World International Yoga ಯೋಗಾಚಾರ್ಯ ಶ್ರೀ ಡಾ ಸಿ. ವಿ. ರುದ್ರಾರಾಧ್ಯರ ನೇತೃತ್ವದಲ್ಲಿ ಶಿವಮೊಗ್ಗ ನಗರದ ವಿವಿಧ ಬಡಾವಣೆಗಳಲ್ಲಿ ಉಚಿತ ಯೋಗ ಶಿಕ್ಷಣ ನೀಡುತ್ತಿರುವ ಯೋಗ ಶಾಖೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಯೋಗ ಶಿಕ್ಷಣಾರ್ಥಿಗಳಿಂದ ವಿಶ್ವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸಾಮಾನ್ಯ ಶಿಷ್ಟಾಚಾರದಂತೆ ಯೋಗ ಅಭ್ಯಾಸದ ಮೂಲಕ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಈ ವರ್ಷದ ಯೋಗ ದಿನದ ಧ್ಯೇಯ ವಾಕ್ಯದಂತೆ ” ಸ್ವಹಿತ ಮತ್ತು ಸಮಾಜಕ್ಕಾಗಿ ಯೋಗ ” ಎಂಬುದನ್ನು ನಮ್ಮ ಕೇಂದ್ರ ನಿರಂತರವಾಗಿ ಪಾಲಿಸುತ್ತಿದೆ ಎಂದು ತಿಳಿಸಿದರು. ಯೋಗ ಸಂಭ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಸಂಸ್ಕೃತ ಉಪನ್ಯಾಸಕರು ನಿವೃತ್ತ, ಡಾ. ಪದ್ಮನಾಭ ಅಡಿಗ ಇಂದಿನ ದಿನದ ಪ್ರಾಮುಖ್ಯತೆ ತಿಳಿಸುತ್ತಾ ಭಾರತದ ಪ್ರಾಚೀನ ಸಂಸ್ಕೃತಿಯಲ್ಲಿ ಆರೋಗ್ಯಕ್ಕೆ ಬಹಳ ಮಹತ್ತ್ವ ಕೊಟ್ಟಿದ್ದರು ಎಂಬುದಕ್ಕೆ ಯೋಗಪದ್ಧತಿ ಒಂದು ಉದಾಹರಣೆಯಾಗಿದೆ. ಇಂತಹ ಯೋಗವನ್ನು ಸಮಸ್ತ ಪ್ರಪಂಚದ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಒಂದು ಹವ್ಯಾಸವಾಗಿ ರೂಢಿಸಬೇಕೆಂದು ಸೆಪ್ಟೆಂಬರ್, ೨೦೧೪ ರಲ್ಲಿ ಭಾರತದ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರಮೋದಿಯವರು ವಿಶ್ವಸಂಸ್ಥೆಯ ಮೂಲಕ ಕರೆಕೊಟ್ಟರು.
ಭಾರತದ ಶ್ರೀ ಅಶೋಕ್ ಮುಖರ್ಜಿಯವರು ಡಿಸೆಂಬರ್ ೧೧, ೨೦೧೪ ರಲ್ಲಿ ಇದಕ್ಕೆ ಬೇಕಾದ ಡ್ರಾಫ್ಟ್ ಸಿದ್ಧಗೊಳಿಸಿ ಮಂಡಿಸಿದರು. ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಲ್ಲಿ ಇದು ೧೭೭ ದೇಶಗಳ ಅನುಮೋದನೆಯೊಂದಿಗೆ ಅಂಗೀಕೃತಗೊಂಡಿತು. ೨೦೧೫, ರಿಂದ ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ಪ್ರತಿವರ್ಷ ಜೂನ್ ೨೧ ರಂದು ಆಚರಿಸಲಾಗುತ್ತಿದೆ. ಮೊದಲ ಆಚರಣೆಯಲ್ಲಿ ನ್ಯೂಯಾರ್ಕ್, ಪ್ಯಾರೀಸ್, ಬೀಜಿಂಗ್, ಬ್ಯಾಂಕಾಕ್, ಕೌಲಾಲಂಪುರ,ಸಿಯೋಲ್, ದೆಹಲಿ ಮೊದಲಾದವು ಪಾಲ್ಗೊಂಡವು. ಉತ್ತರಗೋಳಾರ್ಧದಲ್ಲಿ ಅತಿ ಹೆಚ್ಚು ಹಗಲಿರುವ ಜೂನ್ ಇಪ್ಪತ್ತೊಂದು, ಉತ್ತರಾಯಣ ದಕ್ಷಿಣಾಯನಗಳ ನಡುವಿನ ಸಂಕ್ರಮಣ ಕಾಲ. ಭಾರತೀಯ ರಿಸರ್ವ್ ಬ್ಯಾಂಕ್ ೨೦೧೫ ರಲ್ಲಿ ಈ ಯೋಗದಿನಾಚರಣೆಯ ನಿಮಿತ್ತವಾಗಿ ೧೦ ರೂಪಾಯಿಯ ನಾಣ್ಯಗಳನ್ನು ಬಿಡುಗಡೆಮಾಡಿತು. ೨೦೧೭ ರಲ್ಲಿ ಅಮೇರಿಕದ ಯು ಎನ್ ಪೋಸ್ಟಲ್ ಅಡ್ಮಿನಿಸ್ಟ್ರೇಷನ್ ವಿವಿಧ ಯೋಗಾಸನಗಳ ಚಿತ್ರದ ೧೦ ಸ್ಟಾಂಪ್ ಗಳ ಒಂದು ಹಾಳೆಯನ್ನು ಬಿಡುಗಡೆಗೊಳಿಸಿತು.
World International Yoga ಯೋಗಪದಕ್ಕೆ ಅನೇಕಾರ್ಥಗಳಿವೆ. ಕವಚ, ಉಪಾಯ,ಮ್ ಧ್ಯಾನ, ಸಂಬಂಧ, ಯುಕ್ತಿ, ಯೋಗ್ಯತೆ ಮೊದಲಾದ ಅರ್ಥಗಳಿದ್ದು ಪತಂಜಲಿಯು ಇದನ್ನು ಧ್ಯಾನದ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಯೋಗ ಶಬ್ದಕ್ಕೆ ಯೋಗಕ್ಕೆ ಅರ್ಹ ಎಂಬರ್ಥದಲ್ಲಿ ಯುಚ್ ಪ್ರತ್ಯಯ ಬಂದು ಯೋಗ್ಯ ಎಂಬ ಶಬ್ದವಾಗಿದೆ. ಸಂಸ್ಕೃತದಲ್ಲಿ ಯೋಗ ಶಬ್ದವನ್ನು ಯುಜಿರ್ ಯೋಗೇ, ಯುಜ್ ಸಮಾಧೌ ಮತ್ತು ಯುಜ್ ಸಂಯಮನೇ ಎಂಬ ಮೂರು ಧಾತುಗಳಿಂದ ನಿಷ್ಪತ್ತಿ ಮಾಡಬಹುದು. ಪತಂಜಲಿಯು ಯುಜ್ ಸಮಾಧೌ ಎಂಬ ಧಾತುವಿನಿಂದ ಯೋಗ ಎಂಬ ಪದವನ್ನು ಹೇಳಿದ್ದಾರೆ. ಆದ್ದರಿಂದ ಯೋಗ ಎಂದರೆ ಏಕಾಗ್ರತೆ, ಸಮಾಧಿ ಎಂದು ಅರ್ಥ. ಯೋಗವು ಆತ್ಮವಿದ್ಯೆಯೂ ಹೌದು.
ಇಂದಿನ ಯುವ ಜನಾಂಗವು ಜೀವನಮೌಲ್ಯಗಳ ಕೊರತೆಯಿಂದ ಡ್ರಗ್ಸ್ ಮೊದಲಾದ ಚಟಗಳಿಗೆ ಬಲಿಯಾಗುತ್ತಿದೆ. ಜನರ ಆರೋಗ್ಯ ಸತತವಾಗಿ ಹದಗೆಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಯೋಗವು ನಮ್ಮನ್ನು ರಕ್ಷಿಸುತ್ತದೆ ಎಂಬ ಭಾವನೆಯಿಂದ ಈ ಉತ್ಸವವನ್ನು ಆಚರಿಸುತಿದ್ದೇವೆ. ಅಧ್ಯಾತ್ಮ ಲೋಕದಲ್ಲಿ ಜೀವಾತ್ಮಪರಮಾತ್ಮನ ಸಂಯೋಗವೇ ಯೋಗವಾಗಿದೆ.
ಕ್ರಿಯೈವ ಕಾರಣಂ ಸಿದ್ಧೇಃ ಎಂಬಂತೆ ಯೋಗಾಸನಗಳನ್ನು ಪ್ರತಿದಿನ ತಪ್ಪದೇ ಮಾಡಿದರೆ ಮಾತ್ರ ಆರೋಗ್ಯಭಾಗ್ಯ ಲಭಿಸುತ್ತದೆ. ಅದಕ್ಕೆ ಮಿತಾಹಾರ ಮತ್ತು ಯಮ ನಿಯಮಗಳ ಆಚರಣೆಯೂ ಮುಖ್ಯವಾಗಿದೆ. ಷಟ್ಕರ್ಮಗಳಿಂದ ದೇಹ ಶೋಧನೆಯೂ, ಆಸನಗಳಿಂದ ದೇಹ ದೃಢವೂ, ಮುದ್ರೆಯಿಂದ ದೇಹಕ್ಕೆ ಸ್ಥಿರತೆಯೂ, ಪ್ರತ್ಯಾಹಾರದಿಂದ ಧೀರತ್ವವೂ, ಪ್ರಾಣಾಯಾಮದಿಂದ ಲಾಘವವೂ, ಹಗುರತೆಯೂ, ಧ್ಯಾನದಿಂದ ಆತ್ಮ ಪ್ರತ್ಯಕ್ಷವೂ, ಮತ್ತು ಸಮಾಧಿಯಿಂದ ನಿರ್ಲಿಪ್ತತೆಯ ಮುಕ್ತಿಯೂ ದೊರೆಯುತ್ತದೆ.
ಎಲ್ಲಾ ಶಾಖೆಗಳ ಶಿಕ್ಷಕರು ಮತ್ತು ಯೋಗ ಕೇಂದ್ರದ ಕಾರ್ಯದರ್ಶಿಯವರಾದ ಶ್ರೀ ಎಸ್ ಎಸ್ ಜ್ಯೋತಿ ಪ್ರಕಾಶ್ ರವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.