Friday, November 22, 2024
Friday, November 22, 2024

Klive Special Article ವರನಟ ಡಾ.ರಾಜ್ ಕುಮಾರ್ ಕನ್ನಡಾಭಿಮಾನದ ಅಸ್ಮಿತೆ

Date:

ಲೇ: ಎನ್.ಎನ್.ಕಬ್ಬೂರ
ಸವದತ್ತಿ.

(ಕನ್ನಡದ ವರನಟ ಡಾ॥ ರಾಜಕುಮಾರ ಜನ್ಮದಿನದ ಪ್ರಯುಕ್ತ ಪ್ರಸ್ತುತ ಲೇಖನ)

Klive Special Article ಒಂದು ಬೆಳಿಗ್ಗೆ ಗಾಂಧೀ ಬಜಾರಿನಲ್ಲಿ ಹೋಗ್ತಾ ಇದ್ರೆ ಸಾರ್ ಸಿಹಿ ತೊಗೊಳ್ಳಿ ಅಂತ ಮೈಸೂರ್ ಪಾಕ್ ಕೊಟ್ರು. ಏನ್ಸಮಾಚಾರ ಅಂದ್ರೆ ನಮ್ಮ ಅಣ್ಣಾವ್ರ ಹುಟ್ಟಿದ ಹಬ್ಬ ಅಂದ್ರು. ನಮ್ಮ ಅಣ್ಣಾವ್ರು ಅಂದ್ರೆ ಹೀಗೆ. ಅವರಿಲ್ಲದೆ 18 ವರ್ಷ ಕಳೆದಿದ್ರೂ ಅವರ ಹುಟ್ಟಿದ ಹಬ್ಬ ಅಂದ್ರೆ ನಮ್ಮ ನಾಡಿನಲ್ಲೊಂದು ಸಾಂಸ್ಕೃತಿಕ ಸಂಭ್ರಮ.

ಇಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಹುಟ್ಟಿದ ಹಬ್ಬ. ನಮ್ಮ ಅಣ್ಣಾವ್ರಿದ್ದ ದಿನದಲ್ಲಿ ಅವರ ಅಭಿಮಾನಿಗಳಿಗೆ ಅದೊಂದು ಅದ್ಧೂರಿಯ ಹಬ್ಬ. ಇಂದೂ ಅವರ ಕಾಲದಲ್ಲಿ ಬದುಕಿದ ಕನ್ನಡಿಗರೆಲ್ಲರಿಗೆ ಈ ಕ್ಷಣ ಒಂದು ರೀತಿಯಲ್ಲಿ ಮೈನವಿರೇಳಿಸುವ ಸಂದರ್ಭ. ಅವರು ಹುಟ್ಟಿದ್ದು 1929 ರ ಏಪ್ರಿಲ್ 24ರಂದು.

ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು ಅವರು ತಮ್ಮ ತಂದೆ ಪುಟ್ಟಸ್ವಾಮಯ್ಯ ಅವರ ಜೊತೆ ಗುಬ್ಬೀ ಕಂಪೆನಿ, ಸುಬ್ಬಯ್ಯನಾಯ್ಡು ಅವರ ನಾಟಕ ಮಂಡಳಿಗಳಲ್ಲಿ ಕಷ್ಟಪಟ್ಟು ಬೆವರುಹರಿಸಿ ದುಡಿದು ಎಚ್.ಎಲ್.ಎನ್ ಸಿಂಹ ಅವರ ಬೇಡರ ಕಣ್ಣಪ್ಪ ಚಿತ್ರದಲ್ಲಿ ಅಭಿನಯಿಸಿದಾಗ ಸುಮಾರು 26 ವರ್ಷ. ಅಂದರೆ ಇಂದಿನ ಯುವಕರು ವಿಶ್ವವಿದ್ಯಾಲಯಗಳಲ್ಲಿ ಅಧ್ಯ್ಯಯನ ಮಾಡುವುದಕ್ಕಿಂತ ಹೆಚ್ಚಿನ ಕಾಲದ ಬದುಕನ್ನು ಅವರು ರಂಗಭೂಮಿಯೆಂಬ ತರಬೇತಿ ರಂಗದಲ್ಲಿ ಕಳೆದಿದ್ದಾರೆ ಎಂಬುದು ಬಹುಮುಖ್ಯವಾಗಿ ಅರಿಯಬೇಕಾದ ಸಂಗತಿ. ಮುಂದೆ ಅವರು ಬದುಕು ಸವೆಸಿದ ಚಿತ್ರರಂಗವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕೂಡಾ ಅರಿವಾದೀತು, ಅಂದಿನ ಚಿತ್ರರಂಗ ಇಂದು ಕಾಣುವಂತಹ ದುಂದುಗಾರಿಕೆಯ ಒಂದು ಕೇಂದ್ರವಾಗಿರದೆ, ಅದೊಂದು ಕಲೆಗಾಗಿ ಕಷ್ಟಪಟ್ಟು ಬದುಕುವ, ಅನಿಶ್ಚಿತತೆಯ ಬದುಕಿನ ಒಂದು ಕಾಲಘಟ್ಟವಾಗಿತ್ತು ಎಂದು. ತಮ್ಮ ಬದುಕಿನಲ್ಲಿ ಮೂಡಿದ್ದ ಹಲವು ಅನಿಶ್ಚಿಕತೆಗಳನ್ನು ಧೈರ್ಯವಾಗಿ ಎದುರಿಸಿಕೊಳ್ಳಲು ಅಂದಿನ ಕಲಾವಿದರಾದ ರಾಜ್‍ಕುಮಾರ್, ಬಾಲಣ್ಣ, ನರಸಿಂಹರಾಜು, ಜಿ.ವಿ.ಅಯ್ಯರ್ ಇವರೆಲ್ಲಾ ಒಂದುಗೂಡಿ ರಣಧೀರ ಕಂಠೀರವ ಎಂಬ ಚಿತ್ರ ನಿರ್ಮಿಸಿದ್ದರು ಎಂಬುದು ಚಿತ್ರರಂಗದ ಪುಟಗಳಲ್ಲಿ ಎದ್ದುಕಾಣುತ್ತದೆ. ಹೀಗೆ ಹಲವು ಕಾಲಘಟ್ಟಗಳಲ್ಲಿ ಅತೀವವಾಗಿ ಶ್ರಮಿಸಿದ ಮುತ್ತುರಾಜ್ ‘ರಾಜಕುವರ’ನಾಗಿ ಬೆಳೆಯುವಷ್ಟು ಹೂವಿನ ಹಾಸಿಗೆಯಲ್ಲಿ ಬೆಳೆದವರಾಗಿರಲಿಲ್ಲ. ಬದುಕೆಂಬ ಕಾಲಘಟ್ಟದಲ್ಲಿ ಒಂದೊಂದೇ ಮುತ್ತುಗಳನ್ನು ಪೋಣಿಸಿಕೊಂಡು ಅದು ಸುಲಭವಾಗಿ ಉದುರಿಹೊಗದ ಹಾಗೆ ಜಾಗೃತವಾಗಿದ್ದುಕೊಂಡು ‘ರಾಜ್‍ಕುಮಾರ್’ ಎನಿಸಿದರು. ಹಾಗಾಗಿ ಅವರ ‘ರಾಜ್’ತನ ಅಜರಾಮರವಾಗಿರಲು ಸಾಧ್ಯವಾಯ್ತು.

Klive Special Article ರಾಜ್‍ಕುಮಾರ್ ಅವರ ಬದುಕು ಶಿಸ್ತುಬದ್ಧವಾದದ್ದು. ಎಲ್ಲೇ ಇರಲಿ ಬೆಳಗಿನ ಜಾವ ಬೇಗ ಎದ್ದು ಯೋಗ, ಧ್ಯಾನ, ಸಂಗೀತ ಪ್ರಕ್ರಿಯೆಗಳಿಲ್ಲದೆ ದಿನ ಪ್ರಾರಂಭವಾಗುತ್ತಿರಲಿಲ್ಲ. ಧೂಮ, ಮಧ್ಯಪಾನಾದಿಗಳು ಎಂದೂ ಅವರ ಬದುಕಿನಲ್ಲಿ ಸುಳಿಯಲಿಲ್ಲ. ತಾವು ಒಪ್ಪಿಕೊಂಡಿದ್ದನ್ನು ಒಂದು ನಿರ್ದಿಷ್ಟತೆಯಲ್ಲಿ ಮುಗಿಸಿಕೊಡುವ ಕಾತರತೆ ಅವರಲ್ಲಿ ನಿರಂತರವಾಗಿತ್ತು. ಹೀಗಾಗಿ ಅದೆಂತದ್ದೇ ಪ್ರಲೋಭನೆ ಬಂದರೂ ಇತರ ಭಾಷಾ ಚಿತ್ರಗಳನ್ನು ಅವರೆಂದೂ ಒಪ್ಪಿಕೊಳ್ಳಲಿಲ್ಲ. ಅವರ ಸಮಕಾಲೀನರಾದವರಿಗೂ ರಾಜ್ ಅವರಿಗೂ ಈ ವಿಚಾರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಕನ್ನಡದ ಸೀಮಿತ ವ್ಯವಹಾರದ ಚಿತ್ರರಂಗವನ್ನು ಹೊರತಾಗಿ ಅವರೆಂದೂ ತಮ್ಮ ವೃತ್ತಿ ಜೀವನವನ್ನು ಯೋಚಿಸಲು ಹೋಗಲೇ ಇಲ್ಲ. ರಾಜ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಮಹತ್ವದ ಸ್ಥಿರತೆಯ ಪ್ರಧಾನತೆ ಈ ತತ್ವದಲ್ಲಡಗಿದೆ.

ರಾಜ್ ಅವರು ನಟಿಸಿದ 60-70 ರ ದಶಕಗಳಲ್ಲಿ ಮೂಡಿಬಂದ ಅವರ ಚಿತ್ರಗಳಾದ ಬೇಡರ ಕಣ್ಣಪ್ಪ, ಭೂ ಕೈಲಾಸ, ಸತ್ಯ ಹರಿಶ್ಚಂದ್ರ, ಭಕ್ತ ಕನಕದಾಸ, ನಾಂದಿ, ವೀರಕೇಸರಿ, ಭೂದಾನ, ಕಣ್ತೆರೆದು ನೋಡು, ತೂಗುದೀಪ, ಸಂಧ್ಯಾರಾಗ, ಬಂಗಾರದ ಹೂವು, ಗಾಂಧೀನಗರ, ಹಣ್ಣೆಲೆ ಚಿಗುರಿದಾಗ , ಕರುಳಿನ ಕರೆ, ಹಸಿರು ತೋರಣ ಅಂತಹ ಚಿತ್ರಗಳು, ಅಂದರೆ ಅವರ ಚಿತ್ರಜೀವನದ ಮೊದಲರ್ಧಕ್ಕೂ ಹೆಚ್ಚು ಚಿತ್ರಗಳಲ್ಲಿನ ಅವರ ಪಾತ್ರಗಳಲ್ಲಿನ ಅಭಿನಯ ಯಾವುದೇ ಪಾತ್ರ ವೈಭವೀಕರಣವಿಲ್ಲದೆ ಅವರನ್ನು ಒಬ್ಬ ಸಾಮಾನ್ಯರಲ್ಲಿ ಸಾಮನ್ಯತನವನ್ನು ಎತ್ತಿ ತೋರುವಂತ ಭಾವಗಳನ್ನು ಕೊಡುತ್ತವೆ. ಇಂದು ಕೂಡಾ ಅಂತಹ ಚಿತ್ರಗಳನ್ನು ನೋಡಿದಾಗ ಆ ಚಿತ್ರಗಳಲ್ಲಿ ರಾಜ್ ಅವರ ತಾದ್ಯಾತ್ಮ, ಸಾಧಾರಣತನ ಮನಮುಟ್ಟುವಷ್ಟು ಸಹಜ ಮತ್ತು ಹಿತಭಾವವನ್ನು ಕೊಡುವಂತದ್ದಾಗಿದೆ. ನಾಟಕೀಯತೆಯ ಪ್ರವೇಶ ಅಂದಿನ ಈ ಮಹತ್ವದ ಪಾತ್ರಗಳಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟರ ಮಟ್ಟಿಗಿನದು. ದಕ್ಷಿಣ ಭಾರತದ ಇನ್ಯಾವುದೇ ಚಿತ್ರರಂಗದ ಅಂದಿನ ಪ್ರಧಾನರ ಚಿತ್ರಗಳು ಈ ರೀತಿಯ ಸಾಧಾರಣತೆಯ ಅನನ್ಯತೆಯನ್ನು ಮೆರೆದದ್ದು ಕಡಿಮೆ ಎಂಬುದನ್ನು ಕೂಡಾ ಗಮನಿಸಬಹುದಾಗಿದೆ. ಸತ್ಯಹರಿಶ್ಚಂದ್ರ ಮತ್ತು ಭಕ್ತ ಕನಕದಾಸದಂತಹ ಒಂದು ರೀತಿಯ ಪೌರಾಣಿಕ ಕಥಾನಕ ಪಾತ್ರಗಳಲ್ಲಿ ಸಹಾ ಅವರು ತಮ್ಮ ಪಾತ್ರವನ್ನು ಕಿಂಚಿತ್ತೂ ವೈಭವೀಕರಿಸದೆ ಆ ಪಾತ್ರಗಳನ್ನುನಿರ್ವಹಿಸಿರುವ ರೀತಿ ಅನನ್ಯವಾದದ್ದು.

1970ರಲ್ಲಿ ತೆರೆಗೆಬಂದ ಶ್ರೀಕೃಷ್ಣದೇವರಾಯ ಚಿತ್ರವನ್ನು ಹುಡುಗರಾಗಿದ್ದ ನಾವುಗಳು ಕಂಡಾಗ ವಾವ್ ರಾಜ ಎಂದರೆ ಇವನೇ ಎಂಬಂತಹ ಮಾರ್ಮಿಕ ಚಿತ್ರಣವನ್ನು ನಮಗೆ ನೀಡಿತು. ರಾಜ್ ಅಲ್ಲಿ ಸಕಲ ರಾಜವೈಭವಗಳಿಂದ ಕಂಗೊಳಿಸುತ್ತಾರೆ. ಅದು ರಾಜ್ ಅವರ ಮೆರುಗಿನ ಚಿತ್ರಲೋಕದ ಪ್ರಾರಂಭದ ದಿನಗಳ ಸೂಚಕವೂ ಹೌದು. ಇದೇ ಸಮಯದಲ್ಲಿ ಬಾಂಡ್ ಪಾತ್ರಗಳು, ಮಿ.ರಾಜ್‍ಕುಮಾರ್, ಪರೋಪಕಾರಿ, ಚೂರಿ ಚಿಕ್ಕಣ್ಣ, ಸಿಪಾಯಿ ರಾಮು ಹೀಗೆ ಹೆಸರುಗಳು ಕೂಡಾ ಜನಪ್ರಿಯತೆಯನ್ನು ಸೂಚಿಸುವ ಏರುಮುಖ ಕಂಡಿರುವುದರ ಹಿನ್ನೆಲೆ ಇಲ್ಲಿ ಕಾಣತೊಡಗುತ್ತೇವೆ.

1971ರಿಂದ 1973ರ ಅವಧಿಯಲ್ಲಿ ಬಂದ ಕುಲಗೌರವ, ಸಾಕ್ಷಾತ್ಕಾರ, ನ್ಯಾಯವೇ ದೇವರು, ಕಸ್ತೂರಿ ನಿವಾಸ, ಬಂಗಾರದ ಮನುಷ್ಯ, ಬಿಡುಗಡೆ, ಸ್ವಯಂವರ, ಗಂಧದ ಗುಡಿ, ಮೂರೂವರೆ ವಜ್ರಗಳು ಮುಂತಾದ ಚಿತ್ರಗಳು ರಾಜ್ ಅವರ ಪಾತ್ರ ನಿರ್ವಹಣಾ ಶೈಲಿಯನ್ನು ಮತ್ತು ಈ ಹಿಂದೆ ಅವರ ಪಾತ್ರಗಳಿಗಿದ್ದ ಮೆರುಗನ್ನು ಬದಲಿಸಿದ ಚಿತ್ರಗಳು. ಬದಲಾವಣೆ ಮತ್ತು ಮೆರುಗಿನ ಹಿನ್ನೆಲೆಯ ಈ ಪಾತ್ರಗಳು ಬಹುತೇಕ ಯಶಸ್ವಿಯಾಗಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಅವರ ಸ್ಥಾನಮಾನಗಳನ್ನು ಎತ್ತರಕ್ಕೆ ಕೊಂಡೊಯ್ದಿತು. ಅದರ ಮುಂದಿನ ಹಲವು ವರ್ಷಗಳಲ್ಲಿ ಮೂಡಿಬಂದ ಎರಡು ಕನಸು, ಸಂಪತ್ತಿಗೆ ಸವಾಲ್, ಭಕ್ತ ಕುಂಬಾರ, ದಾರಿ ತಪ್ಪಿದ ಮಗ, ಮಯೂರ, ನಾನಿನ್ನ ಮರೆಯಲಾರೆ, ಶಂಕರ್ ಗುರು ಅಂತಹ ಚಿತ್ರಗಳು ರಾಜ್ ಅವರ ಯಶಸ್ಸು ಮತ್ತು ಅಂತಸ್ತನ್ನು ಹೆಚ್ಚಿಸುತ್ತಾ ನಡೆದ ಹಾಗೆ ಅವರ ಅಭಿನಯ ಜನಪ್ರಿಯತೆಯ ಹಾದಿ ಹಿಡಿಯಲು ದಾಪುಗಾಲು ಹಾಕುತ್ತಾ ನಡೆದಿದ್ದನ್ನು ಕಾಣಬಹುದು. ಇದು ಅವರ ಮುಂದಿನ ಸಮಸ್ತ ಚಿತ್ರಜೀವನದಲ್ಲಿ ಕೂಡಾ ನಿರಂತರವಾಗಿ ಮುಂದುವರೆದಿದ್ದನ್ನು ಕಾಣಬಹುದು. ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸದಂತಹ ಚಿತ್ರಗಳಲ್ಲಿ ಅವರಲ್ಲಿದ್ದ ಪಾತ್ರ ತನ್ಮಯತೆಯ ಹೊರತಾಗಿ ಬಹುತೇಕವಾದ ಅವರ ತದನಂತರದ ಪಾತ್ರಗಳು, ಚಾರಿತ್ರಿಕ, ಪೌರಾಣಿಕ, ಕಾದಂಬರಿಗಳ ಆಧಾರಿತ ಹೀಗೆ ಅವರ ಯಾವುದೇ ಭೇದವಿಲ್ಲದೆ ಈ ಹಾದಿಯನ್ನೇ ಕ್ರಮಿಸಿದವು.

ರಾಜ್ ಕುಮಾರ್ ಅವರ ವೃತ್ತಿಜೀವನದ ಮತ್ತೊಂದು ಪ್ರಮುಖ ಅಂಶ ಅವರ ಗಾಯನ ಸಾಮರ್ಥ್ಯದ ಕುರಿತಾದದ್ದು. ಒಮ್ಮೆ ಅವರು ಎಸ್.ಜಾನಕಿ ಅವರೊಡನೆ ಒಂದು ಕಿರು ಸನ್ನಿವೇಶದಲ್ಲಿ ಹಾಡಿದ್ದ ‘ತುಂಬಿತು ಮನವಾ ತಂದಿತು ಸುಖವಾ’ ಹಾಡಿನಲ್ಲಿ ಹಾಡಿದ ಚರಣ “ಎಲ್ಲೋ ಹುಟ್ಟಿದ ನದಿ ತಾನು ಹರಿವುದು ಸೇರಲು ಜಲಧಿಯನು” ಇಂಪಾಗಿತ್ತು. ಆದರೆ ಆಗಲೇ ಅವರು ಹಾಡಲು ಪ್ರಾರಂಭಿಸಲಿಲ್ಲ. ‘ಯಾರೇ ಕೂಗಾಡಲಿ ಊರೇ ಹೋರಾಡಲಿ’ ಎಂಬ ಹಾಡು ಪಡೆದುಕೊಂಡ ಜನಪ್ರಿಯತೆ ಅವರಿಗೆ ಹಾಡುವುದನ್ನು ನಿಲ್ಲಿಸಲಾಗಲಿಲ್ಲ. ಅವರ ಕೆಲವೊಂದು ಹಾಡುಗಳು ಅವುಗಳಿಗಿರುವ ಸಂಯೋಜಕ ಗುಣಗಳಿಂದ ಅಪಾರ ಯಶಸ್ವಿಯಾಗಿವೆ, ‘ನಾದಮಯ’ ಗೀತೆ ರಾಷ್ಟ್ರಪ್ರಶಸ್ತಿಯನ್ನು ಕೂಡಾ ತಂದಿವೆ. ಆದರೂ ಅವರೇ ಹೇಳಿಕೊಂಡ ಹಾಗೆ ಅವರ ಶರೀರಕ್ಕೆ ಪಿ.ಬಿ.ಶ್ರೀನಿವಾಸ್ ಅವರ ಗಾಯನದ ಶಾರೀರ ಕಡಿಮೆಯಾಗಿದ್ದು ಹಳೆಯಕಾಲದ ಹಾಡುಗಳನ್ನು ಮೆಲುಕು ಹಾಕುತ್ತಿದ್ದವರಿಗೆ ಏನೋ ಕಳೆದುಕೊಂಡ ಭಾವ ನೀಡಿದ್ದು ಸುಳ್ಳಲ್ಲ. ನಟರಾಗಿದ್ದೂ ಅವರಂತೆ ಗಾಯಕರಾಗಿ ಯಶಸ್ವಿಯಾದವರು ಮತ್ತೊಬ್ಬರಿಲ್ಲ. ಚಿತ್ರರಂಗದಿಂದ ಹೊರತಾಗಿ ಸಹಾ ರಾಜ್ ಅವರ ಅನೇಕ ಭಕ್ತಿ ಗೀತೆಗಳು, ಕನ್ನಡ ಗೀತೆಗಳು ಇಂದೂ ಮನದಲ್ಲಿ ಉಳಿಯುವಂತದ್ದಾಗಿವೆ. ‘ಜೇನಿನ ಹೊಳೆಯೊ’, ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಅಂತ ಗೀತೆಗಳಲ್ಲಿನ ಅವರ ಗಾಯನ ಮತ್ತು ಅಭಿನಯ ಅವರ ಕನ್ನಡ ನಾಡಿನ ಕುರಿತಾದ ಪ್ರೀತಿಯ ದ್ಯೋತಕವಾಗಿ ನಮ್ಮೊಡನಿದೆ ಎಂದರೆ ತಪ್ಪಾಗಲಾರದು.

ರಾಜ್ ಅವರ ಬಂಗಾರದ ಮನುಷ್ಯದಿಂದ ಪ್ರಾರಂಭಗೊಂಡ ಬಹುದಿನಗಳ ಓಟದ ಯಶಸ್ಸಿನ ಸಂಭ್ರಮಗಳು ಮುಂದಿನ ಅವರ ಚಿತ್ರಜೀವನದ ಬಹುತೇಕ ಚಿತ್ರಗಳಿಗೆ ಕೂಡಾ ದೊರಕಿತು. ಯಶಸ್ಸಿನ ಬರದಲ್ಲಿ ಅದುವರೆಗೆ ಶಿಸ್ತಿಗೆ ಹೆಸರಾಗಿದ್ದ ರಾಜ್ ಚಿತ್ರಗಳು ಅಲ್ಪ ಸ್ವಲ್ಪ ಆಚೆ ಈಚೆ ಹೋಗುವ ಲಕ್ಷಣಗಳನ್ನು ಕೂಡಾ ತೋರತೊಡಗಿತ್ತು. ಬಹದ್ದೂರ್ ಗಂಡು, ರಾಜಾ ನನ್ನ ರಾಜಾ, ತ್ರಿಮೂರ್ತಿದಂತಹ ಚಿತ್ರಗಳ ಹಾಡುಗಳು ಮತ್ತು ದೃಶ್ಯಾವಳಿಗಳನ್ನು ಕಂಡಿದ್ದವರಿಗೆ ಅದು ನೆನೆಪಿರುತ್ತದೆ. ಮುಂದೆ ಅವರ ಕುಟುಂಬವರ್ಗವೇ ಅವರ ಚಿತ್ರಗಳನ್ನು ನಿರ್ಮಿಸುವ, ಉತ್ತಮ ಕತೆಗಳನ್ನು ಆಯುವ ಮಹತ್ವದ ಕಾಯಕವನ್ನು ಸಹಾ ಮಾಡತೊಡಗಿತು. ಹೀಗೆ ರಾಜ್ ಅವರ ಸುತ್ತ ಒಂದು ವ್ಯವಹಾರಾತ್ಮಕ ವ್ಯವಸ್ಥೆ ಕೂಡಾ ನಿರ್ಮಾಣವಾಯಿತು. ಅವರ ಅಭಿಮಾನಿ ಬಳಗ ಕೂಡಾ ಒಂದು ದೂಡ್ಡ ವ್ಯವಸ್ಥೆಯಂತೆಯೇ ನಡೆಯುತ್ತಿತ್ತು.

ರಾಜ್‍ಕುಮಾರ್ ಅವರಿಗೆ ದೊರೆತ ಜನಪ್ರಿಯತೆ ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ಒಂದು ಅಪಾರ ಶಕ್ತಿಯಾಗಿ ಪರಿಣಮಿಸಿದ್ದು ನಮ್ಮ ರಾಜ್ಯಕ್ಕಾದ ಅಪೂರ್ವ ಲಾಭ. ಉಳಿದ ರಾಜ್ಯಗಳಲ್ಲಿ ಕಲಾವಿದರಿಗೆ ದೊರೆತ ಪ್ರಸಿದ್ಧಿ ರಾಜಕೀಯ ಬೆಳವಣಿಗೆಗೆ ಪೂರಕವಾದರೆ, ರಾಜ್ ಅದನ್ನು ಚಿತ್ರರಂಗದ ವ್ಯವಹಾರಕ್ಕೆ ಮೀರಿದ ವೈಯಕ್ತಿಕ ರಾಜಕೀಯ ಲಾಭಕ್ಕೆ ಎಂದೂ ಬಳಸಲಿಲ್ಲ. ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಇಡೀ ಕನ್ನಡ ನಾಡಿನಲ್ಲಿ ಅವರು ಸಂಚರಿಸಿ ಮೂಡಿಸಿದ ಕನ್ನಡದ ಕಹಳೆ ಕರ್ನಾಟಕದಲ್ಲಿ ಅದುವರೆಗಿನ ಕನ್ನಡ ಚಳುವಳಿಗಳ ಸ್ವರೂಪವನ್ನು ಶಾಶ್ವತವಾಗಿ ಬದಲಿಸಿಬಿಟ್ಟಿತು. ಹೀಗಾಗಿ ಕನ್ನಡ ಮತ್ತು ನಾಡು ನುಡಿಗಳ ಕುರಿತಾದ ಯಾವುದೇ ವಿಚಾರಗಳಿಗೆ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗಳಲ್ಲಿ ‘ಎಲ್ಲಿ ರಾಜ್ ಬರುತ್ತಾರೋ’ ಎಂದು ಕಾಳಜಿ ವಹಿಸುವ ಪರಿಸ್ಥಿತಿ ಒದಗಿ, ಕನ್ನಡ ಪರವಾದ ಜಾಗೃತಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾದ ಹಲವಾರು ಲಾಭಗಳನ್ನು ತಂದವು.

ರಾಜ್‍ಕುಮಾರ್ ಅವರಿಗಿದ್ದ ವೈಯಕ್ತಿಕ ಘನತೆ ಎಷ್ಟು ವಿಶಿಷ್ಟವಾದದ್ದೆಂದರೆ ಯಾವುದೇ ಭಿನ್ನಾಭಿಪ್ರಾಯಗಳಿಗೆ ಹಿರಿಯರೊಬ್ಬರಿದ್ದಾರೆ ಇವರ ಬಳಿ ಹೋಗುವ ಎಂಬ ಅಘೋಷಿತ ಶಿಸ್ತು ಚಿತ್ರರಂಗಕ್ಕೆ ಸಂಬಂಧಪಟ್ಟ ವಲಯಗಳಲ್ಲಿತ್ತು. ಮುಂದೆ ಬಂದ ಎತ್ತು ಏರಿಗೆ, ಕೋಣ ಕೇರಿಗೆ ಎಂಬ ಪರಿಸ್ಥಿತಿಗಳನ್ನು ನೆನೆದಾಗ ರಾಜ್ ಅಂತಹ ಹಿರಿಯರ ಅವಶ್ಯಕತೆ ಎಷ್ಟು ಮಹತ್ವದ್ದು ಎಂಬ ನೆನಪು ಅಪಾರವಾಗಿ ಕಾಡುತ್ತದೆ.

ವೀರಪ್ಪನ್ ಅಂತಹ ಕಾಡುಗಳ್ಳನ ಕೈಯಲ್ಲಿ ತೆರೆಯಮೇಲೆ ಭರ್ಜರಿಯಾಗಿ ರೌಡಿಗಳನ್ನು ಸದೆಬಡಿಯುವ ಕೃಷ್ಣದೇವರಾಯ, ಮಯೂರವರ್ಮನಂತಹ ಪಾತ್ರಧಾರಿಗಳಾದ ರಾಜ್ ಅವರು ಸೆರೆ ಸಿಕ್ಕಿದ್ದು ನಮ್ಮ ಜೀವನ ಹಾಗೂ ವ್ಯವಸ್ಥೆಗಳ ಮೇಲಿನ ವಿಪರ್ಯಾಸಕ್ಕೆ ಹಿಡಿದ ಕನ್ನಡಿಯಾಗಿದೆ. ಇಂಥಹ ಮಹಾನ್ ವ್ಯಕ್ತಿಗೆ, ನಾಡಿನ ಸಾಂಸ್ಕೃತಿಕ ಪ್ರತಿನಿಧಿಗೆ ವಯಸ್ಸಾದ ಕಾಲದಲ್ಲಿ ಇಂಥಹ ಕಷ್ಟ ಏರ್ಪಟ್ಟದ್ದು ನೋವು ತರುವ ಸಂಗತಿ.

ಒಬ್ಬ ಮಹಾನ್ ನಟ ಮತ್ತು ಸಾಂಸ್ಕೃತಿಕ ಪ್ರತಿನಿಧಿಯಾದ ರಾಜ್‍ಕುಮಾರ್ ಒಬ್ಬ ಯುಗಪುರುಷ. ಕಳೆದ ಶತಮಾನದಲ್ಲಿ ಕನ್ನಡ ಭಾಷೆ ಹಲವು ಮಜಲುಗಳನ್ನು ಏರಿರುವಲ್ಲಿ ಈ ನಾಡಿನಲ್ಲಿ ಹುಟ್ಟಿದ ಮಹಾನ್ ಬರಹಗಾರರು ಹೇಗೆ ಕಾರಣವೋ ಅದೇ ತೆರನಾಗಿ ಚಿತ್ರರಂಗದಲ್ಲಿ ತಮ್ಮ ಉಚ್ಚಾರ, ಬಳಕೆ ಮತ್ತು ವಾಗ್ವೈಕರಿಯ ಮೂಲಕ ಕನ್ನಡ ಭಾಷೆಗೆ ಬಹಳಷ್ಟು ಘನತೆ ತಂದುಕೊಟ್ಟ ಕೀರ್ತಿ ರಾಜ್‍ಕುಮಾರ್ ಅವರಿಗೆ ಸಲ್ಲುತ್ತದೆ. ರಾಜ್ ಕುಮಾರ್ ಅವರು ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯ ಹಲವು ಮಜಲುಗಳಿಗೆ ಮತ್ತು ಕನ್ನಡ ಭಾಷೆಯೊಂದಿಗೆ ಬದುಕಿರುವ ಜನಸಾಮಾನ್ಯರಿಗೆ ನಿರಂತರವಾದ ಪ್ರೇರಕ ಶಕ್ತಿಯಾಗಿದ್ದಾರೆ. ಈ ಮಹಾನ್ ಕನ್ನಡ ನಿಷ್ಠ ಶಕ್ತಿಗೆ ನಾವು ಸದಾ ಋಣಿಗಳು. ಕನ್ನಡಿಗರ ಹೃದಯದಲ್ಲಿ ಈ ‘ರಾಜ್’ ಅವರು ಅಜರಾಮರರು.

ಆದ್ದರಿಂದ “ಡಾ॥ರಾಜ್” ಎಂದರೆ ನಮ್ಮ ನಾಡಿನ ಕಲೆಯ ಹೆಗ್ಗುರುತಾಗಿದ್ದರು, “ಡಾ॥ರಾಜ್” ಎಂದರೆ ಕನ್ನಡ ನಾಡು-ನುಡಿ-ಕಲೆಯ ಪ್ರತೀಕವಾಗದ್ದರು, “ಡಾ॥ರಾಜ್ ಕುಮಾರ” ಎಂದರೆ ಅದು ಕೇವಲ ಹೆಸರಾಗಿರಲಿಲ್ಲ, ಅದೊಂದು ಶಕ್ತಿಯಾಗಿತ್ತು.

ಸಂಗ್ರಹ- ಎನ್.ಎನ್.ಕಬ್ಬೂರ
ಶಿಕ್ಷಕರು ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...