Shri Kshetra Bangaramakki ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಶ್ರೀರಾಮನವಮಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆರಂಭವಾದ ಜಾತ್ರಾ ಮಹೋತ್ಸವವು ಶ್ರೀ ದೇವರ ಪುಷ್ಪ ರಥೋತ್ಸವ ಹಾಗೂ ಮಹಾಸ್ಯಂದನ ಬ್ರಹರಥೋತ್ಸವದೊಂದಿಗೆ ಸಂಪನ್ನಗೊಂಡಿದೆ.
ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿಯವರ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜಾತ್ರಾ ಮಹೋತ್ಸವವು ಆಯೋಜನೆಗೊಂಡು ರಾಮನವಮಿ, ಶರಾವತಿ ಆರತಿ, ಶರಾವತಿ ಕುಂಭ, ಶ್ರೀ ದೇವರ ಪುಷ್ಪ ರಥೋತ್ಸವ ಹಾಗೂ ಶ್ರೀ ದೇವರ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಾಂಗವಾಗಿ ನೆರವೇರಿದವು.
Shri Kshetra Bangaramakki ರಾಜ್ಯದ ವಿವಿಧ ಭಾಗಗಳ ಕಲಾ ತಂಡಗಳು ನೃತ್ಯ ಹಾಗೂ ವಾದನಗಳ ಪ್ರದರ್ಶನ ನೀಡಿ ಜಾತ್ರಾ ಮೆರವಣಿಗೆಗೆ ಮೆರಗು ತಂದವು.
ಜಾತ್ರಾರಂಭದಿಂದಲೂ ಶ್ರೀ ಕ್ಷೇತ್ರ ಬಂಗಾರಮಕ್ಕಿ ತಳಿರು ತೋರಣ, ಪತಾಕೆ, ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದು ಪ್ರತಿನಿತ್ಯ ಸಹಸ್ರಾರು ಭಕ್ತರು ಶ್ರೀ ದೇವರ ದರ್ಶನವನ್ನು ಪಡೆದು ವಿವಿಧ ಸೇವೆಗಳನ್ನು ಸಲ್ಲಿಸಿದರು.
ಈ ಅವಧಿಯಲ್ಲಿ ಪ್ರತಿದಿನ ಸಂಜೆಯಿಂದ ಮುಂಜಾನೆಯವರೆಗೆ ನಿರಂತರವಾಗಿ ಭಜನಾ ಸೇವೆ ನೆರವೇರಿತು. ಶರಾವತಿ ಕುಂಭ ಹಾಗೂ ಶರಾವತಿ ಆರತಿ ಕಾರ್ಯಕ್ರಮಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳ ಸಾಧು ಸಂತರು ಭಾಗವಹಿಸಿದ್ದರು.