Sharada Puryanaik ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಇದರಿಂದ ಸರ್ಕಾರಿ ಯೋಜನೆಯ ಅನುಕೂಲ ಪಡೆದುಕೊಳ್ಳಲು ಜನರಿಗೆ ಸಹಕಾರಿಯಾಗುತ್ತದೆ ಎಂದು ಶಾಸಕರಾದ ಶಾರದಾ ಪೂರ್ಯನಾಯ್ಕ್ ತಿಳಿಸಿದರು.
ಬುಧವಾರ ನಗರದ ತಾಲ್ಲೂಕು ಕಾರ್ಯಾಲಯದಲ್ಲಿ ಏರ್ಪಡಿಸಿದ್ದ 2024-25 ನೇ ಸಾಲಿನ ಮೂರನೇ ಮತ್ತು ನಾಲ್ಕನೇ ತ್ರೆöÊಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕುಗಳಲ್ಲಿ ನಾಯಿ ಕಡಿತ, ಡೆಂಗ್ಯೂ ಕಾಯಿಲೆಗಳಿಗೆ ಔಷಧಿಯ ಕೊರತೆ ಇದ್ದು, ಅದರ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ. ಹೊಳಲೂರು, ಆಯನೂರು ಸೇರಿದಂತೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಈ ಪ್ರಕರಣಗಳು ಗಮನಕ್ಕೆ ಬಂದಿದ್ದು, ಸಾರ್ವಜನಿಕರಿಗೆ ಸರಿಯಾದ ಕ್ರಮದಲ್ಲಿ ಚಿಕಿತ್ಸೆ ಹಾಗೂ ಔಷಧಿ ಸೌಲಭ್ಯವನ್ನು ದೊರಕುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
Sharada Puryanaik ಗ್ರಾಮಗಳ ಜನರಿಗೆ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಆಗುವುದಿಲ್ಲ. ಆದ್ದರಿಂದ ಅವರೆಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಅವರ ಆರೋಗ್ಯದ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಾರ್ಯೋನ್ಮುಖರಾಗಬೇಕೆಂದು ಸೂಚನೆ ನೀಡಿದರು. ಈ ಬಾರಿಯ ಮಳೆಯಿಂದ ರೈತರಿಗೆ ಅನಕೂಲಕರವಾದ ವಾತಾವರಣವು ನಿರ್ಮಾಣವಾಗಿದೆ. ಉತ್ತಮ ಮಳೆಯಿಂದ ರೈತರಿಗೆ ಬಿತ್ತನೆ ಕೆಲಸದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಭತ್ತ, ಮುಸುಕಿನ ಜೋಳ, ಅಡಿಕೆಯಂತಹ ಬೆಳೆಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ. ಕೃಷಿ ಇಲಾಖೆಯು ಬೆಳೆಗಳಿಗೆ ಬಳಸಲಾಗುವ ಗೊಬ್ಬರದ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡಬೇಕು. ರೈತ ಸಂಪರ್ಕ ಕೇಂದ್ರಗಳು ಜನವಸತಿ ಬಳಿ ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಹಣ್ಣು, ತರಕಾರಿ ಮಾರಾಟ ಮಾಡುವ ವ್ಯಾಪಾರಿಗಳು ಎಪಿಎಂಸಿ ಅಡಿಯಲ್ಲಿ ಬರುತ್ತಾರೆ. ಆದರೆ ಬೀದಿಬದಿ ವ್ಯಾಪಾರಿಗಳು ಯಾಕೆ ಬರುವುದಿಲ್ಲ. ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಬೇಕು ಎಂದು ಎಪಿಎಂಸಿ ಕಾರ್ಯದರ್ಶಿಗೆ ತಿಳಿಸಿದ ಅವರು, ಕೆಲ ಹಳ್ಳಿಗಳಲ್ಲಿ ರೈತರಿಗೆ ರಸ್ತೆ ಸಂಪರ್ಕ ಸಮರ್ಪಕವಾಗಿಲ್ಲ, ಇದರಿಂದ ರೈತರಿಗೆ ಸಮಸ್ಯೆಗಳು ಉಂಟಾಗುತ್ತಿದೆ. ಆದಷ್ಟು ಬೇಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ರೈತರ ಓಡಾಟಕ್ಕೆ ಅನುಕೂಲ ಮಾಡಿಕೊಡಿ ಎಂದರು.
ಸಭೆಯಲ್ಲಿ ತಾಲ್ಲೂಕು ಕೆಡಿಪಿ ನಾಮ ನಿರ್ದೇಶಿತ ಸದಸ್ಯರುಗಳಾದ ಶಿವಾನಂದಪ್ಪ, ಹೆಚ್.ಪಿ.ರುದ್ರೇಶ್, ಶಿವಕುಮಾರ್, ಜಯಕೀರ್ತಿ, ಗೀತಾ, ತಾಲ್ಲೂಕು ಆಡಳಿತಾಧಿಕಾರಿ ನಂದಿನಿ, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಎನ್. ತಾರಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
Sharada Puryanaik ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನ ತಲುಪಿಸಬೇಕು- ಶಾರದಾ ಪೂರ್ಯಾ ನಾಯ್ಕ
Date:
