District Commission verdict in favor of consumers ಶಿವಮೊಗ್ಗ ಶರಾವತಿ ಸೆರಾಮಿಕ್ ಮಾಲೀಕ ಮರಿಸ್ವಾಮಿ ಎಂಬುವವರು ಮ್ಯಾನೇಜರ್, ಐರನ್‌ಬರ್ಡ್ ಎಲಿವರ‍್ಸ್ ಫ್ರೈವೇಟ್ ಲಿಮಿಟೆಡ್ ಸಂಜಯ ನಗರ, ಬೆಂಗಳೂರು ಇವರ ವಿರುದ್ದ ಎಲಿವೇಟರ್/ಲಿಫ್ಟ್ ಸಂಬಂಧ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವೂ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಎದುರುದಾರರಿಂದ ಒಂದು ಎಲಿವೇಟರ್/ಲಿಫ್ಟ್ ಅನ್ನು ಎಲ್ಲಾ ತೆರಿಗೆಗಳು ಸೇರಿ ರೂ.11021 ಲಕ್ಷಗಳಿಗೆ ಖರೀದಿಸಲು ಒಪ್ಪಿ, ಎದುರುದಾರರು ಲಿಫ್ಟ್ ಅನ್ನು ಎರಡು ತಿಂಗಳ ಒಳಗೆ ದೂರುದಾರರ ಕಛೇರಿಗೆ ಅಳವಡಿಸಿ ಒಂದು ವರ್ಷದ ವಾರಂಟಿಯನ್ನು ನೀಡಲು ಒಪ್ಪಂದ ಮಾಡಿಕೊಂಡಿದ್ದರು.
ಅದರಂತೆ ದೂರುದಾರರು ಶೇ.50ರ ಮೊತ್ತ ರೂ. 5.00 ಲಕ್ಷಗಳಿಗೆ ಏಪ್ರಿಲ್ 2024 ರಲ್ಲಿ ಚೆಕ್ಕನ್ನು ನೀಡಿದ್ದು, ಈ ಮೊತ್ತವನ್ನು ಎದುರುದಾರರು ಪಡೆದಿರುವುದಾಗಿ ತಿಳಿಸಿದ್ದು, ಹಣವನ್ನು ಪಡೆದ ನಂತರ ಇಂದಿನವರೆಗೂ ಕಛೇರಿಗೆ ಲಿಫ್ಟ್ ಅಳವಡಿಸದೆ ಇರುವುದರಿಂದ ದೂರುದಾರರು ಎದುರುದಾರರಿಗೆ ಹಲವು ಬಾರಿ ಕೇಳಿಕೊಂಡಿದ್ದಾಗಿ ಮತ್ತು ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದರೂ ಲೀಗಲ್ ನೋಟಿಸ್ ವಿಳಾಸದಾರರು ಇರುವುದಿಲ್ಲ ಎಂಬ ಷರಾದೊಂದಿಗೆ ವಾಪಸ್ಸು ಬಂದಿದ್ದಾಗಿ ಮತ್ತು ಎದುರುದಾರರು ಹಣ ಪಡೆದು ಲಿಫ್ಟ್ ಅಳವಡಿಸದೆ ಸೇವ ನ್ಯೂನತೆ ಎಸಗಿರುವುದಾಗಿ ತಿಳಿಸಿ ದೂರನ್ನು ಸಲ್ಲಿಸಿರುತ್ತಾರೆ.
ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟಿಸ್ ಕಳುಹಿಸಿದ್ದು, ನೋಟೀಸ್ ಜಾರಿಯಾಗದೆ ಬಂದಿದ್ದರಿಂದ ವಿಜಯ ಕರ್ನಾಟಕ ದಿನಪತ್ರಿಕೆ ಮೂಲಕ ದೂರುದಾರರ ಮನವಿಯಂತೆ ನೋಟೀಸ್ ನೀಡಿದ್ದು, ಎದುರುದಾರರು ಹಾಜರಾಗದೆ ಇರುವುದರಿಂದ ಎದುರುದಾರರನ್ನು ಏಕ-ಪಕ್ಷೀಯವೆಂದು ಪರಿಗಣಲಾಗಿರುತ್ತದೆ.
District Commission verdict in favor of consumers ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ದೂರುದಾರರ ವಾದನ್ನು ಆಲಿಸಿ ಎದುರುದಾರರು ದೂರುದಾರರಿಂದ ಹಣ ಪಡೆದಿರುವುದು ದಾಖಲೆಗಳಿಂದ ಸಾಬೀತಾಗಿದ್ದು, ಹಣ ಪಡೆದು ಒಪ್ಪಂದದ ಪ್ರಕಾರ ಲಿಫ್ಟ್ ಅಳವಡಿಸದೆ ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿ, ಈ ಆದೇಶವಾದ ದಿನಾಂಕದಿಂದ 45 ದಿನಗಳೊಳಗಾಗಿ ಎದುರುದಾರರು ದೂರುದಾರರಿಗೆ ರೂ. 5 ಲಕ್ಷಗಳನ್ನು ಶೇ.9ರ ಬಡ್ಡಿಯೊಂದಿಗೆ ದಿ;4/6/2024 ರಿಂದ ಪಾವತಿಸಬೇಕೆಂದು ತಿಳಿಸಿದ್ದಾರೆ. ತಪ್ಪಿದಲ್ಲಿ ಸದರಿ ಮೊತ್ತಕ್ಕೆ ಶೇ.12 ರಂತೆ ಬಡ್ಡಿಯನ್ನು ಈ ಆದೇಶವಾದ ದಿನಾಂಕದಿಂದ ಪೂರಾ ಹಣವನ್ನು ಪಾವತಿಸುವವರೆಗೂ ನೀಡಬೇಕೆಂದು ಹಾಗೂ ರೂ. 50 ಸಾವಿರಗಳನ್ನು ಮಾನಸಿಕ ಹಿಂಸೆಗಾಗಿ ಹಾಗೂ ರೂ. 10 ಸಾವಿರಗಳನ್ನು ವ್ಯಾಜ್ಯದ ಖರ್ಚಾಗಿ ಈ ಆದೇಶವಾದ ದಿನಾಂಕದಿಂದ 45 ದಿನಗಳೊಗಾಗಿ ಎದುರುದಾರರು ದೂರುದಾರರಿಗೆ ನೀಡಬೇಕು.
ತಪ್ಪಿದಲ್ಲಿ ಸದರಿ ಮೊತ್ತಗಳಿಗೆ ಶೇ.12 ರಂತೆ ಬಡ್ಡಿಯನ್ನು ಸೇರಿಸಿ ಈ ಆದೇಶವಾದ ದಿನಾಂಕದಿಂದ ಪೂರಾ ಹಣ ಪಾವತಿಸುವವರೆಗೂ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಮೇ 23 ರಂದು ಆದೇಶಿಸಿದೆ.