ಲೇ: ಡಾ. ಹೆಚ್ ಎಸ್ ಸುರೇಶ್ .ಬೆಂಗಳೂರು. (9448027400)
Klive Special Article ” 2003-೦4 ರ ರಾಷ್ಟ್ರೀಯ ಯುವ ಉತ್ಸವ ಝಾರ್ಖಂಡ್ ರಾಜ್ಯದ ಜಮಷೆಡಪುರ ದಲ್ಲಿನ ಟಾಟಾ ಸ್ಟೀಲ್ ಸಿಟಿಯಲ್ಲಿ 2004 ಜನವರಿ 12 ರಿಂದ 17 ರವರೆಗೆ ನಡೆಯಿತು . ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಮಂತ್ರಾಲಯ ಆಯೋಜಿಸಿದ್ದ ಈ ಯುವಜನೋತ್ಸವದಲ್ಲಿ ಸುಮಾರು ಐದು ಸಾವಿರಕೂ ಮಿಕ್ಕಿದ ದೇಶದಾದ್ಯಂತ ಆಗಮಿಸಿದ ಯುವ ಪ್ರತಿನಿಧಿಗಳ ಊಟ ಉಪಹಾರ ವಸತಿ ಸಾಗಾಣಿಕೆಯ ಎಲ್ಲ ವೆಚ್ಚವನ್ನೂ ಟಾಟಾ ಸಂಸ್ಥೆಯೇ ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿತು .ನನ್ನಂತೆಯೇ ಭಾಗವಹಿಸಿದ ಐದುನೂರಕ್ಕೂ ಹೆಚ್ಚು ಅಧಿಕಾರಿಗಳಿಗೂ ಪ್ರತ್ಯೇಕ ಕಾರುಗಳ ವ್ಯವಸ್ಥೆ ಮಾಡಲಾಗಿತ್ತು .ಆದರೆ ಎಲ್ಲಿಯೂ ಅಪ್ಪಿ ತಪ್ಪಿಯೂ ಟಾಟಾ ದ ಬ್ಯಾನರ್ ಗಳಾಗಲೀ, ಹೆಸರಾಗಲೀ , ಪ್ರದರ್ಶಿತವಾಗಲಿಲ್ಲ .
ನಾನು ಹಾಗೂ ನನ್ನ ಸಹೋದ್ಯೋಗಿಗಾಗಿ ಉತ್ಸವದ ಸ್ಥಳದಿಂದ ಸುಮಾರು ಹತ್ತು ಕಿ .ಮೀ .ದೂರದಲ್ಲಿನ ಟ್ರೈನಿ ಇಂಜಿನಿಯರ್ರ್ಸ್ ಹಾಸ್ಟೆಲ್ ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು .ಊಟ ಉಪಹಾರಗಳಿಗೆ ಉತ್ಸವ ಸ್ಥಳಕ್ಕೆ ಹೋಗಬೇಕಿತ್ತು . ವಸತಿ ನಿಲಯದ 120 ಟಾಟಾ ಟ್ರೈನಿ ಗಳಿಗೆ ಬೆಳಿಗ್ಗೆಯ ಕಾಫಿ –ಚಹಾ ಕೊಡಲಾಗುತ್ತಿತ್ತು . ಬೆಳಗಿನ ಕಾಫಿ ಅಭ್ಯಾಸಕ್ಕೆ ಅಂಟಿಕೊಂಡಿದ್ದ ನಮಗೆ ಅದಿಲ್ಲದೇ ಚಡಪಡಿಸುವಂತೆ ಆಯಿತು .
Klive Special Article ” ಅಲ್ಲಿ ಪ್ರತಿ ರೂಂ ಗೂ ಹೋಗಿ ಚಹಾ ವಿತರಿಸುತ್ತಿದ್ದ ವ್ಯಕ್ತಿಯನ್ನು ತಡೆದು 20 ರೂ .ಮುಂದುಮಾಡಿ ‘ ಭಯ್ಯಾ ಹಮೆ ದೋ ಚಾಯ್ ದೇದೋ ‘ ಅಂದೆ. ಆತ ವಿನಯದಿಂದಲೇ ‘ಮಾಫ್ ಕೀಜಿಯೇ ಸಾಬ್ ; ಮುಝೇ ಸಿರಫ್ ಏಕ ಸೌ ಬೀಸ್ ಚಾಯ್ ದೆನೆಕೆಲಿಯೇ ನಿರ್ದೇಶ್ ಹೈ. ಮೇ ಕೈಸೆ ದೇ ದೂ’ ಅಂದು ಹೇಳಿದ . ನಾನು ಮುಂದುವರೆದು ಹೇಳಿದೆ ‘ ಅರೇ ಭಾಯ್ ದೋ ಚಾಯ್ ಮೇ ಕ್ಯಾ ಫರಕ್ ಪಡೆಗಾ ? .ಮತ್ತಷ್ಟು ವಿನಯದಿಂದ ಹೇಳಿದ ‘ ಫರಕ್ ಪಡೆಗಾ ಸರ್ ‘
ಅವನ ಮಾತು ಕೇಳಿ ಜನವರಿಯ ಆ ಚಳಿಯಲ್ಲೂ ನಾವು ಬೆವೆತೆವು ! ಘೋರವಾದ ಅಪಮಾನ ಹಾಗೂ ಲಜ್ಜೆ ಅನಿಸಿತು .
ಇಂತಹಾ ಅತೀ ಕೆಳದರ್ಜೆಯ ಸಾಮಾನ್ಯ ನೌಕರರ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದಲೇ ಟಾಟಾ ಬಲಿಷ್ಠವಾದ ಉದ್ದಿಮೆಗಳನ್ನು
ಕಟ್ಟಲು ಮತ್ತು ಮೌಲ್ಯಾಧಾರಿತ ಔದ್ಯಮಿಕ- ಔದ್ಯೋಗಿಕ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಅಂದುಕೊಳ್ಳುತ್ತೇನೆ
ಇನ್ನೊಂದು ಕತೆ ಕೇಳಿ ,ಇದು 1997 ರಲ್ಲಿ ನಡೆದ ಘಟನೆ !
ಗುಜರಾತಿನಲ್ಲಿದ್ದ ನಾನು ರಜೆಯ ಮೇಲೆ ಶಿವಮೊಗ್ಗೆಯ ಬಡಾವಣೆಯೊಂದರಲ್ಲಿ ಸೂಡಾ’ ಮಂಜೂರು ಮಾಡಿದ್ದ ನಿವೇಶನದಲ್ಲಿ ಮನೆ ಕಟ್ಟಿಸುತ್ತಿದ್ದೆ.
ಅರ್ಧ ಮೂಟೆ ಸಿಮೆಂಟ್ ಇಲ್ಲದೆ ಕೆಲಸ ಆ ಸಂಜೆ ಅರ್ಧಕ್ಕೆ ನಿಂತಿತ್ತು . ಇನ್ನು ಮಾರನೆ ದಿನ ಅಂಗಡಿಯ ಬಾಗಿಲು ತೆಗೆದಮೇಲಷ್ಟೇ ಗಾರೆಯವನಿಗೆ ಕೆಲಸ . ಬೆಳಿಗ್ಗೆ ಎಂಟಕ್ಕೇ ಸೈಟ್ ತಲುಪಿದಾಗ ಸಿಮೆಂಟ್ ಕೆಲಸವೇ ಮುಗಿದಿತ್ತು .ವಿಸ್ಮಯ ಆಯಿತು . ಮೆಸ್ತ್ರಿಯನ್ನು ವಿಚಾರಿಸಿದೆ .
ಮೇಸ್ತ್ರಿ ಹೇಳಿದ . ‘ ಇಲ್ಲೇ ಒಂದು ಗೌರ್ಮೆಂಟ್ ಬಿಲ್ಡಿಂಗ್ ಕೆಲ್ಸಾ ನಡೀತಿದೆ . ರಾತ್ರೆ ವಾಚ್ ಮ್ಯಾನ್ ಗೆ ಐವತ್ತು ರುಪಾಯಿ ಕೊಟ್ಟಿದ್ದೆ. ಪಾಪ ತಕ್ಷಣ ತಂದುಕೊಟ್ಟ . ಗಾರೆಯೋರನ್ನ ನಾಳೆ ಬೇರೆ ಕಡೆ ಹಚ್ಚಿದೀನಿ . ಅದೂ ಪ್ಯಾಚ್ ವರ್ಕ್ .ಅರ್ಧ ಗಂಟೇಲಿ ಮಾಡಿ ಮುಗಿಸಿದ ‘ ಅಂದ
ತಪ್ಪಲ್ವಾ ? ನೂರಾರು ಮೂಟೆ ಸಿಮೆಂಟ್ ಕೊಂಡಿರುವಾಗ ಈ ಅರ್ಧ ಮೂಟೆ ಸಿಮೆಂಟ್ಗೆ ಜಾತಿ ಕೆಟ್ಟ ಹಾಗೆ ಆಗ್ಲಿಲ್ವಾ ? ಅಂದೆ.
“ಸಾರ್ , ಅರ್ಧ ಮೂಟೆ ಸಿಮೆಂಟ್ ಸರ್ಕಾರಕ್ಕೆ ಯಾವ್ ಲೆಕ್ಕ ? ಕ್ಯಾ ಫರಾಕ್ ಪಡೆಗಾ ?” ಅಂದ .
ಅಂದಿನ ನನ್ನ ಮೌನ ಇಂದಿಗೂ ನನ್ನನ್ನು ಕಾಡುತ್ತಿದೆ ! ಆ ಮನೆಯನ್ನು ನೋಡಿದಾಗಲೆಲ್ಲಾ ಈ ಘಟನೆ ನೆನಪಾಗುತ್ತದೆ .