DRR Government Polytechnic College ಸಂವಿಧಾನದತ್ತವಾದ ಹಕ್ಕು ಗಳ ಪಡೆಯುವಿಕೆ ಹಾಗೂ ಕರ್ತವ್ಯಗಳ ಪಾಲಿಸುವಿಕೆಗೆ ಸಹಚರರನ್ನು ಪ್ರೇರೇಪಿಸುವುದೂ ಉತ್ತಮ ನಾಯಕತ್ವದ ಲಕ್ಷಣವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ್ ಹೇಳಿದರು. ದಾವಣಗೆರೆ ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ 2023-24ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ಸಂಘದ ಸಮರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಮತ್ತು ಆದರ್ಶ ನಾಯಕತ್ವದ ಗುಣಗಳನ್ನು ರೂಢಿಸಿಕೊಳ್ಳಲು ವಿದ್ಯಾರ್ಥಿ ಸಂಘದಲ್ಲಿ ಪಾಲ್ಗೊಳ್ಳುವಿಕೆ ಸಹಕಾರಿಯಾಗುತ್ತದೆ ಎಂದರು.
ತಾಂತ್ರಿಕ ಡಿಪ್ಲೋಮಾ ಹಾಗೂ ಪದವೀಧರರಾದವರು ಉನ್ನತ ಶಿಕ್ಷಣ ಹೊಂದುವ, ಉದ್ಯೋಗ ಪಡೆದುಕೊಳ್ಳುವ ಹಾಗೂ ಉದ್ಯಮಿಗಳಾಗಿ ಉದ್ಯೋಗದಾತರಾಗುವ ಸಾಮರ್ಥ್ಯ ಮತ್ತು ಅವಕಾಶ ಎಲ್ಲರಿಗೂ ಇದೆ, ಸ್ವಸಾಮರ್ಥ್ಯದ ಅರಿವು ಮಾಡಿಕೊಂಡು ಮನಸ್ಥಿತಿಯನ್ನು ಪರಿವರ್ತನೆ ಮಾಡಿಕೊಂಡಲ್ಲಿ ಪರಿಸ್ಥಿತಿ ಅನುಕೂಲ ಕರವಾಗುತ್ತದೆ, ಇದಕ್ಕಾಗಿ ಯುವ ವಿದ್ಯಾರ್ಥಿಗಳ ಯೋಚನೆಗಳು,ಯೋಜನೆಗಳು ವೈಯಕ್ತಿಕ ಹಿತಕ್ಕಷ್ಟೇ ಅಲ್ಲ ಸಮಾಜ, ರಾಷ್ಟ್ರ ಹಾಗೂ ಜಾಗತಿಕ ಹಿತದಷ್ಟು ವಿಸ್ತಾರ ವಿಶಾಲ ದೃಷ್ಟಿ ಉಳ್ಳದ್ದಾಗಿರಬೇಕು ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು.
DRR Government Polytechnic College ಮತ್ತೋರ್ವ ಮುಖ್ಯ ಅತಿಥಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ದಾದಾಪೀರ್ ನವಿಲೇ ಹಾಳ್ ಮಾತನಾಡಿ ಯುವಕ ಯುವತಿಯರು ಮೊಬೈಲ್ ಗಳ ಸ್ಕ್ರೀನ್ ಟೈಂಗೆ ದಾಸರಾಗದೆ ಗ್ರಂಥಗಳ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ಕೊಡಬೇಕು, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಧನೆ ಮಾಡಬೇಕೆಂದರೆ ಪರಿಶ್ರಮದೊಂದಿಗೆ ನೋವು ಸ್ವೀಕರಿಸಲೂ ಸಿದ್ಧರಿರಬೇಕು, ವೃದ್ಧ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿ ಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಧ್ಯಕ್ಷೀಯ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಕೆ ಜಿ ನಿರಂಜನರವರು ಸವಾಲುಗಳನ್ನು ಸ್ವೀಕರಿಸುವ ಸಂಕಲ್ಪ ಇಂದಿನ ಯುವ ಜನತೆಯಲ್ಲಿ ಕಡಿಮೆಯಾಗುತ್ತಿದೆ, ಜ್ಞಾನ ಹಾಗೂ ಕೌಶಲ್ಯಗಳನ್ನು ಸದಾ ನವೀಕರಿಸಿಕೊಳ್ಳುತ್ತಿದ್ದರೆ ಸಾಧನೆ ಸಾಧ್ಯ, ಇದಕ್ಕೆ ಬುದ್ಧಿ ಮನಸ್ಸುಗಳ ಹೊಂದಾಣಿಕೆ ಬೇಕು ಎಂದರು. ಕಾಲೇಜಿನ ವಿದ್ಯಾರ್ಥಿ ಮತ್ತು ಕ್ರೀಡಾ ಸಂಘದ ರೆಕ್ಟರ್ ಎಚ್ ಕೆ ಮಂಜಪ್ಪ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಕೆ ಸಂತೋಷ್ ಕುಮಾರ್, ವಿದ್ಯಾರ್ಥಿ ಸಂಘದ ಪ್ರಮುಖರುಗಳಾದ ಓಂಕಾರ್ ಎಸ್, ವಿಕಾಸ್ ಸಿ ಎನ್, ಪ್ರವೀಣ್ ಟಿ, ಹೇಮಂತ್ ಎನ್, ಆಕಾಶ್ ಆರ್, ಲೇಖನಾ ಪಿ, ಚಂದ್ರಶೇಖರ್ ಎನ್ ಕೆ, ಗೌರಿ ಹೆಚ್ಎಸ್, ಭೂಮಿಕಾ ಮುಂತಾದವರು ಉಪಸ್ಥಿತರಿದ್ದು ಗಗನ ಶ್ರೀ ಹಾಗೂ ತೇಜಸ್ವಿನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶುಭಶ್ರೀ ದೇಶಪಾಂಡೆ ಪ್ರಾರ್ಥನೆಯನ್ನು ಹಾಡಿದರು. ವಿಶ್ವೇಶ್ವರ ಸಿ ಆರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಿದ್ಯಾರ್ಥಿ ಸಂಘದ,ಕ್ರೀಡಾ ಸಂಘದ, ಪ್ಲೇಸ್ಮೆಂಟ್ ಸೆಲ್ ನ, ಮಹಿಳಾ ಸಂರಕ್ಷಣಾ ಹಾಗೂ ಎನ್ ಸಿ ಸಿ ಘಟಕದ ವಾರ್ಷಿಕ ವರದಿಗಳನ್ನು ಕ್ರಮವಾಗಿ ಸಂತೋಷ್ ಕುಮಾರ್ ಕೆ, ವಿಕಾಸ್ ಸಿಎನ್, ಉಮೇಶ್ ಹೆಚ್ ಎಲ್, ಆಸಿಯಾ ಬಾನು, ಕ್ಯಾಪ್ಟನ್ ವಿಶ್ವೇಶ್ವರ್ ಪ್ರಸ್ತುತಪಡಿಸಿದರೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣೆಗಳನ್ನು ಉಪನ್ಯಾಸಕಿ ಸುನಂದ ವಿ ಎಂ ನಿರ್ವಹಿಸಿದರು. ವಿವಿಧ ವಿಭಾಗಗಳ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಹೆಚ್ ವಿ ಶ್ರೀನಿವಾಸ್ ಆಗಮಿಸಿದ್ದರು, ವಂದನೆಗಳನ್ನು ಆಕಾಶ್ ಆರ್ ಸಮರ್ಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.