K.S.Eshwarappa ಹಿಂದುತ್ವ ಉಳಿವು, ಪಕ್ಷ ಶುದ್ದೀಕರಣ, ಅಪ್ಪ-ಮಕ್ಕಳಿಂದ ಬಿಜೆಪಿ ಪಕ್ಷ ಮುಕ್ತಗೊಳಿಸುವುದೇ ನನ್ನ ಚುನಾವಣೆ ಪ್ರಣಾಳಿಕೆ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಲ್ಲೇಶ್ವರ ನಗರದ ಈಶ್ವರಪ್ಪ ನಿವಾಸದ ಆವರಣದಲ್ಲಿರುವ ಚುನಾವಣಾ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಶ್ವರಪ್ಪ ಸ್ಪರ್ಧೆ ಮಾಡಲ್ಲ, ಅವರು ನಾಮಪತ್ರ ಸಲ್ಲಿಸಲ್ಲ ಎನ್ನುತ್ತಿದ್ದವರಿಗೆ ಈಗಾಗಲೇ ಈ ಕ್ಷೇತ್ರದ ಜನ ಉತ್ತರ ಕೊಟ್ಟಿದ್ದಾರೆ, ನಾಮಪತ್ರ ಸಲ್ಲಿಕೆ ದಿನ ಇಲ್ಲಿಗೆ ಬರಲು ಕಾರ್ಯಕರ್ತರು ಬಸ್‌ಗಳನ್ನು ಬುಕ್ ಮಾಡಿದರೆ ಮಾಲೀಕರ ಮೇಲೆ ಒತ್ತಡ ಹಾಕಿ ಬಸ್‌ಗಳು ಬಾರದಂತೆ ನೋಡಿಕೊಂಡಿದ್ದಾರೆ. ಆದರೂ, ಟ್ಯಾಕ್ಸಿ, ಟ್ಯಾಕ್ಟರ್, ಬೈಕ್‌ಗಳಲ್ಲಿ ಸಾವಿರಾರು ಸಂಖ್ಯೆಯ ಜನ ಬಂದಿದ್ದರು. ಅವರ ಋಣ ತೀರಿಸಲು ಆಗಲ್ಲ ಎಂದರು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಯುವಕರು, ನಾರಿಯರು, ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಈಶ್ವರಪ್ಪ ಜೊತೆಗೆ ಇದ್ದೇವೆ ಎಂದು ತೋರಿಸಿದ್ದಾರೆ. ಇಷ್ಟಾದರೂ ಈಶ್ವರಪ್ಪ ಅವರಿಗೆ ಈಗಲೂ ಕಾಲ ಮಿಂಚಿಲ್ಲ. ನಾಮಪತ್ರ ವಾಪಸ್ ತೆಗೆದುಕೊಳ್ಳುತ್ತಾರೆ. ಹಿರಿಯರು ಮಾತನಾಡುತ್ತಾರೆ ಎಂದು ಬಿ.ವೈ.ವಿಜಯೇಂದ್ರ ಅಪಪ್ರಚಾರ ಮಾಡುತ್ತಿದ್ದಾರೆ. ಯಾವ ಅಪಪ್ರಚಾರಕ್ಕೂ ಈಶ್ವರಪ್ಪ ಬಗ್ಗಲ್ಲ. ಮೋದಿ, ಅಮಿತ್ ಅಲ್ಲ ಬೇರೆ ಯಾರೇ ಹೇಳಿದರೂ ನಾನು ಸ್ಪರ್ಧೆ ಮಾಡೇ ಮಾಡುತ್ತೇನೆ. ನನ್ನ ಬೆಂಬಲಿಗರಿಗೆ ಯಾವುದೇ ಕಾರಣಕ್ಕೂ ನಿರಾಶೆ ಮಾಡಲ್ಲ. ಈ ರೀತಿ ಅಪಪ್ರಚಾರ ಮಾಡುವುದನ್ನು ಬಿಟ್ಟು ನನ್ನ ವಿರುದ್ಧ ನೇರ ಚುನಾವಣೆ ಮಾಡಿ. ನೀವು ಏನೇ ಅಪಪ್ರಚಾರ ಮಾಡಿದರೂ ನನ್ನ ಬೆಂಬಗರ ಬಲದಿಂದ ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದುತಿರುಗೇಟು ನೀಡಿದರು.
K.S.Eshwarappa ನಮ್ಮದೇ ಬಿಜೆಪಿ ಎ ಟೀಂ: ಮಧುಬಂಗಾರಪ್ಪಗೆ ಟಾಂಗ್
ಈಶ್ವರಪ್ಪ ಅವರದು ಬಿಜೆಪಿ ಬಿ.ಟಿಂ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ನಾನು ಸಾಯುವವರೆಗೆ ನಾನು ಬಿಜೆಪಿ ಎ ಟೀಂ.ನಮ್ಮದೇ ಒರ್ಜಿನಲ್ ಬಿಜೆಪಿ ಟೀಂ. ರಾಘವೇಂದ್ರ ಅವರದೇ ಬಿ ಟೀಂ ಇದು ಮಧು ಬಂಗಾರಪ್ಪ ಗೊತ್ತಾಗಿಲ್ಲ ಅಷ್ಟೇ. ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದಿದ್ದಾರೆ. ಹೊಂದಾಣಿಕೆ ಮಾಡಿಲ್ಲ ಎಂದು ಮಧು ಬಂಗಾರಪ್ಪ ಹೇಳಲಿ ಎಂದು ಟಾಂಗ್ ನೀಡಿದರು.
ನಿಮ್ಮ ಹೊಂದಾಣಿಕೆಯಿಂದ ಕಾಂಗ್ರೆಸ್ ಪಕ್ಷದಿಂದ ಬೆಂಬಲ ನನಗೆ ಸಿಕ್ಕಿದೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಎನ್ನುವ ಕಾರಣಕ್ಕೆ ರಾಜ್ಯದ ಜನ ನನ್ನ ಗುರುತು ಹಿಡಿಯುತ್ತಿದ್ದಾರೆ. ನೀವು ಅಧಿಕಾರಕ್ಕಾಗಿ ಯಾವ್ಯಾವ ಪಕ್ಷಗಳಿಗೆ ಹೋಗಿದ್ದೀರಾ. ನಿಮ್ಮದು ಯಾವ ಟೀಂ ಎಂದು ಪ್ರಶ್ನಿಸಿದ ಅವರು ಯಾರಿಗೋ ಟೀಕೆ ಮಾಡುವಂತೆ ನನ್ನ ಟೀಕೆ ಮಾಡಬೇಡಿ ಎಂದು ತಿರುಗೇಟು ನೀಡಿದರು.
ನನ್ನ ಜೊತೆ ಹಿಂದು ಹುಲಿಗಳಿದ್ದಾರೆ:
ಹಾವು, ಚೇಳುಗಳ ಟೀಕೆಗೆಲ್ಲ ತಲೆಕಡೆಸಿಕೊಳ್ಳಬೇಡಿ ಎಂದು ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ. ಆದರೆ, ನಮ್ಮ ಬಳಿ ಯಾವ ಹಾವು, ಚೇಳುಗಳಿಲ್ಲ. ಮೆರವಣಿಗೆಯಲ್ಲಿ ಇದ್ದವರೆಲ್ಲಾ ಹಿಂದೂ ಹುಲಿಗಳು. ಇವರು ಯಾವುದೇ ಕಾರಣ ಬಗ್ಗಲ್ಲ, ಜಗ್ಗಲ್ಲ. ಎಂದು ಹರಿಹಾಯ್ದರು.
ನಮ್ಮದೆ ನಿಜವಾದ ಹಿಂದುತ್ವ:
ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹಿಂದುತ್ವ, ಈಶ್ವರಪ್ಪ ಹಿಂದುತ್ವ ಒಂದೇ. ನಮ್ಮದು ಮೋದಿ ಹಿಂದುತ್ವ. ಆದರೆ, ರಾಜ್ಯದಲ್ಲಿ ಮಾತ್ರ ಅಪ್ಪ-ಮಕ್ಕಳ ಬಿಜೆಪಿಯಾಗಿದೆ. ಎಲ್ಲಿ ಮುಂದೆ ನಮಗೆ ಸಿಎಂ ಸ್ಥಾನಕ್ಕೆ ತೊಂದರೆಯಾಗುತ್ತದೆಯೋ ಎನ್ನುವ ಕಾರಣಕ್ಕೆ ಬಿಜೆಪಿಯಲ್ಲಿರುವ ಹಿಂದುತ್ವ ನಾಯಕರನ್ನು ಅಪ್ಪ-ಮಕ್ಕಳು ಹಿಂದೆ ಸರಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಬಿಟ್ಟರೆ ಬೇರೆ ಯಾರು ಇರಲಿಲ್ವಾ, ಸಿ.ಟಿ.ರವಿ, ಬಸವನ ಗೌಡ ಪಾಟೀಲ್ ಯತ್ನಾಳ್‌ಗೆ ಅರ್ಹತೆ ಇರಲಿಲ್ವಾ?. ಹಿಂದುತ್ವ ಉಳುವಿಗಾಗಿ ಅಪ್ಪ ಮಕ್ಕಳ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಬಿಜೆಪಿ ಅನೇಕ ನಾಯಕರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಎಂದರು.
ಈಶ್ವರಪ್ಪ ಗೆದ್ದ ನಂತರ ಅಭಿವೃದ್ಧಿ ಮಾಡುತ್ತಾರೆ ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ರಾಘವೇಂದ್ರ ಮೋದಿ ಕೊಟ್ಟದ್ದನ್ನು ತಂದಿದ್ದಾರೆ. ನಾನು ಸಹ ಗೆದ್ದ ನಂತರ ಮೋದಿ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುತ್ತೇನೆ. ಇದಕ್ಕಿಂತ ಮುಖ್ಯವಾಗಿ ನಾನು ಸಿದ್ಧಾಂತ ಪರ ಹೋರಾಟ ಮಾಡುತ್ತಿದ್ದೇನೆ. ಇದು ದೇಶಾದ್ಯಂತ ಚರ್ಚೆಯಾಗುತ್ತಿದೆ. ನಾಮಪತ್ರ ದಿನ ಜನ ಸೇರಿದ್ದು ನೋಡಿ ಈಶ್ವರಪ್ಪ ಗೆದ್ದಾಗಿದೆ ಎಂದು ರಾಜ್ಯ ನಾಯಕರೇ ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಗೆದ್ದ ಬಳಿಕ ಹೋರಾಟ ಮಾಡುತ್ತೇನೆ. ಮುಂದೆ ವಿಐಎಸ್ಎಲ್ ಆರಂಭ ಮಾಡದಿದ್ದರೆ ಓಟು ಕೊಡಬೇಡಿ ಎಂದು ಹೇಳಿ ಕೊನೆಗೆ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಹೀಗಾಗಿ ನಾನೇ ಎಲ್ಲವನ್ನು ಸರಿ ಮಾಡುತ್ತೇನೆ ಎನ್ನುತ್ತಿಲ್ಲ. ಹೋರಾಟಗಾರರನ್ನು ಕರೆಸಿಕೊಂಡು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಹಾಗೂ ವಿಐಎಸ್ಎಲ್ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ, ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಸಂಬಂಧಿಸಿದ ಅಧಿಕಾರಿ, ಮಂತ್ರಿಗಳನ್ನು ಭೇಟಿ ಮಾಡಿಸಿ ಸಮಸ್ಯೆ ಬಗೆ ಹರಿಸುವಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಮೇಯರ್ ಸುವರ್ಣ ಶಂಕರ್, ಲತಾ ಗಣೇಶ್, ಲಕ್ಷ್ಮಿ ಶಂಕರ್ ನಾಯಕ್, ವಿಶ್ವಾಸ್, ಆರತಿ ಆ.ಮ.ಪ್ರಕಾಶ್, ಮಹಲಿಂಗಯ್ಯ ಶಾಸ್ತ್ರಿ, ಬಿಜೆಪಿ ಭದ್ರಾವತಿ ಘಟಕ ದ ಅಧ್ಯಕ್ಷ ಪ್ರಭಾಕರ್, ಆಂಜನೇಯ ಸೇರಿದಂತೆ ಹಲವು ಉಪಸ್ಥಿತರಿದ್ದರು.