Thursday, December 19, 2024
Thursday, December 19, 2024

Klive Special Article ಇತಿಹಾಸ ನಿರ್ಮಿಸಿದ ಅಯೋಧ್ಯಾ ಪ್ರವಾಸ ನಾಯಕ ಈಶ್ವರಪ್ಪನವರ ಸಾರ್ಥಕ ಪ್ರಯತ್ನ

Date:

Klive Special Article ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.
ಶಿವಮೊಗ್ಗ.

Klive Special Article ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಅವಂತಿಕಾ l
ಪುರೀ ದ್ವಾರಾವತೀ ಚೈವ ಸಪ್ತೈತೇ ಮೋಕ್ಷದಾಯಿಕಾಃ ll
ಅಖಂಡ ಭಾರತದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಪ್ರಮುಖವಾದ ಪುಣ್ಯಕ್ಷೇತ್ರಗಳೇ ಸಪ್ತ ಮೋಕ್ಷದಾಯಕ ಕ್ಷೇತ್ರಗಳೆಂದು ಕರೆಯಲ್ಪಡುತ್ತದೆ. ಮನುಷ್ಯನು ತನ್ನ ಜೀವನದಲ್ಲಿ ಒಮ್ಮೆಯಾದರೂ ಈ ಏಳು ಪುಣ್ಯ ಸ್ಥಳಗಳ ದರ್ಶನ ಮಾಡಿದರೆ ಅವನ ಪಾಪ ಕರ್ಮಗಳೆಲ್ಲವೂ ನಾಶವಾಗಿ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಾರತಿಯರಲ್ಲಿ ಬಲವಾಗಿ ಬೇರೂರಿದೆ.

ಹಿಂದೆ ಮಹಾಭಾರತದ ಕಾಲದಲ್ಲಿ ಪಾಂಡವರು ಸಹ ಕುರುಕ್ಷೇತ್ರ ಯುದ್ಧದ ತರುವಾಯ ರಣಭೂಮಿಯಲ್ಲಿ ತಮ್ಮಿಂದಾದ ಹತ್ಯೆಯ ಪಾಪಗಳನ್ನು ನಿವಾರಿಸಿಕೊಳ್ಳಲು ಈ ಪವಿತ್ರವಾದ ಏಳು ಕ್ಷೇತ್ರಗಳಿಗೆ ತೆರಳಿ ಅಲ್ಲಿರುವ ಪ್ರಮುಖ ದೇವರುಗಳ ದರ್ಶನ ಪಡೆದು ತಮ್ಮೆಲ್ಲ ಪಾಪ ಕರ್ಮಗಳಿಂದ ಮುಕ್ತರಾಗಿ ಸ್ವರ್ಗಕ್ಕೆ ಪ್ರಯಾಣಿಸಿದರು ಎಂಬ ಪ್ರತೀತಿ ಇದೆ.

ಈ ಏಳು ಕ್ಷೇತ್ರಗಳು ಮೂಲತಃ ವಿಷ್ಣುವಿನ ವಿವಿಧ ಅವತಾರಗಳು ಜನ್ಮವೆತ್ತಿದ ಹಾಗೂ ಉಚ್ಚಮಟ್ಟದ ದೈವಿ ಪ್ರಭಾವವನ್ನು ಪ್ರತಿನಿಧಿಸುವ ಪರಮ ಪಾವನ ಕ್ಷೇತ್ರಗಳಾಗಿವೆ. ಈ ಪುಣ್ಯಕ್ಷೇತ್ರಗಳು ಪ್ರಾಚೀನ ಕಾಲದಿಂದಲೂ ನಮ್ಮ ರಾಷ್ಟ್ರ ಭಾವದೊಂದಿಗೆ ಸ್ಪಂದಿಸುತ್ತಾ ಬಂದಿದೆ. ಅವು ಸಮನ್ವಯದ ಸಾಧನಗಳಾಗಿಯೂ, ಭಾರತದ ಏಕತೆಯ ಜೀವಂತ ಸಾಕ್ಷಿಗಳಂತೆಯು ಕೆಲಸ ಮಾಡಿವೆ. ನಮ್ಮ ಶ್ರೇಷ್ಠವಾದ ಸಂಸ್ಕೃತಿ, ನಡವಳಿಕೆಗಳ ವಿಕಾಸ ಮತ್ತು ಪ್ರಸಾರಗಳಲ್ಲಿ ಈ ಕ್ಷೇತ್ರಗಳ ಕೊಡುಗೆ ಅಪೂರ್ವವಾದದ್ದಾಗಿದೆ. ಈ ಕ್ಷೇತ್ರಗಳಿಂದ ನಮ್ಮ ಸಮಾಜಕ್ಕೆ ಅಧ್ಯಾತ್ಮಿಕ ಚಿಂತನದ ಜೊತೆಯಲ್ಲಿ ಭೌತಿಕ ಅಭ್ಯುದಯದ ಮಾರ್ಗದರ್ಶನವೂ ಸಿಕ್ಕಿದೆ. ಇವು ನಮ್ಮ ನಾಡಿನ ಮೌಲ್ಯಗಳ ರಕ್ಷಣಾ ಕೇಂದ್ರಗಳು. ಇಂತಹ ಪರಮ ಪವಿತ್ರ ತೀರ್ಥಕ್ಷೇತ್ರಗಳಲ್ಲಿ ಪ್ರಮುಖವಾದ ಅಯೋಧ್ಯೆ ಹಾಗೂ ಕಾಶಿ ಕ್ಷೇತ್ರಗಳಿಗೆ ಶ್ರೀಯುತ ಸನ್ಮಾನ್ಯ ಈಶ್ವರಪ್ಪನವರು ಹಾಗೂ ಶ್ರೀಕಾಂತೇಶ್ ರವರು ಶಿವಮೊಗ್ಗದ ಜನತೆಗಂದೇ ವಿಶೇಷ ರೈಲಿನಲ್ಲಿ ಯಾತ್ರೆ ಏರ್ಪಡಿಸಿ, ಅದು ಸಾರ್ಥಕತೆಯ ಭಾವದೊಂದಿಗೆ ಸಂಪನ್ನಗೊಂಡಿದೆ. ಯಾತ್ರೆಯ ಅನುಭವಗಳೇ ಅಲ್ಲದೆ ಅಲ್ಲಿ ನಾಕಂಡ ಅನೇಕ ವೈಶಿಷ್ಟ್ಯತೆಗಳನ್ನು ಹಂಚಿಕೊಳ್ಳುವ ಸಲುವಾಗಿಯ ಬರೆದ ಲೇಖನ ಇದು.
ಮೊದಲನೆಯದಾಗಿ ಅಯೋಧ್ಯೆ ಮತ್ತು ಕಾಶಿಯ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳೋಣ-

ಅಯೋಧ್ಯೆ
ಮೋಕ್ಷ ನೀಡುವ ಏಳು ನಗರಗಳಲ್ಲಿ ಮೊದಲನೆಯ ಅಯೋಧ್ಯೆ. ಯುದ್ಧದ ಕಲ್ಪನೆಯನ್ನು ಮಾಡದಿರುವಂತಹ ಶಾಂತಿ ಪ್ರಿಯರ ನಗರವಾಗಬೇಕೆಂಬ ಭಾವನೆಯಿಂದ ಇದನ್ನು ಅಯೋಧ್ಯ ಎಂದು ಕರೆದದ್ದು. ಮನು ಚಕ್ರವರ್ತಿಯು ಈ ನಗರ ನಿರ್ಮಾತೃ ಎಂದು ರಾಮಾಯಣದಲ್ಲಿದೆ. ಭಗವಾನ್ ವಿಷ್ಣುವಿನ ಶೀರ್ಷ ಸ್ಥಾನದಂತಿರುವ ಅಯೋಧ್ಯೆಯು ಮತ್ಸ್ಯಾಕಾರದಲ್ಲಿದೆ ಎಂದು ಸ್ಕಾಂದ ಪುರಾಣದಲ್ಲಿದೆ. ಶ್ರೀರಾಮನ ಕಾಲದಲ್ಲಿ ಅಯೋಧ್ಯೆಯು 12 ಯೋಜನ ಉದ್ದ ಮತ್ತು 3 ಯೋಜ ಅಗಲದ ಒಂದು ಮಹಾನಗರವಾಗಿತ್ತು. ವ್ಯವಸ್ಥಿತವಾದ ಮಾರುಕಟ್ಟೆ,ಗಗನಚುಂಬಿ ಕಟ್ಟಡಗಳು,ವಿಶಾಲವಾದ ರಾಜಬೀದಿಗಳು, ಬಲಿಷ್ಟವಾದ ಶಸ್ತ್ರ ಸಜ್ಜಿತ ಸೇನೆ, ಕೊರತೆ ಇಲ್ಲದ ಅರ್ಥ ವ್ಯವಸ್ಥೆ, ದುಃಖ ದೈನ್ಯಗಳಿಂದ ಮುಕ್ತವಾದ ದೇಶ ಭಕ್ತ ಪ್ರಜಾ ಕೋಟಿ ಒಟ್ಟಿನಲ್ಲಿ ದೇವದುರ್ಲಭವಾದ ನಗರ. ಸಂತ ತುಳಸಿದಾಸರು ಅಯೋಧ್ಯೆಯ ಕುರಿತು ಹೇಳುವಾಗ ” ವೇದ – ಪುರಾಣಗಳು ವೈಕುಂಠ ನಗರದ ವರ್ಣನೆ ಮಾಡಿದ್ದರೂ, ಅಯ್ಯೋದ್ಯೆಗಿಂತ ಹೆಚ್ಚಿನ ಆನಂದ ಇನ್ನೆಲ್ಲೂ ಸಿಗದು” ಎಂದಿದ್ದಾರೆ. ಈ ಪವಿತ್ರ ನಗರ ಸರಯೂ ತೀರದಲ್ಲಿದೆ. ಆಳವಾಗಿ, ಅಗಲವಾಗಿ ಹರಿಯುವ ಸರಯೂ ಧನ್ಯೆ. ರಾಮನ ಸೇವೆ ಮಾಡಿದ ಆಕೆ ಕೊನೆಗೊಮ್ಮೆ ಅವನನ್ನು ತನ್ನ ಬಸಿರಲ್ಲೇ ಅಡಗಿಸಿಕೊಂಡ ಪಾವನೆ.
ರಾಮನಾಮೋಚ್ಛಾರದಿಂದ ದರೋಡೆಕೋರನಾಗಿದ್ದ ರತ್ನಾಕರ ವಾಲ್ಮೀಕಿಯಾದ. ರಾಮ ಕಥೆಯಿಂದ ತುಳಸಿದಾಸರೇ ಮೊದಲಾಗಿ ಆಧುನಿಕ ಕಾಲದಲ್ಲಿ ಕುವೆಂಪು, ಡಿ.ವಿ.ಜಿ ಹೀಗೆ ಅನೇಕ ಶ್ರೇಷ್ಠ ಕವಿಪುಂಗವರನ್ನು ಭಾರತಕ್ಕೆ ನೀಡಿದೆ. ಶ್ರೀರಾಮ ರಾಷ್ಟ್ರಪುರುಷ. ಅವನ ಗಾಂಭೀರ್ಯವನ್ನು ದಕ್ಷಿಣದ ಸಾಗರದೊಂದಿಗೆ ಮತ್ತು ಧೈರ್ಯವನ್ನು ಉತ್ತರದ ಹಿಮಾಲಯದೊಂದಿಗೆ ಹೋಲಿಸುತ್ತಾರೆ ದೈವೀ ಪುರುಷನ ಹೆಮ್ಮೆಯ ನಗರ ಮನುಕುಲದ ಮೊದಲ ರಾಜಧಾನಿ ಅಯೋಧ್ಯೆ.

ಈ ನಗರ ಸಿಖ್ಖರು, ಬೌದ್ಧರು ಹೀಗೆ ಎಲ್ಲರಿಗೂ ಶ್ರದ್ಧಾ ಕೇಂದ್ರವಾಗಿದ್ದರೂ ಅದು ಮುಸಲ್ಮಾನರ ಧಾಳಿಗೆ ಒಳಗಾಗಿ ತನ್ನ ಭವ್ಯತೆಯನ್ನೇ ಕಳೆದುಕೊಂಡಿತ್ತು. ನಂತರ ಅಸಂಖ್ಯಾತ ಹಿಂದುಗಳ ಬಹು ವರ್ಷದ ಹೋರಾಟದ ಫಲವಾಗಿ, ತ್ಯಾಗ ಬಲಿದಾನಕ್ಕೆ ನ್ಯಾಯ ದೊರಕಿ ಪ್ರಭು ಶ್ರೀರಾಮಚಂದ್ರನು ರಾಮಲಲ್ಲಾ ಆಗಿ ಅಯೋಧ್ಯೆಯಲ್ಲಿ ಪುನರ್ ಪ್ರತಿಷ್ಠಾಪನೆಯಾಗಿ ಭವ್ಯವಾದ ರಾಮ ಮಂದಿರ ತಲೆಯೆತ್ತಿ ನಿಂತಿದೆ. ಅದನ್ನು ನೋಡಿ ಕಣ್ತುಂಬಿಸಿಕೊಳ್ಳುವುದೇ ಒಂದು ಪುಣ್ಯದ ಕ್ಷಣ.

ಕಾಶಿ

ಇದು ಅತ್ಯಂತ ಪುರಾತನ ತೀರ್ಥಕ್ಷೇತ್ರಗಳಲ್ಲಿ ಒಂದು. ಇದನ್ನು ಆದಿ ಕ್ಷೇತ್ರ ಎಂದು ಕರೆಯುತ್ತಾರೆ. “ಕಾಶ್ಯಾಂ ಮರಣಾನ್ಮುಕ್ತಿಃ”. ಅಂದರೆ ಕಾಶಿಯಲ್ಲಿ ಶರೀರ ಬಿಟ್ಟವರಿಗೆ ಮುಕ್ತಿ ದೊರೆಯುತ್ತದೆ ಎಂದು ಹಿಂದುಗಳ ಅಚಲ ವಿಶ್ವಾಸ. ಗಂಗೆಯ ದಡದಲ್ಲಿರುವ ದಿವ್ಯ ಕ್ಷೇತ್ರವು ಎಲ್ಲ ಭಾರತೀಯರ ಮತ್ತು ವಿಶೇಷವಾಗಿ ಶಿವಭಕ್ತರ ಪರಮ ಶ್ರದ್ಧಾ ಕೇಂದ್ರವಾಗಿದೆ. ಔರಂಗಜೇಬನ ಕಾಲದಲ್ಲಿ ಇದು ದಾಸ್ಯಕ್ಕೆ ಒಳಗಾಗಿತ್ತು ಈ ದಿವ್ಯ ಕ್ಷೇತ್ರವನ್ನು ದಾಸ್ಯದಿಂದ ಮುಕ್ತಗೊಳಿಸಬೇಕೆಂದು ಶಿವಾಜಿ ಮಹಾರಾಜನು ಬಯಸಿದ್ದರು. ಔರಂಗಜೇಬನು ದೇವಾಲಯ ಒಡೆದು ಮಸೀದಿ ಮಾಡಿದ್ದು ದೇವಸ್ಥಾನಕ್ಕೆ ಎಸಗಿದ ಅತ್ಯಾಚಾರವೇ ಆಗಿದೆ. ಈ ಅತ್ಯಾಚಾರದ ಬಳಿಕ ಪುನಃ ಒಂದು ಶತಮಾನ ಶಿವ ಮಂದಿರವಿಲ್ಲದೆ ಕಾಶಿ, ಕಳೆಗುಂದಿತ್ತು. ಇಂದು ಕಾಶಿಯಲ್ಲಿರುವ ವಿಶ್ವನಾಥ ಮಂದಿರವು ಇಂದೋರಿನ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರಳಿಂದ 1766 ರಲ್ಲಿ ಕಟ್ಟಿಸಲ್ಪಟ್ಟಿದ್ದು. ಆಕೆಗೆ ವಿಶ್ವೇಶ್ವರನು ಕನಸಿನಲ್ಲಿ ಕಂಡು ಮಂದಿರವನ್ನು ನಿರ್ಮಿಸುವಂತೆ ಹೇಳಿದುದರಿಂದ ಆಕೆ ಇದನ್ನು ಕಟ್ಟಿಸಿದಳು. ಇದರಿಂದ ಹಿಂದೂ ಸಮಾಜದ ಕೊರಗೊಂದು ದೂರವಾಯಿತು. ಕಾಶಿ ಬೌದ್ಧರೇ ಮೊದಲಾಗಿ ಎಲ್ಲರ ತೀರ್ಥಕ್ಷೇತ್ರವು ಹೌದು. ಇಲ್ಲಿ ಅನ್ನಪೂರ್ಣೇಶ್ವರಿ ಮಂದಿರ ಕಾಶಿ ಅರಮನೆ, ಗಂಗೆಯ ದಡದ ಘಟ್ಟಗಳ ಸೊಬಗು ಇತ್ಯಾದಿ ಅಸಂಖ್ಯಾತ ಸ್ಥಾನಗಳಿವೆ. ಕಾಶಿ, ಮಾನವ ಇತಿಹಾಸದಲ್ಲಿನ ಅತ್ಯಂತ ಪ್ರಾಚೀನ ವಿಶ್ವವಿದ್ಯಾನಿಲಯ. ಸಾಂಪ್ರದಾಯಿಕ ಅಧ್ಯಯನದ ಅಂತಿಮ ಘಟ್ಟ ಪ್ರಾಪ್ತವಾಗುವುದು ಕಾಶಿಯಲ್ಲಿ. ಇದು ಅನೇಕ ಬ್ರಹ್ಮರ್ಷಿಗಳ ಪಾದಸ್ಪರ್ಶದಿಂದ ಪುನೀತವಾಗಿರುವ ಮತ್ತು ಸ್ವತಃ ಶಂಕರನ ರಾಜಧಾನಿಯಾಗಿರುವ ಭಾರತದ ಹೃದಯವೆಂದರೆ ಅತಿಶಯೋಕ್ತಿಯಾಗಲಾರದು.

Klive Special Article ಇಂತಹ ಪರಮ ಪವಿತ್ರ ತೀರ್ಥಕ್ಷೇತ್ರಗಳನ್ನು ನನಗೆ ನೋಡುವ ಭಾಗ್ಯ ದೊರೆತಿದ್ದು ಒಂದು ಮನೆದೈವವಾದ ಆಂಜನೇಯನ ಕೃಪೆಯಾದರೆ, ಇನ್ನೊಂದು ನಮ್ಮ ಅತ್ತೆಯವರಿಂದ. ಮಾವನವರಿಲ್ಲದ ಕಾರಣ ಬೇರೆ ಯಾರೋ ಕಳೆದ ಬಾರಿ ಕಾಶಿಗೆ ಹೊರಟಿದ್ದರು ಅವರೊಂದಿಗೆ ನೀವು ಹೋಗುವಿರಾ ಎಂದರೆ ಏನೆಂದರೂ ಅತ್ತೆಯವರು ಒಪ್ಪಲೇ ಇಲ್ಲ. ಆದರೆ ಈ ಬಾರಿ ಶಿವಮೊಗ್ಗದಿಂದಲೇ ರೈಲು ಹೊರಟು ಇಲ್ಲಿಗೇ ಕರೆತಂದು ಬಿಡುತ್ತದೆ ಎಂದಾಗ ಅತ್ತೆಯವರು ನೀ ಬರುವುದಾದರೆ ನಾನು ಹೋಗುವೆ ಎಂದರು. ಹಾಗಾಗಿ ನಾನು ಕಾಲೇಜಿಗೆ ರಜೆ ಹಾಕಿ ಹೊರಡಬೇಕಾಯಿತು. ಮಗ ಸಿದ್ದಾರ್ಥನನ್ನು ಕರೆದುಕೊಂಡು ಹೋಗು ಎಂದು ಮನೆಯವರು ಹೇಳಿದಾಗ ಅವನ ಶಾಲೆಯಲ್ಲಿ ರಜೆ ನೀಡಿದ್ದರಿಂದ ಎಲ್ಲರೂ ಅಯೋಧ್ಯೆ ಕಾಶಿ ಯಾತ್ರೆ ಮಾಡುವಂತೆ ಆಯಿತು.

ಕರ್ನಾಟಕದ ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀಯುತ ಈಶ್ವರಪ್ಪನವರ ಕುರಿತಾಗಿ ಇಲ್ಲಿ ಹೇಳಲೇಬೇಕು. ಓಂ ಶಕ್ತಿ ಯಾತ್ರೆ ಮಾಡಿಸುವ ಮೂಲಕ ನಗರದ ಅನೇಕರಿಗೆ ಒಂದೊಳ್ಳೆ ತೀರ್ಥಯಾತ್ರೆ ಮಾಡಿ ಪುಣ್ಯ ಕಟ್ಟಿಕೊಂಡ ಅವರು ಅದ್ಯಾಕೋ ಮಗನೋಡಗೂಡಿ ಅಯೋಧ್ಯೆ ಕಾಶಿ ಯಾತ್ರೆ ಎಲ್ಲ ವರ್ಗದ ಜನರಿಗೂ ಮಾಡಿಸೋಣ ಎನಿಸುವ ಸಂಕಲ್ಪ ತೊಟ್ಟರು. ಅಯೋಧ್ಯೆಯ ಕರಸೇವೆ ಇತ್ಯಾದಿಗಳಲ್ಲಿ ಭಾಗವಹಿಸಿ ಪ್ರಭು ಶ್ರೀ ರಾಮನ ಆಶೀರ್ವಾದಕ್ಕೆ ಪಾತ್ರರಾದ ಅಪ್ಪಟ ಹಿಂದೂ ವಾದವನ್ನು ಹೊಂದಿರುವ ಅವರು ಹಾಗೂ ಅವರ ಮನೆಯವರ ಸಂಸ್ಕಾರ ಎಲ್ಲವೂ ಒಬ್ಬ ಮನೆಯ ಯಜಮಾನ ಮನೆಯವರಿಗೆಲ್ಲಾ ಯಾತ್ರೆ ಮಾಡಿಸಿದಂತೆ ತಾನೇ ನಿಂತು ಎಲ್ಲ ವ್ಯವಸ್ಥೆಯನ್ನು ಖುದ್ದಾಗಿ ಗಮನಿಸಿ ಒಂದಿನಿತೂ ಲೋಪವಾಗದಂತೆ ಯಾತ್ರೆ ಮಾಡಿಸಿದ ಮಹಾತ್ಮ. ಸ್ವತಃ ತಮ್ಮ ಕುಟುಂಬ ರೈಲಿನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಯಾತ್ರೆ ಮಾಡಿರುವುದು ಸಹ ವಿಶೇಷವೇ ಸರಿ.

23ರ ಶನಿವಾರ ಬೆಳಗ್ಗೆ 6.30ಕ್ಕೆ ಜೈ ಶ್ರೀ ರಾಮ್ ಹರ ಹರ ಮಹಾದೇವ್ ಎಂಬ ಜೈಕಾರದೊಂದಿಗೆ ಆರಂಭವಾದ ನಮ್ಮ ಯಾತ್ರೆ ಹೋಗುವಾಗ ಭೋಗಿ ಭೋಗಿಗಳಲ್ಲಿ ವಿಷ್ಣು ಸಹಸ್ರನಾಮ ಲಲಿತಾ ಸಹಸ್ರನಾಮ ಪಾರಾಯಣವೇ ಮೊದಲಾಗಿ ರಾಮರಕ್ಷಾ ಸ್ತೋತ್ರ ಹನುಮಾನ್ ಚಾಲೀಸಾ ರಾಮ ತಾರಕ ಮಂತ್ರಗಳಿಂದ ಅಲ್ಲದೆ ಭಜನೆ ಕುಣಿತವೆ ಮೊದಲಾಗಿ ನಿಜವಾಗಿಯೂ ತೀರ್ಥಯಾತ್ರೆಗೆ ಒಂದು ಕಳೆ ಬಂದಿತ್ತು. ಎಲ್ಲೆಡೆಯೂ ಕೇಳಿ ಬರುತ್ತಿದ್ದ ರಾಮ ತಾರಕ ಮಂತ್ರ ಇಂಪಾಗಿ ಮಧುರವಾಗಿ ಆನಂದ ತರುವಂತಿತ್ತು. ಯಾತ್ರೆಗೆ ಹೊರಟದ್ದು 1450ಕ್ಕೂ ಹೆಚ್ಚು ಮಂದಿ 19 ಭೋಗಿಗಳಲ್ಲಿ ಜನ ಹೊರಟಿದ್ದೆವು. ಅದರಲ್ಲಿಯೂ ಮುಕ್ಕಾಲು ಪಾಲು ಜನರು ಮಹಿಳೆಯರೇ ಇದ್ದರು. ಆದರೂ ಒಬ್ಬರು ಕಿತ್ತಾಡದೆ ಜಗಳವಾಡದೆ ಯಾತ್ರೆ ಸಂಪನ್ನಗೊಳಿಸಿದರು. ವಿವಿಧ ಸಮುದಾಯದವರೆಲ್ಲ ಸೇರಿ ಹೊರಟ ಈ ಯಾತ್ರೆ, ನಾವೆಲ್ಲ ಹಿಂದೂ ನಾವೆಲ್ಲ ಬಂಧು ಎಂಬ ಭಾವ ಮೂಡಿಸುವಂತಿತ್ತು.
ನಮಗೆ ನೀಡಿದ ವ್ಯವಸ್ಥೆಗಳ ಕುರಿತಾಗಿ ಇಲ್ಲಿ ಹೇಳಲೇಬೇಕು. ನಾವು ನೀಡಿದ್ದು ಕೇವಲ ರೂ.7,500 ಗಳು ಮಾತ್ರ. ಪ್ರತಿ ಹೊತ್ತಿಗೂ ಕಾಫಿ ತಿಂಡಿ ಊಟಗಳ ಜೊತೆಗೆ ನೀರು ಹಣ್ಣು ಇವುಗಳನ್ನು ಒದಗಿಸಲಾಗಿತ್ತು. ಸಂಜೆ ಸ್ನಾಕ್ಸ್, ಚಾಕಲೇಟ್ ಹಾಗೆ ಜ್ಯೂಸ್ ಇತ್ಯಾದಿಗಳ ಸೇವೆಯನ್ನು ಸ್ಮರಿಸಿಕೊಳ್ಳಲೇಬೇಕು. ಪ್ರತೀ ಭೋಗಿಗೂ ಸಹ ಪ್ರಮುಖರನ್ನು ನೇಮಿಸಿ ಅವರು ಟ್ರೈನ್ ನಲ್ಲಿ ಈ ವ್ಯವಸ್ಥೆಗಳ ಕುರಿತಾಗಿ ಗಮನಿಸಿಕೊಳ್ಳುತ್ತಿದ್ದರು. ರೈಲಿನ ಪ್ರಯಾಣ ಸುಖಕರವಾಗಿರುವಂತೆ ನೋಡಿಕೊಳ್ಳುವಲ್ಲಿ ಅವರು ಯಶಸ್ವಿಯಾದರು. ಇವುಗಳೇ ಅಲ್ಲದೆ ಯಾತ್ರಿಕರು ತಂದ ತಿಂಡಿಯು ಸೇರಿ ಒಮ್ಮೊಮ್ಮೆ ರಾತ್ರಿ ಊಟವೇ ಬೇಡವೆನಿಸುವಷ್ಟು ಎನಿಸಿ ಹೋಗಿತ್ತು. ಪ್ರತಿ ಹೊತ್ತಿಗೂ ಒಂದು ಲೀಟರ್ ನೀರು ಹಾಗೂ ಬಾಳೆಹಣ್ಣಿನ ವ್ಯವಸ್ಥೆ ಮಾಡಲಾಗಿತ್ತು. ಇದು ಊಟದ್ದಾದರೆ ರೈಲಿನಲ್ಲಿ ಸಾವಿರಾರು ಜನರು ಪ್ರಯಾಣಿಸುವಾಗ ಸ್ವಚ್ಛತೆ, ನೀರಿನ ವ್ಯವಸ್ಥೆ ಇವುಗಳು ಸಹ ಪ್ರಮುಖ ಎನಿಸುತ್ತದೆ. ಅವುಗಳನ್ನು ಕೂಡ ಸಾಧ್ಯವಾದಷ್ಟು ಸರಿಯಾಗುವಂತೆ ಒದಗಿಸಿ ಕೊಟ್ಟರು.
ಒಂದಿನ ನೀರಿಗಾಗಿ ಅರ್ಧ ಗಂಟೆಗೂ ಹೆಚ್ಚು ನಿಲ್ಲದ ರೈಲು ಅಲ್ಲಿ ವ್ಯವಸ್ಥೆ ಏರುಪೇರಾಗಿದ್ದರಿಂದ ಅದು ಸರಿಯಾಗುವವರೆಗೂ ನಮ್ಮನ್ನು ಬಿಟ್ಟು ಹೊರಟಿರಲಿಲ್ಲ. ಎಲ್ಲವನ್ನು ಖುದ್ದಾಗಿ ಈಶ್ವರಪ್ಪ ಹಾಗೂ ಕಾಂತೇಶ್ ರವರೆ ಗಮನಿಸಿಕೊಳ್ಳುತ್ತಿದ್ದು ವಿಶೇಷವಾಗಿತ್ತು. ಪ್ರತಿ ಭೋಗಿಗಳಿಗೂ ತೆರಳಿ ತಂದೆ ಮಗ ಎಲ್ಲರ ಯೋಗಕ್ಷೇಮ ವಿಚಾರಿಸುತ್ತಿದ್ದರು. ಅಷ್ಟು ದೂರದ ಪ್ರಯಾಣ ಆರೋಗ್ಯ ಸಮಸ್ಯೆ ಬರಬಹುದೆಂದು ಒಬ್ಬ ವೈದ್ಯ ನರ್ಸ್ ಹಾಗೂ ಮೆಡಿಸಿನ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಯಾರಿಗಾದರೂ ತೊಂದರೆಯಾಗಿದೆ ಎಂದು ಹೇಳಿದ ಕೂಡಲೇ ಬಂದು ಅವರನ್ನು ತಪಾಸಣೆ ಮಾಡುತ್ತಿದ್ದು ಸಹ ವಿಶೇಷವೇ.
ಅಯೋಧ್ಯೆಗೆ ಹೋಗುವಾಗ ಟ್ರೈನ್ ಕ್ರಾಸಿಂಗ್ ನಿಂದಾಗಿ ತಡವಾಗುತ್ತಿದೆ ಎಂಬ ವಿಷಯ ತಿಳಿದ ಈಶ್ವರಪ್ಪನವರು ಕೂಡಲೇ ಅದಕ್ಕೆ ಬೇಕಾದ ಮಂತ್ರಿಗಳನ್ನು ಸಂಪರ್ಕಿಸಿ ಅವರಿಂದ ಅಗತ್ಯವಾದ ವ್ಯವಸ್ಥೆ ಮಾಡಿಸಿದ ಅವರ ಕಾಳಜಿ ನಿಜಕ್ಕೂ ಮೆಚ್ಚಲೇಬೇಕು. ಏಕೆಂದರೆ ಅಯೋಧ್ಯೆಗೆ ಹೋಗುವುದು ತಡವಾಗುತ್ತದೆ ಎಂದು ತಿಳಿದಾಗ ಅವರ ಚಡಪಡಿಕೆ ನೋಡಬೇಕಿತ್ತು, ಟ್ರೈನ್ ತಡವಾಗಿ ತೆರಳಿದರೆ ದರ್ಶನ ಇತ್ಯಾದಿ ಆಯೋಜಿತ ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತಿತ್ತು ಎಂದೆನಿಸಿ ಅದ್ಯಾವುದಕ್ಕೂ ತೊಂದರೆಯಾಗದಂತೆ ಆ ಕ್ಷಣಕ್ಕೆ ಕಾರ್ಯಕ್ರಮದ ರೂಪುರೇಷೆಯನ್ನು ಹೊಂದಿಸುವ ವ್ಯವಸ್ಥೆ ಮಾಡಿದ್ದರು.
ಸೋಮವಾರ ಮಧ್ಯಾಹ್ನ 11ಕ್ಕೆ ಹೋಗಬೇಕಾದ ಟ್ರೈನ್ ಅಯೋಧ್ಯೆ ತಲುಪಿದ್ದು 12:30 ಆಗಿತ್ತು. ತಕ್ಷಣ ಆಟೋಗಳು ನಮಗಾಗಿ ಕಾದಿದ್ದವು ವ್ಯವಸ್ಥಿತವಾಗಿ ಏಳು ಜನರ ತಂಡ ಅದಕ್ಕೊಬ್ಬ ಮುಖ್ಯಸ್ಥನನ್ನಾಗಿ ಮಾಡಿ ಸರಯೂ ತೀರಕ್ಕೆ ಹೋಗಿ ಸ್ನಾನ ಮುಗಿಸಿ ಊಟಕ್ಕೆ ಬಂದೆವು. ಪವಿತ್ರ ಸರಯೂ ಸ್ನಾನ ನಮ್ಮನ್ನು ಪುಳಕಿತರನ್ನಾಗಿಸಿದ್ದರಿಂದ ಊಟದ ಹಸಿವು ಆಗದೆ ಮೊದಲು ರಾಮನನ್ನೇ ನೋಡೋಣ ಎಂದು ಹೊರಟು ಪ್ರಭು ಶ್ರೀರಾಮನ ದರ್ಶನ ಮಾಡಿ ಕಣ್ಣಾಲಿಗಳು ತುಂಬಿದವು. ನಂತರ ಪ್ರಸಾದ ತೆಗೆದುಕೊಂಡು ಹೊರಬರುವ ಕಡೆ, ಕಾಲು ನೋವಾಗಿರಬಹುದು ಎಂದು ಉಚಿತ ಮಾತ್ರೆಯ ವ್ಯವಸ್ಥೆಯನ್ನು ರಾಮಜನ್ಮಭೂಮಿ ಟ್ರಸ್ಟ್ ನವರೆ ಮಾಡಿದ್ದು ವಿಶೇಷ. ನಂತರ ಹನುಮಾನ್ ಗಡಿ ನೋಡಿ ಹಾಗೆ ಸೀದಾ ಗೋಪಾಲ್ ಜೀಯವರ ಮಾತುಗಳನ್ನು ಕೇಳಲು ಮರಳಿದೆವು. ಅಷ್ಟೊಂದು ಜನಜಂಗುಳಿಯ ಪ್ರದೇಶದಲ್ಲೂ ನಮ್ಮ ತಂಡದವರನ್ನು ಯಶಸ್ವಿಯಾಗಿ ಮುನ್ನಡೆಸಿದ ಶ್ರೀ ಮಂಜಣ್ಣನವರನ್ನು ನಾವು ಮರೆಯುವಂತೆಯೇ ಇಲ್ಲ.
ಗೋಪಾಲ್ ಜೀಯವರು ಮುಂದಿನ ದಿನಗಳ ಕಾರ್ಯ ಹಾಗೂ ಈಗಿನ ವ್ಯವಸ್ಥೆಯನ್ನು ಸಮಗ್ರವಾಗಿ ವಿವರಿಸಿದರು. ಲಕ್ಷ ಜನ ಬಂದರೂ ಒಂದು ಗಂಟೆಯೊಳಗೆ ದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದಾಗ ಒಮ್ಮೆ ಅಚ್ಚರಿಯನಿಸಿದರರೂ ಅದು ಸಾಧ್ಯ ಅಲ್ಲಿ ಎಂದು ನಮಗೆ ಅನ್ನಿಸಿತ್ತು. , ಚಪ್ಪಲಿಗಳನ್ನಿಡುವ ಕೌಂಟರ್, ಹೈ ಸೆಕ್ಯೂರಿಟಿ ಚೆಕ್ ಎಲ್ಲ ಕಡೆಯೂ ಹೆಚ್ಚು ನಿಲ್ಲದೆ ಸಾಗಿದೆ ನಮಗೆ ಆ ಮಾತನ್ನು ಒಪ್ಪಲೇ ಬೇಕಾಯಿತು. ಅಲ್ಲಿ 60 ದಾಟಿದವರಿಗೆ ವೀಲ್ ಚೇರ್ನಲ್ಲಿ ನೇರ ರಾಮಲಲ್ಲಾನ ದರ್ಶನದ ವ್ಯವಸ್ಥೆ ಇದ್ದು ತಳ್ಳಿಕೊಂಡು ಹೋದವರಿಗೆ ಸ್ವಲ್ಪ ಹಣ ಕೊಟ್ಟರೆ ಸಾಕು. ಅತ್ತೆಗೆ ವಯಸ್ಸಾದುದರಿಂದ ಕೇಳಿದೆವು ಆದರೆ ದೇವಾಲಯದ ಸೊಬಗು ನೋಡಲಾಗುವುದಿಲ್ಲ ಎಂದು ನಮ್ಮೊಡನೆ ನಡೆದೇ ಸಾಗಿದ್ದು ವಿಶೇಷವಾಗಿತ್ತು.
ಇಷ್ಟೆಲ್ಲ ಮುಗಿಸಿ ಕೊನೆಗೆ ನಮಗೆ ಬೆಳಗ್ಗೆ ಕರೆ ತಂದ ಆಟೋ ಸಿದ್ದವಾಗಿ ನಿಂತಿತ್ತು ಊಟ ಮುಗಿಸಿ ರಾತ್ರಿ 11ಕ್ಕೆ ಅಯೋಧ್ಯೆಯಿಂದ ಹೊರಟು ಬೆಳಗ್ಗೆ 5.30ರ ಸುಮಾರಿಗೆ ಕಾಶಿ ತಲುಪಿದೆವು ಅಲ್ಲೂ ಸಹ 14 ಜನರ ತಂಡವನ್ನು ಮಾಡಿ ಕರೆದೊಯ್ದು ಜಂಗಮವಾಡಿ ಮಠಕ್ಕೆ ಬಿಡಲು ಟ್ರ್ಯಾಕ್ಸ್ ಗಳು ಸಿದ್ಧವಾಗಿ ನಿಂತಿತ್ತು. ನಂತರ ಮಠಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳು ಸಹ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಇಡ್ಲಿ ಚಿತ್ರಾನ್ನ ತಿಂಡಿ ನಮಗಾಗಿ ಕಾದಿತ್ತು.

ನಂತರ ಅಲ್ಲಿಂದ ಎಲ್ಲರೂ ಒಬ್ಬೊಬ್ಬರಾಗಿ ಬೇರೆಡೆ ಸಾಗಿದರು ಕೆಲವರು ಗಂಗಾ ಸ್ನಾನ ವಿಶ್ವನಾಥನ ದರ್ಶನ ಎಂದು ಹೊರಟರೆ ಅವರವರು ಸ್ವತಂತ್ರವಾಗಿ ಗುಂಪು ಗುಂಪಾಗಿ ತೆರಳಲು ಮಾಹಿತಿ ನೀಡಿದ್ದರು. ಸಂಜೆ ಬೋಟ್ ವ್ಯವಸ್ಥೆ ಮಾಡಿಸಿ ಅಲ್ಲಿ ಗಂಗಾರತಿ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಎಲ್ಲಾ ಘಾಟ್ ಗಳ ಪರಿಚಯ ಮಾಡಿ ಕಾಶಿ ಕಾರಿಡಾರ್ ನೋಡಿ ಅಲ್ಲೇ ಮೂಕ ವಿಸ್ಮಿತರಾಗಿ ಮೋದಿಯವರಿಗೊಂದು ಸಲ್ಯೂಟ್ ಹೊಡೆದು, ಮುಂದೆ ಹೋದರೆ ವಿಶ್ವನಾಥನ ದರ್ಶನ ಮಹಾಮಂಗಳಾರತಿಯೊಂದಿಗೆ ಆಗಿದ್ದೇ ನಮಗಾದ ಸಂತೋಷಗಳಲ್ಲಿ ಬಹು ಮುಖ್ಯವಾದದ್ದು. ಕಾಶಿಯ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಸಂತೋಷಪಟ್ಟೆವು. ಕಾಲಭೈರವನೇ ಮೊದಲಾಗಿ ಸಾಕ್ಷಿ ಗಣಪತಿ ವಿಶಾಲಾಕ್ಷಿ ಅನೇಕ ಮಂದಿರಗಳನ್ನು ದರ್ಶನ ಮಾಡಿ, ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದನ್ನು ನೋಡಿ ಮಲಗಿದೆವು.

ಮರುದಿನ ಬೆಳಗ್ಗೆ ಗಂಗಾ ಸ್ನಾನ ಮಾಡಿ ಪುನೀತರಾದೆವು. ಜಂಗಮವಾಡಿ ಮಠದಲ್ಲಿ ಕಾಶಿ ಜಗದ್ಗುರುಗಳು ಎಲ್ಲರನ್ನೂ ಅನುಗ್ರಹಿಸಿ ಆಶೀರ್ವದಿಸಿ ಎಲ್ಲರಿಗೂ ರುದ್ರಾಕ್ಷಿ ವಿತರಿಸಿದರು. ಪೇಣಿಯೊಂದಿಗೆ ವಿಶೇಷ ಊಟ ಸವಿದು ಒಂದಷ್ಟು ಮಾರ್ಕೆಟ್ ತಿರುಗಿ ಸಂಜೆ ಇತರ ನಂತರ ಮತ್ತೆ ನಮ್ಮೂರಿನೆಡೆಗೆ ಹೊರಟೆವು. ರಾತ್ರಿ 8:30ಕ್ಕೆ ಹೊರಟ ಟ್ರೈನ್ ಮತ್ತೆ ಶಿವಮೊಗ್ಗ ಕಡೆಗೆ ಹೊರಟಾಗ ಯಾತ್ರಿಗಳೆಲ್ಲರ ಮನದಲ್ಲಿ ಸಂತಸದ ಭಾವ. ಪುಣ್ಯ ಸಂಪಾದನೆಯ ಖುಷಿ ಎಲ್ಲರ ಮಾತುಗಳಲ್ಲಿತ್ತು. ಅಲ್ಲೇ ಅನೇಕರು ಈಶ್ವರಪ್ಪ ಹಾಗೂ ಕಾಂತೇಶ್ ರವರಿಗೆ ಕೃತಜ್ಞತೆ ಸಲ್ಲಿಸಿದರು.

ಮರುದಿನ ಬೆಳಗ್ಗೆ ಎದ್ದು ಎಲ್ಲ ಭೋಗಿಗಳಿಗೂ ಓಡಾಡಿದಾಗ ಹೀಗೆ ಕುತೂಹಲಕ್ಕೆಂದು ಅನೇಕರನ್ನು ಮಾತನಾಡಿಸಿದೆ. ಅವರ ಸಂತೋಷ ನೋಡಿ ನನಗೆ ಧನ್ಯತೆಯ ಭಾವ ಮೂಡಿತ್ತು. ನಾವೇ ಮನೆಯವರು ತೆರಳಿದರೂ ಈ ರೀತಿಯ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಕರಿಬಸಪ್ಪನವರು ಹೇಳಿದರೆ, ಸಂಸ್ಕೃತ ಟೀಮಿನಿಂದ ಬಂದ ಶ್ರೀಮತಿ ಮನು ಚವ್ಹಾಣ್ ದಂಪತಿಗಳು ಮಾತನಾಡಿ ಯಾವುದೇ ತರದ ಏನೂ ಕೊರತೆಯಾಗದೇ ಎಲ್ಲರೂ ಒಂದು ಕುಟುಂಬದವರ ಹಾಗೆ ಹೊಂದಿಕೊಂಡು ಹೋಗಿಬಂದೆವು ಎಂದು ಹೇಳಿದರು. ಅನೇಕರಿಗೆ ಸ್ವತಃ ಈಶ್ವರಪ್ಪನವರ ಕುಟುಂಬ ಜೊತೆಯಲ್ಲಿದ್ದು ಸಂತಸ ಮೂಡಿಸಿದರೆ, ಮಂತ್ರಿಯ ಸ್ಥಾನದಲ್ಲಿದ್ದು ಯಾರೂ ಮಾಡೋದನ್ನ ಇವರು ಮಾಡಿದ್ದಾರೆ ಎಂದು ಆನಂದ ಪಟ್ಟರು. ಹನ್ನೆರಡು ವರ್ಷಗಳ ಹಿಂದೆ ಹೋಗಿದ್ದರು ಇಂದು ಕಾಶಿ, ಮೋದಿಯವರ ಕಾರಣದಿಂದ ತುಂಬಾ ಚೆನ್ನಾಗಿ ಆಗಿದೆ ಎಂದು ರಾಜೇಶ್ವರಿ ಅವರು ಹೇಳಿದರು. ಭೋಗಿಯಲ್ಲಿದ್ದ ಯಾತ್ರಿಕರಲ್ಲೊಬ್ಬರಾದ ಸುರೇಶ್ ಅವರು ದೇವರ ದರ್ಶನ ಮಾಡಿ ಯಾವುದೇ ಅನಾರೋಗ್ಯ ಆಗದೆ ತಂದ ಮಾತ್ರೆಗಳನ್ನು ಹಾಗೆಯೇ ಕೊಂಡೊಯ್ಯುತ್ತಿದ್ದೇವೆ ಎಂದರು. ಶ್ರೀನಿವಾಸ್ ಎಂಬ ಪಾನಿಪುರಿ ವ್ಯಾಪಾರ ಮಾಡುವವರಂತೂ ಮಾತನಾಡಿ ತಮ್ಮ ತಂದೆಯ ಸ್ಥಾನದಲ್ಲಿ ನಿಂತು ಈಶ್ವರಪ್ಪನವರು ನಮಗೆ ಈ ಯಾತ್ರೆ ಮಾಡಿಸಿದ್ದಾರೆ ನಾವು ಅವರಿಗೆ ಬಹಳ ಋಣಿಯಾಗಿದ್ದೇವೆ ಎಂದು ಭಾವುಕರಾದರು. ದೇವಸ್ಥಾನದ ಬಳಿ ಹೂ ಮಾರುವವರು, ತಿಂಡಿಗಾಡಿಯವರು, ಕೃಷಿಕರು, ವ್ಯಾಪಾರಿಗಳು, ನರ್ಸಿಂಗ್ ಸ್ಟಾಫ್, ಶಿಕ್ಷಕರು, ಗೃಹಿಣಿ ಹೀಗೆ ಅನೇಕರ ಜೊತೆಗೆ, ವಿವಿಧ ಸ್ತರದ ಜನರು ಯಾತ್ರೆಯ ಕುರಿತಾಗಿ ಮಾತನಾಡಿ ಈಶ್ವರಪ್ಪನವರ ಈ ಕಾರ್ಯ ಶ್ಲಾಘನೀಯ ಎಂದರು. ಕೆಲವರಿಗೆ ಹಣ ಇರುತ್ತೆ ಸಮಯ ಇರಲ್ಲ, ಕೆಲವರಿಗೆ ಸಮಯ ಇರತ್ತೆ ಹಣ ಇರಲ್ಲ ಅಂತವರನ್ನೆಲ್ಲ ಒಟ್ಟಾಗಿಸಿ ಒಂದು ಒಳ್ಳೆಯ ಯಾತ್ರೆ ಮಾಡಿಸಿದ್ದಾರೆ ಈಶ್ವರಪ್ಪನವರು ಎಂದು ಗಾಂಧಿಬಜಾರ್ ನ ವರ್ತಕರಲ್ಲಿ ಒಬ್ಬರಾದ ಶ್ರೀ ರಾಜೇಂದ್ರ ಚೌದರಿ ಹೇಳಿದರು.

ಒಟ್ಟಾರೆಯಾಗಿ ಒಂದೊಳ್ಳೆ ಯಾತ್ರೆ ಮಾಡಿ ನಾವು ಪುನೀತರಾದೆವು. ಹಾಗೆ ಅನೇಕರ ಪರಿಚಯವಾಗಿ ಹಾಡು ಕುಣಿತ ಅಂತ್ಯಾಕ್ಷರಿ ಪಗಡೆಯಾಟ ಇತ್ಯಾದಿಗಳು ಎಲ್ಲರ ಮನಸ್ಸಲ್ಲೂ ಹಾಗೆಯೇ ಉಳಿಯುವಂತಾಯ್ತು. ಯಾತ್ರಾರ್ಥಿಯಲ್ಲಿ ಒಬ್ಬರಾದ ಕಮಲಕ್ಕನವರಂತೂ ಈಶ್ವರಪ್ಪ ಹಾಗೂ ಕಾಂತೇಶ್ ಕುಟುಂಬದವರ ಕುರಿತಾಗಿ ಕವನ ರಚಿಸಿ ಹಾಡಿ ಜನಮನ ಸೆಳೆದರು. ಶಬರೀಶಣ್ಣನ ಭಜನೆ, ಅವರ ತಾಯಿ ಭಾವುಕರಾದ ಕ್ಷಣ, ಅಲ್ಲದೇ ಎಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದು, ಎಲ್ಲರಿಗೂ ಸ್ಪಂದಿಸಿ ಯಾತ್ರೆ ಮಾಡಿದ ಈಶ್ವರಪ್ಪನವರ ಕುಟುಂಬ ಎಲ್ಲವೂ ಒಂದು ರೀತಿಯ ವಿಶೇಷವೇ ಸರಿ. ನಿಜವಾಗಿಯೂ ನಾಯಕ ಎಂದೆನಿಸಿಕೊಳ್ಳುವುದು ಕಷ್ಟ. ಅದರಲ್ಲೂ ಜನನಾಯಕ ಹೇಗಿರಬೇಕು ಎಂಬುದನ್ನು ತಾನು ಸ್ವತಃ ನಡೆದು ತೋರಿಸಿದ ಶ್ರೀಯುತ ಈಶ್ವರಪ್ಪನವರು ಎಲ್ಲರಿಗೂ ಆದರ್ಶಪ್ರಾಯರು. ಹಿಂದಿರುಗಿ ಬರುವಾಗ ಅಯೋಧ್ಯೆಯಲ್ಲಿ ಸೇವೆ ಮಾಡಿದ ಶ್ರೀನಿತಿನ್ ರಾಯ್ಕರ್ ಅವರ ಪರಿಚಯ ನಮಗೆ ಅಯೋಧ್ಯೆಯ ಕುರಿತಾಗಿ ಇನ್ನಷ್ಟು ಪ್ರದೇಶಗಳ ಪರಿಚಯವನ್ನು ನಮಗೆ ಮಾಡಿಸಿದರು. ಕೆಲವೊಂದು ಲೋಪದೋಷಗಳು ಕಂಡುಬಂದರೂ ಸಹ ಈ ವ್ಯವಸ್ಥೆಗೆ ಅವೆಲ್ಲವೂ ನಗಣ್ಯ. ಇನ್ನೂ ಅನೇಕ ನೆನಪಿನ ಬುತ್ತಿಗಳು ಒಡಲೊಳಗಿದ್ದರೂ ಈ ವರೆಗೆ ಯಾರೂ ಮಾಡಿಸದ ಇತಿಹಾಸ ನಿರ್ಮಿಸಿದ ಇಂತಹ ಸ್ಮರಣೀಯ ಯಾತ್ರೆಯನ್ನು ಮಾಡಿಸಿದ ಈಶ್ವರಪ್ಪನವರು ಹಾಗೂ ಅವರ ಕುಟುಂಬಕ್ಕೆ ಒಳಿತಾಗಲೆಂದು ಯಾತ್ರಾರ್ಥಿಗಳೆಲ್ಲರ ಪರವಾಗಿ ಈ ಮೂಲಕ ಪ್ರಾರ್ಥಿಸುವೆ.

ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜ್ ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashvani Bhadravati ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸಿತಾಣಗಳ ಚಿತ್ರ ಪ್ರದರ್ಶನ. ಪ್ರವಾಸೋದ್ಯಮಕ್ಕೆ ಬೆಂಬಲ- ಎನ್.ಹೇಮಂತ್

Akashvani Bhadravati ಆಕಾಶವಾಣಿ ಭದ್ರಾವತಿ 60ನೇ ವರ್ಷದ ವಜ್ರ ಮಹೋತ್ಸವ ವರ್ಷಾಚರಣೆ...

Klive Special Article ಕನ್ನಡ – ಒಂದಷ್ಟು ಆತಂಕಗಳು

Klive Special Article ಮತ್ತೊಮ್ಮೆ ಕನ್ನಡದ ನುಡಿ ಜಾತ್ರೆ ಬಂದಿದೆ ....

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ನೋಡಿಕೊಳ್ಳುತ್ತದೆ- ಸಂಸದ ರಾಘವೇಂದ್ರ

B.Y.Raghavendra ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಸದ್ಯಕ್ಕೆ ಬಿ...