DVS College of Arts, Science and Commerce ಉದ್ಯೋಗ ಕ್ಷೇತ್ರದಲ್ಲಿ ಅನೇಕ ಅವಕಾಶಗಳಿದ್ದು, ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಮುನ್ನಡೆದಾಗ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬಹುದು ಎಂದು ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬೆಂಗಳೂರಿನ ಅಪ್ಟಂ ಹೆಲ್ತ್ ಮತ್ತು ಟೆಕ್ನಾಲಜೀಸ್ ಸಹಯೋಗದಲ್ಲಿ ವಿಜ್ಞಾನ ವಿಭಾಗದ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಅಪ್ಟಂ ಕ್ಯಾಂಪಸ್ ಡ್ರೈವ್ ಮತ್ತು ವಿಶೇಷ ನೇಮಕಾತಿ ಆಯ್ಕೆ ಪ್ರಕ್ರಿಯೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಿವಿಎಸ್ ವಿದ್ಯಾಸಂಸ್ಥೆಯ ಕಾಲೇಜಿನಲ್ಲಿ ನಾಲ್ಕು ವರ್ಷಗಳಿಂದ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಅಪ್ಟಂ ಸಂಸ್ಥೆಯು ಅನೇಕ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಶೇ. 99ರಷ್ಟು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಳ್ಳುವಲ್ಲಿ ನೆರವಾಗಿದೆ. ಎಲ್ಲ ವಿದ್ಯಾರ್ಥಿಗಳು ಅಗತ್ಯ ತರಬೇತಿ ಪಡೆದುಕೊಂಡು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಬೇಕು ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ವಿದ್ಯಾರ್ಥಿಗಳಿಗೆ ಅತ್ಯಂತ ಶ್ರದ್ಧೆಯಿಂದ ಮತ್ತು ಇಂದಿನ ತಾಂತ್ರಿಕ ಯುಗದ ಪರಿಣಿತಿಯನ್ನು ಕರಗತ ಮಾಡಿಕೊಂಡು ಎಲ್ಲ ರೀತಿಯ ಉದ್ಯೋಗಗಳಿಗೂ ಸನ್ನದ್ಧರಾಗಬೇಕು ಎಂದು ಸಲಹೆ ನೀಡಿದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಲಭಿಸಲು ಪೂರಕವಾಗಿ ಸರ್ಕಾರಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಹಳ ಮುಖ್ಯವಾಗಿ ಉದ್ಯೋಗ ಆಕಾಂಕ್ಷಿಗಳು ತಮ್ಮ ಪ್ರಯತ್ನವನ್ನು ನಿರಂತರವಾಗಿ ಮುಂದುವರಿಸಬೇಕು. ಉತ್ತಮ ಆದಾಯ ಇರುವ ಉದ್ಯೋಗಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
DVS College of Arts, Science and Commerce ದೇಶೀಯ ವಿದ್ಯಾಸಂಸ್ಥೆ ಶಿಕ್ಷಣದ ಜತೆಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಸಿಗುವಂತೆ ಪೂರಕವಾಗಿ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವಿದ್ಯಾರ್ಥಿಗಳು ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಂಗಳೂರಿನ ಅಪ್ಟಂ ಹೆಲ್ತ್ ಮತ್ತು ಟೆಕ್ನಾಲಜೀಸ್ ಸಂಸ್ಥೆಯ ದಿವ್ಯದರ್ಶನ್ ಮತ್ತು ಕ್ಲೆಮೆಂಟ್ ಸಿಕ್ವೆರಿಯಾ ಅವರು ಉದ್ಯೋಗ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಿ ಪ್ರವೇಶ ಪರೀಕ್ಷೆ ನಡೆಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಕುಮಾರಸ್ವಾಮಿ.ಎನ್., ಪ್ಲೇಸ್‌ಮೆಂಟ್ ಸೆಲ್ ಸಂಯೋಜಕ ಡಾ. ಚಂದ್ರು.ಕೆ ಪಾಲ್ಗೊಂಡಿದ್ದರು. ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.