B.Y.Raghavendra ಪಿ.ಎಂ.ಮುದ್ರಾ, ಪಿ.ಎಂ.ಎಫ್.ಎಂ.ಇ., ಪಿ.ಎಂ.ವಿಶ್ವಕರ್ಮ, ಪಿ.ಎಂ.ಸ್ವನಿಧಿ, ಪಿ.ಎಂ.ಇ.ಜಿ.ಪಿ., ಪಿ.ಎಂ.ಸೂರ್ಯಘರ್, ಎನ್.ಯು.ಎಲ್.ಎಂ. ಸ್ವಸಹಾಯ ಸಂಘಗಳ ಗುಂಪು ಮತ್ತು ವೈಯಕ್ತಿಕ ಸಾಲ ಮತ್ತಿತರ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದಲ್ಲಿ ಫಲಾನುಭವಿಗಳಿಗೆ ಸಾಲಸೌಲಭ್ಯ ಒದಗಿಸುವಲ್ಲಿ ಜಿಲ್ಲೆಯ ಬಹುತೇಕ ಬ್ಯಾಂಕುಗಳ ಸಾಧನೆ ಅತ್ಯಂತ ತೃಪ್ತಿಕರವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು.
ಅವರು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬ್ಯಾಂಕುಗಳು ತಮ್ಮ ವ್ಯಾಪ್ತಿಯಲ್ಲಿ ನೀಡುವ ಆರ್ಥಿಕ ನೆರವಿನ ಪ್ರಮಾಣ ಶೇ. 82ರಿಂದ 86ಕ್ಕೆ ಏರಿಕೆ ಕಂಡಿದೆ. ಅದಕ್ಕಾಗಿ ಶ್ರಮಿಸಿದ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರು ಅಭಿನಂದನಾರ್ಹರು ಎಂದರು. ಕೇಂದ್ರದ ಜನಪರ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕುಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಭಾರತ ಇಂದು ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ವಿಶ್ವವೇ ಬೆರಗಾಗುವಂತಹ ಆರ್ಥಿಕ ವಹಿವಾಟನ್ನು ಹೊಂದಿದೆ. ಎಲ್ಲಾ ರೀತಿಯ ಅಭಿವೃದ್ಧಿಗೆ ಭಾರತ ತಯಾರಾಗಿದೆ ಎಂದದ ಅವರು, ಜನಸಾಮಾನ್ಯರ ನಿರೀಕ್ಷೆಗೆ ತಲುಪುವಂತೆ ಬ್ಯಾಂಕುಗಳು ಕಾರ್ಯನಿರ್ವಹಿಸಬೇಕು. ಹೆಚ್ಚಿನ ರೈತರು, ಉದ್ಯಮಿಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿ ಒದಗಿಸುವಲ್ಲಿ ಜಿಲ್ಲೆಯ ಬ್ಯಾಂಕುಗಳ ಅಗ್ರಪಂಕ್ತಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕೆಂದು ನುಡಿದರು.
ಸ್ವಸಹಾಯ ಗುಂಪುಗಳಿಗೆ ಪ್ರಸ್ತುತ ನೀಡುತ್ತಿರುವ ಸಾಲದ ಪ್ರಮಾಣ ಆಶಾದಾಯಕವಾಗಿಲ್ಲ, ಸದಸ್ಯರ ನಿರೀಕ್ಷೆಯಷ್ಟು ಪ್ರಮಾಣದ ಸಾಲಸೌಲಭ್ಯವನ್ನು ನೀಡಬೇಕು. ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಂದ ಪಡೆಯುತ್ತಿರುವ ಸೇವಾಶುಲ್ಕ ರೂ.500/-ರ ಮಿತಿಯನ್ನು ದಾಟದಂತೆ ನಿಗಧಿಪಡಿಸಬೇಕು ಎಂದರು. ಜಿಲ್ಲೆಯಲ್ಲಿ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸುವ ನಿಟ್ಟಿನಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಂದ ನೀಡುತ್ತಿರುವ ಕೌಶಲ್ಯಾಭಿವೃದ್ಧಿ ತರಬೇತಿಗಳ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ನಿರೀಕ್ಷೆಯಂತೆ ತರಬೇತಿ ಕಾರ್ಯಾಗಾರಗಳು ನಡೆಯದಿರುವುದು ಅತ್ಯಂತ ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಕೌಶಲ್ಯಾಭಿವೃದ್ಧಿ ನೀಡುವಲ್ಲಿ ಜಿಲ್ಲೆಯ ಸಾಧನೆ ಗುರುತಿಸಿಕೊಳ್ಳುವಂತಾಗಬೇಕುತಪ್ಪಿದಲ್ಲಿ ಸಂಬಂಧಿಸಿದ ವ್ಯಕ್ತಿ ಅಥವಾ ಸಂಸ್ಥೆಗಳ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
B.Y.Raghavendra ಕೇಂದ್ರದ ಜನಪರ ಯೋಜನೆಗಳ ಅನುಷ್ಠಾನದಲ್ಲಿ ಸೌತ್ ಇಂಡಿಯನ್ ಬ್ಯಾಂಕ್ ಸೇರಿದಂತೆ ಇನ್ನೂ ಕೆಲವು ಬ್ಯಾಂಕುಗಳ ಪ್ರಗತಿ ಅತ್ಯಂತ ಕಳಪೆಯಾಗಿದೆ. ಮುಂದಿನ ದಿನಗಳಲ್ಲಿ ವಿಶಾಲವಾದ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸೌಲಭ್ಯ ನೀಡಲು ಮುಂದಾಗದಿದ್ದಲ್ಲಿ ಅಂತಹ ಬ್ಯಾಂಕುಗಳ ವ್ಯವಸ್ಥಾಪಕರ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ ಎಂದವರು ಎಚ್ಚರಿಸಿದರು. ಸಭೆಯಲ್ಲಿ ವಿಭಾಗೀಯ ವ್ಯವಸ್ಥಾಪಕ ದೇವರಾಜ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಚಂದ್ರಶೇಖರ್, ಎಸ್.ಬಿ.ಐ. ವಿಭಾಗೀಯ ಅಧಿಕಾರಿ ವಿಜಯ್‌ಸಾಯಿ, ಆರ್.ಬಿ.ಐ.ನ ವೆಂಕಟರಾಮಯ್ಯ, ಯೂನಿಯನ್ ಬ್ಯಾಂಕಿನ ವ್ಯವಸ್ಥಾಪಕ ವಿಶುಕುಮಾರ್, ಶ್ರೀಮತಿ ಶಾರದಮ್ಮ, ನಾಗಭೂಷಣ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.