Wayanand Landslides ದುರಂತ ಸಂಭವಿಸಿದ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದರು.
ವಯನಾಡಿನ ಮಾಜಿ ಸಂಸದರೂ ಆಗಿರುವ ರಾಹುಲ್ ಗಾಂಧಿ ದುರಂತ ಸಂಭವಿಸಿದ ಮೆಪ್ಪಾಡಿ ಪ್ರದೇಶದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತೆರೆದಿರುವ ಪರಿಹಾರ ಶಿಬಿರಕ್ಕೆ ತೆರಳಿ ಸಂತ್ರಸ್ತರ ಸಮಸ್ಯೆ ಆಲಿಸಿದರು ಮತ್ತು ಅವರಿಗೆ ಸಾಂತ್ವನ ಹೇಳಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಇಂದು ಬೆಳಿಗ್ಗೆ ಇಬ್ಬರು ಹಿರಿಯ ಅಧಿಕಾರಿಗಳಾದ ಡಾ. ವಿ ವೇಣು ಮತ್ತು ಡಿಜಿಪಿ ಶೇಕ್ ದರ್ವೇಶ್ ಸಾಹಿಬ್ ಅವರೊಂದಿಗೆ ವಯನಾಡ್ ತಲುಪಿದ್ದಾರೆ.
ವಯನಾಡಿನ ಸಿವಿಲ್ ಸ್ಟೇಷನ್‌ನಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಸ್ಮಾರಕ ಸಭಾಂಗಣದಲ್ಲಿ ಮುಖ್ಯಮಂತ್ರಿ ಸರ್ವಪಕ್ಷ ಸಭೆ ನಡೆಸಿದ್ದಾರೆ. ಜಿಲ್ಲಾಡಳಿತ ನೀಡಿದ ಮಾಹಿತಿಯಂತೆ ವಯನಾಡ್ ಮೂಲದ ರಾಜ್ಯ ಸರ್ಕಾರದ ಸಚಿವರು, ಜಿಲ್ಲೆಯ ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
Wayanand Landslides ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಗಳು ಮುಂದುವರಿದಿವೆ.
ಇತ್ತೀಚಿನ ಮಾಹಿತಿ ಪ್ರಕಾರ, ಭೂಕುಸಿತ ದುರಂತ ಸ್ಥಳದಲ್ಲಿ ಅವಶೇಷಗಳ ಅಡಿಯಿಂದ ಹೆಚ್ಚಿನ ಮೃತ ದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ 280 ದಾಟಿದೆ.
ಇನ್ನೂ 500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. 200ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.