Thursday, January 23, 2025
Thursday, January 23, 2025

Kannada Development Authority ಏಕರೀತಿಯ ಭಾಷಾನೀತಿಯನ್ನು ಅನುಷ್ಠಾನಕ್ಕೆ ತರುವ ಅಗತ್ಯ ಇದೆ- ಡಾ.ಪುರುಷೋತ್ತಮ ಬಿಳಿಮಲೆ

Date:

Kannada Development Authority ಕೇಂದ್ರ ಸರ್ಕಾರವು ಭಾರತದಂತಹ ಬೃಹತ್ ರಾಷ್ಟ್ರದ ಎಲ್ಲಾ ರಾಜ್ಯಗಳು ಅನ್ವಯವಾಗುವಂತೆ ಏಕರೀತಿಯ ಭಾಷಾ ನೀತಿಯನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.
ಶಿವಮೊಗ್ಗಕ್ಕೆ ಭೇಟಿ ನೀಡಿ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಸರ್ಕಾರದ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ನೆರೆಯ ರಾಜ್ಯ ತಮಿಳುನಾಡು ದ್ವಿಭಾಷಾ ಸೂತ್ರವನ್ನು ಅನುಸರಿಸಿದರೆ, ಕರ್ನಾಟಕವು ತ್ರಿಭಾಷಾ ಸೂತ್ರವನ್ನು ಅನುಸರಿಸುತ್ತಿದೆ. ಈ ಭಾಷಾನೀತಿಗಳ ಅನುಷ್ಠಾನದಿಂದಾಗಿ ಆಗಿರುವ ಲಾಭ-ನಷ್ಟಗಳನ್ನು ಪರಿಶೀಲಿಸಿದಾಗ ನಮ್ಮ ರಾಜ್ಯಕ್ಕೆ ಆಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ ಎಂದ ಅವರು, ಕರ್ನಾಟಕವೂ ಕೂಡ ಕನ್ನಡದ ಭಾಷಾ ಬೆಳವಣಿಗೆ ಮತ್ತು ವಿಕಾಸದ ದೃಷ್ಟಿಯಿಂದ ದ್ವಿಭಾಷಾ ಸೂತ್ರವನ್ನೇ ಅನುಸರಿಸುವ ಅಗತ್ಯವಿದೆ ಎಂದವರು ನುಡಿದರು.
ಮುಂದಿನ ಒಂದೆರೆಡು ತಿಂಗಳೊಳಗಾಗಿ ರಾಜ್ಯದಲ್ಲಿನ ಸಿ.ಬಿ.ಎಸ್.ಸಿ. ಮತ್ತು ಐ.ಸಿ.ಎಸ್.ಇ ಮುಂತಾದ ಕೇಂದ್ರ ಪುರಸ್ಕೃತ ಪಠ್ಯಕ್ರಮಗಳೊಂದಿಗೆ ಪ್ರಾದೇಶಿಕ ಭಾಷೆ ಕನ್ನಡ ಕಲಿಕೆಗೂ ಕೇಂದ್ರದಿಂದಲೇ ಆದೇಶ ಹೊರಡಲಿದೆ. ಈ ಬಗ್ಗೆ ಈಗಾಗಲೇ ಕೇಂದ್ರದ ಸಚಿವರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ಅವರು ನುಡಿದರು.
ಪ್ರಸಕ್ತ ಸಾಲಿನ ಜೂನ್ ಶೈಕ್ಷಣಿಕ ಸಾಲಿನಿಂದಲೇ ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಆರಂಭಗೊಳ್ಳಲಿದೆ. ಹೊರರಾಜ್ಯದಲ್ಲಿರುವ ಕನ್ನಡಪೀಠಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಆಡಳಿತಾರೂಢ ರಾಜ್ಯ ಸರ್ಕಾರವು ಪ್ರತಿ ವಿಶ್ವವಿದ್ಯಾಲಯಕ್ಕೆ ಒಂದೇ ಬಾರಿಗೆ ೧೦ಕೋಟಿ ರೂ.ಗಳ ಇಡಿಗಂಟನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದ ಅವರು, ಹೊರ ರಾಜ್ಯ ಮತ್ತು ದೇಶಗಳಲ್ಲಿ ಕನ್ನಡ ಪೀಠಗಳನ್ನು ತೆರಯಬೇಕು. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ಬಜೆಟ್‌ನೊಳಗಾಗಿ ಕಾಯ್ದಿರಿಸುವ ವಿಶ್ವಾಸವಿರುವುದಾಗಿ ಅವರು ತಿಳಿಸಿದರು.
Kannada Development Authority ಅನ್ಯಭಾಷಿಕರು ಸರಳವಾಗಿ ಕನ್ನಡಭಾಷೆ ಕಲಿಯಲು ಅನುಕೂಲವಾಗುವಂತೆ ೩೬ಗಂಟೆಗಳ ಅವಧಿಯ ಪಠ್ಯಕ್ರಮವನ್ನು ತಯಾರಿಸಲಾಗಿದ್ದು, ಬೆಂಗಳೂರಿನ ೩೦ಕಲಿಕಾ ಕೇಂದ್ರಗಳಲ್ಲಿ ಸುಮಾರು ೬೦೦ಮಲೆಯಾಳಿಗಳು ಹಾಗೂ ಇತರೆ ಪ್ಲಾಟ್‌ಗಳಲ್ಲಿ ವಾಸವಾಗಿರುವ ಅಸಂಖ್ಯಾತ ಜನರಿಗೆ ಕನ್ನಡ ಕಲಿಕಾ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಕಲಿಕಾ ಕೇಂದ್ರಗಳ ಸಂಖ್ಯೆಯನ್ನು ೧೦೦ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದರು.ಸ್ಥಳೀಯ ಜನರು ತಮ್ಮ ಭಾಷೆಯ ಸೊಗಡನ್ನು ಸಂಭ್ರಮಿಸುವಂತೆ ಹಾಗೂ ಇಲ್ಲಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದಂತೆ ಸ್ಥಗಿತಗೊಂಡಿರುವ ಸಹ್ಯಾದ್ರಿ ಉತ್ಸವವನ್ನು ಪುನರ್ ಆರಂಭಗೊಳಿಸಬೇಕು. ಅದಕ್ಕಾಗಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದ ಅವರು, ಹೊಸದಾಗಿ ಆರಂಭಗೊಳ್ಳುತ್ತಿರುವ ಕೈಗಾರಿಕಾ ಘಟಕಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ವಿಮಾನ ನಿಲ್ದಾಣ ಮುಂತಾದ ಸ್ಥಳಗಳಲ್ಲಿ ಕನ್ನಡ ಕುಸಿಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕೇವಲ ಸರ್ಕಾರಿ ಆದೇಶಗಳಿಂದ ಕನ್ನಡದ ಉಳಿವು ಮತ್ತು ವಿಕಾಸ ಸಾದ್ಯವಿಲ್ಲ. ಕನ್ನಡವನ್ನು ಹೃದಯದ ಭಾಷೆಯಾಗಿ ಪರಿಗಣಿಸಿ, ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಇಲ್ಲಿನ ಜವಾಬ್ದಾರಿಯುತ ಅಧಿಕಾರಿಗಳು, ಜನಪ್ರತಿನಿಧಿಗಳು ಕನ್ನಡ ಕಟ್ಟುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನ್ಯಭಾಷಿಕ ನೌಕರರ ನೇಮಕಾತಿಯಿಂದಾಗಿ ಸಾಮಾಜಿಕ ಸಾಮರಸ್ಯ ಕದಡುತ್ತಿದೆ. ಬ್ಯಾಂಕುಗಳ ನೇಮಕಾತಿ ಪರೀಕ್ಷೆಗಳೂ ಕೂಡ ಆಂಗ್ಲ ಮತ್ತು ಹಿಂದಿ ಬಾಷೆಯಲ್ಲಿ ನಡೆಯುತ್ತಿರುವುದರಿಂದ ಕನ್ನಡಿಗರು ಬ್ಯಾಂಕುಗಳ ನೇಮಕಾತಿ ಪರೀಕ್ಷೆಯಿಂದ ಹೊರಗುಳಿಯುತ್ತಿದ್ದಾರೆ. ಈ ನ್ಯೂನತೆಯನ್ನು ಸರಿಪಡಿಸಲು ಪ್ರಾದೇಶಿಕ ನೇಮಕಾತಿ ಪ್ರಾಧಿಕಾರಿಗಳು ಆರಂಭಗೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದವರು ನುಡಿದರು.
ಸ್ಥಳೀಯ ಹೋಟೆಲ್, ಕಟ್ಟಡ ನಿರ್ಮಾಣ ಮುಂತಾದ ಕಡೆಗಳಲ್ಲಿ ಅನ್ಯಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ಅನುಕೂಲವಾಗುವಂತೆ ಕೌಶಲ್ಯ ತರಬೇತಿಗಳನ್ನು ನೀಡಬೇಕಾದ ಅಗತ್ಯವಿದೆ. ಕೈಗಾರಿಕೆಗಳಲ್ಲಿನ ಸಿ. ಮತ್ತು ಡಿ ವೃಂದದ ಹುದ್ದೆಗಳ ನೇಮಕಾತಿಯಲ್ಲೂ ಪ್ರಾತಿನಿಧ್ಯ ದೊರೆಯುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ನಗರಗಳಲ್ಲಿ ವಾಣಿಜ್ಯ ವ್ಯವಹಾರ ಕೇಂದ್ರಗಳಲ್ಲಿ ಅಳವಡಿಸಿರುವ ಫಲಕಗಳು ಪೂರ್ಣಪ್ರಮಾಣದಲ್ಲಿ ಕನ್ನಡ ಭಾಷೆಯಲ್ಲಿಲ್ಲ. ಶೇ. ೧೦೦ರಷ್ಟು ಈ ಕ್ಷೇತ್ರದ ಸಾಧನೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆದ್ದಾರಿಗಳಲ್ಲಿನ ಗ್ರಾಮಗಳ ಹೆಸರುಗಳ ಬರವಣಿಗೆಯಲ್ಲೂ ಲೋಪಗಳಿರುವುದನ್ನು ಗುರುತಿಸಲಾಗಿದೆ. ಅವುಗಳನ್ನು ಸಕಾಲದಲ್ಲಿ ಸರಿಪಡಿಸುವ ಕಾರ್ಯ ಇಲ್ಲಿನ ವಾಸಿಗರಿಂದಲೇ ಆಗಬೇಕಾದ ಅಗತ್ಯವಿದೆ ಎಂದರು.
ಅನೇಕ ಕ್ಷೇತ್ರಗಳನ್ನು ಗಮನಿಸಿದಾಗ ನಿರೀಕ್ಷಿತ ಪ್ರಮಾಣದಲ್ಲಿ ಕನ್ನಡ ಭಾಷೆಯ ಅನುಷ್ಠಾನ ಕಾರ್ಯ ಆಗದಿರುವುದು ವಿಷಾದದ ಸಂಗತಿ. ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿತಗೊಂಡಿದೆ. ಅನ್ಯಭಾಷೆಯ ಕಲಿಕೆಗೆ ವಿರೋಧವಿಲ್ಲ. ಆದರೆ, ಕನ್ನಡ ನಿರ್ಲಕ್ಷ್ಯ ಸಲ್ಲದು-ಸಹಿಸಲಾಗದು ಎಂದ ಅವರು, ಈ ನೆಲದಲ್ಲಿ ವಾಸವಾಗಿರುವ ಎಲ್ಲ ಕನ್ನಡಿಗರು ಕನ್ನಡವನ್ನು ಉಳಿಸಿ, ಬೆಳೆಸುವ ಸಂಕಲ್ಪ ಮಾಡಬೇಕಾದ ಅಗತ್ಯವಿದೆ. ಅತ್ಯಂತ ಮೌಲ್ಯಯುತ ಬರಹಗಳು ಕನ್ನಡದಲ್ಲಿ ಮೂಡಿಬಂದಿವೆ. ಅಗ್ರಪಂಕ್ತಿಯ ಲೇಖಕರು ಕನ್ನಡದಲ್ಲಿದ್ದಾರೆ. ವಚನಕಾರರ ಪರಂಪರೆಯ ಉಗಮದ ಪುಣ್ಯಭೂಮಿ ಇದಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಸಂತೋಷ್ ಹಾನಗಲ್, ಡಾ.ರಾಮಚಂದ್ರಪ್ಪ, ಪ್ರಣೀತ್‌ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Mallikarjun Kharge ಸಂವಿಧಾನ & ಪ್ರಜಾಪ್ರಭುತ್ವ ಇಲ್ಲದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗುತ್ತಿತ್ತು- ಮಲ್ಲಿಕಾರ್ಜುನ ಖರ್ಗೆ

Mallikarjun Kharge ಬೆಳಗಾವಿ, ಜ.21 ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ...

MESCOM ಜನವರಿ 24. ಶಿವಮೊಗ್ಗ ನಗರ ಉಪವಿಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ – 3 ಕಛೇರಿಯಲ್ಲಿ ಜ....