Congress Karnataka ಕಾಂಗ್ರೆಸ್ 5 ಗ್ಯಾರಂಟಿಗಳ ಬಗ್ಗೆ ಶಿವಮೊಗ್ಗ ಶಾಸಕರಿಗೆ ಅಸಹನೆ-ಕಾಗ್ರೆಸ್ ವಕ್ತಾರ ವೈ.ಬಿ.ಚಂದ್ರಕಾಂತ್ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಬಡವರು ಹಾಗೂ ಮಧ್ಯಮ ವರ್ಗದವರ ಪರವಾಗಿ ಜಾರಿಗೆ ತಂದಿರುವ 05 ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ ಸಹಿಸಿಕೊಳ್ಳಲಾಗದೆ ವಿರೋಧ ವ್ಯಕ್ತಪಡಿಸಿರುವ ಶಾಸಕ ಎಸ್. ಎನ್. ಚನ್ನಬಸಪ್ಪ ಅವರಿಗೆ ಯೋಜನೆಗಳ ಬಗ್ಗೆ ಅಸಹನೆ ಉಂಟಾಗಿರುವಂತೆ ಕಾಣುತ್ತಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ತಿರುಗೇಟು ನೀಡಿದ್ದಾರೆ.
ಬಿ.ಜೆ.ಪಿ. ಅಧಿಕಾರಕ್ಕೆ ಬಂದು 10 ವರ್ಷಗಳ ಕಳೆಯುತ್ತ ಬಂದರೂ, ಬಡವರು ಮದ್ಯಮ ವರ್ಗದವರು ಮತ್ತು ಯುವ ಸಮೂಹದ ಒಂದೇ ಒಂದು ಯೋಜನೆಯನ್ನು ಜಾರಿಗೆ ತರಲಾಗಿಲ್ಲ. ಪ್ರಧಾನಿಯವರ ಆಡಳಿತ ವೈಖರಿಯನ್ನು ಗಮನಿಸಿದರೆ ಕೇವಲ ಶ್ರೀಮಂತರ ಪರವಾದ ಆಡಳಿತ ನಡೆಸುತ್ತಿರುವುದು ಮತ್ತು ಅವರು ಯಾರೋ ಆಡಿಸುತ್ತಿರುವ ಸೂತ್ರದ ಗೊಂಬೆಯಾಗಿರುವುದು ಸ್ಪಷ್ಠವಾಗುತ್ತದೆ. ಸ್ವತಃ ಪ್ರಧಾನಿ ಮೋದಿಯವರು ದಿನಕ್ಕೆ ಮೂರು ಬಗೆಯ ಉಡುಪುಗಳ ಧರಿಸಿ ದೇವಾನು ದೇವತೆಗಳ, ಮಹಾ ಪುರುಷರ ವೇಷಗಳನ್ನು ಹಾಕಿಕೊಂಡು ತಿರುಗಾಡುತ್ತಾ ನೂರಾರು ಕೋಟಿ ರೂಪಾಯಿಗಳ ದುಂದು ವೆಚ್ಚ ಮಾಡುತ್ತಿದ್ದಾರೆ. ಇದು ಶಾಸಕ ಚನ್ನಬಸಪ್ಪ ಅವರಿಗೆ ಕಾಣ ಸುತ್ತಿಲ್ಲವೇ.
Congress Karnataka ಒಬ್ಬ ಪ್ರಧಾನ ಮಂತ್ರಿಯಾದವನಿಗೆ ದೇಶದ ಆಡಳಿತ ನಡೆಸುವುದು ಮುಖ್ಯವಾಗಬೇಕೇ ಹೊರತು, ವೇಷಗಳ ಹಾಕಿಕೊಂಡು ತಿರುಗುವುದಲ್ಲ ಎಂದು ವೈ.ಬಿ.ಚಂದ್ರಕಾಂತ್ ಅವರು ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ೫ ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ನಂತರ ನಿಲ್ಲಿಸುತ್ತಾರೆಂದು ಪ್ರಧಾನಿ ಸಹಿತ ಬಿ.ಜೆ.ಪಿ. ನಾಯಕರು ಪುಂಗಿ ಊದಿಕೊಂಡು ಓಡಾಡುತ್ತಿದ್ದಾರೆ, ಆದರೆ, ಬಿ.ಜೆ.ಪಿ.ಯ ಡೋಂಗಿಗಳು ಊದುವ ಪುಂಗಿ ನಾದಕ್ಕೆ ತಲೆ ಅಲ್ಲಾಡಿಸುವುದಕ್ಕೆ ರಾಜ್ಯದ ಜನರೇನು ಕಿವಿ ಕೇಳದ ಹಾವುಗಳಲ್ಲ, ಬದಲಿಗೆ ಪ್ರಜ್ಞಾವಂತರು ಎನ್ನುವುದನ್ನು ಬಿ.ಜೆ.ಪಿ.ನಾಯಕರು, ಶಾಸಕ ಚನ್ನಬಸಪ್ಪ ಅವರಂತವರು ಮರೆಯಬಾರದು ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಕುಟುಕಿದ್ದಾರೆ.
ಬಿ.ಜೆ.ಪಿ. ಸರ್ಕಾರದ ದುರಾಡಳಿತದಿಂದ ಬೇಸತ್ತಿರುವ ದೇಶದ ಜನರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ, ಜಿಲ್ಲೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲವೆಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಹೇಳಿದ್ದಾರೆ.