Vokkaliga Swamiji Demands CM Post For DK Shivakumar ಕೆಂಪೇಗೌಡ ಜಯಂತಿ ಆಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಸ್ವಾಮೀಜಿಯೊಬ್ಬರು ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂದು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಘಟನೆ ಬಳಿಕ ಮತ್ತಷ್ಟು ಸ್ವಾಮೀಜಿಗಳು ತಮ್ಮ ತಮ್ಮ ಸಮುದಾಯಗಳ ಪರವಾಗಿ ಇಂಥಹದ್ದೇ ಬೇಡಿಕೆ ಮುಂದಿಟ್ಟಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಸ್ವಾಮೀಜಿ ಶ್ರೀಶೈಲ ಜಗದ್ಗುರು ಚಿನ್ನ ಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ, ಒಂದು ವೇಳೆ ರಾಜ್ಯದಲ್ಲಿ ಸಿಎಂ ಬದಲಾವಣೆಯಾದರೆ, ತಮ್ಮ ಸಮುದಾಯದ ಸಚಿವರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವುದರಲ್ಲಿ ಸಮುದಾಯದ ಮತಗಳು ನಿರ್ಣಾಯಕವಾಗಿರುವುದರಿಂದ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಸಿದರೂ ಸಹ ವೀರಶೈವ-ಲಿಂಗಾಯತ ಸಚಿವರನ್ನು ಪರಿಗಣಿಸಬೇಕು ಎಂದು ಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದ್ದಾರೆ.
“ಕರ್ನಾಟಕ ರಾಜ್ಯ ರಾಜಕೀಯ ಬೆಳವಣಿಗೆಗಳು ಮತ್ತು ಹೊರಹೊಮ್ಮುತ್ತಿರುವ ಸುದ್ದಿಗಳು ಚರ್ಚೆಯಲ್ಲಿವೆ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನ ಬದಲಾವಣೆಯಾದರೆ ಮತ್ತು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆಗಳು ಸೃಷ್ಟಿಯಾದರೆ – ಅಂತಹ ಪರಿಸ್ಥಿತಿಯಲ್ಲಿ, ವೀರಶೈವ-ಲಿಂಗಾಯತ ಸಮುದಾಯದ ಸಚಿವರಿಗೆ ಆದ್ಯತೆ ನೀಡಿ ಎಂದು ನಾನು ಪಕ್ಷ (ಕಾಂಗ್ರೆಸ್) ಮತ್ತು ಸರ್ಕಾರವನ್ನು ಒತ್ತಾಯಿಸುತ್ತೇನೆ,’’ ಎಂದು ಶ್ರೀಗಳು ಹೇಳಿದರು.
ಜಾತಿಗಣತಿ ವರದಿ ಒಪ್ಪಿದರೆ ಹೋರಾಟ:
ಸರ್ಕಾರಕ್ಕೆ ವೀರಶೈವ-ಲಿಂಗಾಯತ ಮಹಾಸಭಾ ಎಚ್ಚರಿಕೆ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ರಚನೆ ಸಂದರ್ಭದಲ್ಲಿ ವೀರಶೈವ-ಲಿಂಗಾಯತ ಮತಗಳು ನಿರ್ಣಾಯಕವಾಗಿದ್ದ ಕಾರಣ ವೀರಶೈವ-ಲಿಂಗಾಯತ ಸಚಿವರಿಗೆ ಆದ್ಯತೆ ನೀಡಬೇಕು, ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್. ಅಂತಹ ಜನರನ್ನು ಪರಿಗಣಿಸಬೇಕು ಮತ್ತು ಅವರ ಅನುಭವವನ್ನು ಬಳಸಿಕೊಳ್ಳಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ತಿಳಿಸಿದ್ದಾರೆ.
Vokkaliga Swamiji Demands CM Post For DK Shivakumar ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಗುರುವಾರ ನಡೆದ ಬೆಂಗಳೂರಿನ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ಶಿವಕುಮಾರ್ ಸಿಎಂ ಆಗಬೇಕು ಎಂದು ಪಟ್ಟು ಹಿಡಿದರು.
ವೀರಶೈವ-ಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಇನ್ನೂ ಮೂವರು ಉಪ ಮುಖ್ಯಮಂತ್ರಿಗಳನ್ನು ಹೊಂದಲು ಸಿದ್ದರಾಮಯ್ಯ ಸಂಪುಟದಲ್ಲಿ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ ಈ ಬೆಳವಣಿಗೆಯಾಗಿರುವುದು ಮಹತ್ವ ಪಡೆದುಕೊಂಡಿದೆ.