Saturday, December 6, 2025
Saturday, December 6, 2025

Klive Special Article ನೆನಪಾಗಿ ಸಲ್ಲುವ ಮಹನೀಯ “ನಾಡಿ” ಸ್ಮರಣ ಲೇಖನ: ಪ್ರಭಾಕರ ಕಾರಂತ

Date:

Klive Special Article ನಮ್ಮ ಒಲುವಿನ ಸಾಹಿತಿ ನಾ.ಡಿಸೋಜ ಇನ್ನಿಲ್ಲ. ಘನತೆಯ ಬದುಕು ಸವೆಸಿ ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ. ಶರಾವತಿ ಯೋಜನೆಯಲ್ಲಿ ಹಣ ಎಣಿಸುವ ಆಯಕಟ್ಟಿನ ಸ್ಥಾನದಲ್ಲಿದ್ದೂ ಒಂದು ಕ್ಷಣ ಭ್ರಷ್ಟ ಹಣ ಅವರು ಮುಟ್ಟಿದವರಲ್ಲ. ಸಾಗರದಲ್ಲಿ ಕಷ್ಟದಿಂದ ಒಂದು ಪುಟ್ಟ ಮನೆಯಷ್ಟೇ ಅವರಿಗೆ ಉಳಿಸಿದ್ದರಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿದ್ದು. ಮುಳುಗಡೆಯ ನೋವನ್ನು ಪ್ರಥಮ ಬಾರಿ ಅವರು ಬರೆದವರು. ಸಂಕಟವನ್ನು ಸ್ವತಹ ಅನುಭವಿಸಿದವರಂತೆ ಬರೆದರು. ಪರಕಾಯ ಪ್ರವೇಶ ಸಾಧ್ಯವಾಯಿತೆಂದೇ ಇಂತಹ ಬರಹ ಬರಲು ಸಾಧ್ಯವಾಯಿತು. ನನ್ನನ್ನು ಅವರತ್ತ ಸೆಳೆದಿದ್ದೇ ಈ ಬರಹ.ಸರ್ ನಿಮ್ಮ ಮಾತು ಕೇಳಬೇಕು, ನಾನು ಮುಳುಗಡೆಯ ಸಂತ್ರಸ್ಥ, ಕೊಪ್ಪ ಬರಬೇಕು ನೀವು ಎಂದು ಒಂದು ಪತ್ರ ಬರೆದಿದ್ದಕ್ಕೆ ಉತ್ತರಿಸಿ ಬಂದೇ ಬಿಟ್ಟರಲ್ಲ ಆಗಿನಿಂದ ನನ್ನಂತಹ ಸಾಮಾನ್ಯನೊಂದಿಗೂ ಹಿರಿಯರ ನಂಟು ಸಾಧ್ಯವಾಯಿತು. ಮತ್ತೆ ಹರಿಸಿದ್ದೆಲ್ಲಾ ಪ್ರೀತಿಯ ಧಾರೆ.ಎಷ್ಟು ಸಾರಿ ಅವರು ದಂಪತಿಗಳು ನಮ್ಮ ಮನೆಯಲ್ಲೋ ನಾನು ಅವರ ಮನೆಯಲ್ಲೋ ಕಲೆತು ಹರಟಿಲ್ಲ. ಈ ಭಾಗದ ಯಾವುದೇ ಕಾರ್ಯಕ್ರಮಕ್ಕೆ ಕರೆದರೆ ಇಲ್ಲ ಅಂದಿದ್ದೇ ಇಲ್ಲ. ಮಾತ್ರವಲ್ಲ ಎಲ್ಲಿಗೋ ಹೋಗುವಾಗಲೂ ನನ್ನ ಮನೆಗೆ ಬಂದು ಒಂದಿಷ್ಟು ಹೊತ್ತು ಮಾತನಾಡಿ ಹೋಗಿದ್ದೂ ಇದೆ.
ರಮೇಶ್ ಬೇಗಾರ್ ಮಲೆನಾಡ ಮಡಿಲಿಂದ ದಾರವಾಹಿ ದೂರದರ್ಶನಕ್ಕಾಗಿ ಮಾಡುವಾಗ ನಾ.ಡಿಸೋಜರವರದ್ದೂ ಒಂದು ಕಥೆ ಚಿತ್ರಿಸಬೇಕಿತ್ತು. ಕೇಳಿದರೆ ಪುಕ್ಸಟ್ಟೆ ಹಕ್ಕು ಕೊಟ್ಟೇ ಬಿಟ್ಟರು. ನಾವು ಐದಾರು ಜನ ಸಾಗರದ ಅವರ ಮನೆಗೆ ಚಿತ್ರೀಕರಿಸಲು ಹೋಗಿದ್ದೆವು. ಸಂದರ್ಶನ ನಾನೇ ಮಾಡಿದ್ದು. ಚಿತ್ರಿಕರಣ ಮುಗಿಯುವಾಗ ಗಂಟೆ ಒಂದು ದಾಟಿತ್ತು. ಸಾಗರದಲ್ಲಿ ಹೋಟೆಲ್ ಗಳಿಗೆ ಬರವೇ. ಊಟಕ್ಕೆ ಯಾವುದೋ ಹೋಟೆಲ್ ಗೆ ನುಗ್ಗಿದರಾಯಿತು ಎಂದು ಅಂದುಕೊಂಡಿದ್ದ ನಮಗೆ ಡಿಸೋಜ ಬಿಡಲೇ ಇಲ್ಲ.ಅವರ ಪತ್ನಿಯೇ ಅಡಿಗೆ ಮಾಡಿ ಬಡಿಸಿದ್ದು. ಹೊರಡುವಾಗ ಎಲ್ಲರಿಗೂ ಒಂದೊಂದು ಪುಸ್ತಕ ಉಡುಗರೆ!!.ಈ ಸುಸಂಸ್ಕೃತ ನೆಡವಳಿಕೆ ನಮ್ಮ ಪಾಲಿಗೆ ಅಪರೂಪದ್ದು. ನಾ.ಡಿ.ದಂಪತಿಗಳು ನನ್ನ ಮನೆಗೆ ಬರುವಾಗ ಬರಿಗೈಯಲ್ಲಿ ಬಂದವರಲ್ಲ. ಅತ್ರಸ ಮಾಡಿ ಅವರ ಪತ್ನಿ ತಂದುಕೊಡುತ್ತಿದ್ದರು.ಅದು ಅತೀವ ಋಚಿ ಹೊಂದಿರುತ್ತಿತ್ತು.
ಅವರು ರಾಜ್ಯದ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದಾಗ ನಾನು ಅವರದ್ದೊಂದು ಸಂದರ್ಶನ ತರಂಗಕ್ಕಾಗಿ ಮಾಡಲು ಸಾಗರ ತೆರಳಿದ್ದೆ. ಒಂದಿಷ್ಟು ಫೋಟೋ ತೆಗೆಸಿಕೊಂಡು ಸಂದರ್ಶನ ಮಾಡಿ ಹೊರಟಾಗ ಮದ್ಯಾಹ್ನ 12 ಗಂಟೆ.ಊಟಕ್ಕೆ ನಾನು ನಿಲ್ಲಲಾರೆ, ಈ ಫೋಟೋ ಸ್ಟುಡಿಯೋಗೆ ಹೋಗಿ ಆರಿಸಿ ನಾನು ಊರಿಗೆ ಹೋಗಲೇ ಬೇಕು, ಲೇಖನಕ್ಕೆ ಎರಡೇ ದಿನ ಉಳಿದಿರುವುದು ಎಂದು ಹೊರಟಾಗ, ಸ್ವಲ್ಪ ತಡೆಯಿರಿ ಎಂದವರ ಪತ್ನಿ ಹೇಳಿದರು. ನೋಡಿದರೆ ಮತ್ತೆ ಬಿಸಿ ಬಿಸಿ ಅತ್ರಸದ ಪೊಟ್ಟಣ.ಮನಸ್ಸು ಈ ಪ್ರೀತಿಗೆ ತುಂಬಿ ಬಂದಿತ್ತು.
ನನ್ನ ಎರಡು ಪುಸ್ತಕ ಬಂದಾಗ ಅವರಿಗೆ ಹೋದಾಗ ಕೊಟ್ಟರಾಯಿತು ಎಂದು ಅಂದುಕೊಂಡಿದ್ದೆ.ಆದರೆ ಒಂದು ದಿನ ಅವರ ಫೋನ್.ಕಾರಂತರೇ ನಿಮ್ಮ ಎರಡೂ ಪುಸ್ತಕ ಓದಿದೆ. ಖುಷಿಯಿಂದ ಎನ್ನಬೇಕೇ. ಎಲ್ಲಿ ಸಿಕ್ಕಿತು ಸರ್ ಎಂದರೆ ಶಿವಮೊಗ್ಗ ಜಿಲ್ಲೆಯ ಸಾಹಿತ್ಯ ಸಮ್ಮೇಳನದಲ್ಲಿ ಸ್ಟಾಲ್ ನಲ್ಲಿ ಎಂದರು. ಅವರು ಆ ಸಮ್ಮೇಳನ ಅಧ್ಯಕ್ಷರಾಗಿದ್ದರು.
Klive Special Article ಧರ್ಮಸ್ಥಳದ ಬಳಿ ಒಂದು ಸಮಾರಂಭಕ್ಕೆ ಅವರೊಟ್ಟಿಗೆ ಹೋಗುವುದಿತ್ತು. ಬರುವಾಗ ನನಗೆಂದು ಒಂದೆರಡು ಪುಸ್ತಕ ತಂದಿದ್ದರು.
ಅವರ ಆರೋಗ್ಯ ಕೆಟ್ಟು ಶಸ್ತ್ರ ಚಿಕಿತ್ಸೆ ಆಗಿದೆ ಎಂದು ಕೇಳಲ್ಪಟ್ಟ ನಾನು ಸಾಗರ ಹೋದಾಗ ನೋಡಿ ಬರಲು ಅವರ ಮನೆಗೆ ಹೋಗಿದ್ದೆ. ಅದು ದಶಕಗಳ ಹಿಂದಿನ ಮಾತು. ನೋಡಿದರೆ ತುಂಬಾ ಸೋತು ಹೋಗಿದ್ದರು. ಪತ್ನಿ ಮಂಗಳೂರಿನಲ್ಲಿ ಆಸ್ಪತ್ರೆಯ ಖರ್ಚೇ 85 ಸಾವಿರ ಆಯಿತು ಎಂದರು.ನನ್ನ ಗೆಳೆಯ ಯೋಗೀಶ್ವರ್ ಆಗ ಸಾಗರದ ತಹಶಿಲ್ದಾರರಾಗಿದ್ದರು. ಅವರನ್ನು ಡಿಸೋಜ ಮನೆಗೆ ಕರೆದುಕೊಂಡು ಹೋಗಿ ಒತ್ತಾಯ ಪೂರ್ವಕ ಅವರ ಮೆಡಿಕಲ್ ಬಿಲ್ ಪಡೆದು ಸರ್ಕಾರಕ್ಕೆ ಈ ಹಣ ಕೊಡಬೇಕು ಎಂದು ಪತ್ರ ಹಾಕಿಸಿದೆ. ಒಂದು ತಿಂಗಳಲ್ಲೇ ಹಣ ಅವರಿಗೆ ದೊರಕಿತು.ನಾನೇನೋ ದೊಡ್ಡ ಉಪಕಾರ ಮಾಡಿದಂತೆ ಫೋನಾಯಿಸಿ ಕೃತಜ್ಞತೆ ಹೇಳಿದ್ದರು.
ನನ್ನ ಬಂದು ಒಬ್ಬರ ಕವನ ಸಂಕಲನಕ್ಕೆ ಮುನ್ನುಡಿ ಬೇಕಿತ್ತು. ಬರೆದುಕೊಡುವಿರಾ ಸರ್ ಎಂದಾಗ ಓ ಸಂತೋಷದಿಂದ ಎಂದು ಹೇಳಿ ಸುಂದರ ಮುನ್ನುಡಿ ಬರೆದುಕೊಟ್ಟಿದ್ದಲ್ಲದೇ ಮೇಳಿಗೆಯಲ್ಲಿ ನಡೆದ ಪುಸ್ತಕ ಬಿಡುಗಡೆಗೂ ಬಂದು ಇಡೀ ದಿನ ನಮ್ಮೊಡನೇ ಇದ್ದು ಇದೊಂದು ಆತ್ಮೀಯ ಅನುಭವ ಕೊಡಿಸಿದಿರಿ ಎಂದು ನನಗೇ ಧನ್ಯವಾದ ಹೇಳಿದ್ದರು.
ನನ್ನ ಮುಳುಗಡೆ ಒಡಲಾಳ ಕೊಟ್ಟು ಬರಲೆಂದೇ ಅವರ ಮನೆಗೆ ಹೋದಾಗ ಬೀಗ ಹಾಕಿತ್ತು. ಮಂಗಳೂರಿಗೆ ಆಸ್ಪತ್ರೆಗೆ ಹೋಗಿದ್ದಾರೆ ಎಂದು ಎದುರು ಮನೆಯವರು ಹೇಳಿ ಪುಸ್ತಕ ಅವರೇ ಇಸಿದುಕೊಂಡರು. ಸ್ವಲ್ಪ ದಿನದ ಮೇಲೆ ಫೋನಾಯಿಸಿದರೆ ಅವರ ಪತ್ನಿ ಎತ್ತಿದರು. ಪರವಾಗಿಲ್ಲ ಎಂದರೇ ವಿನಹ ಫೋನ್ ಕೊಡಲೇ ಇಲ್ಲ. ನನಗೆ ಅರ್ಥವಾಯಿತು.
ಈಚೆಗೆ ರಾಷ್ಟ್ರೋತ್ಥಾನ ಕ್ಕೆ ಹೋದಾಗ ನಾ.ಡಿಸೋಜ ಅಕೌಂಟ್ ವಿವರ ಬೇಕು ಎಂದರು.ಯಾಕೆ ಕೇಳಿದಾಗ ಕಥೆ ಒಂದು ಬಿಚ್ಚಿಕೊಂಡಿತು. ನಾ.ಡಿಸೋಜ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಹೋ.ವೆ.ಶೇಷಾದ್ರಿಯವರ ಆತ್ಮೀಯರಂತೆ. ಒಮ್ಮೆ ಶೇಷಾದ್ರಿಯವರ ಬೇಟಿಯಾಗಲು ಬೆಂಗಳೂರಿನ ಕೇಶವ ಕೃಪಾಕ್ಕೆ ಬಂದಿದ್ದರಂತೆ.ಅವರು ಯಾರು ಎಂದು ತರುಣನೋರ್ವ ವಿಚಾರಿಸಿದ್ದಾನೆ.ನಾನು ನಾ.ಡಿಸೋಜ ಎಂದವರು ಹೇಳಿದ್ದಾರೆ.ಇಲ್ಲಿ ಅಹಿಂದೂಗಳಿಗೆ ಪ್ರವೇಶ ಇಲ್ಲ ಎಂದಾತ ಹೇಳಿದ್ದಾನೆ.ನಾ.ಡಿ.ಕೋಪಗೊಳ್ಳುವ ಬದಲು ನಗುತ್ತಾ ಶೇಷಾದ್ರಿಯವರನ್ನೇ ಇಲ್ಲಿ ಕರೆಯಿರಿ ಎಂದಿದ್ದಾರೆ.ಅಷ್ಟರಲ್ಲಿ ಶೇಷಾದ್ರಿಯವರೇ ಅಲ್ಲಿ ಬಂದು ನೋಡಿ ಅವರನ್ನು ಒಳಗೆ ಕರೆದೊಯ್ದಿದ್ದಾರೆ. ಶೇಷಾದ್ರಿಯವರ ನಿಧನಾ ನಂತರ ಅವರ ಸಂಸ್ಮರಣ ಗ್ರಂಥ ಒಂದು ತರಬೇಕು ಎಂದು ರಾಷ್ಟ್ರೋತ್ಥಾನ ನಿರ್ಧರಿಸಿದೆ.ಒಂದಿಷ್ಟು ಲೇಖನ ಸಂಗ್ರಹಿಸಿ ನೀವೇ ಸಂಪಾದಿಸಿಕೊಡಬೇಕು ಎಂದು ನಾ.ಡಿಸೋಜ ಬಳಿ ಕೊಂಡೊಯ್ದು ನೀಡಿದ್ದಾರೆ. ಅವರು ಪ್ರಾಮಾಣಿಕವಾಗಿ ಸಂಪಾದಿಸಿ ಕಳಿಸಿದ್ದಾರೆ.ಆದರೆ ಆ ಕಾರ್ಯ ವಹಿಸಿಕೊಂಡವರ ಅಜಾಗುರೂಕತೆಯಿಂದ ಪುಸ್ತಕ ಆಗದೇ ಹಾಗೇ ದಶಕಗಳ ಕಾಲ ಉಳಿದಿದೆ. ಈಚೆಗೆ ಯಾರಿಗೋ ನಾ.ಡಿಸೋಜ ಕಳಿಸಿದ ಸಂಪಾದಿತ ಕರಡು ಪ್ರತಿ ಅಕಸ್ಮಾತ್ ಕಣ್ಣಿಗೆ ಬಿದ್ದಿದೆ.

ಅದು ಎಸ್.ಆರ್.ರಾಮಸ್ವಾಮಿಯವರ ಗಮನಕ್ಕೂ ಬಂದು ಛೇ ಈ ಕೃತಿ ಈಗಲಾದರೂ ಮಾಡಿ ಶೇಷಾದ್ರಿಯವರಿಗೂ ಅತ್ತ ನಾ.ಡಿಸೋಜ ರವರಿಗೂ ಗೌರವ ನೀಡುವಾ ಎಂದು ಪ್ರಕಟಿಸಿದ್ದಾರೆ. ನಾ.ಡಿಸೋಜ ರವರಿಗೆ ಗೌರವ ಪ್ರತಿ ಕಳಿಸಿ ಬ್ಯಾಂಕಿನ ವಿವರಕ್ಕೆ ಕೋರಿದರೆ ಅವರ ಉತ್ತರ ಇಲ್ಲ.ಈ ಸಂಗತಿ ತಿಳಿದ ನಾನು ವಿವರ ನೀಡುವ ಜವಾಬ್ದಾರಿ ಹೊತ್ತುಕೊಂಡೆ. ನನ್ನ ಫೋನ್ ಅತ್ತಕಡೆಯಿಂದ ತೆಗೆಯದಾಗ ಸಾಗರದ ಗೆಳೆಯ ಪಿ.ಡಿ.ಎನ್ ಸಹಾಯ ಕೋರಿದೆ. ಅವರು ಡಿಸೋಜ ಮತ್ತೆ ಅನಾರೋಗ್ಯ ಕಾರಣ ಮಂಗಳೂರಿನಲ್ಲೇ ಇರುವ ಸಂಗತಿ ಹೇಳಿ ಯಾರ ಮೂಲಕವೋ ಮಗನನ್ನೇ ಸಂಪರ್ಕಿಸಿ
ವಿವರ ಕಳಿಸಿದರು. ಕಡೆಯ ಕ್ಷಣದಲ್ಲಿ ಅವರ ಋಣ ತೀರಿಸಲು ರಾಷ್ಟ್ರೋತ್ಥಾನಕ್ಕೆ ನನ್ನ ಅಳಿಲು ಸೇವೆ ಸಂದಿತು.
ಬಡತನ ಅಂದರೆ ಅದು ನಾಚಿಕೆ ಪಡುವ ವಿಷಯವಲ್ಲ. ಹಣದ ಮೌಲ್ಯಕ್ಕಿಂತ ಗುಣದ ಮೌಲ್ಯ ಮಿಗಿಲು ಎಂದು ಬದುಕಿ ತೋರಿದ ಮಹಾತ್ಮ ಡಿಸೋಜ. ಅವರೊಬ್ಬ ಅಪ್ಪಟ ಭಾರತೀಯ.ಈ ದೇಶ,ಈ ಸಂಸ್ಕೃತಿ ಪ್ರೀತಿಸುತ್ತಿದ್ದರು. ನಾನು ಅವರನ್ನು ಅಬ್ದುಲ್ ಕಲಾಂ ರಂತೆ ಭಾರತೀಯ ಎಂದೊಂದು ಸಂಧರ್ಭ ಹೇಳಿದ್ದೆ. ಅಷ್ಟು ದೊಡ್ಡ ಮಾತು ಆಡಬಾರದು ಎಂದವರು ನಂತರ ಹೇಳಿದ್ದರು. ಕ್ರೈಸ್ತ ಬದುಕನ್ನು ತೆರೆದಿಟ್ಟ ಪ್ರಪ್ರಥಮ ಭಾರತೀಯ ಸಾಹಿತಿ ಅವರು. ಕನ್ನಡ ಸಾರಸ್ವತ ಲೋಕ ಓರ್ವ ಸಜ್ಜನ ಸಾತ್ವಿಕ ಸಹೃದಯನನ್ನು ಕಳೆದುಕೊಂಡು ಬಡವಾಗಿದೆ. ಅವರ ಸ್ಥಾನ ತುಂಬುವುದು ಕಷ್ಟವೇ ಸರಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...