- ಡಾ.ರತ್ನಾಕರ್. ಶಿವಮೊಗ್ಗ
Klive Special Article ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಮನೆ ಬಿಟ್ಟಿದ್ದು 1977…48 ವರ್ಷಗಳ ಹಿಂದೆ 17ನೇ ವಯಸ್ಸಿನಲ್ಲಿ. ಸುಮಾರು ಹತ್ತನೇ ವಯಸ್ಸಿಗೆ ಆಟ (ಯಕ್ಷಗಾನ ಬಯಲಾಟ )ರಾತ್ರಿ ಇಡೀ ನೋಡುವ ಚಟ ಹತ್ತಿ ಆಗಿತ್ತು. ನನ್ನಣ್ಣ ಸುಮಾರು 1980ರ ಹಾಗೆ ಉಡುಪಿ ಯಕ್ಷಗಾನ ಕೇಂದ್ರದಿಂದ ತರಬೇತಿ ಹೊಂದಿದ ಕಲಾವಿದ ಆಗಿದ್ದ. ಅದಕ್ಕೂ ಮುಂಚೆ ಅವನ ಯಕ್ಷಗಾನ ಆಸಕ್ತಿಯನ್ನು ಪ್ರಕಟ ಪಡಿಸಲು ಮನೆಯಲ್ಲಿ ಒಂದೇ ಒಂದು ಯಕ್ಷಗಾನ ಫೋಟೋ ಹಾಕಿದ್ದ… ಅದೇ ದಿವಂಗತ. ಕೆರೆಮನೆ ಶ್ರೀ ಗಜಾನನ ಹೆಗಡೆ ಅವರ ಸ್ತ್ರೀ ವೇಷದ ಫೋಟೋ. ನಮಗ್ಯಾರಿಗೂ ಮನೆಯಲ್ಲಿ ಅಣ್ಣ ಯಕ್ಷಗಾನ ರಂಗಕ್ಕೆ ಹೋಗುತ್ತಾನೆ ಅನ್ನುವುದನ್ನೂ ನಂಬಲು ಅಸಾಧ್ಯ. ಪಿಯುಸಿ ಪ್ರಥಮ ವರ್ಷಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ ಮನೆಯಲ್ಲಿರುವ ಕಿರಾಣಿ ಅಂಗಡಿಯಲ್ಲಿ ಅಪ್ಪನಿಗೆ ಸಹಕಾರಿ ಆಗಿ ನಿಂತ. ಇವತ್ತಿಗೂ ನಮಗೆ ವಿಸ್ಮಯ, ಅಪ್ಪಯ್ಯ ಯಾಕೆ ಅವನಿಗೆ ಏನೂ ಹೇಳದೆ ಉಳಿದರು ಅಂತ. ಅಂದಿನ ಅಪ್ಪಯ್ಯನ ಮೌನ ಸಮ್ಮತಿಯ ಹಿಂದೆ ನನ್ನ ಅಣ್ಣನ ಜೀವನ ಸಾಧನೆಗಳೇ ಇದ್ದವೋ ಅಂತ…!
ನಮಗೆ ಆ ದಿನಗಳಲ್ಲಿ ಕೆರೆಮನೆ ಮೇಳದ ಮೇಲೆ ಅಪಾರ ಗೌರವ.ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ ಅಂದರೆ ದೇವರ ಪ್ರತಿನಿಧಿಗಳೇ ಅನ್ನುವಷ್ಟು. ಯಾವುದೇ ದುಶ್ಚಟಗಳಿಲ್ಲದೆ ಕೇವಲ ಪೌರಾಣಿಕ ಪ್ರಸಂಗಗಳನ್ನೇ ಅಭಿನಯಿಸಿ ರಂಗದ ಮೇಲೆ ರಾಮ, ಕೃಷ್ಣ, ಬಲರಾಮ, ರಾವಣ, ಕಾರ್ತವೀರ್ಯ, ಸುಧನ್ವ, ಹರಿಶ್ಚ0ದ್ರ, ಅರ್ಜುನ, ನಳ,
ಋತುಪರ್ಣ ಇತ್ಯಾದಿ ನಾಯಕ, ಖಳನಾಯಕ ರನ್ನು ಜೀವಂತ ತೋರಿಸುವ ಮಹಾನ್ ಕಲಾವಿದರು.
Klive Special Article ಶ್ರೀ. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ಮೇಳ ಕಟ್ಟಿ 90 ವರ್ಷಗಳು ಸಂದವು. ಆರ್ಥಿಕವಾಗಿ, ಸಾಮಾಜಿಕವಾಗಿ, ವ್ಯವಹಾರಿಕವಾಗಿ ಎಲ್ಲ ಏಳು ಬೀಳುಗಳನ್ನು ಅನುಭವಿಸಿದರೂ ಅಸ್ತಿತ್ವಕ್ಕಾಗಿ ಯಾವ ಗಿಮಿಕ್ಸ್, ಅಡ್ಡ ದಾರಿ ಹಿಡಿಯಲೇ ಇಲ್ಲ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಮಂಡಳಿಯ ಮೇಲೆ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದವರು ಇದ್ದರೆ, ವಿಶ್ವವಿದ್ಯಾಲಯ ಚಿನ್ನದ ಪದಕವನ್ನು ನೀಡಿದೆ. ಒಂದೇ ಕುಟುಂಬದ ಮೂರು ಕಲಾವಿದರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿ ಸಿಕ್ಕಿರುವ ಏಕೈಕ ಯಕ್ಷಗಾನ ಮೇಳ, ಕೆರೆಮನೆ ಮೇಳ.
ನನ್ನ ಅಣ್ಣ ಯಕ್ಷಗಾನ ಕಲಾವಿದನಾದ ಮೇಲೆ ನನಗೆ ಶಂಭು ಹೆಗಡೆಯವರ ಆತ್ಮೀಯತೆ ಸಿಕ್ಕಿದ್ದು ಭಾಗ್ಯ. ಮಂಟಪ ಕುಟುಂಬದ ಮೇಲೆ ಅಪಾರ ಗೌರವ ಅವರಿಗೆ. ಶಿವಮೊಗ್ಗಕ್ಕೆ ಬಂದಾಗಲೆಲ್ಲ ಶ್ರೀ. ಲಕ್ಷ್ಮಿನಾರಾಯಣ ಕಾಶಿ ಅವರ ಮನೆಯಲ್ಲಿ ಉಳಿಯುತ್ತಿದ್ದರು. ಇಪ್ಪತ್ತೈದು ವರ್ಷಗಳ ಹಿಂದಿನ ಕಥೆಗಳು. ನನ್ನ ಬಿಡುವಿಲ್ಲದ ಆಸ್ಪತ್ರೆ ಕೆಲಸದ ಮಧ್ಯೆ ರಾತ್ರಿ ಅವರನ್ನು ಕಾಣಲು ಕಾಶಿಯವರ ಮನೆಗೆ ಹೋಗಿ ಗಂಟೆ ಗಟ್ಟಲೆ ಮಾತಾಡುತ್ತಿದ್ದೆವು. ಶ್ರೀ. ಶಂಭು ಹೆಗಡೆ ಅವರೊಡನೆ ಮಾಡಿದ ಸಂಭಾಷಣೆಗಳನ್ನು ಮುದ್ರಿಸಿ ಇಟ್ಟಿದ್ದರೆ ಬೆಲೆ ಕಟ್ಟಲಾಗದ್ದು. ಯಾವತ್ತೂ ಅವರು ಇನ್ನೊಬ್ಬ ಕಲಾವಿದರ ಬಗ್ಗೆ ಕೆಟ್ಟ ಮಾತು ಆಡಿದ್ದಿಲ್ಲ. ನಮ್ಮ ಮಾತಿನಲ್ಲಿ ಅಂತಹ ವಿಷಯಗಳು ಬಂದರೆ ಮೌನವಾಗಿ ಮಾತು ಬದಲಿಸುತ್ತಿದ್ದರು. ಒಮ್ಮೆಯೂ ಮೇಳದ ಆಟವನ್ನು ಆಡಿಸುವ ಬಗ್ಗೆ, ಆರ್ಥಿಕ ಸಹಕಾರಕ್ಕಾಗಲಿ ಕೇಳಲೇ ಇಲ್ಲ.ಯಕ್ಷಗಾನದ ಅಂದಿನ ಆಗು ಹೋಗುಗಳು, ಬದಲಾವಣೆಗಳು, ಆಪತ್ತುಗಳು ಎಲ್ಲವನ್ನೂ ಸಮಗ್ರವಾಗಿ ನಮಗೆ ವಿವರಿಸುತ್ತ, ಕಾಲಮಿತಿ ಪ್ರಯೋಗದ ಅಗತ್ಯತೆಯನ್ನು ಅಂದೇ ನಿರ್ಧರಿಸಿ ನಡೆದರು.
ಅವರ ಮಂಡಳಿಯ ಪ್ರದರ್ಶನದ ಮಂಗಳ ಪದ್ಯದ ನಂತರ ಅವರು ಸ್ಟೇಜ್ ಗೆ ಬಂದು ಐದು ಹತ್ತು ನಿಮಿಷವಾದರೂ ಮಾತನಾಡಿ ಹೊಸ ವಿಷಯಗಳನ್ನು ಹೇಳುವುದನ್ನು ಕೇಳದೆ ಪ್ರೇಕ್ಷಕರು ಏಳುತ್ತಿರಲಿಲ್ಲ.
ಅವರು ಹಾಕಿಕೊಟ್ಟ ದಾರಿಯಲ್ಲಿ ಹೊಸ ಯೋಚನೆಗಳಿಂದ ಹೊಸ ಪ್ರಯೋಗಗಳನ್ನು ಸಂಪ್ರದಾಯದ ಚೌಕಟ್ಟಿನೊಳಗೆ ಮಾಡುತ್ತ ಪ್ರಸ್ತುತ ಶಂಭು ಹೆಗಡೆ ಅವರ ಏಕ ಮಾತ್ರ ಪುತ್ರ ಶಿವಾನಂದ ಹೆಗಡೆ ಹೋರಾಟ ಮುಂದುವರಿಸಿದ್ದಾರೆ. ತಂದೆಯ ನಿರ್ಗಮನದ ನಂತರ ಸಾಕಷ್ಟು ಅಡೆತಡೆಗಳು, ಚಾಲೆಂಜ್ ಗಳಿದ್ದರು ಸಂಪ್ರದಾಯ ಬಿಡಲಿಲ್ಲ, ಯಕ್ಷಗಾನದ ಮೂಲಭೂತ ಸ್ವರೂಪ ನೋಡಬೇಕು ಅಂದರೆ ಇಡಗುಂಜಿ ಮೇಳದ ಆಟವೇ ಆಗಬೇಕು ಅನ್ನುವ ಅನಿವಾರ್ಯತೆ ಇದೆ.
ಇನ್ನೂ ಖುಷಿ ವಿಚಾರ ಅಂದರೆ ಶಿವಾನಂದನ ಮಗ ಶ್ರೀಧರ ಹೆಗಡೆ ಡಿಗ್ರಿ ಓದಿಯೂ ಅಪ್ಪನಿಗೆ ಸಾಥ್ ನೀಡಿರುವುದು. ಶಂಭು ಹೆಗಡೆಯವರು ಕಲಾವಿದನಾಗಿ ವಿಜೃಂಭಿಸಿದರೆ, ಶಿವಾನಂದ ಹೆಗಡೆ ಸಂಘಟನಾ ಚತುರನಾದರು.ಶ್ರೀಧರ ಹೆಗಡೆ ಈಗ ನಾಲ್ಕನೇ ತಲೆಮಾರು. ಮುಂದೆ ಮಂಡಳಿಯನ್ನು ನಡೆಸಬೇಕಾದ ಜವಾಬ್ದಾರಿ ಇದೆ. ಹೊಸಪ್ರಯೋಗ ಏಕವ್ಯಕ್ತಿ “ಮಾರಾವತಾರ ” ಪ್ರದರ್ಶನದ ಮೂಲಕ ತನ್ನೊಳಗು ಅಜ್ಜ ಶಂಭು ಹೆಗಡೆ ಇದ್ದಾರೆ ಅನ್ನುವುದನ್ನೂ ತೋರಿದ್ದಾರೆ.
ನಮ್ಮ ರಾಮಾಯಣ, ಮಹಾಭಾರತ, ಭಾಗವತ ಕಥಾನಕಗಳನ್ನೇ ಪ್ರದರ್ಶಿಸುವ ಇಡಗುಂಜಿ ಮೇಳ ಈಗ ಪ್ರಸ್ತುತ ಸುದ್ದಿ ಮಾಡಿರುವುದು 2024ರ “ಯುನೆಸ್ಕೊ”
ಹೆರಿಟೇಜ್ ಕಲೆಯಾಗಿ ಗುರುತಿಸಲ್ಪಟ್ಟಿದ್ದು.
ಪ್ರಪಂಚದ 58 ಕಲೆಗಳು ಈ ಮಾನ್ಯತೆ ಪಡೆದಿದ್ದರೆ ಭಾರತದಲ್ಲಿ 2024ರಲ್ಲಿ ಮಾನ್ಯತೆ ಸಿಕ್ಕಿದ್ದು ನಮ್ಮ ರಾಜ್ಯದ ಕಲೆ, ಯಕ್ಷಗಾನಕ್ಕೆ. ಈ ಆಯ್ಕೆಯ ಪ್ರಕ್ರಿಯೆಯ ಬಗ್ಗೆಯೇ ಲೇಖನ ಬರೆಯಬಹುದು. ಅರ್ಜಿ ಹಾಕಿ ವಸೂಲಿ ಬಾಜಿ ಮಾಡಿದರೆ, ರಾಜಕಾರಣದಿಂದ ಸಿಗುವ ಮಾನ್ಯತೆಯೇ ಅಲ್ಲ….!
ಇವೆಲ್ಲವನ್ನೂ ಶ್ರೀ. ಕೆರೆಮನೆ ಶಿವಾನಂದ ಹೆಗಡೆ ಅವರ ಮಾತಿನ ಮೂಲಕವೇ ಕೇಳಬೇಕು ಅಂದರೆ, ನಾಳೆ ಜನವರಿ 26,ಭಾನುವಾರ ಸಂಜೆ 6ಕ್ಕೆ ಶಿವಮೊಗ್ಗ, ಸುವರ್ಣ ಸಂಸ್ಕೃತಿ ಭವನಕ್ಕೆ ಬನ್ನಿ…!
ಉಚಿತ ಪ್ರವೇಶ ಇರುವ “ಸೀತಾಪಹಾರ”ಯಕ್ಷಗಾನ ಪ್ರಸಂಗ ನೋಡಿ…. “ಯುನೆಸ್ಕೊ” ಗೌರವಕ್ಕೆ ಅರ್ಹರೋ ನೀವೇ ಹೇಳಿ…!