೆ ಆಗುತ್ತದೆ, ಹೇಗೆ ಆಗುತ್ತದೆ ಎಂದು ಮಕ್ಕಳು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕು. ಆ ದಿನಗಳಲ್ಲಿ ಉಪಯೋಗಿಸಬಹುದಾದ ವಿವಿಧ ತರಹದ ಮುಟ್ಟಿನ ನಿರ್ಮಲ್ಯದ ಉತ್ಪನ್ನಗಳನ್ನು ತಿಳಿದುಕೊಳ್ಳಬೇಕು. ಮುಟ್ಟಿನ ಕುರಿತಾದ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಅದೊಂದು ಸ್ವಾಭಾವಿಕ ಪ್ರಕ್ರಿಯೆ ಎಂಬ ಅರಿವು ಮೂಡಿಸುವುದು ನಮ್ಮ ಕರ್ತವ್ಯ ಹೌದು ಎಂದು ತಿಳಿಸಿದರು.
Prayas Day 2025 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ ಗಣೇಶ್ ಮಾತನಾಡಿ, ಇಂದು ನಾವು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವುದರ ಜತೆಗೆ ಜೊತೆಗೆ ಉತ್ತಮ ಆಹಾರ ಅಭ್ಯಾಸಗಳು ಹಾಗೂ ಜೀವನ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆಯ ಬಗ್ಗೆಯೂ ಸಹ ಗಮನ ಹರಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕಿ ಉಮ್ಮೆ ಸಲ್ಮಾ, ಆಡಳಿತ ಅಧಿಕಾರಿ ನಾಗರಾಜ್ ಟಿಪಿ, ಗುರುಮೂರ್ತಿ ಗೌಡ, ಸ್ವಪ್ನ ಬದರಿನಾಥ್, ವಿದ್ಯಾ ಸುದರ್ಶನ್, ಡಾ. ಬೃಂದಾ, ಜೆಸಿಐ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ಪ್ಯಾಡ್‌ಗಳನ್ನು ವಿತರಿಸಲಾಯಿತು.