Kannada Development Authority ಇಂದಿನ ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು, ಸಮಾಜವಾದದ ತತ್ವಸಿದ್ಧಾಂತಗಳ ಕುರಿತು ಜನರು ಸಿನಿಕರಾಗಿರುವುದು ಪ್ರಮುಖ ಕಾರಣವಾಗಿದೆ ಎಂದು ಖ್ಯಾತ ಸಮಾಜವಾದಿ ಚಿಂತಕ ಕೋಣಂದೂರು ಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗೋಕಾಕ್ ಚಳವಳಿಯ ನೆನಪಿನಲ್ಲಿ ಕನ್ನಡ ಚಳವಳಿಯ ಪ್ರವರ್ತಕ ಸನ್ಮಾನವನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ತಮ್ಮ ಸ್ವಗೃಹದಲ್ಲಿ ಸ್ವೀಕರಿಸಿ ಮಾತನಾಡಿದ ಅವರು ಜನಪರವಾದ ಹೋರಾಟಗಳಿಲ್ಲದೇ ಇಂದು ಸಮಾಜವು ಸೊರಗುತ್ತಿದ್ದು, ಬಡವ ಬಲ್ಲಿದರ ನಡುವಿನ ಕಂದಕ ಹಿರಿದಾಗುತ್ತಲೇ ಇದೆ.
ತಮ್ಮ ಕಾಲದ ಚಳವಳಿಗಳಲ್ಲಿನ ಸಾಮಾಜಿಕ ಕಳಕಳಿ, ತತ್ವನಿಷ್ಠೆಗಳು ಇಂದು ಕಾಣುತ್ತಿಲ್ಲ, ಹೋರಾಟಗಳಿಗೆ ಪ್ರೇರಣೆಯೂ ಸಿಗುತ್ತಿಲ್ಲ. ಕನ್ನಡ ಭಾಷೆ ಸೊರಗುತ್ತಿರುವುದಕ್ಕೆ ಜನರ ಅನಾಸಕ್ತಿಯ ಜೊತೆಯಲ್ಲಿ ಸರ್ಕಾರಗಳ ಧೋರಣೆಯೂ ಕಾರಣವಾಗಿದೆ. ಇದು ವಿಷಾದನೀಯವಾದ ಸಂಗತಿ ಎಂದರು.
Kannada Development Authority ಸಮಾಜವಾದಿ ಆದರ್ಶ ತತ್ತ್ವಸಿದ್ಧಾಂತಗಳನ್ನು ನಂಬಿದ ಶಾಂತವೇರಿ ಗೋಪಾಲಗೌಡ ಅವರಿಂದಾಗಿ ತಮ್ಮ ಬದುಕಿಗೆ ಅರ್ಥ ದೊರಕಿದ್ದು ಅವರ ನಿರಂತರ ಮಾರ್ಗದರ್ಶನ ತಮ್ಮ ಹೋರಾಟದ ಮನಸ್ಥಿತಿಗೆ ಪ್ರೇರೇಪಣೆಯಾಯಿತೆಂದು ನೆನೆದ ಅವರು ಅಂದಿನ ದಿನಮಾನಕ್ಕೆ ಸತ್ವಯುತವಾದ ಹೋರಾಟ ಅವಶ್ಯಕವಿತ್ತು. ತಮ್ಮ ಜವಾಬ್ದಾರಿಯನ್ನು ತಾನು ನಿರ್ವಹಿಸಿದೆ ಎನ್ನುವ ತೃಪ್ತಿ ತನಗೆ ಇದೆ ಎಂದರು.
ಈ ಸಂದರ್ಭದಲ್ಲಿ 91 ವರ್ಷದ ಅವರು ಲೋಹಿಯಾ, ಶಾಂತವೇರಿ ಮತ್ತು ಜಾರ್ಜ್ ಫೆರ್ನಾಂಡೀಸ್ ಅವರೊಡನೆಯ ಒಡನಾಟದ ಸ್ವಾರಸ್ಯಕರ ನೆನಪುಗಳನ್ನು ಲವಲವಿಕೆಯಿಂದ ಹಂಚಿಕೊಂಡರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಕೋಣಂದೂರು ಲಿಂಗಪ್ಪನವರನ್ನು ಸನ್ಮಾನಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಉಪಸ್ಥಿತರಿದ್ದರು.