Value Social Welfare Trust ಸರ್ಕಾರಿ ಶಾಲೆಗಳ ಉಳಿಸಿ ಬೆಳೆಸುವಲ್ಲಿ ದಾನಿಗಳ ಪಾತ್ರ ಮಹತ್ತರ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಹೇಳಿದರು.
ಅಮೃತ್ ನೋನಿ ಅಂಗ ಸಂಸ್ಥೆಯಾದ ವ್ಯಾಲ್ಯೂ ಸೋಶಿಯಲ್ ವೇಲ್ಫೇರ್ ಟ್ರಸ್ಟ್ ವತಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ರಾಮೇನಕೊಪ್ಪದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಪುನರ್ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಮತ್ತು ದತ್ತು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯಾದ್ಯಂತ ಇರುವ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ದಾನಿಗಳು ಮುಂದೆ ಬರಬೇಕು. ಇಂತಹ ಸಮಾಜಮುಖಿ ಕಾರ್ಯಗಳಿಂದ ಸರ್ಕಾರಿ ಶಾಲೆಗಳನ್ನು ಉಳಿಸುವ ಜತೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಲಿದೆ. ಸರ್ಕಾರಿ ಶಾಲೆಯಲ್ಲಿರುವ ಪ್ರತಿಭಾವಂತ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಅಮೃತ್ ನೋನಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಎ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ಅಮೃತ್ ನೋನಿ ಸಂಸ್ಥೆಯ ಭಾಗವಾಗಿರುವ ವ್ಯಾಲ್ಯೂ ಸೋಶಿಯಲ್ ವೇಲ್ಫೇರ್ ಟ್ರಸ್ಟ್ ಮೂಲಕ ರಾಮೇನಕೊಪ್ಪದಲ್ಲಿನ ಸರ್ಕಾರಿ ಶಾಲೆಯನ್ನು ಐದು ವರ್ಷಗಳ ಅವಧಿಗೆ ದತ್ತು ತೆಗೆದುಕೊಂಡಿದ್ದು, ಶಾಲೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದರು.
ರಾಮೇನಕೊಪ್ಪದಲ್ಲಿರುವ ಸರ್ಕಾರಿ ಶಾಲೆಯ ಮರು ನಿರ್ಮಾಣವನ್ನು 25 ಲಕ್ಷ ರೂ. ವೆಚ್ಚದಲ್ಲಿ ನಮ್ಮ ಟ್ರಸ್ಟ್ ಮೂಲಕ ಮಾಡಲಾಗುತ್ತಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಒದಗಿಸುವುದು ಮುಖ್ಯ ಉದ್ದೇಶ. ಎಲ್ಲ ಮಕ್ಕಳಿಗೂ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
Value Social Welfare Trust ವ್ಯಾಲ್ಯೂ ಸೋಶಿಯಲ್ ವೇಲ್ಫೇರ್ ಟ್ರಸ್ಟ್ ಮೂಲಕ ಬಸವಾಪುರ ಶಾಲೆಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲಾಗಿದೆ. ರಾಮೇನಹಳ್ಳಿಯ ಉರ್ದು ಶಾಲೆಗೆ ಶೌಚಗೃಹ ಸೇರಿದಂತೆ ಮೂಲ ಸೌಕರ್ಯದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದರು.
ಅಮೃತ್ ನೋನಿ ಸಂಸ್ಥೆಯ ಡೈರೆಕ್ಟರ್ ಅಂಬುಜಾಕ್ಷಿ, ಮುಖ್ಯಸ್ಥ ಶಶಿಕಾಂತ್ ನಾಡಿಗ್, ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಅಗಸವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ರಾಮೇನಕೊಪ್ಪದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸೋಮಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.