2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನಗಳಾಗುತ್ತಿದ್ದು, ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಿಗೆ ಎಲ್ಲಡೆ ಶುಭಾಶಯ ಕೋರಲಾಗುತ್ತಿದೆ.
SSLC Result 2024 ರಾಜಕೀಯ ಗಣ್ಯರ ಶುಭಾಶಯ, ಬ್ಯಾನರ್, ಸನ್ಮಾನ ಹೀಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದವರಿಗೆ ಅಭಿನಂದಿಸಲಾಗುತ್ತಿದೆ. ಈ ನಡುವೆ ವಿಶೇಷವಾದ ಬ್ಯಾನರ್‌ವೊಂದು ವೈರಲ್ ಆಗುತ್ತಿದೆ.
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 300 ಅಂಕಗಳೊಂದಿಗೆ ಜಸ್ಟ್ ಪಾಸಾದ ಮಂಗಳೂರಿನ ವಿದ್ಯಾರ್ಥಿಯೊಬ್ಬನಿಗೆ ಆತನ ಸ್ನೇಹಿತರು ಬ್ಯಾನರ್ ಹಾಕಿ ಅಭಿನಂದಿಸಿ ಸಂಭ್ರಮಿಸಿದ್ದಾರೆ.
ಮಂಗಳೂರು ನಗರದ ಪಚ್ಚನಾಡಿಯ ಹ್ಯಾಸ್ಲಿನ್ ಎಂಬ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಪರೀಕ್ಷೆಯಲ್ಲಿ ಪಾಸ್ ಆಗಿರುವುದನ್ನು ಆತನ ಸ್ನೇಹಿತರು ಸಂಭ್ರಮಿಸಿದ್ದಾರೆ. ಮೊದಲು ಆತ ಪರೀಕ್ಷೆ ಪಾಸಾಗುತ್ತಾನೋ ಇಲ್ಲವೋ ಎನ್ನುವ ಗೊಂದಲ ಇತ್ತು. ಆದರೆ ಫಲಿತಾಂಶದಲ್ಲಿ ಹ್ಯಾಸ್ಲಿನ್ 300 ಅಂಕಗಳೊಂದಿಗೆ ಪಾಸಾಗಿದ್ದಾನೆ.
SSLC Result 2024 ಅದೇ ಖುಷಿಯಲ್ಲಿ ಅವನ ಸ್ನೇಹಿತರು ಪಚ್ಚನಾಡಿಯ ಮಂಗಳಾನಗರದ ರಸ್ತೆ ಬದಿಯಲ್ಲಿ ದೊಡ್ಡ ಬ್ಯಾನರನ್ನೇ ಅಳವಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಸದ್ಯ ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೋಡುಗರು ಹ್ಯಾಸ್ಲಿನ್ ಸ್ನೇಹಿತರ ಈ ಕಾರ್ಯಕ್ಕೆ ಅವರ ಸಂಭ್ರಮಕ್ಕೆ ಅಭಿನಂದನೆ ತಿಳಿಸಿದ್ದಾರೆ.
‘ಅಪ್ಪ ಅಮ್ಮನ ಆಶೀರ್ವಾದದಿಂದ, ಊರವರ ಬೈಗುಳದಿಂದ, ಊರವರ ಪ್ರೋತ್ಸಾಹದಿಂದ, ಟ್ಯೂಷನ್ ಮಹಾತ್ಮೆಯಿಂದ, ಶಾಲೆಯ ಕಿರಿಕಿರಿಯಿಂದ, ಶಿಕ್ಷಕರ ಬೋಧನೆಯಿಂದ, ಸೈಕಲ್, ಕ್ರಾಕ್ಸ್, ಪಿಯುಸಿ ಆಮಿಷದಿಂದ ಎಲ್ಲರ ಕುತೂಹಲ, ಬ್ರೂಸ್ಲಿ (ಹ್ಯಾಸ್ಲಿನ್) ಪಾಸೋ ಫೇಲೋ, ಇಂದು ಆ ಚರ್ಚೆಗೆ ತೆರೆ ಬಿದ್ದಿದೆ. ತೋಚಿದ್ದು ಗೀಚಿ ಫೇಲ್ ಆಗುವವನು ಹರಕೆಯ ಬಲದಿಂದ, ಪ್ರಯತ್ನದ ಫಲದಿಂದ ಹೇಗೋ ಒಟ್ಟಾರೆ ನಮ್ಮ ಬ್ರೂಸ್ಲಿ ಜಸ್ಟ್ ಪಾಸಾಗಿರೋದೆ ನಮಗೆಲ್ಲ ಸಂಭ್ರಮ ಸಂಭ್ರಮ..
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 300 ಅಂಕ ಪಡೆದು ಉತ್ತೀರ್ಣನಾದ ಹ್ಯಾಸ್ಲಿನ್ ನಿಮಗೆ ಅಭಿನಂದನೆಗಳು’ ಎಂದು ಇತಿ ಹ್ಯಾಸ್ಲಿನ್ (ಬ್ರೂಸ್ಲಿ) ಹಿತೈಷಿಗಳು, ಯುವ ಫ್ರೆಂಡ್ಸ್ ಮಂಗಳಾನಗರ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ